ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯಾಣಿಕರಿಗೆ ತಂಪೆರೆಯುವ ಸಾಲು ಮರಗಳು

Last Updated 20 ಡಿಸೆಂಬರ್ 2013, 10:06 IST
ಅಕ್ಷರ ಗಾತ್ರ

ಯಾದಗಿರಿ: ಶಹಾಪುರದಿಂದ ಯಾದಗಿರಿ­ಯತ್ತ ಬರುವ ವಾಹನಗಳು ಗುಂಡಳ್ಳಿಯ ಕೆರೆಯನ್ನು ದಾಟಿದೊ­ಡನೆ ತಂಪಾದ ವಾತಾವರಣದಲ್ಲಿ ಹಾದು ಹೋಗುತ್ತವೆ. ಒಂದು ರೀತಿ­ಯಲ್ಲಿ ರೈಲು ಸುರಂಗ­ಮಾರ್ಗ­ದಲ್ಲಿ ಸಂಚರಿಸಿದಂತಹ ಅನುಭವ ಆಗುತ್ತದೆ. ಒಂದೆರಡು ಕ್ಷಣ ಸೂರ್ಯನ ಕಿರಣಗಳೂ ಕಾಣಲು ಸಿಗುವುದಿಲ್ಲ.

ಶಹಾಪುರ–ಯಾದಗಿರಿ ರಾಜ್ಯ ಹೆದ್ದಾರಿಯ ಗುಂಡಳ್ಳಿ ಬಳಿ ರಸ್ತೆಯ ಇಕ್ಕೆಲಗಳಲ್ಲಿರುವ ಸಾಲು ಮರಗಳು ತಂಪಾದ ವಾತಾವರಣ ನಿರ್ಮಿಸಿವೆ. ರಸ್ತೆಯ ಎರಡು ಬದಿಗಳಲ್ಲಿ ಛತ್ರಿ­ಯಾಕಾರದಲ್ಲಿ ಮರಗಳು ಬೆಳೆದಿದ್ದು, ಸೂರ್ಯನ ಕಿರಣಗಳನ್ನು ಭೂಮಿಗೆ ಸ್ಪರ್ಶಿಸದಂತೆ ತಡೆಯೊಡ್ಡಿರುವ ಈ ಮನಮೋಹಕ ದೃಶ್ಯ ಕಣ್ಮನ ಸೆಳೆಯುತ್ತದೆ.

ಗುಂಡಳ್ಳಿ ತಾಂಡಾದ ಬಳಿ ಸೀಮೆ ಮರೆಮ್ಮನ ದೇವಸ್ಥಾನವಿದೆ. ಪ್ರತಿ­ಯೊಂದು ದೇವಸ್ಥಾನದ ಎದುರು ಅಥವಾ ಪಕ್ಕದಲ್ಲಿ ಕೆಲವೊಂದು ಗಿಡಗಳನ್ನು ಅಥವಾ ಸಸಿಗಳನ್ನು ಹಾಕಿರುವುದು ಕಾಣಬಹುದು. ಆದರೆ, ರಾಜ್ಯ ಹೆದ್ದಾರಿಯ ಮೇಲೆ ಇರುವ ಈ ದೇವಸ್ಥಾನದ ಪಕ್ಕದಲ್ಲಿ ನೂರಾರು ಮರಗಳು ಭಕ್ತರನ್ನು ಸ್ವಾಗತಿಸುವ ರೀತಿಯಲ್ಲಿ ಸಾಲಾಗಿ ನಿಂತಿವೆ.

ಶಹಾಪುರ– -ಯಾದಗಿರಿ ಹೆದ್ದಾ­ರಿಯ ವಿಸ್ತಾರದ ಸಮಯದಲ್ಲಿ ಕೆಲವು ಮರಗಳನ್ನು ಕಡಿದು ಹಾಕಲಾಗಿದೆ. ಇನ್ನೂ ಅನೇಕ ಗಿಡಗಳಿದ್ದು, ವರ್ಷದ 12 ತಿಂಗಳು ಪ್ರಯಾಣಿಕರು, ದಾರಿ­ಹೋಕರು, ಭಕ್ತರು, ವಾಹನ ಚಾಲಕರನ್ನು ಬಿಸಿಲು, ಮಳೆಯಿಂದ ರಕ್ಷಿಸುತ್ತಿವೆ. ಬೆಳಗಾವಿ, ಹುಬ್ಬಳ್ಳಿ, ಗೋವಾ, ಮೀರಜ ಹಾಗೂ ಇನ್ನಿತರ ನಗರಗಳಿಂದ ಸರಕುಗಳನ್ನು ತುಂಬಿ­ಕೊಂಡು ಆಂಧ್ರಪ್ರದೇಶದ ರಾಜಧಾನಿ ಹೈದರಾಬಾದ್‌ಗೆ ಇದೇ ರಸ್ತೆಯ ಮೂಲಕ ಹಾದು ಹೋಗಬೇಕು. ದೂರದ ಪ್ರಯಾಣದಿಂದ ಬಂದ ಲಾರಿ ಚಾಲಕರು, ದಣಿವಾರಿಸಿಕೊಳ್ಳಲು ತಮ್ಮ ಲಾರಿಗಳನ್ನು ರಸ್ತೆ ಬದಿಯಲ್ಲಿ ಸಾಲಾಗಿ ನಿಲ್ಲಿಸಿ ಈ ಮರಗಳ ನೆರಳಿ­ನಲ್ಲಿ ಹಾಯಾಗಿ ನಿದ್ದೆ ಮಾಡುತ್ತಾರೆ.

ಖಾಸಗಿ ವಾಹನಗಳಲ್ಲಿ ಕುಟುಂಬ ಸಮೇತ ಪ್ರಯಾಣಿಸುವ ಜನರು, ಇಲ್ಲಿ ವಾಹನವನ್ನು ನಿಲ್ಲಿಸಿ ದೇವಿಯ ದರ್ಶನ ಪಡೆದು ತಾವು ತಂದ ತಿಂಡಿ ಅಥವಾ ಬುತ್ತಿಯನ್ನು ಊಟ ಮಾಡಿ, ಪಕ್ಕ­ದಲ್ಲಿಯೇ ಇರುವ ಕೊಳವೆಬಾವಿಯಲ್ಲಿ ನೀರು ಕುಡಿದು ತಂಪಾಗಿ ಬೀಸುವ ಗಾಳಿಗೆ ಮೈಯೊಡ್ಡುತ್ತಾರೆ.

ಬೇಸಿಗೆಯಲ್ಲಂತೂ ಈ ಗಿಡಗಳಿಂದ ತಂಪಾದ ಗಾಳಿ ಬೀಸುವುದರಿಂದ ಅನೇಕ ಜನರು ಗಿಡಗಳ ಕೆಳಗೆ ನಿದ್ರೆಗೆ ಜಾರಿರುವ ದೃಶ್ಯ ಸಾಮಾನ್ಯವಾಗಿ­ರು­ತ್ತದೆ. ಜೊತೆಗೆ ಇಲ್ಲಿ ವಾಹನಗಳನ್ನೂ ನಿಲ್ಲಿಸಲು ಸ್ಥಳ ಸಿಗುವುದು ಅಸಾಧ್ಯವಾಗುತ್ತದೆ.

ಈ ದೇವಿಯ ದರ್ಶನಕ್ಕೆ ನಿತ್ಯ ನೂರಾರು ಭಕ್ತರು ಬಂದು. ಈ ಮರಗಳ ಆಶ್ರಯದಲ್ಲಿ ದಣಿವಾರಿಸಿ­ಕೊಂಡು ಮನೆಗೆ ಮರಳುತ್ತಾರೆ. ಈ ಗಿಡಗಳ ಬಗ್ಗೆ ತಾಂಡಾದ ನಿವಾಸಿ­ಯೊಬ್ಬರನ್ನು ಕೇಳಿದರೆ, ‘ಈ ಮರಗಳು ಸುಮಾರು ನೂರು ವರ್ಷಗಳಷ್ಟು ಹಳೆಯದಾಗಿವೆ’ ಎಂದು ಹೇಳುತ್ತಾರೆ.

‘ಕಳೆದ ಹದಿನೈದು ವರ್ಷದಿಂದ ಈ ಭಾಗದಲ್ಲಿ ಲಾರಿ ಓಡಿಸುತ್ತಿದ್ದೇನೆ. ನಾನು ಇಲ್ಲಿ ಲಾರಿಯನ್ನು ನಿಲ್ಲಿಸಿ, ವಿಶ್ರಾಂತಿ ಪಡೆದ ನಂತರವೇ ಹೈದರಾ­ಬಾದ್‌ಗೆ ಹೋಗುತ್ತೇನೆ’ ಎಂದು ಲಾರಿ ಚಾಲಕ ಮಹ್ಮದ್‌ ಶಫೀ ಹೇಳುತ್ತಾರೆ.

ಅರಣ್ಯ ಇಲಾಖೆ ಈ ಮರಗಳನ್ನು ಸಂರಕ್ಷಣೆ ಮಾಡಬೇಕು. ರಸ್ತೆಯ ಇಕ್ಕೆಲಗಳಲ್ಲಿ ಜನರು ವಿಶ್ರಾಂತಿ ಪಡೆ­ಯಲು ಸೂಕ್ತ ವ್ಯವಸ್ಥೆ ಮಾಡಬೇಕು ಎಂಬುದು ಭಕ್ತರ ಆಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT