ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸಿಗರ ಸ್ವರ್ಗವಾಗದ ಬಡವರ ಊಟಿ

Last Updated 12 ಸೆಪ್ಟೆಂಬರ್ 2011, 9:55 IST
ಅಕ್ಷರ ಗಾತ್ರ

ಹಾಸನ: ವಿಶ್ವ ವಿಖ್ಯಾತ ಬೇಲೂರು, ಹಳೇಬೀಡು ದೇವಾಲಯಗಳು, ವಿಶ್ವದ ಅತಿ ದೊಡ್ಡ ಏಕಶಿಲೆಯ ಗೊಮ್ಮಟೇಶ ವಿಗ್ರಹ, ಮಾಲೇಕಲ್ ತಿರುಪತಿ, ಅತಿ ಅಪರೂಪದ ಜೀವ ವೈವಿಧ್ಯ ಇರುವ ಪಶ್ಚಿಮ ಘಟ್ಟಗಳ ಸಾಲು, ಮಾಡಾಳು ಸ್ವರ್ಣಗೌರಿ... ಹಾಸನಕ್ಕಿರುವ ವೈಶಿಷ್ಟ್ಯಗಳು ಒಂದೇ... ಎರಡೇ.

ರಾಜಕೀಯವಾಗಿಯೂ ದೇಶಕ್ಕೆ ಒಬ್ಬ ಪ್ರಧಾನಿಯನ್ನು ಕೊಟ್ಟ ಜಿಲ್ಲೆ. ರಾಜ್ಯಕ್ಕೆ ಮುಖ್ಯಮಂತ್ರಿಗಳು, ಹಲವು ಪ್ರಭಾವಿ ಸಚಿವರುಗಳನ್ನು ಕೊಟ್ಟು ಛಾಪು ಮೂಡಿಸಿದ್ದಲ್ಲದೆ, ಈಗಲೂ ರಾಜಕೀಯ ಶಕ್ತಿ ಕೇಂದ್ರದ ರೂಪದಲ್ಲಿ ಕೆಲಸ ಮಾಡುತ್ತಿರುವ ಜಿಲ್ಲೆ. ಹೇಮಾವತಿ, ಕಾವೇರಿ ನದಿಗಳು ಸದಾಕಾಲ ಹರಿಯುತ್ತಿವೆ. ಮೂರು ಜಲಾಶಯಗಳು ಲಕ್ಷಾಂತರ ಎಕರೆ ಕೃಷಿ ಭೂಮಿಗೆ ನೀರೊಸಗಿಸುತ್ತಿವೆ. ಹಚ್ಚ ಹಸಿರಿನ ಈ ನಾಡನ್ನು ಬಡವರ ಊಟಿ ಎಂದೇ ಕರೆಯುತ್ತಾರೆ.

ವಿಜ್ಞಾನದ ವಿಚಾರ ಬಂದರೆ ಬಾಹ್ಯಾಕಾಶ ನಿಯಂತ್ರಣ ಕೇಂದ್ರವೂ ಹಾಸನದಲ್ಲಿದೆ... ಹೀಗೆ ಉದ್ದುದ್ದ ಪಟ್ಟಿ ಮಾಡಬಹುದು. ಇಷ್ಟೆಲ್ಲ ವಿಶೇಷತೆಗಳಿರುವ ಹಾಸನಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಎಷ್ಟು, ಬರುವ ಪ್ರವಾಸಿಗರು ಹಾಸನದಲ್ಲೇಕೆ ಉಳಿಯುತ್ತಿಲ್ಲ. ಈ ಪ್ರಶ್ನೆ ಜಿಲ್ಲೆಯ ಜನರನ್ನು ಅಷ್ಟಾಗಿ ಏಕೆ ಕಾಸುತ್ತಿಲ್ಲ ಎಂಬುದೇ ಅಚ್ಚರಿಯಾಗಿ ಉಳಿದಿದೆ.

ಪ್ರವಾಸಿಗರು ಮೈಸೂರು. ಮಂಗಳೂರಿನಂಥ ಸ್ಥಳಕ್ಕೆ ಬಂದರೆ ನಾಲ್ಕೈದು ದಿನ ಉಳಿದು ಸುತ್ತಮುತ್ತಲಿನ ತಾಣಗಳಲ್ಲಿ ಓಡಾಡಿ ಖುಷಿಯಿಂದ ಮರಳುತ್ತಾರೆ. ಬೇಲೂರು, ಹಳೇಬೀಡು, ಶ್ರವಣಬೆಳಗೊಳಗಳಿಗೂ ಪ್ರತಿವರ್ಷ ಹಲವು ಲಕ್ಷ ಪ್ರವಾಸಿಗರು ಬರುತ್ತಾರೆ. ಹಾಗೆ ಬಂದವರಲ್ಲಿ ಶೇಕಡಾ ಹತ್ತರಷ್ಟು ಜನರೂ ಇಲ್ಲಿ ಉಳಿಯುತ್ತಾರೆಯೇ ಎಂಬ ಬಗ್ಗೆ ಸಂದೇಹವಿದೆ. ಈ ಬಗ್ಗೆ ಕೆದಕುತ್ತಾ ಹೋದರೆ ಅನೇಕ ಸಮಸ್ಯೆಗಳು ಗೋಚರಿಸುತ್ತವೆ.

ಮೊದಲನೆಯದಾಗಿ ನಮ್ಮ ಪ್ರವಾಸಿ ಕೇಂದ್ರಗಳ ನಿರ್ವಹಣೆಯೇ ಸರಿಯಾಗಿಲ್ಲ ಎಂದು ಪ್ರವಾಸಿಗರು ಮಾತ್ರವಲ್ಲ, ಸ್ಥಳೀಯ ಜನರು ದೂರುತ್ತಾರೆ. ಹಳೇಬೀಡಿನ ಪ್ರಸಿದ್ಧ ದೇವಸ್ಥಾನದ ಆವರಣಕ್ಕೆ ಭೇಟಿಕೊಟ್ಟು ನೋಡಿ. ದೇವಾಲಯದ ಆವರಣ ಚೆನ್ನಾಗಿ, ಅಚ್ಚುಕಟ್ಟಾಗಿದೆ.
 
ಆದರೆ ಹೊರಗೆ ಬಂದರೆ ಕೆಟ್ಟ ರಸ್ತೆ. ಎಲ್ಲೆಂದರಲ್ಲಿ ಕಸಕಡ್ಡಿ. ಒಂದು ದಿನ ಅಲ್ಲಿಯೇ ಉಳಿಯಬೇಕೆಂದರೆ ಒಳ್ಳೆಯ ವ್ಯವಸ್ಥೆ ಇಲ್ಲ. ತಾಲ್ಲೂಕಿನಲ್ಲಿ ಹೋಟೆಲ್ ಒಂದನ್ನು ನಿರ್ಮಿಸಲು ಕೆಲವು ವರ್ಷಗಳ ಹಿಂದೆ ತಾಜ್ ಗ್ರೂಪ್‌ಗೆ ಒಂದಿಷ್ಟು ಜಾಗ ನೀಡಲಾಗಿತ್ತು.
 
ಆದರೆ ಅವರು ಈವರೆಗೆ ಹೋಟೆಲ್ ಬಗ್ಗೆ ಚಿಂತನೆಯನ್ನೂ ಮಾಡಿಲ್ಲ. ಶೀಘ್ರದಲ್ಲೇ ಅವರಿಗೆ ನೋಟಿಸ್ ನೀಡಿ ಜಾಗವನ್ನು ವಶಕ್ಕೆ ತೆಗೆದುಕೊಳ್ಳಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.

ಧಾರ್ಮಿಕ ಪ್ರವಾಸಿ ತಾಣಗಳು, ಚಾರಿತ್ರಿಕ ತಾಣಗಳು, ಎಕೋ ಟೂರಿಸಂ, ಅಡ್ವೆಂಚರ್ ಟೂರಿಸಂ, ವಾಟರ್ ಸ್ಪೋರ್ಟ್ಸ್... ಹಾಸನ ಜಿಲ್ಲೆಯನ್ನು ಬಿಟ್ಟರೆ ಬೇರೆ ಯಾವ ಜಿಲ್ಲೆಯಲ್ಲೂ ಇವೆಲ್ಲವೂ ಸಿಗುವ ಸಾಧ್ಯತೆ ಇಲ್ಲ. ಜಿಲ್ಲಾ ಕೇಂದ್ರದಿಂದ 30 ರಿಂದ 40  ಕಿ.ಮೀ. ಅಂತರದಲ್ಲಿ ಎಲ್ಲವೂ ಇವೆ. ಆದರೆ ಈವರೆಗೆ ಇದ್ದೂ ಇಲ್ಲದಂತಾಗಿದ್ದವು. ಈಗ ಪ್ರವಾಸೋದ್ಯಮದ ಬಗೆಗೂ ಜಿಲ್ಲಾಡಳಿತ ಸ್ವಲ್ಪ ಗಮನಹರಿಸುತ್ತಿ ರುವುದು ಸ್ವಾಗತಾರ್ಹ.

ಜಿಲ್ಲೆಯ 18 ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸುವ ಬಗ್ಗೆ ಯುನೇಸ್ಕೋ ಸಹಯೋಗದಲ್ಲಿ ಒಂದು ಸರ್ವೆ ನಡೆಯುತ್ತಿದ್ದು, ಅದು ಅಂತಿಮ ಹಂತದಲ್ಲಿದೆ. ಅವರ ಸೂಚನೆಯಂತೆ ಅಭಿವೃದ್ಧಿ ಪಡಿಸಬೇಕಾದರೆ ಸರ್ಕಾರ ಸುಮಾರು 60 ಕೋಟಿ ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ. ಸರ್ಕಾರಕ್ಕೆ ವರದಿ ಸಲ್ಲಿಕೆಯಾದ ಬಳಿಕ ಆ ವಿವರಗಳನ್ನು ಪಡೆದು ಮುಂದಿನ ಕ್ರಮ ಕೈಗೊಳ್ಳಬಹುದು ಎಂದು ಜಿಲ್ಲಾಧಿಕಾರಿ ನುಡಿದಿದ್ದಾರೆ.

ಒಂದೊಮ್ಮೆ ಯೋಜನೆ ಜಾರಿ ಯಾದರೆ ಜಿಲ್ಲೆಯ ಪ್ರವಾಸಿ ತಾಣಗಳು ಇನ್ನಷ್ಟು ಜನರನ್ನು ಆಕರ್ಷಿಸುವುದರಲ್ಲಿ ಸಂದೇಹವಿಲ್ಲ. ಇತ್ತ ಜಿಲ್ಲಾಧಿಕಾರಿಯೂ ವಿಶಿಷ್ಟ ವಾದ ಯೋಜನೆ ರೂಪಿಸಲು ಮುಂದಾ ಗಿದ್ದಾರೆ. ಪ್ರತಿ ತಾಲ್ಲೂಕುನಲ್ಲಿರುವ ಪ್ರವಾಸಿ ತಾಣಗಳನ್ನು ಗುರುತಿಸಿ ಅಭಿವೃದ್ಧಿಪಡಿಸುವುದು ಮತ್ತು ಆ ಮೂಲಕ ಸ್ಥಳೀಯರನ್ನೂ ಆ ತಾಣಗಳಿಗೆ ಆಕರ್ಷಿಸುವ ವಿಶಿಷ್ಟ ಯೋಜನೆಯದು.
 
ಈಗಾಗಲೇ ಎಲ್ಲ ಗ್ರಾಮ ಲೆಕ್ಕಿಗರು ತಮ್ಮ ತಮ್ಮ ತಾಲ್ಲೂಕುಗಳಲ್ಲಿ ಅಭಿವೃದ್ಧಿಪಡಿಸಬಗುದಾದ ತಾಣಗಳನ್ನು ಗುರುತಿಸಿ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದ್ದಾರೆ. ಇವುಗಳಲ್ಲಿ ಆಯ್ದ ಕೆಲವನ್ನು ಅಭಿವೃದ್ಧಿಪಡಿಸಿ ಒಂದು ತಾಣದಿಂದ ಇನ್ನೊಂದು ತಾಣಕ್ಕೆ ಒಳ್ಳೆಯ ರಸ್ತೆ ಸಂಪರ್ಕ ಕಲ್ಪಿಸುವುದು.

ಜಿಲ್ಲಾ ಕೇಂದ್ರದಲ್ಲಿ ಒಂದು ನಿಯಂತ್ರಣ ಕೊಠಡಿ ಸ್ಥಾಪಿಸಿ ಎಲ್ಲ ತಾಣಗಳ ಮಾಹಿತಿ ನೀಡುವುದು. ಪ್ರವಾಸೋದ್ಯಮ ಇಲಾಖೆ ಪರಿಶಿಷ್ಟ ಜಾತಿ, ವರ್ಗದ ಬಡವರಿಗೆ ಸ್ವಯಂ ಉದ್ಯೋಗಕ್ಕಾಗಿ ಟ್ಯಾಕ್ಸಿಗಳನ್ನು ನೀಡಿದ್ದು ಇವರನ್ನು ಬಳಸಿಕೊಂಡು ಪ್ರವಾಸಿಗರಿಗೆ ಬೇಕಾದ ಜಾಗಕ್ಕೆ ಪ್ರವಾಸ ಆಯೋಜಿಸುವುದು.

ಯೋಜನೆ ಇನ್ನೂ ಆರಂಭಿಕ ಹಂತದಲ್ಲಿದೆ. ಆದರೆ ಇದನ್ನು ಜಾರಿಗೊಳಿಸಿದರೆ ತಾಣಗಳು ಅಭಿವೃದ್ಧಿಯಾಗುವುದರ ಜತೆಗೆ ಸ್ಥಳೀಯವಾಗಿ ವ್ಯಾಪಾರ ವಹಿವಾಟು ಹೆಚ್ಚಾಗಿ ಗ್ರಾಮೀಣ ಜನರ ಆದಾಯವೂ ಹೆಚ್ಚಾಗುತ್ತದೆ. ಪ್ರವಾಸೋದ್ಯಮ ಅಭಿವೃದ್ಧಿಯ ಜತೆಗೆ ಈ ಅಭಿವೃದ್ಧಿಯ ಲಾಭ ಸ್ಥಳೀಯರಿಗೆ ಸಿಗಬೇಕು ಎಂಬುದು ಈ ಯೋಜನೆಯ ಕಲ್ಪನೆ.

ಇದು ಅಷ್ಟು ಸುಲಭವಾಗಿ ಜಾರಿಯಾಗುವ ಯೋಜನೆಯಲ್ಲ. ಬಸ್ ನಿಲ್ದಾಣ ಸ್ಥಳಾಂತರಕ್ಕೆ ತಿಂಗಳುಗಳೇ ಹಿಡಿದಿರುವಾಗ ಇಂಥ ಯೋಜನೆ ಜಾರಿಗೊಳಿಸಲು ನೂರೆಂಟು ವಿಘ್ನಗಳು ಬರಬಹುದು.

ಆದರೆ, ಜನಪ್ರತಿನಿಧಿಗಳು ಆಸಕ್ತಿ ವಹಿಸಬೇಕು. ಪ್ರವಾಸೋದ್ಯ ಮದಿಂದ ಪರೋಕ್ಷವಾಗಿ ನಮಗೇ ಅನುಕೂಲವಾಗುತ್ತದೆ ಎಂಬುದನ್ನು ಸ್ಥಳೀಯರು ಮನವರಿಕೆ ಮಾಡಿಕೊಂಡರೆ ಜಿಲ್ಲೆಯ ಅಭಿವೃದ್ಧಿಗೆ ಯೋಜನೆ ಪೂರಕವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT