ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯೋಗಶೀಲ ಯುವ ಉದ್ಯಮಿ

Last Updated 21 ಡಿಸೆಂಬರ್ 2010, 10:25 IST
ಅಕ್ಷರ ಗಾತ್ರ
ADVERTISEMENT

ಊಟದಲ್ಲಿ ಉಪ್ಪಿನಕಾಯಿ ಮಹತ್ವ ಎಲ್ಲರಿಗೂ ತಿಳಿದದ್ದೇ. ಆಹಾರ ಸಂಸ್ಕರಣೆಯ ಈ ಉದ್ಯಮ ಬಹಳ ಜಾಗರೂಕತೆ ಬಯಸುತ್ತದೆ.ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಸ್ವಲ್ವ ಎಡವಿದರೂ ನಷ್ಟವಾಗುವುದು ಸಹಜ. ಇನ್ನು ದೊಡ್ಡ ಕಾರ್ಪೊರೇಟ್ ಕಂಪೆನಿಗಳಂತೆ ಭಾರಿ ಪ್ರಚಾರ ಮಾಡುವ ಕಂಪೆನಿಗಳ ಬ್ರಾಂಡ್‌ಗಳಲ್ಲಿ ಮಾರಾಟವಾಗುವ ಉಪ್ಪಿನಕಾಯಿಯನ್ನು ಕೆಲವರು ಮಾರುಹೋಗಿ ತೆಗೆದುಕೊಳ್ಳುತ್ತಾರೆ.

ಆದರೆ, ಇದ್ಯಾವುದೂ ಇಲ್ಲದೇ ದೇಶಿ ಸೊಗಡಿನಲ್ಲಿ ರೈತರ ಪ್ರೋತ್ಸಾಹಕ ಉದ್ದಿಮೆಯಾಗಿ ಪ್ರಾರಂಭವಾದ ಉಪ್ಪಿನಕಾಯಿ ಹಾಗೂ ಇತರ ಗೃಹೋಪಯೋಗಿ ಉದ್ಯಮವೊಂದು ಇಡೀ ಜಿಲ್ಲೆಯಲ್ಲೇ ಗಮನ ಸೆಳೆದಿದೆ.  ಇದನ್ನು ಈಗ ಮುನ್ನಡೆಸುತ್ತಿರುವವರು ಕಿರಿಯ ವಯಸ್ಸಿನ ಯುವಕ ಎಂಬುದು ಗಮನಿಸಬೇಕಾದ ಸಂಗತಿ.

ಓದಿದ್ದು ವಿಜ್ಞಾನ ಪದವಿ. ಆದರೆ ತೊಡಗಿಸಿಕೊಂಡದ್ದು ಮಾತ್ರ ಗ್ರಾಮೀಣ ಉದ್ಯಮದಲ್ಲಿ. ಈ ಮೂಲಕ ತಾವೂ ಬೆಳೆದು ಒಂದಷ್ಟು ಜನರಿಗೆ ಉದ್ಯೋಗವನ್ನೂ ನೀಡಿ, ಸುತ್ತಲಿನ ರೈತರ ಉತ್ಪನ್ನಗಳಿಗೆ ಉತ್ತಮ ದರ ನೀಡಿ ಮಾದರಿಯಾಗಿದ್ದಾರೆ. ಅವರೇ ಬಾಳೆಹೊನ್ನೂರಿನ ಬಿ.ವಿ.ದೀಪಕ್.

ಇವರ ತಂದೆ ಬಿ.ಎಸ್.ವಿದ್ಯಾನಂದ ಭಟ್ 1987 ರಲ್ಲಿ ಶ್ರೀನಿವಾಸ ರೂರಲ್ ಇಂಡಸ್ಟ್ರೀಸ್ ಹೆಸರಿನಲ್ಲಿ ಸಣ್ಣ ಉದ್ಯಮ  ಸ್ಥಾಪಿಸಿದ್ದರು.ಸಾಮಾಜಿಕ, ಪತ್ರಿಕೋದ್ಯಮ, ಶೈಕ್ಷಣಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಭಟ್ ಮನೆಯಲ್ಲೇ ಉಪ್ಪಿನಕಾಯಿ ತಯಾರಿ ಮಾಡಿ ಸುತ್ತಲಿನ ಹಲವು ಜಿಲ್ಲೆಗಳಲ್ಲಿ ಹೆಸರು ಮಾಡಿದ್ದರು. ಲಾಭದ ಉದ್ಯಮಕ್ಕಿಂತ ಇದನ್ನೊಂದು ಗುಣಮಟ್ಟದ ಚಟುವಟಿಕೆ ಎಂಬಂತೆ ಮುಂದುವರಿಸಿಕೊಂಡು ಬಂದಿದ್ದರು.

ಆದರೆ ದುರದೃಷ್ಟವಶಾತ್ ಅವರು ನಿಧನರಾದ ನಂತರ ಇವರ ಪುತ್ರ ದೀಪಕ್ ತಂದೆಯ ಉದ್ಯಮವನ್ನೇ ಮುಂದುವರಿಸಿದರು. ಇದೀಗ ಇವರ ಉದ್ಯಮ ಇನ್ನಷ್ಟು ಬೆಳೆದಿದೆ. ಆಸಕ್ತಿ ಹಾಗೂ ಸಾಮಾಜಿಕ ಕಾಳಜಿ ಇದ್ದರೆ ಏನನ್ನೂ ಸಾಧಿಸಬಹುದು ಎಂಬುದನ್ನು ಇವರು ತೋರಿಸಿಕೊಟ್ಟಿದ್ದಾರೆ.

ರೈತರ ಉತ್ಪನ್ನಕ್ಕೆ ಬೆಲೆ: ಹಳ್ಳಿಗಳಲ್ಲಿ ಲಿಂಬೆಹಣ್ಣು, ದೊಡ್ಡಿಹಣ್ಣು ಮಳೆಗಾಲದಲ್ಲಿ ಹೆಚ್ಚು ಬೆಳೆಯುತ್ತವೆ.  ಅದನ್ನು ಮಾರುವ ರೈತರಿಗೆ ಮಾರುಕಟ್ಟೆಗಳಲ್ಲಿ ಹೆಚ್ಚು ದರ ಸಿಗುವುದಿಲ್ಲ.  ದೀಪಕ್ ಅವರ ಉದ್ದಿಮೆ ಇದನ್ನೇ ಆಧಾರವಾಗಿಟ್ಟುಕೊಂಡು ರೈತರ ಈ ಉತ್ಪನ್ನಗಳಿಗೆ ಒಳ್ಳೆಯ ಬೆಲೆ ನೀಡಿ ಖರೀದಿಸಿ ಅವರಿಗೂ ಲಾಭ ನೀಡುತ್ತಾರೆ. ಇದರಿಂದಾಗಿ ಪ್ರತ್ಯಕ್ಷ ಇಲ್ಲವೇ ಪರೋಕ್ಷವಾಗಿ ಹಲವರಿಗೆ ಉದ್ಯೋಗವೂ ದೊರೆಯುತ್ತಿದೆ.

‘ಮಳೆಗಾಲದಲ್ಲಿ ಮಲೆನಾಡಿನಲ್ಲಿ ಯಥೇಚ್ಛವಾಗಿ ಬೆಳೆದ ಲಿಂಬೆ, ಮಾವಿನಕಾಯಿ, ದೊಡ್ಲಿ, ಹೇರಳೆಕಾಯಿ, ಅಮಟೆ, ಶುಂಠಿ ಹಾಗೂ ಕೆಲವು ತರಕಾರಿಗಳು ಉಪಯೋಗಿಸಲಾಗದೆ ಹಾಳಾಗಿ ಹೋಗುತ್ತವೆ. ಆದರೆ ಇವುಗಳನ್ನು ಬಳಸಿಕೊಂಡು ಉತ್ಪನ್ನ ತಯಾರಿಸಿದರೆ ಲಾಭವೂ ಆಗುತ್ತದೆ’ ಎನ್ನುತ್ತಾರೆ ಸ್ಥಳೀಯ ಕೃಷಿಕ ನಾಗೇಶ್.

ಹೆಚ್ಚು ಜಿಲ್ಲೆಗೆ ವಿಸ್ತರಣೆ: ಇವರ ತಂದೆ ಉದ್ಯಮ ನೋಡಿಕೊಳ್ಳುತ್ತಿದ್ದ ಅವಧಿಯಲ್ಲಿ 4 ರಿಂದ 5 ಐದು ಜಿಲ್ಲೆಗಳಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿತ್ತು. ಆದರೀಗ ಸುಮಾರು 10 ಕ್ಕೂ ಹೆಚ್ಚು ಜಿಲ್ಲೆಗೆ ವಿಸ್ತರಿಸಿದ್ದಾರೆ. ಈ ಎಲ್ಲ ಕಡೆಗಳಲ್ಲಿನ ಗ್ರಾಹರನ್ನು ಸೆಳೆಯುವಲ್ಲಿ ಇವರು ಯಶಸ್ವಿಯಾಗಿದ್ದಾರೆ. ಅತಿ ಕಡಿಮೆ ಅವಧಿಯಲ್ಲಿ ಕೆಟ್ಟು ಹೋಗುವ ಉಪ್ಪಿನಕಾಯಿಯಂತಹ ಪದಾರ್ಥಗಳನ್ನು ಹೆಚ್ಚು ಉತ್ಪಾದಿಸಿದರೂ ಒಳ್ಳೆಯದಲ್ಲ. ಅಥವಾ ಬೇಡಿಕೆ ಇರುವಾಗ ಕಡಿಮೆ ಇದ್ದರೂ ಉದ್ಯಮದ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ ದೀಪಕ್. ಇದೆಲ್ಲವನ್ನೂ ನಿರ್ವಹಿಸಬೇಕಾದ ಚಾಕಚಕ್ಯತೆ ಇರಬೇಕಾದುದು ಅನಿವಾರ್ಯ ಎನ್ನುತ್ತಾರೆ.

ಹೊಸ ಪ್ರಯೋಗಗಳು: ಪ್ರಾರಂಭದಲ್ಲಿ ಇವರು ಕೇವಲ ಉಪ್ಪಿನಕಾಯಿ ತಯಾರಿಸಿ ಮಾರಾಟ ಮಾಡುತ್ತಿದ್ದರೂ ಇದೀಗ ಹೊಸ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡಲಾರಂಭಿಸಿದ್ದಾರೆ. ಹಣ್ಣಿನ ರಸಗಳಿಂದ ಸ್ವ್ಕಾಸ್ ತಯಾರಿ, ಪುಳಿಯೋಗರೆ, ಪಲಾವ್, ಸಾಂಬಾರ್, ಬಿಸಿಬೇಳೆಭಾತ್ ಇತ್ಯಾದಿ ಸಿದ್ಧಪಡಿಸುತ್ತಿದ್ದಾರೆ.

ಉದ್ದಿಮೆಗೆ ದೊಡ್ಡ ಬಂಡವಾಳ, ಸ್ಥಳ ಹಾಗೂ ಪ್ರಚಾರ ಬೇಕು ಎಂದು ಕೆಲವರು ಬಯಸುತ್ತಾರೆ. ಆದರೆ ಇದೆಲ್ಲಕ್ಕಿಂತ ಗುಣಮಟ್ಟ ಹಾಗೂ ಉತ್ಸಾಹ ಇದ್ದರೆ ಯಾರಾದರೂ ಸಾಧಿಸಬಹುದು ಎಂಬುದನ್ನು ದೀಪಕ್ ತೋರಿಸಿಕೊಟ್ಟಿದ್ದಾರೆ. ‘ತಂದೆ ಆರಂಭಿಸಿದ ಉದ್ಯಮಕ್ಕೆ ಹೊಸ ರೂಪ ಕೊಟ್ಟು ಉಳಿಸಿ ಬೆಳೆಸಬೇಕು ಎಂಬುದು ನನ್ನ ಕನಸು’ ಎಂದು ವಿನಮ್ರವಾಗಿ ಹೇಳುವ ಇವರು ತಾಯಿ ಸುಮನಾ ವಿ.ಭಟ್ ಅವರ ಪ್ರೋತ್ಸಾಹವನ್ನೂ ನೆನಪಿಸಿಕೊಳ್ಳುತ್ತಾರೆ.  ಮಾಹಿತಿಗೆ  94495 40477 ಸಂಪರ್ಕಿಸಿ.
       

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT