ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯೋಗಶೀಲ ಮನಸಿನ ಕಾವ್ಯ ಕಾರಂಜಿ

Last Updated 20 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬಿ.ಆರ್. ಲಕ್ಷ್ಮಣರಾವ್ ಕನ್ನಡ ಕಾವ್ಯ ಪ್ರಪಂಚದಲ್ಲಿ ಸಾಕಷ್ಟು ಹೆಸರು ಗಳಿಸಿದ ಕವಿ. ಎಪ್ಪತ್ತರ ದಶಕದಿಂದಲೇ ಅವರ ಕಾವ್ಯ ಪ್ರಕಟಣೆ ಪ್ರಾರಂಭವಾಗಿದೆ. `ಗೋಪಿ ಮತ್ತು ಗಾಂಡಲೀನ~ (1971), `ಲಿಲ್ಲಿಪುಟ್ಟಿಯ ಹಂಬಲ~ (1981), `ಶಾಂಗ್ರಿ-ಲಾ~ (1987), `ಅಪರಾಧಂಗಳ ಮನ್ನಿಸೊ~ (1992), `ಎಡೆ~ (1998) ಮತ್ತು `ಇವಳು ನದಿಯಲ್ಲ~ (2003) ಕವನ ಸಂಕಲನಗಳು ಪ್ರಕಟವಾಗಿವೆ.

ಈ ಎಲ್ಲ ಕವನ ಸಂಕಲನಗಳಲ್ಲಿಯ ಒಟ್ಟು ಕವನಗಳ ಸಂಖ್ಯೆ 232. `ಸುಬ್ಬಾಭಟ್ಟರ ಮಗಳೆ~ (2005) ಅವರ ಭಾವಗೀತೆಗಳ ಸಂಕಲನ. ಇವುಗಳ ಒಟ್ಟು ಸಂಖ್ಯೆ 107. `ಹನಿಗವಿತೆಗಳು~ (2009)- ಇವುಗಳ ಸಂಖ್ಯೆ 195. ಅಂದರೆ ಎಪ್ಪತ್ತರ ದಶಕದಿಂದ ಈ ಕವಿಯು ನಿರಂತರವಾಗಿ ತಮ್ಮನ್ನು ಕಾವ್ಯ ಬರವಣಿಗೆಯಲ್ಲಿ ತೊಡಗಿಸಿಕೊಂಡದ್ದು ಮತ್ತು ಮಧ್ಯೆ ಮಧ್ಯೆ ತಮ್ಮ ಕಾವ್ಯದ ದಿಕ್ಕನ್ನು ತಾವೇ ಬದಲಿಸಿಕೊಂಡದ್ದು ತಿಳಿದುಬರುತ್ತದೆ.

ಇದಲ್ಲದೆ ಅವರ ಕಾವ್ಯ ಭಾಷೆ ಕೂಡ ಅವರ ಸಂವೇದನೆ ಬದಲಾದಂತೆ ಬದಲಾಗುತ್ತಲೇ ಹೋಗಿದೆ. ಹೀಗೆ ಮೇಲ್ನೋಟಕ್ಕೆ ಈ ಕವಿಯು ತನ್ನ ಕಾವ್ಯೋದ್ಯೋಗದ ಬಗ್ಗೆ ಬಹಳ ಗಂಭೀರವಾಗಿ ಚಿಂತಿಸಿದ್ದಾರೆ ಮತ್ತು ಲಘುವೆನ್ನಿಸಿದ್ದನ್ನು ಅಭಿವ್ಯಕ್ತಿಸುವಾಗ ಕೂಡ ಅಭಿವ್ಯಕ್ತಿಯ ಕ್ರಿಯೆಯನ್ನು ಅವರು ಲಘುವಾಗಿ ಪರಿಗಣಿಸಿಲ್ಲ ಎಂಬುದು ಗೊತ್ತಾಗುತ್ತದೆ.

ಇವರ ಕಾವ್ಯದ ತದನಂತರ ಬಂದ ಕಾವ್ಯವನ್ನು ಪರಿಶೀಲಿಸಿದಾಗ ಈ ಮಾತಿನ ಮಹತ್ವ ನಮ್ಮ ಗಮನಕ್ಕೆ ಬಾರದೆ ಹೋಗದು.ಈ ಕವನ ಸಂಕಲನಕ್ಕೆ ಮುನ್ನುಡಿ ಬರೆದಿರುವ ನರಹಳ್ಳಿ ಬಾಲಸುಬ್ರಹ್ಮಣ್ಯ, ಈ ಕಾವ್ಯದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಎಚ್.ಎಸ್. ವೆಂಕಟೇಶಮೂರ್ತಿ, ಓ.ಎಲ್. ನಾಗಭೂಷಣಸ್ವಾಮಿ, ಜಿ.ಎಸ್. ಶಿವರುದ್ರಪ್ಪ, ಚೆನ್ನವೀರ ಕಣವಿ, ಯು.ಆರ್. ಅನಂತಮೂರ್ತಿ ಮತ್ತು ಚಂದ್ರಶೇಖರ ಕಂಬಾರರು ಇಲ್ಲಿಯ ಕಾವ್ಯಗುಣವನ್ನು ಕುರಿತು ತಮ್ಮ ತಮ್ಮ ಸದಭಿಪ್ರಾಯಗಳನ್ನು ಮತ್ತು ವಿಶ್ಲೇಷಣಾತ್ಮಕ ದೃಷ್ಟಿಕೋನಗಳನ್ನು ವ್ಯಕ್ತಪಡಿಸಿದ್ದಾರೆ.

ಒಬ್ಬ ಮಹಾಕವಿಯ ಸಮಕಾಲೀನರಾಗಿ ಬರೆಯುವಾಗ ವಯಸ್ಸಿನ ಅಂತರವಿದ್ದರೂ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಡಿಗರು ತಮ್ಮ ಅತ್ಯುತ್ತಮ ಕಾವ್ಯವನ್ನು ಇನ್ನೂ ಬರೆಯುತ್ತಿರಬೇಕಾದ ಸಮಯದಲ್ಲಿಯೇ ಲಕ್ಷ್ಮಣರಾಯರ ಪ್ರಾರಂಭಿಕ ಕವನಗಳು ಮೂಡಿಬಂದಿರುವುದರಿಂದ ಕೆಲವೊಂದು ಸಮಸ್ಯೆಗಳು ಎದುರಾಗಿವೆ.

ತಾನು ಅವರಿಗಿಂತ ಭಿನ್ನ ಮತ್ತು ಅವರ ಸಂವೇದನೆಯನ್ನು ಸ್ವೀಕರಿಸಿಯೂ ಭಿನ್ನವಾಗಿ ನಿಲ್ಲಬಲ್ಲೆ ಎಂದು ತೋರಿಸಲು ಕೆಲವೊಮ್ಮೆ ಇಲ್ಲಿಯ ಪದ್ಯಗಳಲ್ಲಿ ಅಡಿಗರ ಕಾವ್ಯದ ಸಾಲುಗಳು ಉದ್ದೇಶಪೂರ್ವಕವಾಗಿಯೇ ಕಾಣಿಸಿಕೊಳ್ಳುತ್ತವೆ.

`ನವ್ಯ~ ಎಂಬ ಪದವು ಸಂವೇದನೆಗೆ ಸಂಬಂಧಪಟ್ಟುದಾಗಿದೆಯೇ ಹೊರತು ಅದು ಬಹಳ ಸಲ ಪ್ರಯೋಗವಾಗುವಂತೆ ಚಳವಳಿಗೆ ಸಂಬಂಧಪಟ್ಟ ಶಬ್ದವಲ್ಲ. ಕನ್ನಡದ ಓದನ್ನು ಪ್ರಚಾರಗೊಳಿಸುವ ಉದ್ದೇಶವೂ ನವೋದಯಕ್ಕೆ ಇದ್ದುದರಿಂದ ಅದಕ್ಕೆ `ಚಳವಳಿ~ ಎಂಬ ಪದ ಅನ್ವರ್ಥಕವಾಗುತ್ತದೆ. `

ನವ್ಯ~ ಪದವು ಕೇವಲ ಸಂವೇದನೆಯಲ್ಲಿಯ ಪಲ್ಲಟವನ್ನು ಸೂಚಿಸುತ್ತದೆ. ಬಿ.ಆರ್. ಲಕ್ಷ್ಮಣರಾಯರ ಕಾವ್ಯದ ಸಂದರ್ಭದಲ್ಲಿ ಈ ಅರಿವು ಬಹಳ ಮಹತ್ವದ್ದು. ಅವರಲ್ಲಿ ಸಂವೇದನೆಯಲ್ಲುಂಟಾಗುವ ಪಲ್ಲಟದ ಸ್ಪಷ್ಟ ಅಂಶಗಳು ಗೋಚರಿಸುತ್ತವೆ.

ನವೋದಯದವರು ಸೂರ್ಯೋದಯವನ್ನು ಒಂದು ಸುಂದರ ದೃಶ್ಯದಂತೆ ಬಣ್ಣಿಸಿದರೆ, ನವ್ಯದ ಪ್ರಾರಂಭಿಕ ಕಾವ್ಯದಲ್ಲಿ ಸೂರ್ಯೋದಯವನ್ನು ಒಂದು `ಕುರೂಪಿ~ ಎಂತಲೋ ಅಥವಾ ಸೂರ್ಯನ ಕಿರಣಗಳು ಬೀಳುವ ಸ್ಥಳಗಳಲ್ಲಿಯ ಕ್ರೌರ್ಯವನ್ನೋ ನಿರೂಪಿಸಲು ಬಳಸಲಾಯಿತು.
 
ಲಕ್ಷ್ಮಣರಾಯರ ಪ್ರಾರಂಭಿಕ ಕಾವ್ಯವೂ ಇಂಥ ಧೋರಣೆಗೆ ಹೊರತಾಗಿಲ್ಲ. ಆದರೆ ಅದು ಮನೋವಿಶ್ಲೇಷಣೆಯ ಪರ ಮುಖ ಮಾಡಿದೆಯೇ ಹೊರತು ಜೀವನ ವಿಮುಖಿಯಾಗುವುದಿಲ್ಲ. ಪ್ರಾರಂಭದಲ್ಲಿ ಅವರ `ಟುವಟಾರ~ ಎಂಬ ಪದ್ಯವು ಬಹುಜನರನ್ನು ಆಕರ್ಷಿಸಿತು.
 
ಇಲ್ಲಿ ಬಹುಕಾಲ ನೆಲದಲ್ಲಿ ವಾಸಿಸುವ, ಬಹಳ ನಿಧಾನಗತಿಯುಳ್ಳ `ಟುವಟಾರ~ವನ್ನು ಬಣ್ಣಿಸಿ ಕೊನೆಗೆ `ಜೈ ಹಿಂದ್~ ಎಂದು ಪದ್ಯ ಕೊನೆಗೊಂಡೊಡನೆ `ಟುವಟಾರ~ನ ಜೀವನವನ್ನು ಭಾರತೀಯ ಜೀವನಕ್ಕೆ ಒಂದು ಸಂಕೇತವನ್ನಾಗಿ ಮಾಡಿದ್ದಾರೆ ಎಂಬುದು ಗೊತ್ತಾಗುತ್ತದೆ. ಪ್ರಕಟವಾದ ಕಾಲದಲ್ಲಿ ಅದು ಹೊಸದು.

1981ರಲ್ಲಿ ಪ್ರಕಟವಾದ ಸಂಕಲನದಲ್ಲಿಯ `ಲಿಲ್ಲಿ ಪುಟ್ಟಿಯ ಹಂಬಲ~ ಎಂಬ ಪದ್ಯ ಗಮನ ಸೆಳೆಯುತ್ತದೆ. ಬೃಹತ್ ಮತ್ತು ಮಹತ್ತಿನ ವಿಚಿತ್ರ ವಿರೋಧಾಭಾಸವನ್ನು ಪದ್ಯ ಸೆರೆಹಿಡಿಯುತ್ತದೆ. ಹಾಗೆಯೇ ಸಮಾನಾಂತರವಾಗಿ ಹೆಣ್ಣಿನ ದೈಹಿಕ ಹಂಬಲವೂ ವ್ಯಕ್ತವಾಗುತ್ತದೆ. ಒಂದು ಬೆಳೆದಂತೆ ಅದರ ಇನ್ನೊಂದು ಪಾರ್ಶ್ವ ಶಬ್ದಗಳ ಸಹಾಯವಿಲ್ಲದೆ ಮೂಡುತ್ತ ಹೋಗುವುದು ಲಕ್ಷ್ಮಣರಾಯರ ಕಾವ್ಯದ ವಿಶೇಷ ಗುಣವೆಂಬಂತೆ ತೋರುತ್ತದೆ.

`ಶಾಂಗ್ರಿ-ಲಾ~ ಸಂಕಲನದಲ್ಲಿಯ `ಗುಂಡಪ್ಪ ವಿಶ್ವನಾಥ್~ ಎಂಬ ಪದ್ಯದಲ್ಲಿಯೂ ಇಂಥದೇ ಒಂದು ಕ್ರಿಯೆ ನಡೆಯುತ್ತದೆ. ವ್ಯಕ್ತಿಚಿತ್ರವನ್ನು ಕೊಡಲು ಹೊರಟ ಪದ್ಯವು ಕೊನೆಗೆ ಹೀಗೆ ಕೊನೆಯಾಗುತ್ತದೆ:
 

ವೈಭವಗಳ ಹಂಪೆಯಲ್ಲಿ ಅಂಡಲೆಯುವ ಭೂತ
ಸವೆದ ಸ್ಪರ್ಶಮಣಿ, ಕಂಬ ಕುಂಚ ಉಳಿ ಅನಾಥ
ಕೃತಜ್ಞತೆ, ಸಹಾನುಭೂತಿ ವಿಶ್ವನಾಥ

`ಸುಬ್ಬಾಭಟ್ಟರ ಮಗಳೇ~ ಲಕ್ಷ್ಮಣರಾಯರ ಕಾವ್ಯ ಬೆಳವಣಿಗೆಯಲ್ಲಿ ಒಂದು ಕುತೂಹಲಕರ ಘಟ್ಟವನ್ನು ಸೂಚಿಸುತ್ತದೆ. ಇಲ್ಲಿಯ ಗೀತೆಗಳಲ್ಲಿಯ ಲಯಗಾರಿಕೆ ಆಶ್ಚರ್ಯ ಹುಟ್ಟಿಸುವಷ್ಟು ಹೊಸದಾಗಿದೆ. ಸಾಮಾನ್ಯವಾಗಿ ಈ ಕಾಲದ ಕವಿಗಳೆಲ್ಲ ಭಾವಗೀತೆಗಳಿಂದ ಪ್ರಾರಂಭಿಸಿ, ನವ್ಯದ ಮೂಲಕ ಹಾದು ಬಂದು ನಂತರ `ತಮ್ಮತನ~ವನ್ನು ಕಂಡುಕೊಂಡಿದ್ದಾರೆ.

ಲಕ್ಷ್ಮಣರಾಯರ ಕಾವ್ಯದಲ್ಲಿ ಇದಕ್ಕೆ ವಿರುದ್ಧವಾದ ಬೆಳವಣಿಗೆ ಇದೆ. ಪ್ರಾಯಶಃ ನವ್ಯದಿಂದ ಬಿಡುಗಡೆ ಹೊಂದಲು ಈ ಕ್ರಿಯೆ ಅನಿವಾರ್ಯವಾಗಿತ್ತೆಂದು ತೋರುತ್ತದೆ. ಇಲ್ಲವಾದರೆ ಈ ಕವಿಗೆ ಪ್ರಾರಂಭದಲ್ಲಿ `ಕುರೂಪಿ~ಯಾಗಿ ಕಂಡದ್ದು ನಂತರದಲ್ಲಿ `ಸುಂದರ~ವಾಗಿ ಕಾಣಲು ಹೇಗೆ ಸಾಧ್ಯ? ತಾವು ಕಳಕೊಂಡದ್ದೇನು ಎಂಬುದನ್ನು ಮತ್ತೆ ಮತ್ತೆ ಖಚಿತಪಡಿಸಿಕೊಳ್ಳಲೆಂದೇ ಈ ಭಾವಗೀತೆಗಳನ್ನು ರಚಿಸಲಾಗಿದೆ.

`ಹನಿಗವಿತೆಗಳು~ ಸಂಕಲನದಲ್ಲಿ ಸಾಕಷ್ಟು ಚಿಕ್ಕ `ಪದ್ಯ~ಗಳಿವೆ. ಇಲ್ಲಿ ಹಾಸ್ಯ ಮತ್ತು ವಿಡಂಬನೆಗಳೇ ಕೇಂದ್ರದಲ್ಲಿವೆ. ಆದರೆ ಭಾವಗೀತೆಗಳಿಗೆ ಪೂರ್ವದಲ್ಲಿ ಬಂದ ಈ ಕವಿಯ ಕಾವ್ಯವನ್ನು ಈ ಹನಿಗವಿತೆಗಳೊಡನಿಟ್ಟು ನೋಡಿದಾಗ ಇವುಗಳ ಅವಶ್ಯಕತೆ ಇತ್ತೇ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಭಾವಗೀತೆಗಳನ್ನು ಬರೆಯಲು ಒಂದು ಬಲವಾದ ಕಾರಣವಿದೆ ಎಂಬುದನ್ನು ಒಪ್ಪಬಹುದು. ಆದರೆ ಹನಿಗನಿತೆಗಳ ಹಿಂದೆ ಅಂಥ ಬಲವಾದ ಕಾರಣ ಕಾಣುವುದಿಲ್ಲ.

ಈ ಸಮಗ್ರ ಕಾವ್ಯದಲ್ಲಿ ಅಲ್ಲಲ್ಲಿ ಬಹಳ ಆಳವಾದ `ಕಾವ್ಯಕಾಳಜಿ~ಯನ್ನು ಹೊಂದಿದ ಪದ್ಯಗಳು ಸಿಗುತ್ತವೆ. ನಗರ ಭಾಷೆಯ ಅದ್ಭುತ ಪ್ರಯೋಗಗಳು ಗೋಚರಿಸುತ್ತವೆ. ಆದರೆ ಒಟ್ಟಾರೆಯಾಗಿ ಈ ಕಾವ್ಯವು ಒಂದು `ಕಾಳಜಿ~ಯ ಬೆನ್ನಟ್ಟಿ ಹೋಗುವುದಿಲ್ಲ. ಕ್ಷಣಿಕತೆಗೆ ಭಾಷ್ಯ ಬರೆದು ವಿರಮಿಸುತ್ತದೆ.
 
ತನ್ನಲ್ಲುಂಟಾದ ಪಲ್ಲಟಕ್ಕಿಂತ ಹೊರಗೆ ಉಂಟಾಗುವ ಪಲ್ಲಟಗಳಿಗೇ ಇಲ್ಲಿಯ ಮನಸ್ಸು ತೆರೆದುಕೊಳ್ಳುತ್ತದೆ. ಇದು ಲಕ್ಷ್ಮಣರಾಯರ ಕಾವ್ಯದ ಬಲವೂ ಹೌದು, ಬಲಹೀನತೆಯೂ ಹೌದು. ಜೀವನದ ಆಳವಾದ ಸಮಸ್ಯೆಗಳ ಜಟಿಲತೆ ಅಭಿವ್ಯಕ್ತವಾಗುವಾಗ ಇದು ಬಲವಾಗುತ್ತದೆ. ಉಳಿದೆಡೆ ಅದೇ ಶಕ್ತಿ ಕ್ಷಣಿಕತೆಯ ಬೆನ್ನಟ್ಟಿ ದುರ್ಬಲವಾಗುತ್ತದೆ. ನಮ್ಮ ಕಾಲದಲ್ಲಿ ಬರೆಯುತ್ತಿರುವ ಹೆಚ್ಚಿನ ಕವಿಗಳ ಸಮಸ್ಯೆ ಇದು ಎಂದೇ ತೋರುತ್ತದೆ.

ಯಾವುದರಿಂದಲೂ ಬಿಡಿಸಿಕೊಳ್ಳಬೇಕಿಲ್ಲ, ಯಾವುದಕ್ಕಾಗಿಯೂ ನಾವು ಮಾಗಬೇಕಾಗಿಲ್ಲ. ನಮ್ಮ ಬರವಣಿಗೆ ಕೊನೆಗೂ ಮೊದಲು ನಮಗಾಗಿಯೇ. ಹೃದಯದಾಳದಲ್ಲಿ ಪೆನ್ನನದ್ದಿ ಬರೆಯುವುದೊಂದೇ ದಾರಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT