ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯೋಗಾಲಯದಲ್ಲಿ ಕೃತಕ ಮೋಡಗಳ ಸೃಷ್ಟಿ

Last Updated 17 ಅಕ್ಟೋಬರ್ 2011, 20:05 IST
ಅಕ್ಷರ ಗಾತ್ರ

ನವದೆಹಲಿ: ಅಕ್ಷರಶಃ ನೈಸರ್ಗಿಕ ದಟ್ಟ ಮುಂಗಾರು ಮಾರುತವನ್ನು ಹೋಲುವ ಕೃತಕ ಮೋಡಗಳನ್ನು ಪ್ರಯೋಗಾಲಯದಲ್ಲಿ ಸೃಷ್ಟಿಸಲು ಕಳೆದ 50 ವರ್ಷಗಳಿಂದ ವಿಜ್ಞಾನಿಗಳು ನಡೆಸಿದ್ದ ನಿರಂತರ ಪ್ರಯತ್ನಕ್ಕೆ ಕೊನೆಗೂ ಯಶಸ್ಸು ದೊರೆತಿದೆ.

ಜವಾಹರಲಾಲ್ ನೆಹರು ವೈಜ್ಞಾನಿಕ ಸಂಶೋಧನಾ ಕೇಂದ್ರದ ರೊದ್ದಂ ನರಸಿಂಹ ಅವರ ನೇತೃತ್ವದ ಬೆಂಗಳೂರು ಮೂಲದ ವಿಜ್ಞಾನಿಗಳ ತಂಡ ಈ ಸಾಧನೆ ಮಾಡಿದೆ. ಇಂಥದ್ದೊಂದು ಪ್ರಯತ್ನ ವಿಶ್ವದಲ್ಲಿಯೇ ಮೊದಲು ಎನ್ನುವುದು ಮಹತ್ವದ ಸಂಗತಿ.

 ಮೋಡಗಳ ಮರುಸೃಷ್ಟಿಯಿಂದ ಹವಾಮಾನ ಬದಲಾವಣೆ, ವೈಪರಿತ್ಯ, ಮುಂಗಾರು ಮಾರುತಗಳ ಚಲನೆ ಅಧ್ಯಯನಕ್ಕೆ ಹೊಸ ಆಯಾಮ ದೊರೆತಿದೆ. 

`ಕಳೆದ 50 ವರ್ಷಗಳಿಂದ ವಿವಿಧ ವಿಜ್ಞಾನಿಗಳು ನೈಸರ್ಗಿಕ ಮೋಡಗಳನ್ನು ಹೋಲುವ ಕೃತಕ ಮೋಡಗಳನ್ನು ಪ್ರಯೋಗಾಲಯದಲ್ಲಿ ಸೃಷ್ಟಿಸಲು ಹಲವು ಪ್ರಯತ್ನ ನಡೆಸಿದ್ದರು. ಆದರೆ, ನಾವು ಮೊದಲ ಬಾರಿಗೆ ಈ ಯತ್ನದಲ್ಲಿ ಯಶ ಕಂಡಿದ್ದೇವೆ. ನಾವು ಸೃಷ್ಟಿಸಿರುವ ಮೋಡಗಳು ಸಹಜವಾಗಿವೆ~ ಎಂದು ಕನ್ನಡಿಗ ವಿಜ್ಞಾನಿ ರೊದ್ದಂ ನರಸಿಂಹ ಅವರು `ಪ್ರಜಾವಾಣಿ~ಗೆ ತಿಳಿಸಿದರು.

ಹವಾಮಾನ ವೈಪರಿತ್ಯ ಕುರಿತು 2007ರಲ್ಲಿ ಅಧ್ಯಯನ ನಡೆಸಿ ವರದಿ ನೀಡಿದ್ದ ವಿಶ್ವಸಂಸ್ಥೆಯ ತಜ್ಞರ ತಂಡ ಈ ಪ್ರಕ್ರಿಯೆಯಲ್ಲಿ ಮೋಡಗಳು ವಹಿಸುವ ನಿರ್ಣಾಯಕ ಪಾತ್ರವನ್ನು ಪತ್ತೆ ಹಚ್ಚಿತ್ತು. ಹೀಗಾಗಿ ಬೆಂಗಳೂರು ಮೂಲದ ವಿಜ್ಞಾನಿಗಳ ಈ ಸಾಧನೆ ಹವಾಮಾನ ವೈಪರೀತ್ಯ ಅಧ್ಯಯನದಲ್ಲಿ ಮೈಲಿಗಲ್ಲಾಗಲಿದೆ ಎಂಬ ವಿಷಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ನಿಯತಕಾಲಿಕದಲ್ಲಿ (ಸೆಪ್ಟೆಂಬರ್ 27ರ ಸಂಚಿಕೆಯಲ್ಲಿ) ಪ್ರಕಟವಾಗಿದೆ.

ಸುಂದರ ಮೋಡಗಳು...
 ವಿಶ್ವ ಹವಾಮಾನ ಸಂಸ್ಥೆ ಮೋಡಗಳನ್ನು ಅವುಗಳ ಆಕಾರ, ವಿನ್ಯಾಸ, ಗುಣಧರ್ಮಗಳ ಆಧಾರಗಳ ಮೇಲೆ ನೂರಾರು ವರ್ಗಗಳಲ್ಲಿ ವಿಂಗಡಿಸಿದೆ. ಅವುಗಳಲ್ಲಿ ಕ್ಯೂಮುಲಸ್ (ಮೋಡದ ರಾಶಿ)  ಎಂಬ ಅತಿ ಸುಂದರ ಹಾಗೂ ಚಲನಶೀಲ ಮೋಡ ಭಾರತದ ಮಟ್ಟಿಗೆ ಅತಿ ಪ್ರಮುಖ.

ತಗ್ಗು, ದಿನ್ನೆಗಳಂತ ಆಕೃತಿ, ಹರಿತ ಹೊರಮೈ ಹಾಗೂ ಕೋಸು ಗೆಡ್ಡೆಯಂತಹ ಮೋಡಗಳನ್ನು ಅವುಗಳ ವಿನ್ಯಾಸಗಳಿಂದಲೇ ಗುರುತಿಸಬಹುದು. ಕೆಲವೊಮ್ಮೆ ಅವು ಅತಿ ಎತ್ತರದ ಪ್ರದೇಶಗಳ ಬಳಿ ಒಮ್ಮೆ ತೆಳುವಾದ ಹಿಂಜಿದ ಹತ್ತಿಯಂತೆ ಮತ್ತೊಮ್ಮೆ ಎತ್ತರದ ಗೋಪುರಗಳಂತೆ ಕಂಡುಬರುತ್ತವೆ. ಮೋಡಗಳ ಒಳಗೆ ನುಸುಳುವ ಗಾಳಿಯಿಯಿಂದಾಗಿಯೇ ಮಾನ್ಸೂನ್ ಮೋಡಗಳು ಕಣ್ಣಾಮುಚ್ಚಾಲೆ ಆಡುತ್ತವೆ.

`ಕೆಲವು ಪರಿಸ್ಥಿತಿಗಳಲ್ಲಿ ಮುಂಗಾರು ಮಾರುತಗಳು ಒಣ ಹವೆಯನ್ನು ತಮ್ಮಳಗೆ ಹೀರುವ ಶಕ್ತಿ ಹೊಂದಿವೆ. ಇದೇ ಹಲವು ವರ್ಷಗಳಿಂದ ವಿಜ್ಞಾನಿಗಳಿಗೆ, ಹವಾಮಾನ ತಜ್ಞರಿಗೆ ಬಿಡಿಸಲಾಗದ ಒಗಟಾಗಿತ್ತು. ಈಗ ಅದನ್ನು ನಾವು ಬಿಡಿಸಿದ್ದೇವೆ~ ಎನ್ನುತ್ತಾರೆ ರೊದ್ದಂ.

ಮೋಡಗಳ ಸೃಷ್ಟಿಗೆ ಕಾರಣವಾಗುವ ಶಾಖ ಮತ್ತು ದ್ರವಗಳ ಚಲನಶೀಲತೆಯಂತಹ ಎರಡು ಪ್ರಮುಖ ಅಂಶಗಳನ್ನು ಭೇದಿಸಿರುವುದು ಈ ತಂಡದ ಮತ್ತೊಂದು ನಿರ್ಣಾಯಕ ಸಾಧನೆ. ಇದರ ನೆರವಿನಿಂದ ತಂಡ ಪ್ರಯೋಗಶಾಲೆಯಲ್ಲಿ ಅರ್ಧ ಡಜನ್‌ಗೂ ಹೆಚ್ಚು ಕ್ಯೂಮುಲಸ್ ಪ್ರಭೇದದ ಮೋಡಗಳನ್ನು ಸೃಷ್ಟಿಸಿದ್ದಾರೆ. ಇನ್ನಿತರ ಬಗೆಯ ಮೋಡಗಳ ಸೃಷ್ಟಿಯನ್ನೂ ಸಾಧ್ಯವಾಗಿಸಿದೆ.

ಮೋಡಗಳನ್ನು ಗುಣಧರ್ಮಗಳನ್ನು ಅರಿಯಲು ಈ ಸಂಶೋಧನೆ ಮಹತ್ವದ ಮೈಲಿಗಲ್ಲು ಎಂದು ವಾಷಿಂಗ್ಟನ್ ವಿಶ್ವವಿದ್ಯಾಲಯದ ರಾಬರ್ಟ್ ಹೌಜ್ ಅವರು ಅಭಿಪ್ರಾಯಪಟ್ಟಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT