ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸಿಗರ ಪರ್ವ ಕಾಲ

Last Updated 26 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಸದಾ ಕಿಕ್ಕಿರಿದ ಜನಜಂಗುಳಿ, ರಸ್ತೆ ತುಂಬಾ ವಾಹನಗಳು, ದಿನೇದಿನೇ ಏಳುತ್ತಿರುವ ಕಟ್ಟಡಗಳು, ಬಿಸಿನೆಸ್‌ ಪಾಯಿಂಟ್‌ಗಳು, ಗಿಜಿ ಗಿಜಿಗುಟ್ಟುವ ಹೋಟೆಲ್‌ಗಳು, ಬಿಲ್ಡಿಂಗ್‌ಗಳಷ್ಟೇ ಎತ್ತರಕ್ಕೆ ಬೆಳೆದು ನಿಂತಿರುವ ಕಸದ ಸಮಸ್ಯೆ, ದಿನೇದಿನೇ ಹೆಚ್ಚುತ್ತಿರುವ ಅಪರಾಧಗಳು... ಇವಿಷ್ಟು ಮೇಲ್ನೋಟಕ್ಕೆ ಇಲ್ಲಿನ ನಿವಾಸಿಗಳಿಗೆ ದಕ್ಕುವ ಬೆಂಗಳೂರಿನ ಚಿತ್ರಣ. ಆದರೆ ಹಲವರ ಪಾಲಿಗೆ ಬೆಂಗಳೂರು ಅದ್ಭುತ ಪ್ರವಾಸಿ ತಾಣ!

ಹೌದು. ಬೆಂಗಳೂರು ಎಷ್ಟೇ ಸಮಸ್ಯೆಗಳಿಗೆ ಸಿಲುಕಿಕೊಂಡರೂ ತನ್ನತ್ತ ಜನರನ್ನು ಸೆಳೆಯುವುದರಲ್ಲಿ ಹಿಂದೆ ಬಿದ್ದಿಲ್ಲ. ದಿನ ಬೆಳಗಾದರೆ ವಿಧಾನಸೌಧದ ಮುಂದೆ ಫೋಟೊ ತೆಗೆಸಿಕೊಳ್ಳಲು ನಿಲ್ಲುವ ಮಂದಿಯೇ ಇದಕ್ಕೆ ಸಾಕ್ಷಿ. ಜೊತೆಗೆ ದಿನೇದಿನೇ ಏರುತ್ತಿರುವ ಪ್ರವಾಸಿಗರ ಸಂಖ್ಯೆ. ಕಳೆದ ಮೂರ್‍ನಾಲ್ಕು ವರ್ಷಗಳಿಗೆ ಹೋಲಿಸಿದಲ್ಲಿ ಬೆಂಗಳೂರಿಗೆ ಬರುವ ಪ್ರವಾಸಿಗರ ಸಂಖ್ಯೆ ಸಾಕಷ್ಟು ಹೆಚ್ಚಿದೆ. ಐಟಿ ಉದ್ಯಮ ಒಂದಿಷ್ಟು ಕುಸಿದಾಗ ಬೆಂಗಳೂರು ಪ್ರವಾಸಿಗರಿಲ್ಲದೆ ತಲ್ಲಣಗೊಂಡಿದ್ದೂ ನಿಜ. ಆದರೆ ಆ ಆತಂಕ ತುಂಬಾ ಕಾಲ ಉಳಿಯಲಿಲ್ಲ. ಅವೆಲ್ಲವನ್ನೂ ದಾಟಿ ಇದೀಗ ಅತ್ಯುತ್ತಮ ಪ್ರವಾಸೀ ಸ್ಥಳವಾಗಿದೆ ನಮ್ಮ ನಗರ.

ರಜಾ ಸಿಕ್ಕಾಕ್ಷಣ ಬೆಂಗಳೂರೆಂಬ ಚೆಂದದ ನಗರಿ ನೋಡಲು ದೇಶ ವಿದೇಶಗಳಿಂದಲೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಔದ್ಯಮಿಕ ಪ್ರವಾಸ, ಶೈಕ್ಷಣಿಕ ಪ್ರವಾಸ, ಧಾರ್ಮಿಕ ಪ್ರವಾಸ, ಇತ್ತೀಚೆಗೆ ಪ್ರಚಲಿತಗೊಳ್ಳುತ್ತಿರುವ ಆರೋಗ್ಯ ಪ್ರವಾಸ ಹೀಗೆ ಹತ್ತು ಹಲವು ಉದ್ದೇಶಗಳೊಂದಿಗೆ ಬರುವ ಮಂದಿ ಒಂದೆಡೆಯಾದರೆ, ಸುಮ್ಮನೆ ಬೇಜಾರು ಕಳೆಯಲು, ಊರು ಸುತ್ತಲು ಎಲ್ಲಿಂದೆಲ್ಲಿಂದಲೋ ಬರುವವರೂ ಹೆಚ್ಚಿದ್ದಾರೆ ಎನ್ನುತ್ತದೆ ರಾಜ್ಯ ಪ್ರವಾಸೋದ್ಯಮ ಇಲಾಖೆ.

ಬೆಂಗಳೂರಿನಲ್ಲಿ ಒಂಬತ್ತು ಪ್ರವಾಸೀ ತಾಣ
ಬೆಂಗಳೂರಿನಲ್ಲಿ ಗಲ್ಲಿಗೆ ಒಂದರಂತೆ ನೋಡಲು ಸ್ಥಳಗಳಿವೆ. ಇವುಗಳಲ್ಲಿ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಒಂಬತ್ತು ತಾಣಗಳನ್ನು ಪ್ರವಾಸೀ ಸ್ಥಳಗಳನ್ನಾಗಿ ಗುರುತಿಸಿದೆ. ಲಾಲ್‌ಬಾಗ್‌, ವಿಶ್ವೇಶ್ವರಯ್ಯ ಮ್ಯೂಸಿಯಂ, ಬನ್ನೇರುಘಟ್ಟ ನ್ಯಾಷನಲ್‌ ಪಾರ್ಕ್‌, ಇಸ್ಕಾನ್‌ ಟೆಂಪಲ್‌, ಟಿಪ್ಪು ಪ್ಯಾಲೇಸ್‌, ಬೆಂಗಳೂರು ಪ್ಯಾಲೇಸ್‌ ನಗರ ವಿಭಾಗದ್ದಾದರೆ, ಗ್ರಾಮಾಂತರ ಪ್ರದೇಶಗಳ ವ್ಯಾಪ್ತಿಯಲ್ಲಿ ಘಾಟಿ ಸುಬ್ರಹ್ಮಣ್ಯ, ದೇವನಹಳ್ಳಿಯ ಟಿಪ್ಪು ಜನ್ಮ ಸ್ಥಳ, ಕೋಟೆ ಹಾಗೂ ಶಿವಗಂಗೆ ಪ್ರವಾಸೀ ಸ್ಥಳಗಳಾಗಿವೆ. ಇಷ್ಟೇ ಅಲ್ಲ. ವಿಧಾನಸೌಧ,

ಹೈಕೋರ್ಟ್‌, ಕಬ್ಬನ್‌ಪಾರ್ಕ್‌, ಎಚ್‌ಎಎಲ್‌ ಹೆರಿಟೇಜ್‌ ಸೆಂಟರ್‌ ಮತ್ತು ಏರೋಸ್ಪೇಸ್‌ ಮ್ಯೂಸಿಯಂ, ಕರ್ನಾಟಕ ಚಿತ್ರಕಲಾ ಪರಿಷತ್ತು, ಜವಹರಲಾಲ್‌ ನೆಹರು ತಾರಾಲಯ, ನ್ಯಾಷನಲ್‌ ಗ್ಯಾಲರಿ ಆಫ್‌ ಮಾಡರ್ನ್‌ ಆರ್ಟ್‌, ಇಂದಿರಾ ಗಾಂಧಿ ಮ್ಯೂಸಿಕಲ್‌ ಫೌಂಟೆನ್‌, ವೆಂಕಟಪ್ಪ ಆರ್ಟ್‌ ಗ್ಯಾಲರಿ, ಹಲಸೂರು ಕೆರೆ, ಬುಲ್‌ ಟೆಂಪಲ್‌, ದೊಡ್ಡ ಗಣೇಶ ದೇವಸ್ಥಾನ, ಗವಿ ಗಂಗಾಧರೇಶ್ವರ ದೇವಸ್ಥಾನ, ರಾಗೀಗುಡ್ಡ ದೇವಸ್ಥಾನ, ಇನ್‌ಫೆಂಟ್‌ ಜೀಸಸ್‌ ಚರ್ಚ್‌, ಶೇಷಾದ್ರಿ ಅಯ್ಯರ್‌ ಮೆಮೊರಿಯಲ್‌ ಹಾಲ್‌, ಜಾಮಿಯಾ ಮಸ್ಜಿದ್‌, ನಂದಿ ಬೆಟ್ಟ, ಸಾವನದುರ್ಗ ಬೆಟ್ಟವೂ ನೆಚ್ಚಿನ ತಾಣಗಳೇ.

ಏರುತ್ತಿರುವ ಪ್ರವಾಸಿಗರ ಸಂಖ್ಯೆ
ಟಿಕೆಟಿಂಗ್‌ ಕೌಂಟರ್‌, ಪಾರ್ಕಿಂಗ್‌, ಹೋಟೆಲ್‌, ಸಾರಿಗೆ ಸಂಪರ್ಕ ಇತ್ಯಾದಿ ಆಧರಿಸಿ ಪ್ರವಾಸಿಗರ ಅಂಕಿಅಂಶಗಳನ್ನು ಪರಿಗಣಿಸಲಾಗುತ್ತದೆ. ಪ್ರವಾಸಿಗರಲ್ಲೂ ದೇಶೀಯ ಮತ್ತು ವಿದೇಶಿ ಪ್ರವಾಸಿಗರೆಂಬ ಎರಡು ವರ್ಗವಿದ್ದು, 2009ಕ್ಕೆ ಹೋಲಿಸಿದಲ್ಲಿ 2012ರ ವೇಳೆಗೆ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡಿದೆ ಎನ್ನುತ್ತದೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆ.

‘ನಾಲ್ಕು ವರ್ಷಗಳ ಹಿಂದೆ ಕರ್ನಾಟಕದಲ್ಲಿ ಕೇವಲ 30 ಸ್ಥಳಗಳನ್ನು ಪ್ರವಾಸೀ ತಾಣಗಳೆಂದು ಗುರುತಿಸಲಾಗಿತ್ತು. 2011ರ ವೇಳೆಗೆ 149 ಪ್ರವಾಸೀ ತಾಣಗಳನ್ನು ಗುರುತಿಸಲಾಯಿತು. ಈ ಕಾರಣದಿಂದಲೇ 2011ರಿಂದ ಪ್ರವಾಸೋದ್ಯಮದಲ್ಲಿ ಸಾಕಷ್ಟು ಏರಿಕೆ ಸಾಧ್ಯವಾಗಿದೆ. ಇದರಿಂದ ಪ್ರವಾಸೋದ್ಯಮ ಕ್ಷೇತ್ರವೂ ಚೇತರಿಕೆ ಪಡೆದುಕೊಳ್ಳುತ್ತಿದೆ’ ಎನ್ನುತ್ತಾರೆ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ (ಅಂಕಿ-ಅಂಶ) ನರಸಿಂಹ ಎಂ.ಆರ್‌. .ಬೆಂಗಳೂರು ಪ್ರವಾಸೋದ್ಯಮವನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವ ನಿಟ್ಟಿನಿಂದ ಹರಿಯಾಣದ ಸೂರಜ್‌ಕುಂಡ್‌ ಮೇಳದ ಮಾದರಿಯಲ್ಲಿ ವರ್ಷಕ್ಕೊಮ್ಮೆ ಕರಕುಶಲ ಮೇಳ ಮತ್ತು ಸಂತೆಯನ್ನು ಆಯೋಜಿಸುವ ಯೋಜನೆಯೂ ಇಲಾಖೆ ಮುಂದಿದೆ ಎಂದು ಮಾಹಿತಿ ಹಂಚಿಕೊಂಡರು ಅವರು.

ಔದ್ಯಮಿಕ ಪ್ರವಾಸದಲ್ಲಿ ಮುಂದು
ಉದ್ಯೋಗದ ಉದ್ದೇಶವಿಟ್ಟುಕೊಂಡು ನಗರಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಿದೆ. ವ್ಯಾಪಾರ ವಾಣಿಜ್ಯದ ‘ಔದ್ಯಮಿಕ ಪ್ರವಾಸ’ದಲ್ಲಿ ಬೆಂಗಳೂರು  ಭಾರತದಲ್ಲೇ ನಂ.1ಸ್ಥಾನದಲ್ಲಿದೆ. ವಿಶ್ವ ಮಟ್ಟದಲ್ಲಿ ಅತಿ ಹೆಚ್ಚು ಉದ್ಯಮಿಗಳು ಭೇಟಿ ನೀಡುವ 25 ನಗರಗಳ ಪೈಕಿ ಬೆಂಗಳೂರಿನದ್ದು 12ನೇ ಸ್ಥಾನ. ಉದ್ಯಮಿಗಳು ತಂಗುವ ಹೋಟೆಲ್‌ಗಳ ಅಂಕಿಅಂಶವನ್ನು ಗಣನೆಗೆ ತೆಗೆದುಕೊಂಡು ಈ ಅಂಶವನ್ನು ಕಂಡುಕೊಳ್ಳಲಾಗಿದೆ. ಅಷ್ಟೇ ಅಲ್ಲದೆ, ಅತಿ ದೊಡ್ಡ ಪ್ರವಾಸಿ ಗೈಡ್‌ ಬುಕ್‌ ಎನಿಸಿಕೊಂಡಿರುವ ಲೋನ್ಲಿ ಪ್ಲಾನೆಟ್‌ ಪ್ರಕಾರ, ಬೆಂಗಳೂರು ‘ಬೆಸ್ಟ್‌ ಟ್ರಾವೆಲ್‌ ಸಿಟೀಸ್‌’ನಲ್ಲಿ ಮೂರನೇ ಸ್ಥಾನ ಗಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT