ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಳಯಾಂತಕರನ್ನು ಮಟ್ಟ ಹಾಕಿ: ನಾಗಭೂಷಣ್

Last Updated 24 ಡಿಸೆಂಬರ್ 2012, 6:39 IST
ಅಕ್ಷರ ಗಾತ್ರ

ಬಳ್ಳಾರಿ: `ಜ್ಯೋತಿಷಿಗಳು, ದೃಶ್ಯ ಮಾದ್ಯಮದ ಸುದ್ದಿ ವಾಹಿನಿಗಳು ಪ್ರಳಯ ಆಗುತ್ತದೆ ಎಂಬ ವದಂತಿ ಹಬ್ಬಿಸಿ, ಜನರಲ್ಲಿ ಭೀತಿ ಹುಟ್ಟಿಸಿದ್ದಾರೆ. ವೈಜ್ಞಾನಿಕ ಯುಗದಲ್ಲೂ ಮೂಢನಂಬಿಕೆಯ ಬಗ್ಗೆ ಪ್ರಚಾರ ಮಾಡುತ್ತ ಜನರು ತತ್ತರಿಸುವಂತೆ ಮಾಡುವ ಇಂತಹ  ಪ್ರಳಯಾಂತಕರನ್ನು ಮಟ್ಟಹಾಕಲು ಮುಂದಾಗಬೇಕು' ಎಂದು  ನಿವೃತ್ತ ಪ್ರಾಧ್ಯಾಪಕ ಡಾ.ಸಿ. ನಾಗಭೂಷಣ್ ಸಲಹೆ ನೀಡಿದರು.

ಮೇಡಂ ಕ್ಯೂರಿ ವಿಜ್ಞಾನ ಅಕಾಡೆಮಿ ವತಿಯಿಂದ ನಗರದಲ್ಲಿ ಭಾನುವಾರ ಆಯೋಜಿಸಲಾಗಿದ್ದ `ಮಹಾಪ್ರಳಯ- ಮಹಾಸುಳ್ಳು' ವಿಷಯ ಕುರಿತ ವೈಜ್ಞಾನಿಕ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಳಯ ಕೇವಲ ಭ್ರಮೆ. ಪ್ರಳಯದ ಪರಿಕಲ್ಪನೆ ಯೇ ಶುದ್ಧಸುಳ್ಳು. ವಿಜ್ಞಾನದ  ಯುಗದಲ್ಲೂ ಇಂತಹ ಮೌಢ್ಯವನ್ನು ಬಿತ್ತುತ್ತ ಜನರನ್ನು ತಪ್ಪು ದಾರಿಗೆ ಎಳೆಯುತ್ತಿರುವುದು ಬೇಸರದ ಸಂಗತಿ ಎಂದು ಅವರು ಹೇಳಿದರು.

ವಿಜ್ಞಾನವನ್ನು ಗೌರವಿಸುವ ಯಾವುದೇ ವ್ಯಕ್ತಿ ಇಂತಹ ಮೂಢನಂಬಿಕೆ ಒಪ್ಪುವುದಿಲ್ಲ. ಇತ್ತೀಚಿನ ವರ್ಷಗಳಲ್ಲಿ ಜಗತ್ತಿನಾದ್ಯಂತ ನಡೆಯುತ್ತಿರುವ ಆಂತರಿಕ ಬದಲಾವಣೆ, ಬಾಹ್ಯ ಬದಲಾವಣೆ ಹಾಗೂ ತಂತ್ರಜ್ಞಾನದ ನಿರಂತರ ಬೆಳವಣಿಗೆಯಿಂದ ಜನತೆ ಎಚ್ಚೆತ್ತುಕುಂಡು ಮುನ್ನಡೆಯಬೇಕು ಎಂದು ಅವರು ತಿಳಿಸಿದರು.

ವಿದ್ಯಾರ್ಥಿಗಳು ಮೂಲವಿಜ್ಞಾನಕ್ಕೆ ಒತ್ತು ನೀಡಬೇಕು. ಪ್ರತಿ ವಿಷಯವನ್ನು ಪ್ರಶ್ನಿಸುವಂತಿರಬೇಕು. ಗೃಹಿಣಿಯರು ವಿಜ್ಞಾನದ ಕುರಿತು ಅಲ್ಪಸ್ವಲ್ಪ ವಿಷಯ ಅರಿತುಕೊಂಡಲ್ಲಿ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.
`ಮಹಾ ಪ್ರಳಯ ಮಹಾ ಸುಳ್ಳು' ವಿಷಯ ಕುರಿತು ಉಪನ್ಯಾಸ ನೀಡಿದ ಅಕಾಡೆಮಿ ಅಧ್ಯಕ್ಷ ಎಸ್.ಮಂಜುನಾಥ, ಗೃಹಗತಿ ಕುರಿತು ಜ್ಯೋತಿಷ ಹೇಳುತ್ತ ಹಣ ದೋಚುವವರ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಸಲಹೆ ನೀಡಿದರು.

ನಭೋ ಮಂಡಲದಲ್ಲಿರುವ ಯಾವುದೇ ಗೃಹಕ್ಕೂ ಜೀವವಿಲ್ಲ. ಚಂದ್ರ ಒಂದು ನಿರ್ಜೀವ ಬಂಡೆ. ಗೃಹಗಳಿಂದ ಭೂಮಿಯ ಮೇಲಿನ ಜೀವಿಗಳಿಗೆ ಯಾವುದೇ ರೀತಿಯ ಅಪಾಯವೂ ಇಲ್ಲ. ಆದರೆ, ಮನುಷ್ಯನ ಪ್ರತಿಯೊಂದು ನಡೆಗೂ ಗೃಹಗತಿ ಕಾರಣ ಎಂದು ತಿಳಿಸುತ್ತ ಹಣ ದೋಚುವ ಜ್ಯೋತಿಷಿಗಳಿಗೆ ತಮ್ಮ ಭವಿಷ್ಯದ ಬಗ್ಗೆಯೇ ನಿಖರತೆ ಇರುವುದಿಲ್ಲ ಎಂದು ಅವರು ವ್ಯಂಗ್ಯವಾಡಿದರು.

ಹೋಮ, ಹವನ, ಜ್ಯೋತಿಷ್ಯ, ಸಂಖ್ಯಾಶಾಸ್ತ್ರವನ್ನು ಪ್ರಸಾರ ಮಾಡುವ ಪ್ರವೃತ್ತಿಯ ದೃಶ್ಯ ಮಾಧ್ಯಮಗಳ ವಿರುದ್ಧ ಜನತೆ ತಿರುಗಿಬೀಳುವ ದಿನಗಳು ದೂರವಿಲ್ಲ ಎಂದು ಅವರು ಎಚ್ಚರಿಸಿದರು.

ಭವಿಷ್ಯ, ಗೃಹಗತಿ ಕುರಿತು ನಿತ್ಯವೂ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತ, ಪ್ರಳಯದ ಕಟ್ಟುಕಥೆಯನ್ನು ತೆರೆದಿಡುತ್ತ ಪ್ರಚಾರ ಮಾಡಿ ಹಣ ಗಳಿಸುವ ದೃಶ್ಯ ಮಾಧ್ಯಮಗಳು ಮೌಢ್ಯವನ್ನು ಬಿತ್ತುತ್ತಿವೆ ಎಂದು ಅವರು ಹೇಳಿದರು.

ಮನುಷ್ಯನಲ್ಲಿರುವ ಅಜ್ಞಾನವೇ ಜ್ಯೋತಿಷಿ ವರ್ಗಕ್ಕೆ ಅನ್ನವಾಗಿದೆ. ದಯವೇ ಧರ್ಮದ ಮೂಲವೆಂಬುದು ಮೂಲ ಎಂಬುದು ದೂರವಾಗಿ, ಭಯವೇ ಧರ್ಮದ ಮೂಲ ಎಂಬ ಸನ್ನಿವೇಶ ಸೃಷ್ಟಿಸುತ್ತಿರುವವರ ಕುರಿತು ನಿಗಾ ವಹಿಸಬೇಕು ಎಂದು ನಿಷ್ಠಿ ರುದ್ರಪ್ಪ ತಿಳಿಸಿದರು.

ಎನ್.ಡಿ. ವೆಂಕಮ್ಮ, ಪಿ.ಶೇಕ್ಷಾವಲಿ ಪಿ.ರಾಘವೇಂದ್ರ, ಎಂ.ಪ್ರಶಾಂತ್, ಎಂ.ಶ್ರೀಕಾಂತ, ಖಲೀಲ್ ಮತ್ತಿತರರು ಉಪಸ್ಥಿತರಿದ್ದರು.
ಅಕಾಡೆಮಿಯ ಕೋಶಾಧ್ಯಕ್ಷ ಕೆ.ಎಂ. ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು. ಓ.ಎಂ. ಸಂತೋಷ ಸ್ವಾಗತಿಸಿದರು. ಉಪಾಧ್ಯಕ್ಷೆ ಡಾ.ಬಿ.ಎಂ. ಶಿವಶಾಂತಲಾ ಪರಿಚಯಿಸಿದರು. ಎಸ್. ಶಿಲ್ಪಾ ವಂದಿಸಿದರು.

ಮೂಢನಂಬಿಕೆಯನ್ನು ಪ್ರಸಾರ ಮಾಡುವ ದೃಶ್ಯ ಮಾಧ್ಯಮದ ಚಿತ್ರವಿರುವ ದೂರದರ್ಶನ ಉಪಕರಣದ ಪ್ರತಿಕೃತಿಯನ್ನು ಇದೇ ಸಂದರ್ಭ ದಲ್ಲಿ ದಹಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT