ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯಾಣಿಕರಿಗೆ ಎಸ್‌ಎಂಎಸ್ ಮಾಹಿತಿ

Last Updated 21 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಮೈಸೂರು: ಬಸ್ ನಿಲ್ದಾಣ ಹಾಗೂ ಶೆಲ್ಟರ್‌ಗಳಲ್ಲಿ ಬಸ್ಸಿಗಾಗಿ ಕಾಯುವುದು ಯಾರಿಗಾದರೂ ಬೇಸರದ ಸಂಗತಿಯೆ? ಬಸ್ಸು ಯಾವಾಗ ಬರುತ್ತೊ, ಇನ್ನೂ ಎಷ್ಟೊತ್ತು ಕಾಯಬೇಕು ಎಂಬ ಧಾವಂತ, ಗೊಣಗಾಟ ಸಹಜ. ಆದರೆ, ಬಸ್ಸು ಎಲ್ಲಿದೆ? ಎಷ್ಟು ಗಂಟೆಗೆ ಬರಲಿದೆ ಎಂಬುದು ಇನ್ಮುಂದೆ ನಿಖರವಾಗಿ ಗೊತ್ತಾಗಲಿದೆ!

-ಹೌದು. ವೈಯಕ್ತಿಕ ವಾಹನ ಬಳಕೆಯನ್ನು ಕಡಿಮೆ ಮಾಡಲು ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ಕೆಎಸ್‌ಆರ್‌ಟಿಸಿಯು ದೇಶದಲ್ಲೇ ಮೊದಲ ಬಾರಿಗೆ `ಇಂಟೆಲಿಜೆಂಟ್~ ಸಾರಿಗೆ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

ಸಿಎಂಸಿ ಲಿಮಿಟೆಡ್ ಕಂಪೆನಿಯು ಈ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು, ಈಗಾಗಲೇ ಮೊದಲ ಹಂತದ ಕಾರ್ಯವನ್ನು ಪೂರ್ಣಗೊಳಿಸಿದೆ. ಸೆ. 26ರಿಂದ ನವೆಂಬರ್ 4ರ ವರೆಗೆ ಪ್ರಾಯೋಗಿಕ ಹಂತದಲ್ಲಿ ಮೈಸೂರಿನಲ್ಲಿ ಈ ವ್ಯವಸ್ಥೆಗೆ ಚಾಲನೆ ನೀಡಲಾಗುತ್ತಿದೆ.

ಏನಿದು ಯೋಜನೆ?: `ಇಂಟೆಲಿಜೆಂಟ್~ ಸಾರಿಗೆ ವ್ಯವಸ್ಥೆಯಿಂದ ಸಾರ್ವಜನಿಕರು ಹಾಗೂ ಪ್ರಯಾಣಿಕರಿಗೆ ತಾವು ಚಲಿಸಬೇಕಾದ ಮಾರ್ಗ, ಬಸ್ ಸಂಖ್ಯೆ, ಸಮಯ ಎಲ್ಲವನ್ನೂ ತಿಳಿಸಿಕೊಡುವ ಯೋಜನೆ ಇದಾಗಿದೆ. ಈ ವ್ಯವಸ್ಥೆಯ ಸುಗಮ ಹಾಗೂ ಸಮಯಬದ್ಧ ಅನುಷ್ಠಾನಕ್ಕೆ ಕೆಎಸ್‌ಆರ್‌ಟಿಸಿ ಹೆಚ್ಚಿನ ಆದ್ಯತೆ ನೀಡಿದೆ.

ಮೈಸೂರು ನಗರದ 500 ಬಸ್, 105 ಬಸ್ ತಂಗುದಾಣ, 6 ಬಸ್ ನಿಲ್ದಾಣ, 45 ಪ್ಲಾಟ್‌ಫಾರ್ಮ್‌ಗಳಲ್ಲಿ ಐಟಿಎಸ್ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲು ಸಾರಿಗೆ ಸಂಸ್ಥೆ ಸಿದ್ಧತೆ ಮಾಡಿಕೊಂಡಿದೆ. ಆ ಮೂಲಕ ಜಿಪಿಎಸ್ ಆಧಾರಿತ ಐಟಿಎಸ್ ತಂತ್ರಜ್ಞಾನ ಅಳವಡಿಸಿಕೊಂಡಿರುವ ಮೊದಲ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಇದರಿಂದ ಯಾವ ಬಸ್ ಎಲ್ಲಿದೆ? ಎಷ್ಟೊತ್ತಿಗೆ ನಿಲ್ದಾಣ ತಲುಪಲಿದೆ? ವಿಳಂಬ ಏಕೆ? ಎಂಬುದನ್ನು ಈ ತಂತ್ರಜ್ಞಾನ ಪರದೆಯ ಮೇಲೆ ತೋರಿಸಲಿದೆ. ಅಲ್ಲದೆ, ಸಂಚರಿಸುವ ಬಸ್‌ಗಳ ಮೇಲೆ ಹದ್ದಿನ ಕಣ್ಣು ಇಡಲು ಈ ಯೋಜನೆಯನ್ನು ರೂಪಿಸಲಾಗಿದೆ. ಇದಕ್ಕೆ ರೂ. 20.13 ಕೋಟಿ ವೆಚ್ಚವಾಗಿದ್ದು, ಭಾರತ ಸರ್ಕಾರ ರೂ. 10.90 ಕೋಟಿ, ವಿಶ್ವಬ್ಯಾಂಕ್ ರೂ. 9.07 ಕೋಟಿ ಹಣ ನೀಡಿವೆ.

ಕಾರ್ಯಾಗಾರಕ್ಕೆ ಚಾಲನೆ: ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ಏರ್ಪಡಿಸಿದ್ದ ನಗರ ಸಾರಿಗೆಯಲ್ಲಿ ಸುಸ್ಥಿರ ಯೋಜನೆಯಡಿ ಇಂಟೆಲಿಜೆನ್ಸ್ ಟ್ರಾನ್ಸ್‌ಫೋರ್ಟ್ ಸಿಸ್ಟಮ್ ಅಳವಡಿಕೆ ಕಾರ್ಯಾಗಾರಕ್ಕೆ ಸಾರಿಗೆ ಸಚಿವ ಆರ್. ಅಶೋಕ್ ಚಾಲನೆ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರಾಮದಾಸ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT