ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯೋಗಗಳಿಗೆ ಬೆನ್ನು ತಟ್ಟಿ: ಬಾಳಜ್ಜ

Last Updated 5 ಫೆಬ್ರುವರಿ 2011, 18:35 IST
ಅಕ್ಷರ ಗಾತ್ರ

ಬೆಂಗಳೂರು: ನಾಟಕ ಹುಟ್ಟಿದ್ದೇ ಜನ ಜಾಗೃತಿಗಾಗಿ. ಹರಿಯುವ ನದಿಯಂತೆ ಅದೊಂದು ನಿರಂತರ ಪ್ರಕ್ರಿಯೆ ಎಂದು ‘ಕನ್ನಡ ರಂಗ ಚಳವಳಿಗಳು’ ಗೋಷ್ಠಿಯಲ್ಲಿ ಮಾತನಾಡಿದ ರಂಗಕರ್ಮಿಗಳು, ವಿದ್ವಾಂಸರು ಅಭಿಪ್ರಾಯಪಟ್ಟರು.

77ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಶನಿವಾರ ಕುವೆಂಪು ಕಲಾಕ್ಷೇತ್ರದಲ್ಲಿ ನಡೆದ ಈ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಡೆದಾಡುವ ರಂಗಭೂಮಿ ಎಂದೇ ಪ್ರತೀತಿಯಾದ 98ರ ಹರೆಯದ ಏಣಗಿ ಬಾಳಪ್ಪ ಮಾತನಾಡಿ, ರಂಗ ಚಳವಳಿ ಸಂಗೀತದಿಂದ ಆರಂಭವಾಯಿತು ಎಂದರು.

ಮರಾಠಿ ನಾಟಕ ಪಿತಾಮಹನೆನಿಸಿದ ಅಣ್ಣಾರಾವ್ ಕಿರ್ಲೋಸ್ಕರ್ ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕು ಗುರ್ಲಹೊಸೂರಿನವರು. ಇಲ್ಲಿನ ಕೃಷ್ಣಪಾರಿಜಾತದ ಹಾಡುಗಳ ಮಟ್ಟುಗಳಿಂದ ಮರಾಠಿ ನಾಟ್ಯ ಸಂಗೀತ ಕಟ್ಟಿದರು.

ಕರ್ನಾಟಕದಲ್ಲಿ ಮರಾಠಿ ನಾಟಕಗಳ ಪ್ರಯೋಗವಾದಾಗ ಜನ ಮುಗಿಬಿದ್ದು ನೋಡಿದರು. ಭಾಷೆ ಅರ್ಥವಾಗದಿದ್ದರೂ ನಾಟಕಕ್ಕೆ ಬರುವ ಪ್ರೇಕ್ಷಕರನ್ನು ನೋಡಿ ಗದಗದ ಶಾಂತಕವಿಗಳು ತಾವೇ ಸ್ವಂತ ನಾಟಕ ಕಂಪೆನಿ ಶುರು ಮಾಡಿದರು. ಸಂಗೀತಮಯ ನಾಟಕಗಳು ಪ್ರೇಕ್ಷಕರನ್ನು ಸೆರೆಹಿಡಿದವು. ಉತ್ತರ ಕರ್ನಾಟಕದಲ್ಲಿ ಕೊಣ್ಣೂರು ಕಂಪೆನಿ, ದಕ್ಷಿಣ ಕರ್ನಾಟಕದಲ್ಲಿ ಗುಬ್ಬಿ ಕಂಪೆನಿಗಳು ಬಂದ ಮೇಲೆ ವೃತ್ತಿರಂಗಭೂಮಿ ಉತ್ತರೋತ್ತರವಾಗಿ ಬೆಳೆಯಿತು. ಸಂಗೀತ ಇಲ್ಲಿನ ಪ್ರಧಾನ ಆಕರ್ಷಣೆಯಾಗಿತ್ತು ಎಂದರು.

ಉತ್ತರದವರಿಗೆ ದಕ್ಷಿಣದ ಕರ್ನಾಟಕ ಸಂಗೀತ, ದಕ್ಷಿಣದವರಿಗೆ ಹಿಂದೂಸ್ತಾನಿ ರಂಗಸಂಗೀತ ಅಷ್ಟಾಗಿ ಹಿಡಿಸದಿದ್ದಾಗ ಎರಡನ್ನೂ ಕೂಡಿಸುವ ಪ್ರಯೋಗವನ್ನು ಶಿರಹಟ್ಟಿ ವೆಂಕೋಬರಾಯರು ಮಾಡಿದರು. ರಾಮಾಯಣ ನಾಟಕದ ಕೆಲವು ಪಾತ್ರಗಳಿಗೆ ಕರ್ನಾಟಕಿ, ಮತ್ತೆ ಕೆಲವಕ್ಕೆ ಹಿಂದೂಸ್ತಾನಿ ಹಾಡು ಹಾಕಿದರು. ಎರಡೂ ಭಾಗದಲ್ಲಿ ಪರಸ್ಪರ ಕೊಡುಕೊಳುವಿಕೆಯಿಂದ ವೃತ್ತಿರಂಗಭೂಮಿ ಮುಂದೆ ಒಂದು ಶತಮಾನ ವಿಜೃಂಭಿಸಿತು.

ಸಂಗೀತ ಅತಿಯಾಯಿತು ಎನ್ನಿಸಿದಾಗ ಕೈಲಾಸಂ ಹಾಗೂ ಆರ್.ವಿ.ಜಾಗೀರದಾರರು (ಶ್ರೀರಂಗ) ಸಂಗೀತವನ್ನೇ ಕೈಬಿಟ್ಟು ನಾಟಕ ಮಾಡಿದರು. ವಿದ್ಯಾವಂತರಲ್ಲಿ ಅದೂ ತಕ್ಕಮಟ್ಟಿಗೆ ಯಶಸ್ಸು ಪಡೆಯಿತು. ಬಿ.ವಿ.ಕಾರಂತರು ಮತ್ತೆ ನಾಟಕಕ್ಕೆ ಸಂಗೀತ ತಂದರು.

ಯುವಕರು ಇದೀಗ ಹೊಸ ಪ್ರಯೋಗಗಳಲ್ಲಿ ನಿರತರಾಗಿದ್ದಾರೆ. ಮುದುಕರು ಅದನ್ನು ನೋಡಿ ಸಂತೋಷ ಪಡೀಬೇಕು. ನಂದೇ ಸರಿ ಎನ್ನುವ ಜಾಯಮಾನ ನಮಗೆ ಬೇಡ. ಆಗ ರಂಗ ಚಳವಳಿ ನಿರಂತರ ಎಂದೂ ಬಾಳಜ್ಜ ಹೇಳಿದರು.

ವೃತ್ತಿ ರಂಗಭೂಮಿ ಕುರಿತು ಮಾತನಾಡಿದ ರಂಗತಜ್ಞ ಡಾ.ರಾಮಕೃಷ್ಣ ಮರಾಠೆ ಅವರು, ಕನ್ನಡ ಸಾಹಿತ್ಯ ಪರಿಷತ್ತು, ಧಾರವಾಡದ ವಿದ್ಯಾವರ್ಧಕ ಸಂಘ ಇನ್ನೂ ಹುಟ್ಟಿರದ ಕಾಲದಲ್ಲಿ ಅಸ್ತಿತ್ವಕ್ಕೆ ಬಂದ ವೃತ್ತಿ ರಂಗಭೂಮಿ ನಾಟಕದ ಮೂಲಕ ನಾಡು, ನುಡಿ ಬಗ್ಗೆ ಜನಜಾಗೃತಿ ಮಾಡಿಸಿತು. ಮರಾಠಿ ನಾಟಕಗಳ ಹಾವಳಿ ವಿರುದ್ಧ ಆಂದೋಲನ ರೂಪಿಸಲು ಗದಗದ ಶಾಂತಕವಿಗಳು ಆಧುನಿಕ ರಂಗಭೂಮಿಗೆ ಅಡಿಪಾಯ ಹಾಕಿದರು ಎಂದು ಹೇಳಿದರು.

ಕೊಣ್ಣೂರು ಕಾಡಸಿದ್ದೇಶ್ವರ ನಾಟಕ ಕಂಪೆನಿಯ ಶಿವಮೂರ್ತಿ ಸ್ವಾಮಿಗಳು ಅದಕ್ಕೆ ವೃತ್ತಿಯ ಶಿಸ್ತು ನೀಡಿದರೆ, ಮುಂದೆ ಬಂದವರು ಕನ್ನಡ ರಂಗಭೂಮಿಯ ಉತ್ಕರ್ಷವನ್ನು ಎತ್ತಿ ಹಿಡಿದರು. ಸ್ವಾತಂತ್ರ್ಯ ಚಳವಳಿಗೆ, ಕರ್ನಾಟಕ ಏಕೀಕರಣಕ್ಕೆ ಕನ್ನಡ ವೃತ್ತಿರಂಗಭೂಮಿ ಅಪಾರ ಕಾಣಿಕೆ ನೀಡಿದೆ ಎಂದರು.

ದಕ್ಷಿಣ ಭಾಗದಲ್ಲಿ ಪ್ರಗತಿಪರ ಮೈಸೂರು ಅರಸರು ವೃತ್ತಿರಂಗಭೂಮಿಗೆ ಅಡಿಪಾಯ ಹಾಕಿದರೆ, ಉತ್ತರ ಕರ್ನಾಟಕದಲ್ಲಿ ಸಂಘರ್ಷದಿಂದಲೇ ರಂಗಭೂಮಿ ಹುಟ್ಟಿಬಂತು. ಎರಡೂ ಸೇರಿ ಅಖಂಡ ಕರ್ನಾಟಕವಾಗಿ ನಾಡನ್ನು ಕಟ್ಟಿದವು, ನುಡಿಯನ್ನು ಕಟ್ಟಿದವು ಎಂದರು.

ಹವ್ಯಾಸಿ ರಂಗಭೂಮಿ ಕುರಿತು ಮಾತನಾಡಿದ ಲೇಖಕ ಡಾ.ರಾಜಪ್ಪ ದಳವಾಯಿ ಅವರು, ನಾಟಕ ಎಂದರೆ ಬರೀ ನೋಡುವುದಾಗಿತ್ತು, ಆದರೆ ಯೋಚಿಸುವುದನ್ನು ಹವ್ಯಾಸಿ ರಂಗಭೂಮಿ ಕಲಿಸಿತು. ಇದು ಚಿಂತನಾ ಪ್ರಧಾನವಾದುದು. ಜಗತ್ತಿನ ಎಲ್ಲ ತತ್ವಸಿದ್ಧಾಂತಗಳನ್ನು ಅಳವಡಿಸಿಕೊಂಡು ಹವ್ಯಾಸಿ ರಂಗಭೂಮಿ ಹಲವು ಪ್ರಯೋಗಗಳನ್ನು ನಿರಂತರವಾಗಿ ಮಾಡಿತು ಎಂದು ವಿವರಿಸಿದರು.

ರಂಗ ಚಳವಳಿ ನಿರಂತರವಾಗಿ ನಡೆಯುತ್ತಲೇ ಇದೆ. ಆದರೆ ಸಮಕಾಲೀನ ಸ್ಪಂದನದ ಕೆಲವು ಸೂಕ್ಷ್ಮಗಳು ಕಾಣುತ್ತಿಲ್ಲ. ಅವನ್ನೂ ಅಳವಡಿಸಿಕೊಳ್ಳಬೇಕು ಎಂದೂ ಅವರು ಹೇಳಿದರು.

ಗ್ರಾಮೀಣ ರಂಗಭೂಮಿ ಕುರಿತು ಮಾತನಾಡಿದ ರಂಗ ನಿರ್ದೇಶಕ ಜಿ.ಎನ್.ದೇಶಪಾಂಡೆ ಅವರು, ವೈಚಾರಿಕತೆ ಅಕ್ಷರಕ್ಕೆ ಸಂಬಂಧಿಸಿದ್ದಲ್ಲ. ನಗರಸ್ತರು ಮಾತ್ರ ವಿಚಾರಗಳಿಗೆ ತೆರೆದುಕೊಳ್ಳುತ್ತಾರೆ, ಗ್ರಾಮೀಣರು ಇಲ್ಲ ಎಂದರೆ ತಪ್ಪಾಗುತ್ತದೆ. ಗ್ರಾಮೀಣ ರಂಗಭೂಮಿ ಆಯಾ ಕಾಲದ ವೈಚಾರಿಕತೆಗೆ ಪೂರಕವಾಗೇ ಕೆಲಸ ಮಾಡಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ರಾಜಾರಾಂ ಅವರು ಮಾತನಾಡಿ, ನಾಟಕ ಪ್ರದರ್ಶನ ನಿತ್ಯದ ಕ್ರಿಯೆ. ಅದು ಹರಿಯುವ ನದಿ ಇದ್ದಂತೆ. ಆದ್ದರಿಂದ ನಾಟಕದ ಕುರಿತ ಚರ್ಚೆಗೆ ಚಳವಳಿ ಎಂಬ ಪದ ಸೂಕ್ತ ಎಂದು ಗೋಷ್ಠಿಯ ಶೀರ್ಷಿಕೆಯನ್ನು ಸಮರ್ಥಿಸಿಕೊಂಡರು.

ವೃತ್ತಿರಂಗಭೂಮಿ ಕಲಾವಿದರು ಸಿನಿಮಾಕ್ಕೆ ಹೋದರು. ಇಂದಿನ ಬೆಂಗಳೂರಿನ ಹವ್ಯಾಸಿಗಳು ಕಿರುತೆರೆಗೆ ಹೋಗುತ್ತಿದ್ದಾರೆ. ಹೋಗಲಿ, ಅದು ಅವರ ಜೀವನದ ಪ್ರಶ್ನೆ. ಆದರೆ ಸಿನಿಮಾ, ಟಿವಿಯಲ್ಲಿ ಗಳಿಸಿದ ಜನಪ್ರಿಯತೆಯನ್ನು ನಾಟಕಕ್ಕೆ ಧಾರೆ ಎರೆಯಲಿ. ಜನಕ್ಕೆ ಜನಪ್ರಿಯತೆ ಬೇಕು ಎಂದೂ ರಾಜಾರಾಂ ಹೇಳಿದರು.

ಪ್ರದೀಪ ಎಸ್.ಕಲ್ಕೂರ ಸ್ವಾಗತಿಸಿದರು. ಟಿ.ತಿಮ್ಮೇಶ್ ಕಾರ್ಯಕ್ರಮ ನಿರೂಪಿಸಿದರು. ಚಂದ್ರಶೇಖರ ವಂದಿಸಿದರು.
ಗುಡಿಗೇರಿ ಚೇತರಿಸಿಕೊಳ್ಳಲಿ: ಗೋಷ್ಠಿಯ ಆಶಯ ಭಾಷಣ ಮಾಡಬೇಕಿದ್ದ ವೃತ್ತಿರಂಗಭೂಮಿಯ ಹಿರಿಯ ನಟ ಗುಡಿಗೇರಿ ಬಸವರಾಜ ಅವರು ತೀವ್ರ ಅಸ್ವಸ್ಥರಾಗಿರುವ ನಿಮಿತ್ತ ಸಮಾರಂಭಕ್ಕೆ ಬಂದಿರಲಿಲ್ಲ. ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿರುವ ಗುಡಗೇರಿ ಬಸವರಾಜ ಅವರು ಚೇತರಿಸಿಕೊಳ್ಳಲಿ ಎಂದು ಸಮಾರಂಭದಲ್ಲಿ ಮಾತನಾಡಿದ ಎಲ್ಲರೂ ಹಾರೈಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT