ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವರ್ಗ 1ಕ್ಕೆ ಸೇರಿಸಲು ಆಗ್ರಹ

Last Updated 2 ಸೆಪ್ಟೆಂಬರ್ 2013, 6:43 IST
ಅಕ್ಷರ ಗಾತ್ರ

ಗೋಕಾಕ: `ಹಡಪದ ಸಮಾಜಕ್ಕೆ ಅಗತ್ಯವಿರುವ ನಿವೇಶನವನ್ನು ನಗರ ಪ್ರದೇಶ ವ್ಯಾಪ್ತಿಯಲ್ಲೇ ಗೊತ್ತುಪಡಿಸಿ ನೀಡಲಾಗುವುದು' ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಶನಿವಾರ ಇಲ್ಲಿನ ಸಮುದಾಯ ಭವನದಲ್ಲಿ ಜರುಗಿದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದ ಹಲವು ಬೇಡಿಕೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.

12ನೇ ಶತಮಾನದಲ್ಲಿ ಕ್ರಾಂತಿ ಮಾಡಿದ ಬಸವಣ್ಣನವರ ಆಪ್ತ ಸಹಾಯಕನಾಗಿದ್ದ ಹಡಪದ ಅಪ್ಪಣ್ಣ ಅವರು ಎಲ್ಲ ವೇದಗಳನ್ನು ಅಧ್ಯಯನ ಮಾಡಿದ್ದರು. ಅವರೊಬ್ಬ ಶ್ರೇಷ್ಠ ದಾರ್ಶನಿಕರು. ಬಸವಣ್ಣನವರ ಗರಡಿಯಲ್ಲಿ ಪಳಗಿ ದಿನದ 19 ತಾಸುಗಳ ದುಡಿಮೆ ಮಾಡುವ ಮೂಲಕ ಕಾಯಕ ವೃತ್ತಿಗೆ ಗೌರವ ತಂದುಕೊಟ್ಟಿದ್ದರು. ಇಂಥ  ಮಹಾನು ಭಾವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿ ಕೊಂಡರೆ ಸಮಾಜ ಸುಧಾರಣೆ ಸಾಧ್ಯ ಎಂದರು.

ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಮಾಜದ ಉನ್ನತೀಕರಣಕ್ಕೆ ಪಾಲಕರು ಶ್ರಮಿಸಬೇಕಾದ ಅಗತ್ಯವಿದೆ. ಸಾಕ್ಷರರಾದರೆ ಇಡೀ ಸಮಾಜ ಸುಧಾರಣೆ ಆಗುತ್ತದೆ. ನಾಡಿನ ಹಾಗೂ ಈ ದೇಶದ ಅಭಿವೃದ್ಧಿಗೆ ಶಿಕ್ಷಣವೊಂದೇ ಪ್ರಬಲ ಅಸ್ತ್ರ. ನಮಗಾಗಿ ಸಮಾಜ ಏನು ಮಾಡಿತು? ಎನ್ನುವುದಕ್ಕಿಂತ ಸಮಾಜಕ್ಕಾಗಿ ನಾವೇನು ಮಾಡಿದ್ದೇವೆ ಎಂದು ಚಿಂತನೆ ಮಾಡಬೇಕಿದೆ ಎಂದರು.

ತಂಗಡಗಿ ಮಹಾಸಂಸ್ಥಾನ ಮಠದ ಅನ್ನದಾನ ಭಾರತಿ ಅಪ್ಪಣ್ಣ ಸ್ವಾಮೀಜಿ  ಸಾನಿಧ್ಯ ವಹಿಸಿದ್ದರು. ನೇತೃತ್ವವನ್ನು ಕುಂದರಗಿಯ ಅಮರೇಶ್ವರ ಸ್ವಾಮೀಜಿ ನೇತೃತ್ವ ವಹಿಸಿದ್ದರು.

ಶಿವಶರಣ ಹಡಪದ ಅಪ್ಪಣ್ಣ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಅಣ್ಣಾರಾವ್ ನರಬೋಳೆ ಮಾತನಾಡಿ, ಹಡಪದ ಅಪ್ಪಣ್ಣ ಸಮಾಜಕ್ಕೆ ಸರ್ಕಾರ 4.50 ಕೋಟಿ ರೂಪಾಯಿಗಳ ಅನುದಾನ ಮೀಸಲಿ ಟ್ಟಿದೆ. ಈ ಸಮಾಜವನ್ನು ಪ್ರವರ್ಗ 1 ಕ್ಕೆ ಸೇರಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ಯಾವುದೇ ಕಾರಣಕ್ಕೂ ಜನಗಣತಿಯಲ್ಲಿ ಲಿಂಗಾಯತ ಎಂದು ಬರೆಸಬೇಡಿ ಎಂದು ಬಾಂಧವರಿಗೆ ಮನವಿ ಮಾಡಿದರು. ರಾಜಕೀಯ ಕ್ಷೇತ್ರದಲ್ಲಿ ನಮ್ಮ ಸಮಾಜಕ್ಕೆ ಯಾವುದೇ ಪ್ರಾಶಸ್ತ್ಯವಿಲ್ಲ. ಈ ನಿಟ್ಟಿನಲ್ಲಿ ಸಮಾಜಕ್ಕೆ ಸೂಕ್ತ ಪ್ರಾತಿನಿಧ್ಯ ನೀಡುವಂತೆ ಕೋರಿದರು.

ಶಿವಾನಂದ ಹಡಪದ ಅಧ್ಯಕ್ಷತೆ ವಹಿಸಿದ್ದರು.  ವಡೇರಹಟ್ಟಿಯ ಅಂಬಾದರ್ಶನ ಪೀಠದ ಪೀಠಾಧ್ಯಕ್ಷ ನಾರಾಯಣ ಸ್ವಾಮೀಜಿ, ನಗರಸಭೆ ಸದಸ್ಯರಾದ ಲಗಮವ್ವ ಸುಲದಾಳ, ಎಸ್.ಎ. ಕೋತವಾಲ ಮತ್ತು ಪರಶುರಾಮ ಭಗತ ಹಾಗೂ ಎಪಿಎಂಸಿ ನಿರ್ದೇಶಕ ಮಹಾಂತೇಶ ತಾಂವಶಿ, ರಾಮಸಿದ್ದ ಖಾನಪ್ಪನವರ, ಎ.ಬಿ. ನಾವಿ, ರಾಜೇಶ್ವರಿ ಪಾಟೀಲ, ಬ್ರಹ್ಮಾನಂದ ಸ್ವಾಮೀಜಿ, ಶ್ರೀದೇವಿ ತಡಕೋಡ ಉಪಸ್ಥಿತರಿದ್ದರು.

ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಭುದೇವ ಹಡಪದ ಸ್ವಾಗತಿಸಿದರು. ಅನ್ನಪೂರ್ಣಾ ಹಾರೂಗೇರಿ ಮಠ ನಿರೂಪಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT