ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವೀಣ್ ಕುಮಾರ್ ಬದಲು ಶ್ರೀಶಾಂತ್

Last Updated 8 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಗಾಯಗೊಂಡಿರುವ ಪ್ರವೀಣ್ ಕುಮಾರ್ ದೈಹಿಕ ಸಾಮರ್ಥ್ಯ ಸಾಬೀತುಪಡಿಸುವಲ್ಲಿ ವಿಫಲರಾಗಿದ್ದು, ಅವರನ್ನು ಭಾರತದ ವಿಶ್ವಕಪ್ ತಂಡದಿಂದ ಕೈಬಿಡಲಾಗಿದೆ. ಅಂತಿಮ ಹದಿನೈದು ಆಟಗಾರರ ಪಟ್ಟಿಗೆ ಈಗ ಕೇರಳದ ವೇಗಿ ಎಸ್.ಶ್ರೀಶಾಂತ್ ಸೇರಿಕೊಂಡಿದ್ದಾರೆ.

ಪ್ರವೀಣ್ ಗಾಯಗೊಂಡಿರುವ ವಿಷಯವನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಗೆ ಲಿಖಿತವಾಗಿ ತಿಳಿಸಿದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬದಲಿ ಆಟಗಾರನ ರೂಪದಲ್ಲಿ ಶ್ರೀಶಾಂತ್ ಅವರನ್ನು ತಂಡಕ್ಕೆ ಸೇರಿಸಲು ಒಪ್ಪಿಗೆ ಪಡೆದುಕೊಂಡಿದೆ.

‘ಕೃಷ್ಣಮಾಚಾರಿ ಶ್ರೀಕಾಂತ್ ನೇತೃತ್ವದ ಆಯ್ಕೆ ಸಮಿತಿಯ ಎಲ್ಲ ಸದಸ್ಯರು ಪ್ರವೀಣ್ ಸ್ಥಾನದಲ್ಲಿ ಶ್ರೀಶಾಂತ್ ತಂಡದಲ್ಲಿರುವುದು ಸೂಕ್ತವೆಂದು ನಿರ್ಧರಿಸಿದ್ದಾರೆ’ ಎಂದು ಬಿಸಿಸಿಐ ಕಾರ್ಯದರ್ಶಿ ಎನ್.ಶ್ರೀನಿವಾಸನ್ ಅವರು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

28 ವರ್ಷ ವಯಸ್ಸಿನ ಕೇರಳದ ವೇಗಿ 51 ಏಕದಿನ ಪಂದ್ಯಗಳಲ್ಲಿ ಆಡಿದ ಅನುಭವ ಹೊಂದಿದ್ದಾರೆ. 32.04ರ ಸರಾಸರಿಯಲ್ಲಿ 75 ವಿಕೆಟ್‌ಗಳನ್ನು ಕೆಡವಿದ್ದಾರೆ. ಆಕ್ರಮಣಕಾರಿ ಮನೋಭಾವದ ಯುವ ಬೌಲರ್ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆನ್ನುವ ವಿಶ್ವಾಸವನ್ನು ಆಯ್ಕೆ ಸಮಿತಿ ಹೊಂದಿದೆ.

ವ್ಯಕ್ತಪಡಿಸಲಾಗದ ಸಂತಸ (ಬೆಂಗಳೂರು ವರದಿ): ಹದಿನೈದು ಸದಸ್ಯರ ಅಂತಿಮ ತಂಡಕ್ಕೆ ತಮ್ಮನ್ನು ಸೇರಿಸಿದ್ದರ ಬಗ್ಗೆ ಪ್ರತಿಕ್ರಿಯೆ ಕೇಳಿದ ಪತ್ರಕರ್ತರ ಮುಂದೆ ಶ್ರೀಶಾಂತ್ ಕೆಲವು ಕ್ಷಣ ಮೌನವಾದರು. ಆನಂತರ ಒಂದೊಂದೇ ಪದವನ್ನು ಜೋಡಿಸಿ ಮಾತನಾಡಿದ ಅವರು ‘ಏನು ಹೇಳಬೇಕು ಎಂದು ತಿಳಿಯುತ್ತಿಲ್ಲ. ಇದೊಂದು ವ್ಯಕ್ತಪಡಿಸಲಾಗದ ಸಂತಸ’ ಎಂದು ಪ್ರತಿಕ್ರಿಯಿಸಿದರು. ‘ದೇವರಲ್ಲಿ ಅಪಾರ ನಂಬಿಕೆ ಇಟ್ಟವನು ನಾನು; ಆದ್ದರಿಂದ ಆಸೆಯನ್ನು ಬಿಟ್ಟಿರಲಿಲ್ಲ’ ಎಂದ ಅವರು ‘ತಂಡದಲ್ಲಿ ಸ್ಥಾನ ಸಿಕ್ಕಿದೆ, ನನ್ನೆಲ್ಲ ಸಾಮರ್ಥ್ಯವನ್ನು ಒಗ್ಗೂಡಿಸಿ ಆಡುವ ಮೂಲಕ ತಂಡದ ಯಶಸ್ಸಿಗೆ ದೊಡ್ಡ ಕೊಡುಗೆ ನೀಡಲು ಯತ್ನಿಸುತ್ತೇನೆ’ ಎಂದು ಹೇಳಿದರು.

ಕೇರಳದಲ್ಲಿ ಸಂಭ್ರಮ (ಕೊಚ್ಚಿ ವರದಿ): ತಮ್ಮ ನೆಚ್ಚಿನ ‘ಶ್ರೀ’ ವಿಶ್ವಕಪ್ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆಯೇ ಇಲ್ಲಿನ ಕ್ರಿಕೆಟ್ ಪ್ರೇಮಿಗಳು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು. ಪ್ರವೀಣ್ ಕುಮಾರ್ ಬದಲಿಗೆ ಇಶಾಂತ್ ಶರ್ಮ ಸ್ಥಾನ ಪಡೆಯುವ ಸಾಧ್ಯತೆ ಬಗ್ಗೆಯೂ ಹಿಂದಿನ ಹರಡಿದ್ದ ಮಾಧ್ಯಮ ವರದಿಗಳಿಂದ ಆತಂಕಗೊಂಡಿದ್ದ ಇಲ್ಲಿನ ಜನರು ಮಂಗಳವಾರ ಸಮಾಧಾನದ ನಿಟ್ಟುಸಿರು ಬಿಟ್ಟರು.

‘ಶ್ರೀಶಾಂತ್ ಅವರನ್ನು ತಂಡಕ್ಕೆ ಪರಿಗಣಿಸಿದ್ದು ಸರಿಯಾದ ನಿರ್ಧಾರ’ ಎಂದು ಕಾಲೇಜ್ ಯುವತಿಯರು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು ಅಭಿನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT