ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸಿಗರಿಗೆ ಸಕಲ ಸೌಲಭ್ಯ: ಶಾಸಕ

ಗಗನಚುಕ್ಕಿ ಜಲಪಾತೋತ್ಸವ ಸಿದ್ಧತೆ ಪರಿಶೀಲನೆ
Last Updated 13 ಸೆಪ್ಟೆಂಬರ್ 2013, 11:05 IST
ಅಕ್ಷರ ಗಾತ್ರ

ಮಂಡ್ಯ: ಗಗನಚುಕ್ಕಿ ಜಲಪಾತೋತ್ಸವಕ್ಕೆ ಆಗಮಿಸುವ ಪ್ರವಾಸಿಗರಿಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಮಾಡಲಾಗಿದೆ ಎಂದು ಶಾಸಕ ಪಿ.ಎಂ. ನರೇಂದ್ರ­ಸ್ವಾಮಿ ಹೇಳಿದರು.

ಸೆ.14 ಮತ್ತು 15 ರಂದು ನಡೆಯಲಿರುವ ಜಲಪಾತೋತ್ಸವಕ್ಕೆ ಆಗಮಿಸುವವರಿಗೆ ವಾಹನ ನಿಲ್ದಾಣ, ಊಟ, ಸಾರಿಗೆ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಎಲ್ಲ ಮೂಲಸೌಕರ್ಯ­ಗಳನ್ನು ಒದಗಿಸಲಾಗುವುದು ಎಂದು ಗುರುವಾರ ಜಲಪಾತೋತ್ಸವದ ಸಿದ್ಧತೆಗಳನ್ನು ವೀಕ್ಷಿಸಿದ ನಂತರ ಸುದ್ದಿಗಾರರಿಗೆ ತಿಳಿಸಿದರು.

ಮಳೆ ಬಂದರೂ ತೊಂದರೆಯಾಗದಂತೆ ವಾಟರ್‌ ಪ್ರೊಫ್‌ ವೇದಿಕೆ ನಿರ್ಮಾಣ ಮಾಡಲಾಗುತ್ತಿದೆ. 15 ಸಾವಿರ ಜನರು ಕುಳಿತು ಕಾರ್ಯಕ್ರಮ ವೀಕ್ಷಿಸಬಹು­ದಾ­ಗಿದೆ. ಜಲಪಾತಕ್ಕೆ ಆಗಮಿಸುವ ಸೇತುವೆಯ ಬಳಿಯೇ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾ­ಗಿದೆ. ಅಲ್ಲಿಂದ ಸಾರಿಗೆ ಸಂಸ್ಥೆಯ ವಾಹನಗಳ ವ್ಯವಸ್ಥೆ ಮಾಡಲಾಗಿದ್ದು, ಅವುಗಳಲ್ಲಿ ಉತ್ಸವ ಸ್ಥಳಕ್ಕೆ ಬರಬಹುದಾಗಿದೆ ಎಂದರು.

ಉತ್ಸವ ವೀಕ್ಷಣೆಗೆ ಆಗಮಿಸುವವರ ಊಟದ ವ್ಯವಸ್ಥೆಯನ್ನು ಮಾಡಲಾಗಿದ್ದು, 40 ಕೌಂಟರ್‌ಗಳಲ್ಲಿ ಊಟ ಬಡಿಸಲಾಗುವುದು. ಪ್ಲಾಸ್ಟಿಕ ಬಳಕೆ ಮಾಡಿರುವುದನ್ನು ನಿಷೇಧಿಸಿರುವ ಹಿನ್ನೆಲೆಯಲ್ಲಿ ಅಡಕೆ ತಟ್ಟೆಗಳನ್ನು ಊಟಕ್ಕೆ ಬಳಸಲಾಗುವುದು. ಪ್ರವಾಸಿ­ಗರೂ ಪ್ಲಾಸ್ಟಿಕ್‌ ಬಳಸಬಾರದು ಎಂದು ಮನವಿ ಮಾಡಿಕೊಂಡರು.

ಮೈಸೂರು, ಚಾಮರಾಜನಗರ, ರಾಮನಗರದಿಂದ ಬಸ್‌ ವ್ಯವಸ್ಥೆ ಮಾಡುವಂತೆ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳಲಾಗಿದೆ. ಮಂಡ್ಯ ಜಿಲ್ಲೆಯ ವಿವಿಧೆಡೆಯಿಂದಲೂ ಬಸ್‌ ಆಗಮಿಸಲಿವೆ. ಎಂದರು.

25 ಮಳಿಗೆಗಳನ್ನು ನಿರ್ಮಿಸಲಾಗುತ್ತಿದ್ದು, ಅಲ್ಲಿ ವಿವಿಧ ಬಗೆಯ ತಿಂಡಿ, ತಿನಿಸುಗಳ ಮಾರಾಟಕ್ಕೆ ವ್ಯವಸ್ಥೆ ನಡೆಸಲಾಗುವುದು ಎಂದು ತಿಳಿಸಿದರು.

ನಾಗಪುರ, ತಂಜಾವೂರು, ಚನ್ನೈನ ಅಂಗವಿಕಲರ ತಂಡ ಸೇರಿದಂತೆ ವಿವಿಧ ತಂಡಗಳು ಎರಡೂ ದಿನಗಳ ಕಾಲ ಸಾಂಸ್ಕೃತಿಕ ಪ್ರದರ್ಶನ ನೀಡಲಿವೆ. ಜಲಪಾತದ ಬಳಿ ಬಾಣಬಿರುಸುಗಳ ಚಿತ್ತಾರವೂ ಇರಲಿದೆ ಎಂದರು.

ಈಗಾಗಲೇ ಉತ್ಸವಕ್ಕಾಗಿ 20 ಲಕ್ಷ ರೂಪಾಯಿ ಬಿಡುಗಡೆಯಾಗಿದೆ. ಇನ್ನಷ್ಟು ಪ್ರಸ್ತಾವನೆಗಳನ್ನು ಸಲ್ಲಿಸಿದ್ದು, ಆ ಹಣವೂ ಬಿಡುಗಡೆ ಆಗಲಿದೆ. ಪ್ರಾಯೋಜಕರಾಗುವಂತೆಯೂ ಕೆಲವರನ್ನು ಕೇಳಿಕೊಂಡಿದ್ದೇವೆ. ಕೆಲವರು ಅವರಾಗಿಯೇ ಆರ್ಥಿಕ ಸಹಾಯ ಮಾಡುತ್ತಿದ್ದಾರೆ ಎಂದರು.

ಜಿಲ್ಲಾಧಿಕಾರಿ ಬಿ.ಎನ್‌. ಕೃಷ್ಣಯ್ಯ, ಮಂಡ್ಯ ಉಪವಿಭಾಗಾಧಿಕಾರಿ ಶಾಂತಾ ಹುಲ್ಮನಿ, ತಹಶೀಲ್ದಾರರಾದ ರಾಜೇಶ್‌, ಡಾ.ಮಮತಾ ಇತರರು ಹಾಜರಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೂಟ
ಮಂಡ್ಯ: ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಗಗನಚುಕ್ಕಿಯಲ್ಲಿ ಸೆ.14 ಮತ್ತು 15 ರಂದು ನಡೆಯಲಿರುವ ಜಲಪಾತೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸೆ.14ರ ಸಂಜೆ 6 ರಂದು ಜಿಲ್ಲಾ ಉಸ್ತುವಾರಿ ಹಾಗೂ ವಸತಿ ಸಚಿವ ಅಂಬರೀಷ್‌ ಚಾಲನೆ ನೀಡಲಿದ್ದಾರೆ.

ಅಧ್ಯಕ್ಷತೆಯನ್ನು ಶಾಸಕ, ಮಾಜಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ವಹಿಸಲಿದ್ದು, ಬೆಳಕಿನ ಚಿತ್ತಾರದ ಕಾರ್ಯಕ್ರಮಕ್ಕೆ ಸಂಸದೆ ರಮ್ಯಾ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೇಂದ್ರದ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಕೆ. ರೆಹಮಾನ್‌ಖಾನ್‌, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೇರಿದಂತೆ ಸಚಿವರು, ಜಿಲ್ಲೆಯ ಜನಪ್ರತಿನಿಧಿಗಳು ಆಗಮಿಸಲಿದ್ದಾರೆ.

ಅಂದು ಬೆಳಿಗ್ಗೆ 10 ಗಂಟೆಗೆ ರಾಮಮಂದಿರದಿಂದ ಜಲಪಾತದವರೆಗೆ ಜಾನಪದ ಕಲಾಜಾಥಾ ಮೆರವಣಿಗೆ ನಡೆಯಲಿದೆ. ಬೆಳಿಗ್ಗೆ 11 ಗಂಟೆಗೆ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಮಧ್ಯಾಹ್ನ 3.30 ರಿಂದ ಬೆಂಗಳೂರಿನ ಐಡಿಯಲ್‌ ಫೌಂಡೇಶನ್‌ನ ಅಂಧ ಕಲಾವಿದರಿಂದ ಲಘು ಸಂಗೀತ, ಸಂಜೆ 4.30ಕ್ಕೆ ಗಣೇಶ ದೇಸಾಯಿ ತಂಡದವರಿಂದ ಭಾವ ಸಂಗೀತ, ಸೆ.7 ರಿಂದ ಚಲನಚಿತ್ರ ಹಾಗೂ ಕಿರುತೆರೆಯ ಕಲಾವಿದರಾದ ವಿಜಯ ರಾಘವೇಂದ್ರ, ಯಜ್ಞಾಶೆಟ್ಟಿ, ಚಿತ್ರಾ ಮತ್ತಿತರಿಂದ ನೃತ್ಯ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ಸೆ.15 ರಂದು ಬೆಳಿಗ್ಗೆ 10 ಗಂಟೆಗೆ ಸ್ಥಳೀಯ ಕಲಾವಿದರಿಂದ ಜಾನಪದ ನೃತ್ಯ, ಮಧ್ಯಾಹ್ನ 12 ಗಂಟೆಗೆ ದೇವಿಪುರ ಯುವಕರಿಂದ ಮಾರ್ಷಲ್‌ ಕಲೆ ಪ್ರದರ್ಶನ, 2 ಗಂಟೆಗೆ ನಂದಿಕೇಶ್ವರ ಡ್ಯಾನ್ಸ್‌ ಸ್ಕೂಲ್‌ ಮಕ್ಕಳಿಂದ ನೃತ್ಯ, 4 ಗಂಟೆಗೆ ನೃತ್ಯ, ಸಾಹಸ ಪ್ರದರ್ಶನ, ಅಂಗವಿಕಲ ಕಲಾವಿದರಿಂದ ಏರೋಬಿಕ್‌ ಕಾಯರ್ಕ್ರಮ ನಡೆಯಲಿವೆ.

ಸಂಜೆ 5 ಗಂಟೆಗೆ ಪವನ್‌ಕುಮಾರ್‌, ಶೋಭರಾಜ್‌, ಇಂದು, ರಾಜೇಶ್ವರಿ ತಲವಾರ್‌, ವಿಜಯ, ಮಿಮಿಕ್ರಿ ಗೋಪಿ ಅವರಿಂದ ಹಾಸ್ಯ, ಪ್ರಹ್ಲಾದ ಆಚಾರ್ಯ ಅವರಿಂದ ಶ್ಯಾಡೋ ಷೋ, 6.15ಕ್ಕೆ ಬಾಣಬಿರುಸುಗಳ ಪ್ರದರ್ಶನ, ಸಂಜೆ 7ಕ್ಕೆ ಶ್ರೀನಗರ ಕಿಟ್ಟಿ, ರೂಪಿಕಾ, ನವೀನ್‌ ಕೃಷ್ಣ, ಹಂಸ, ಲಕ್ಷ್ಮೀ, ರವಿತೇಜಾ, ಹರ್ಷಿಕಾ ಮುಂತಾದ ನಟ, ನಟಿಯರಿಂದ ನೃತ್ಯ ಕಾಯರ್ಕ್ರಮ ಹಮ್ಮಿಕೊಳ್ಳಲಾಗಿದೆ.

ಸಂಜೆ 6ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸದೆ ರಮ್ಯಾ, ಸಚಿವರಾದ ಆರ್.ವಿ. ದೇಶಪಾಂಡೆ, ವಿ. ಶ್ರೀನಿವಾಸ್ ಪ್ರಸಾದ್‌, ಮಹದೇವಪ್ರಸಾದ್‌, ವಿನಯಕುಮಾರ್‌ ಸೊರಕೆ ಭಾಗವಹಿಸಲಿದ್ದಾರೆ ಎಂದರು.

ಜಲಪಾತೋತ್ಸವ ಉದ್ಘಾಟನೆಗೆ ಹಿರಿಯ ಸಾಹಿತಿ ಅ.ರಾ,ಮಿತ್ರಾ ಅವರಿಗೆ ಮನವಿ ಮಾಡಿಕೊಳ್ಳಲಾಗಿದೆ. ಜೊತೆಗೆ ಗೃಹ ಸಚಿವ ಕೆ.ಜೆ. ಜಾರ್ಜ್‌ ಸಹ ಭಾಗವಹಲಿದ್ದಾರೆ ಎಂದು ಜಿಲ್ಲಾಧಿಕಾರಿ ಬಿ.ಎನ್‌. ಕೃಷ್ಣಯ್ಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT