ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸೋದ್ಯಮ: ಬದ್ಧತೆ ಬೇಕು

Last Updated 4 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ರಾಜ್ಯದ ಕಾಂಗ್ರೆಸ್ ಸರ್ಕಾರ ಹೊಸ ನೀತಿ, ಕಾರ್ಯಕ್ರಮಗಳನ್ನು ರೂಪಿಸುವ ಹುಮ್ಮಸ್ಸಿನಲ್ಲಿದೆ. ಸಚಿವ ಆರ್.ವಿ. ದೇಶಪಾಂಡೆ, ಹೊಸ ಪ್ರವಾಸೋದ್ಯಮ ನೀತಿ ರೂಪಿಸುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಉದ್ಯಮಿ ಮೋಹನ್‌ದಾಸ್ ಪೈ ನೇತೃತ್ವದಲ್ಲಿ ವಿಷನ್ ಗ್ರೂಪ್ ಹೆಸರಿನ ತಜ್ಞರ ಸಮಿತಿ ರಚಿಸುವುದಾಗಿ ಪ್ರಕಟಿಸಿದ್ದಾರೆ.

ಸಮಿತಿಯ ಸಲಹೆಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ನೀತಿ ರೂಪಿಸಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವುದು ಸರ್ಕಾರದ ಉದ್ದೇಶ. ಬದಲಾದ ಕಾಲಕ್ಕೆ ತಕ್ಕಂತೆ ಪ್ರವಾಸೋದ್ಯಮ ಅಭಿವೃದ್ಧಿಗೆ ತಜ್ಞರ ಸಲಹೆ ಪಡೆಯುವ ಪ್ರಯತ್ನ ಸ್ವಾಗತಾರ್ಹ. ಆದರೆ ತಜ್ಞರ ಸಲಹೆಗಳನ್ನು ಅನುಷ್ಠಾನಕ್ಕೆ ತರುವ ವಿಷಯದಲ್ಲಿ ಈವರೆಗಿನ ರಾಜ್ಯ ಸರ್ಕಾರಗಳು ಹೆಚ್ಚಿನ ಆಸಕ್ತಿ ತೋರಿಸಿಲ್ಲ.

1990ರಲ್ಲಿ ರಾಷ್ಟ್ರಮಟ್ಟದಲ್ಲಿ ನಡೆದ `ಭಾರತ ಸಂದರ್ಶಿಸಿ' ಪ್ರವಾಸಿ ವರ್ಷಾಚರಣೆ ನಂತರ ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ತುಸು ಒತ್ತು ಸಿಕ್ಕಿತು. 2009ರಲ್ಲಿ ಸರ್ಕಾರ ಹೊಸ ಪ್ರವಾಸೋದ್ಯಮ ನೀತಿ ರೂಪಿಸಿತು. ಈ ನೀತಿಯ ಅವಧಿ 2014ಕ್ಕೆ ಕೊನೆಗೊಳ್ಳಲಿದೆ. ನಂತರದ ಹತ್ತು ವರ್ಷಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಏನು ಮಾಡಬೇಕು ಎಂಬ ಬಗ್ಗೆ ಚಿಂತನೆ ನಡೆಸಲು ಇದು ಸಕಾಲ. ದುರದೃಷ್ಟದ ಸಂಗತಿ ಎಂದರೆ ಹಿಂದಿನ ಹತ್ತು ವರ್ಷಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯ ಹೆಜ್ಜೆಗಳನ್ನು ಗಮನಿಸಿದರೆ ನಿರಾಸೆಯಾಗುತ್ತದೆ.

ರಾಜ್ಯದಲ್ಲಿ 319 ಪ್ರವಾಸಿ ತಾಣಗಳನ್ನು ಸರ್ಕಾರವೇ ಗುರುತಿಸಿದೆ. `ಯುನೆಸ್ಕೊ' ಗುರುತಿಸಿದ  ವಿಶ್ವ ಪರಂಪರೆಯ ತಾಣಗಳಿವೆ. 360 ಕಿ.ಮೀ.ಗಳಿಗೂ ಹೆಚ್ಚಿನ ಉದ್ದದ ಕಡಲ ತೀರವಿದೆ. ಆದರೆ ಬಹುತೇಕ ಪ್ರವಾಸಿ ತಾಣಗಳು ಉಪೇಕ್ಷೆಗೆ ಒಳಗಾಗಿವೆ. ಅವನ್ನು ಹೊರ ಜಗತ್ತಿಗೆ ತೆರೆದು ತೋರಿಸುವ ಪ್ರಯತ್ನ ಇನ್ನೂ ಆರಂಭವೇ ಆಗಿಲ್ಲ. ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರ ನೀತಿ, ನಿಯಮ ರೂಪಿಸಿದರೆ ಸಾಲದು. ಪ್ರವಾಸಿ ತಾಣಗಳಿಗೆ ಬರುವ ಜನರ ಅಗತ್ಯಗಳನ್ನು ಅರಿತು ಅವನ್ನು ಕಾರ್ಯರೂಪಕ್ಕೆ ತರಬೇಕು.

ರಾಜ್ಯದಲ್ಲಿ ಖಾಸಗಿ ಬಂಡವಾಳದ ಧಾರ್ಮಿಕ ಪ್ರವಾಸೋದ್ಯಮ ಮತ್ತು ರೆಸಾರ್ಟ್ ಸಂಸ್ಕೃತಿ ಸ್ವಲ್ಪಮಟ್ಟಿಗೆ ಯಶಸ್ವಿಯಾಗಿದೆ. ಆದರೆ ಪ್ರಮುಖ ಪ್ರವಾಸಿ ತಾಣಗಳಲ್ಲಿ ಖಾಸಗಿ ಬಂಡವಾಳ ಹೂಡಿಕೆಗೆ ಸರ್ಕಾರ ಉತ್ತೇಜನ ನೀಡುತ್ತಿಲ್ಲ. ಪ್ರಮುಖ ತಾಣಗಳಿಗೆ ಹೋಗಿ ಬರಲು ಸೂಕ್ತ ರಸ್ತೆ, ವಿಮಾನ ಸಾರಿಗೆ ಸೌಲಭ್ಯಗಳಿಲ್ಲ. ಎಲ್ಲ ವರ್ಗದ ಪ್ರವಾಸಿಗರು ತಂಗಲು ಸೂಕ್ತ ವಸತಿ ಇತ್ಯಾದಿ ಸೌಕರ್ಯಗಳಿಲ್ಲ.

ಪ್ರಮುಖ ಪ್ರವಾಸಿ ತಾಣಗಳಿಗೆ ಬೆಂಗಳೂರಿನಿಂದ ಖಾಸಗಿ ಸಹಭಾಗಿತ್ವದಲ್ಲಿ ಹೆಲಿಕಾಪ್ಟರ್ (ಹೆಲಿಟೂರಿಸಂ) ಸೇವೆ ಒದಗಿಸುವುದಾಗಿ ಹಿಂದಿನ ಸರ್ಕಾರ ಘೋಷಿಸಿತ್ತು. ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಕೇರಳ ಮತ್ತು ಗೋವಾ ರಾಜ್ಯಗಳ ಮಾದರಿಯಲ್ಲಿ ರಾಜ್ಯದ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವ ವಿಷಯದಲ್ಲಿ ಸರ್ಕಾರ ತನ್ನ ಬದ್ಧತೆಯನ್ನು ಪ್ರದರ್ಶಿಸಬೇಕು.

ಹೊಸ ನೀತಿ, ಆಕರ್ಷಕ ಘೋಷಣೆಗಳಿಂದ ಹೆಚ್ಚಿನ ಪ್ರಯೋಜನವಿಲ್ಲ. ಖಾಸಗಿ ಬಂಡವಾಳ ಹೂಡಿಕೆಗೆ ಉತ್ತೇಜನ ನೀಡುವ ಮೂಲಕವೇ ಪ್ರವಾಸೋದ್ಯಮ ಬೆಳೆಸಬೇಕು. ಅದರಿಂದ ಸರ್ಕಾರದ ಆದಾಯವೂ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ಚಿಂತನೆ ನಡೆಸುವ ಅಗತ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT