ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯಾಣಿಕರಿಗೆ ಹೊರೆ ಏರಿದ ಬಸ್ ಟಿಕೆಟ್ ದರ

Last Updated 25 ಜೂನ್ 2011, 18:40 IST
ಅಕ್ಷರ ಗಾತ್ರ

ಬೆಂಗಳೂರು: ಡೀಸೆಲ್ ದರ ಏರಿಕೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬಸ್ ಪ್ರಯಾಣ ದರ ಹೆಚ್ಚಿಸಿ ಶನಿವಾರ ರಾತ್ರಿ ಆದೇಶ ಹೊರಡಿಸಿದೆ. ಪರಿಷ್ಕೃತ ದರಗಳು ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿವೆ.

ಇದರಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ), ಬಿಎಂಟಿಸಿ, ವಾಯವ್ಯ, ಈಶಾನ್ಯ ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರ ಏರಿಕೆಯಾದಂತಾಗಿದೆ.

 

ಕೆಎಸ್‌ಆರ್‌ಟಿಸಿ ಪ್ರಯಾಣ ದರವನ್ನು ಸರಾಸರಿ ಶೇ 6.95ರಷ್ಟು ಹೆಚ್ಚಳ ಮಾಡಲಾಗಿದೆ. ಸಾಮಾನ್ಯ ಸೇವೆಗಳ ದರ ಹೆಚ್ಚಳವನ್ನು ಶೇ 5.12ಕ್ಕೆ ಸೀಮಿತಗೊಳಿಸಿ, ಗ್ರಾಮೀಣ ಭಾಗದ ಪ್ರಯಾಣಿಕರ ಮೇಲಿನ ಹೊರೆಯನ್ನು ಕಡಿಮೆ ಮಾಡಲಾಗಿದೆ.

ಸಾರಿಗೆ ಸಂಸ್ಥೆಯ ಅಧಿಕಾರಿಗಳು ಶೇ 8ರಿಂದ 10ರಷ್ಟು ದರ ಏರಿಕೆಯ ಪ್ರಸ್ತಾವ ಮುಂದಿಟ್ಟಿದ್ದು, ಅದನ್ನು ಸಾರಿಗೆ ಸಚಿವ ಆರ್.ಅಶೋಕ ಒಪ್ಪಲಿಲ್ಲ ಎನ್ನಲಾಗಿದೆ. ಬದಲಿಗೆ ಶೇ 6.95ರಷ್ಟು ಹೆಚ್ಚಳ ಮಾಡಲು ಸೂಚಿಸಿದ ನಂತರ ಅಧಿಕೃತ ಆದೇಶ ಹೊರಬಿದ್ದಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಉತ್ಪನ್ನಗಳ ಬೆಲೆ ಏರಿಕೆಯಾದ ಕಾರಣ ಕೇಂದ್ರ ಸರ್ಕಾರ ಪ್ರತಿ ಲೀಟರ್ ಡೀಸೆಲ್‌ಗೆ ರೂ 3.99ರಷ್ಟು ಹೆಚ್ಚು ಮಾಡಿತು. ಇದರಿಂದ ಕೆಎಸ್‌ಆರ್‌ಟಿಸಿಗೆ ವಾರ್ಷಿಕ  78.84 ಕೋಟಿ ರೂಪಾಯಿ ಆಧಿಕ ಹೊರೆಯಾಗುತ್ತಿತ್ತು. ಇದರ ಜತೆಗೆ ನೌಕರರಿಗೆ ನೀಡುವ ತುಟ್ಟಿಭತ್ಯೆ ಪರಿಷ್ಕರಣೆ ಸೇರಿದಂತೆ ಇತರ ಸೇವೆಗಳ ಹಿನ್ನೆಲೆಯಲ್ಲಿ ಒಟ್ಟು ರೂ 129.84 ಕೋಟಿ ವೆಚ್ಚವಾಗುತ್ತಿತ್ತು. ಈ ಎಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ದರ ಪರಿಷ್ಕರಣೆ ಮಾಡಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆ ತಿಳಿಸಿದೆ.

ದರ ಏರಿಕೆ ಕುರಿತು ಇಡೀ ದಿನ ಅಧಿಕಾರಿಗಳು ಸಭೆ ನಡೆಸಿ ರಾತ್ರಿ 11 ಗಂಟೆಗೆ ಪರಿಷ್ಕೃತ ದರ ಪಟ್ಟಿ ಬಿಡುಗಡೆ ಮಾಡಿದರು.

 

ಬಿಎಂಟಿಸಿ ದರ ಏರಿಕೆ: ಡೀಸೆಲ್ ದರ ಏರಿಕೆ ಮತ್ತು ಸಿಬ್ಬಂದಿಗೆ ಎರಡು ಕಂತುಗಳ ತುಟ್ಟಿಭತ್ಯೆ ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯೂ ಪ್ರಯಾಣ ದರವನ್ನು ಹೆಚ್ಚಿಸಿದೆ.

ಮೊದಲನೇ ಹಂತದ ಪ್ರಯಾಣ ದರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. 2, 3, 4, 5 ಮತ್ತು 7ನೇ ಹಂತಗಳಿಗೆ ತಲಾ 1 ರೂಪಾಯಿಯಷ್ಟು  ಮಾತ್ರ ಹೆಚ್ಚಳ ಮಾಡಲಾಗಿದೆ. 6ನೇ ಮತ್ತು 8ನೇ ಹಂತಗಳ ದರದಲ್ಲಿ ಯಾವುದೇ ಹೆಚ್ಚಳ ಮಾಡಿರುವುದಿಲ್ಲ.  9 ರಿಂದ 25ನೇ ಹಂತಗಳವರೆಗೆ ಪ್ರತಿ ಹಂತಕ್ಕೆ ತಲಾ 2 ರೂಪಾಯಿಯಂತೆ ಹೆಚ್ಚಳ ಮಾಡಲಾಗಿದೆ.

ಈ ದರ ಪರಿಷ್ಕರಣೆಯು ಎಲ್ಲಾ ಹವಾ ನಿಯಂತ್ರಣರಹಿತ ಸೇವೆಗಳು ಅಂದರೆ ಸಾಮಾನ್ಯ, ಪುಷ್ಪಕ್, ಜನಪ್ರಿಯವಾಹಿನಿ, ಸುವರ್ಣ, ಬಿಗ್-10 ಸೇವೆಗಳಿಗೂ ಅನ್ವಯವಾಗುತ್ತವೆ.

ಸಂಸ್ಥೆಯ ಪ್ರೀಮಿಯಂ ಸೇವೆಗಳಾದ ವಜ್ರ ಹಾಗೂ ಎ.ಸಿ. ಸುವರ್ಣ (ಮಾರ್ಕೊಪೋಲೊ) ಸೇವೆಗಳ ಪ್ರಯಾಣ ದರಗಳನ್ನೂ ಸಹ ಅತ್ಯಲ್ಪ ಮಟ್ಟದಲ್ಲಿ ಪರಿಷ್ಕರಿಸಲಾಗಿದೆ. ಇದೇ ರೀತಿ ದಿನದ ಪಾಸಗಳ ದರಗಳಲ್ಲೂ ಬದಲಾವಣೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT