ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಹ ಉಲ್ಬಣ: ಮುಳುಗಿದ ಬೆಳೆ, ಮಹಿಳೆ ಶವ ಪತ್ತೆ

Last Updated 7 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಮಳೆ ಕಡಿಮೆಯಾಗಿದ್ದರೂ ಉತ್ತರ ಕರ್ನಾಟಕದಲ್ಲಿ  ಬಾಗಲಕೋಟೆ, ವಿಜಾಪುರ, ಬೆಳಗಾವಿ ಹಾಗೂ ಗುಲ್ಬರ್ಗ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಹಲವೆಡೆ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. 

ಬಾಗಲಕೋಟೆ ಜಿಲ್ಲೆಯಲ್ಲಿ ಮಳೆಯಾಗದಿದ್ದರೂ ನದಿಗಳು ಮಾತ್ರ ಉಕ್ಕಿ ಹರಿಯುತ್ತಿರುವುದರಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದೆ.

ಘಟಪ್ರಭಾ ಮತ್ತು ಕೃಷ್ಣಾ ನದಿಗಳ ಪ್ರವಾಹದಿಂದ ಜಿಲ್ಲೆಯ ಬಾಗಲಕೋಟೆ, ಮುಧೋಳ ಮತ್ತು ಹುನಗುಂದ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಸಾವಿರಾರು ಎಕರೆ ಕಬ್ಬು ನೀರಿನಲ್ಲಿ ಮುಳುಗಿದೆ.

ಮುಧೋಳ ತಾಲ್ಲೂಕಿನ ಚಿಂಚಖಂಡಿ ಸೇತುವೆ ಬಳಿ ಘಟಪ್ರಭಾ ನದಿಯಲ್ಲಿ ಬುಧವಾರ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ. ಕೊಳೆತು ನಾರುತ್ತಿದ್ದ ಶವವನ್ನು ಪೊಲೀಸರು ನದಿ ದಂಡೆಯಲ್ಲೇ ಹೂತು ಹಾಕಿದರು.

ತಾಲ್ಲೂಕಿನ ನಂದಗಾಂವ ಗ್ರಾಮವನ್ನು ಘಟಪ್ರಭಾ ನದಿ ಸಂಪೂರ್ಣ ಸುತ್ತುವರಿದಿದ್ದು, ಇಡೀ ಗ್ರಾಮ ದ್ವೀಪದಂತಾಗಿದೆ. ರಸ್ತೆ ಸಂಚಾರ ಕಡಿತಗೊಂಡಿರುವ ಗ್ರಾಮಕ್ಕೆ ದೋಣಿ ವ್ಯವಸ್ಥೆ ಕಲ್ಪಿಸಲಾಗಿದೆ. ಕಾಂಗ್ರೆಸ್ ಮುಖಂಡರಾದ ಉಮಾಶ್ರಿ ಗ್ರಾಮಕ್ಕೆ ಭೇಟಿ ನೀಡಿ ಜನರ ಯೋಗಕ್ಷೇಮ ವಿಚಾರಿಸಿದರು.

ಮುಧೋಳ-ಯಾದವಾಡ ರಸ್ತೆಯ ಮೇಲೂ ಘಟಪ್ರಭಾ ನದಿ ಉಕ್ಕಿಹರಿಯುತ್ತಿರುವುದರಿಂದ ಸಂಚಾರ ಸ್ಥಗಿತಗೊಂಡಿದೆ. ಉಳಿದಂತೆ ತಾಲ್ಲೂಕಿನ ಢವಳೇಶ್ವರ ಗ್ರಾಮದಲ್ಲಿ ನದಿ ನೀರು ಪ್ರವೇಶಿಸಿರುವುದರಿಂದ 8 ಕುಂಟುಂಬಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಮಿರ್ಜಿಯಲ್ಲೂ ಪ್ರವಾಹ ಯಥಾಸ್ಥಿತಿಯಲ್ಲಿದ್ದು, ಸ್ಥಳಾಂತರ ಮಾಡಿರುವ 42 ಕುಂಟುಂಬಗಳಿಗೆ ಗಂಜಿಕೇಂದ್ರ ತೆರೆಯಲಾಗಿದೆ.

ಆಲಮಟ್ಟಿ ಜಲಾಶಯದಿಂದ ಭಾರಿ ಪ್ರಮಾಣದಲ್ಲಿ ನೀರನ್ನು ನದಿಗೆ ಬಿಡುತ್ತಿರುವುದರಿಂದ ಹುನಗುಂದ ತಾಲ್ಲೂಕಿನ ಕೂಡಲಸಂಗಮದಿಂದ ಮನಹಳ್ಳಿ ವ್ಯಾಪ್ತಿಯ 15ಕ್ಕೂ ಅಧಿಕ ಗ್ರಾಮಗಳಲ್ಲಿ ಸಾವಿರಾರು ಎಕರೆ ಕಬ್ಬಿನ ಹೊಲಕ್ಕೆ ನೀರು ವ್ಯಾಪಿಸಿದ್ದು, ರೈತರು ಬೆಳೆ ನಾಶದ ಆತಂಕದಲ್ಲಿದ್ದಾರೆ.

ಬಾಗಲಕೋಟೆ ತಾಲ್ಲೂಕಿನ ನಾಗಸಂಪಿಗೆ ಗ್ರಾಮದಲ್ಲಿ ಮಂಗಳವಾರ ಕೃಷ್ಣಾ ನದಿಯಲ್ಲಿ ಕೊಚ್ಚಿಹೋಗಿರುವ ಮಹಿಳೆಯ ಶವ ಇನ್ನೂ ಪತ್ತೆಯಾಗಿಲ್ಲ, ಶೋಧಕಾರ್ಯ ಮುಂದುವರಿದಿದೆ. ಪ್ರವಾಹ ಹಿನ್ನೆಲೆಯಲ್ಲಿ ನದಿ ವ್ಯಾಪ್ತಿಯ ಜನರಿಗೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ನೀಡಿದೆ.

ವಿಜಾಪುರ ಜಿಲ್ಲೆಯ ಭೀಮಾ ನದಿಯಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ಆದರೆ, ಮಹಾರಾಷ್ಟ್ರದ ಪುಣೆಯಲ್ಲಿ ಮತ್ತೆ ಮಳೆ ಸುರಿಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಆಲಮಟ್ಟಿ ಜಲಾಶಯಕ್ಕೆ ಮಂಗಳವಾರ ರಾತ್ರಿ ಒಳ ಹರಿವಿನ ಪ್ರಮಾಣ ಏಕಾಏಕಿ ಹೆಚ್ಚಾಗಿದ್ದರಿಂದ ಮಧ್ಯ ರಾತ್ರಿಯಿಂದ ಜಲಾಶಯದ ಎಲ್ಲ 26 ಕ್ರಸ್ಟ್ ಗೇಟ್‌ಗಳ ಮೂಲಕ 3.50 ಲಕ್ಷ ಕ್ಯೂಸೆಕ್ ನೀರು ಹೊರ ಬಿಡಲಾಯಿತು.

ಬುಧವಾರ ಮಧ್ಯಾಹ್ನದ ನಂತರ 3.24 ಲಕ್ಷ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಜಲಾಶಯಕ್ಕೆ 2.80 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಇನ್ನು 2-3 ದಿನಗಳ ಕಾಲ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರಬಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಲಾಶಯದ ಮುಂಭಾಗದಲ್ಲಿರುವ ಅರಳದಿನ್ನಿ, ಯಲ್ಲಮ್ಮನ ಬೂದಿಹಾಳ, ಹೊಳೆ ಮಸೂತಿ ಸೇರಿದಂತೆ ನದಿ ತೀರದ ಗ್ರಾಮಗಳ ಅಪಾರ ಪ್ರಮಾಣದ ಬೆಳೆಗೆ ನೀರು ನುಗ್ಗಿದೆ. ನೀರು ಹೊಳೆ ಮಸೂತಿ ಸಮೀಪ ಬಂದಿದ್ದು, ನದಿ ತೀರದಲ್ಲಿ  ಕಟ್ಟೆಚ್ಚರ ಘೋಷಿಸಲಾಗಿದೆ.

ಬೆಳಗಾವಿಯಲ್ಲಿ ಯಥಾಸ್ಥಿತಿ: ಬೆಳಗಾವಿ ಜಿಲ್ಲೆಯಲ್ಲಿ ಕೃಷ್ಣಾ ನದಿ ಹರಿವಿನಲ್ಲಿ ಬುಧವಾರ ಯಥಾಸ್ಥಿತಿ ಮುಂದುವರಿದಿದೆ. ನೆರೆಯ ಮಹಾರಾಷ್ಟ್ರದಿಂದ 2.27 ಲಕ್ಷ ಕ್ಯೂಸೆಕ್ ಹರಿದು ಬರುತ್ತಿದ್ದು, ಮಹಾರಾಷ್ಟ್ರದಲ್ಲಿ ಬುಧವಾರ ಮತ್ತೆ ಮಳೆಯಲ್ಲಿ ಹೆಚ್ಚಳವಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಮಹಾರಾಷ್ಟ್ರದಲ್ಲಿ ಮಂಗಳವಾರ ಕಡಿಮೆಯಾಗಿದ್ದ ಮಳೆ  ಬುಧವಾರ ಮತ್ತೆ ಹೆಚ್ಚಾಗಿದೆ. ಕೊಯ್ನಾದಲ್ಲಿ 111 ಮಿ.ಮೀ, ನವಜಾದಲ್ಲಿ 151 ಮಿ.ಮೀ, ಮಹಾಬಳೇಶ್ವರದಲ್ಲಿ 172 ಮಿ.ಮೀ ಹಾಗೂ ವಾರಣಾದಲ್ಲಿ 78 ಮಿ.ಮೀ. ಮಳೆಯಾಗಿದೆ.

ಮಲಪ್ರಭಾ ಹಾಗೂ ಹಿರಣ್ಯಕೇಶಿ ನದಿ ನೀರಿನ ಹರಿವಿನಲ್ಲಿ ಕಡಿಮೆಯಾದ ಪರಿಣಾಮ ಹುಕ್ಕೇರಿ ತಾಲ್ಲೂಕಿನ ಮೂರು ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿವೆ. ಇನ್ನೂ 18 ಸೇತುವೆಗಳನ್ನು ನೀರಿನಲ್ಲಿ ಮುಳುಗಿವೆ.

ಚಿಕ್ಕೋಡಿ ತಾಲ್ಲೂಕಿನ ಒಂಬತ್ತು, ಅಥಣಿ ತಾಲ್ಲೂಕಿನ ಐದು, ರಾಯಬಾಗ ತಾಲ್ಲೂಕಿನ ಎರಡು, ಖಾನಾಪುರ ಹಾಗೂ ಗೋಕಾಕ ತಾಲ್ಲೂಕಿನ ತಲಾ ಒಂದು ಸೇತುವೆ ನೀರಿನಲ್ಲಿವೆ. ಎರಡು ದಿನ ಬಿಡುವು ನೀಡಿದ್ದ ಮಳೆ ಬುಧವಾರ ಮತ್ತೆ ಜಿಲ್ಲೆಯ ಖಾನಾಪುರ ಹಾಗೂ ಬೆಳಗಾವಿ ತಾಲ್ಲೂಕಿನಲ್ಲಿ ಸುರಿಯ ತೊಡಗಿದೆ.

ಹಾವೇರಿ ಹಾವೇರಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಬುದವಾರವೂ ಮಳೆ ಮುಂದುವರಿದಿದೆ., ನದಿಗಳ ನೀರಿನ ಮಟ್ಟದಲ್ಲಿ ಹೆಚ್ಚಳವಾಗಿದೆ. ಜಿಟಿಜಿಟಿ ಮಳೆಯಿಂದಾಗಿ ಜಿಲ್ಲೆಯಲ್ಲಿ ಒಟ್ಟು 8 ಮನೆಗಳು ಭಾಗಶಃ ಕುಸಿದ ವರದಿಯಾಗಿದೆ. ಆದರೆ ಯಾವುದೇ ಜೀವಹಾನಿಯಾದ ವರದಿಯಾಗಿಲ್ಲ.

ರಾಜ್ಯ ಹೆದ್ದಾರಿ ಸಂಚಾರ ಸ್ಥಗಿತ: ನಾರಾಯಣಪುರ ಜಲಾಶಯದಿಂದ 3 ಲಕ್ಷ ಕ್ಯೂಸೆಕ್ ನೀರು  ಬಿಡಲಾಗಿದೆ. ಶಹಾಪುರ- ದೇವದುರ್ಗ ರಾಜ್ಯ ಹೆದ್ದಾರಿಯ ಕೊಳ್ಳುರ (ಎಂ) ಗ್ರಾಮದ ಬಳಿ ಕೃಷ್ಣಾ ನದಿಗೆ ನಿರ್ಮಿಸಿರುವ ಸೇತುವೆ ಮೇಲೆ ಬುಧವಾರ ಬೆಳಿಗ್ಗೆಯಿಂದ  ನೀರು ಹರಿಯುತ್ತಿದ್ದು ರಸ್ತೆ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

ನದಿ ದಂಡೆಯಲ್ಲಿ ನೂರಾರು ಎಕರೆ ಬತ್ತ, ಹತ್ತಿ, ತೊಗರಿ, ಕಬ್ಬು ಬೆಳೆಗಳು ನೀರಿನಲ್ಲಿ ಮುಳುಗಿವೆ. ಮತ್ತೆ ಹೆಚ್ಚು ನೀರು ಬಿಟ್ಟುದರಿಂದ ರೈತರು  ಆತಂಕಗೊಂಡಿದ್ದಾರೆ. ಶಹಾಪುರ ತಾಲ್ಲೂಕಿನಲ್ಲಿ 28 ಹಳ್ಳಿಗಳು ಕೃಷ್ಣಾ ನದಿ ದಂಡೆಯಲ್ಲಿ ಬರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT