ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸಿ ತಾಣ ಅಭಿವೃದ್ಧಿಗೆ ಸರ್ಕಾರ ಬದ್ಧ

Last Updated 17 ಜನವರಿ 2011, 10:20 IST
ಅಕ್ಷರ ಗಾತ್ರ

ಹರಪನಹಳ್ಳಿ: ಚಿಗಟೇರಿ ಸೇರಿದಂತೆ ತಾಲ್ಲೂಕಿನ ವಿವಿಧೆಡೆಗಳಲ್ಲಿ ಇರುವ ಐತಿಹಾಸಿಕ ಪರಂಪರೆಯ ದೇಗುಲ ಹಾಗೂ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಕಂದಾಯ ಸಚಿವ ಜಿ. ಕರುಣಾಕರರೆಡ್ಡಿ ಹೇಳಿದರು.

ಭಾನುವಾರ ಚಿಗಟೇರಿ, ಕೂಲಹಳ್ಳಿ, ನೀಲಗುಂದ ಹಾಗೂ ಪಟ್ಟಣದ ಕೋಟೆ ಆಂಜನೇಯ ದೇವಸ್ಥಾನ ಬಳಿ ಪ್ರವಾಸೋದ್ಯಮ ಇಲಾಖೆಯ ಅನುದಾನ ಅಡಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ರೂ 2.60 ಕೋಟಿ ವೆಚ್ಚದ ಯಾತ್ರಿನಿವಾಸದ ಕಟ್ಟಡಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ತಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಅಭಿವೃದ್ಧಿಯೇ ಮೂಲಮಂತ್ರ ಎಂಬ ಘೋಷಣೆಯೊಂದಿಗೆ ತಾಲ್ಲೂಕಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಸುಮಾರು ರೂ 300ಕೋಟಿ ಅನುದಾನ ಬಿಡುಗಡೆಗೊಳಿಸಿದೆ. ಬಯಲುಸೀಮೆಯ ಈ ಭಾಗದ ಜೀವನಾಡಿ ಹಾಗೂ ರೈತನ ಬದುಕನ್ನು ಹಸನಗೊಳಿಸುವ ಮಹತ್ವಾಕಾಂಕ್ಷೆಯ ಗರ್ಭಗುಡಿ ಬ್ಯಾರೇಜು ಯೋಜನೆಗೆ ರೂ 46ಕೋಟಿ ಮಂಜೂರಾತಿ, ತುಂಗಭದ್ರಾ ನದಿಯಿಂದ ವಿವಿಧ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ, ರೂ 135ಕೋಟಿ ವೆಚ್ಚದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸೇರಿದಂತೆ ತಾಲ್ಲೂಕಿನ ಸಮಗ್ರ ಅಭಿವೃದ್ಧಿಯ ಹೊಸ ಮನ್ವಂತರಕ್ಕೆ ನಾಂದಿ ಹಾಡಿದ್ದೇವೆ ಎಂದರು.

‘ನನ್ನ ಅಭಿವೃದ್ಧಿ ಕಾರ್ಯ ಸಹಿಸದ, ಈ ತಾಲ್ಲೂಕನ್ನು ಹಿಂದುಳಿದ ಪ್ರದೇಶ ಎಂಬ ಅಪಖ್ಯಾತಿಗೆ ಒಳಗಾಗಲು ಕಾರಣೀಭೂತರಾದ  ಹಿರಿಯ ಮಾಜಿ ಸಚಿವರು, ತಾಲ್ಲೂಕಿನ ಅಭಿವೃದ್ಧಿಗೆ ಪುಡಿಗಾಸನ್ನು ಬಿಡುಗಡೆ ಮಾಡಿಸಿಲ್ಲ ಎಂದು ನನ್ನ ಬಗ್ಗೆ ಜಿ.ಪಂ. ಹಾಗೂ ತಾ.ಪಂ. ಚುನಾವಣೆ ಪೂರ್ವದಲ್ಲಿ ಆರೋಪಿಸಿದ್ದಾರೆ. ಈ ಬಗ್ಗೆ ಅನುಮಾನ ಇದ್ದರೆ   ದಾಖಲೆಗಳನ್ನು ಪರಿಶೀಲಿಸಿ ಆರೋಪ ಮಾಡಲಿ’ ಎಂದು ಪರೋಕ್ಷವಾಗಿ ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ. ಪ್ರಕಾಶ್ ಅವರಿಗೆ ತಿರುಗೇಟು ನೀಡಿದರು.

ನಾರದಮುನಿ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಅಣಬೇರು ರಾಜಣ್ಣ ಮಾತನಾಡಿ, ಶಂಕುಸ್ಥಾಪನೆಯಾಗಿರುವ ಯಾತ್ರಿನಿವಾಸ ಕಟ್ಟಡ ಕಾಮಗಾರಿ ಉತ್ತಮ ಗುಣಮಟ್ಟದ ಜತೆಗೆ, ವಿಳಂಬವಾಗದಂತೆ ತಡೆಯಬೇಕು. ಭಕ್ತರ ಅನುಕೂಲಕ್ಕಾಗಿ ಸುಸಜ್ಜಿತ ಸಮುದಾಯ ಭವನ ಹಾಗೂ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಕ್ಕೆ ಸಮರ್ಪಕ ನೀರು ಪೂರೈಸುವ ಯೋಜನೆ ಕೈಗೆತ್ತಿಕೊಳ್ಳುವಂತೆ ಮನವಿ ಮಾಡಿದರು.

ಬಾಗಳಿ ಹಾಗೂ ಕೂಲಹಳ್ಳಿ ಗ್ರಾಮಗಳಲ್ಲಿ ತಲಾ ್ಙ 15ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಗ್ರಾ.ಪಂ. ಕಚೇರಿಯನ್ನು ಸಚಿವರು ಉದ್ಘಾಟಿಸಿದರು.ವಿಧಾನ ಪರಿಷತ್ ಸದಸ್ಯ ಮೃತ್ಯುಂಜಯ ಜಿನಗಾ, ಜಿ.ಪಂ. ಸದಸ್ಯೆ ಕವಿತಾ, ಉಪ ವಿಭಾಗಾಧಿಕಾರಿ ಕೆ. ಶ್ರೀನಿವಾಸ್, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಎನ್.ಕೆ. ಹುಸೇನ್,ತಹಶೀಲ್ದಾರ್, ಟಿ.ವಿ. ಪ್ರಕಾಶ್, ತಾ.ಪಂ. ಇಒ ಕೃಷ್ಣನಾಯ್ಕ, ತಾ.ಪಂ.ಸದಸ್ಯೆ ನೀಲಮ್ಮ, ಗ್ರಾ.ಪಂ. ಅಧ್ಯಕ್ಷೆ ಮೊಬಿನಾಬಿ, ಮುಖಂಡರಾದ ಜಿ. ನಂಜನಗೌಡ, ಆರುಂಡಿ ನಾಗರಾಜ, ಗಿರಿರಾಜರೆಡ್ಡಿ, ಡಾ.ರಮೇಶಕುಮಾರ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT