ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸೋದ್ಯಮಕ್ಕೆ 72 ಸಾವಿರ ಕೋಟಿ: ಒತ್ತಾಯ

Last Updated 15 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಮೈಸೂರು: `ಭಾರತದಲ್ಲಿ ಪ್ರವಾಸೋದ್ಯಮವನ್ನು ವಿಸ್ತರಿಸುವ ಮೂಲಕ ವಿದೇಶಿ ಪ್ರವಾಸಿಗರನ್ನು ಹೆಚ್ಚಾಗಿ ಆಕರ್ಷಿಸಲು 12 ನೇ ಪಂಚವಾರ್ಷಿಕ ಯೋಜನೆಯಲ್ಲಿ 72 ಸಾವಿರ ಕೋಟಿಗಳನ್ನು ಕಾಯ್ದಿರಿಸುವಂತೆ ಪ್ರಧಾನಮಂತ್ರಿ ಮನಮೋಹನ್‌ಸಿಂಗ್ ಅವರಲ್ಲಿ ಮನವಿ ಮಾಡಲಾಗಿದೆ~ ಎಂದು ಸೌತ್ ಇಂಡಿಯಾ ಹೋಟೆಲ್ ಅಂಡ್ ರೆಸ್ಟೋರಂಟ್ಸ್ ಅಸೋಸಿಯೇಷನ್ (ಎಸ್‌ಐಎಚ್‌ಆರ್‌ಎ)ನ ಹಿಂದಿನ ಅಧ್ಯಕ್ಷ ವಿವೇಕ್ ನಾಯರ್ ಅವರು ಬುಧವಾರ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಅದ್ಭುತವಾದ ಪರಂಪರೆ ಹೊಂದಿರುವ ಭಾರತ ದೇಶದಲ್ಲಿ ನೂರಾರು ಪ್ರವಾಸಿ ತಾಣಗಳಿವೆ. ಆದರೆ ಮೂಲ ಸೌಕರ್ಯಗಳ ಕೊರತೆಯಿಂದಾಗಿ ವಿದೇಶಿ ಪ್ರವಾಸಿಗರನ್ನು ಹೆಚ್ಚಾಗಿ ಆಕರ್ಷಿಸಲು ಸಾಧ್ಯವಾಗುತ್ತಿಲ್ಲ. ಸದ್ಯದಲ್ಲಿ ಪ್ರತಿ ವರ್ಷ 6 ಮಿಲಿಯನ್‌ನಷ್ಟು ವಿದೇಶಿಗರು ಭಾರತಕ್ಕೆ ಬರುತ್ತಿದ್ದಾರೆ. ಈ ಸಂಖ್ಯೆಯನ್ನು 12 ನೇ ಪಂಚವಾರ್ಷಿಕ ಯೋಜನೆಯ ಅಂತ್ಯದೊಳಗೆ ದ್ವಿಗುಣಗೊಳಿಸಲು ಹಣಕಾಸಿನ ಅಗತ್ಯವಿದೆ. ಆದ್ದರಿಂದ ಪ್ರಧಾನಮಂತ್ರಿಗೆ ಈ ಕುರಿತು ಮನವರಿಕೆ ಮಾಡಿಕೊಡಲಾಗಿದೆ. ಅವರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ~ ಎಂದು ಹೇಳಿದರು.

`ಟರ್ಕಿ 30 ಮಿಲಿಯನ್, ಸಿಂಗಾಪುರ 12 ಮಿಲಿಯನ್, ದುಬೈಗೆ 10 ಮಿಲಿಯನ್ ಪ್ರವಾಸಿಗರು ಪ್ರತಿ ವರ್ಷ ಹೋಗುತ್ತಿದ್ದಾರೆ. ಭಾರತದಂತಹ ಬೃಹತ್ ದೇಶದಲ್ಲಿ ಕೇವಲ 6 ಮಿಲಿಯನ್ ಪ್ರವಾಸಿಗರು ಬರುತ್ತಿರುವುದು ತುಂಬಾ ಕಡಿಮೆ. ಈಗ ಇರುವ ಹೋಟೆಲ್‌ಗಳ ಸಂಖ್ಯೆ ಪ್ರವಾಸಿಗರ ಸಂಖ್ಯೆಗೆ ಹೋಲಿಸಿದರೆ ಕಡಿಮೆ ಇದೆ.

ಆದ್ದರಿಂದ ಇನ್ನೂ ಹೆಚ್ಚು ಹೋಟೆಲ್‌ಗಳ ಅಗತ್ಯವಿದೆ. ದೇಶದ ಉದ್ಯೋಗ ಕ್ಷೇತ್ರದಲ್ಲಿ ಶೇ.9.2 ರಷ್ಟು ಹೋಟೆಲ್ ಉದ್ಯಮದ ಕೊಡುಗೆ ಇದೆ. ಹೋಟೆಲ್ ಉದ್ಯಮದಲ್ಲಿ 10 ಲಕ್ಷ ರೂಪಾಯಿ ಬಂಡವಾಳ ಹೂಡಿದರೆ 80 ಮಂದಿಗೆ ಉದ್ಯೋಗ ಸಿಗುತ್ತದೆ. ಆದ್ದರಿಂದ ಪ್ರವಾಸೋದ್ಯಮ ವಿಸ್ತರಣೆ, ಹೋಟೆಲ್ ಉದ್ಯಮಕ್ಕೆ ಪ್ರೋತ್ಸಾಹ ನೀಡುವ ಮೂಲಕ ಸೇವಾ ಕ್ಷೇತ್ರಕ್ಕೆ ಅಗತ್ಯವಾದ ಅನುದಾನ ನೀಡಬೇಕು ಎನ್ನುವುದು ನಮ್ಮ ಒತ್ತಾಯವಾಗಿದೆ~ ಎಂದರು.

`ಮೈಸೂರಿಗೆ ಅರಮನೆ ಮತ್ತು ಬೃಂದಾವನ ದೊಡ್ಡ ಆಸ್ತಿ. ಆದರೆ ವಿಮಾನ ಸೌಕರ್ಯದ ಕೊರತೆಯಿಂದ ದೇಶ, ವಿದೇಶದ ಪ್ರವಾಸಿಗರು ಇತ್ತ ಬರುತ್ತಿಲ್ಲ. ಮೈಸೂರಿಗೆ ಹಾರಾಟ ನಡೆಸುತ್ತಿದ್ದ ಕಿಂಗ್‌ಫಿಷರ್ ವಿಮಾನ ಸ್ಥಗಿತಗೊಂಡಿದೆ. ಕರ್ನಾಟಕದ ಇತರೆ ಭಾಗಗಳಿಗೂ ವಿಮಾನಯಾನ ಇಲ್ಲ. ಈ ಕುರಿತು ಕೇಂದ್ರ ಸರ್ಕಾರದೊಂದಿಗೆ ಮಾತನಾಡಿ ವಿಮಾನಯಾನ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಲಾಗುವುದು~ ಎಂದ ನಾಯರ್, `ಭಾರತದಲ್ಲಿ ಗೋವಾ ಮತ್ತು ಕೇರಳದಲ್ಲಿ ಬೀಚ್ ಪ್ರವಾಸೋದ್ಯಮ ಹೆಸರುವಾಸಿಯಾಗಿದೆ. ಇದನ್ನು ಕರ್ನಾಟಕದ ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿದಂತೆ ಹಲವಾರು ಬೀಚ್‌ಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ಸಲಹೆ ನೀಡಲಾಗಿದೆ~ ಎಂದು ತಿಳಿಸಿದರು.

ಮೈಸೂರು ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಎಂ.ರಾಜೇಂದ್ರ ಮಾತನಾಡಿ, `ರಾಜ್ಯದಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲು ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಬೇಕು ಎಂದರು.

ಮುಂದಿನ ದಿನಗಳಲ್ಲಿ ದಕ್ಷಿಣ ಭಾರತ ಹೋಟೆಲ್ ಮತ್ತು ರೆಸ್ಟೋರಂಟ್ ಸಂಘ ಮತ್ತು ದಕ್ಷಿಣ ಭಾರತ ರಾಜ್ಯ ಸರ್ಕಾರಗಳ ಪ್ರವಾಸೋದ್ಯಮ ಸಚಿವರು ಹಾಗೂ ಕಾರ್ಯದರ್ಶಿಗಳ ಸಭೆ ಆಯೋಜಿಸಲಾಗುವುದು~ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT