ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶಸ್ತಿಗಾಗಿ ಸನಮ್-ರಾಮ್ ಹಣಾಹಣಿ ಇಂದು

ಪ್ರಶಸ್ತಿಗಾಗಿ ಸನಮ್-ರಾಮ್ ಹಣಾಹಣಿ ಇಂದು
Last Updated 14 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಧಾರವಾಡ: ಚೊಚ್ಚಲ ಐಟಿಎಫ್ ಪ್ರಶಸ್ತಿಯ ಕನಸಿನಲ್ಲಿರುವ ತಮಿಳುನಾಡಿನ ರಾಮ್‌ಕುಮಾರ್ ರಾಮನಾಥನ್ ಹಾಗೂ ಸತತ ಎರಡನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಹರಿಯಾಣದ ಸನಮ್ ಸಿಂಗ್ ಅವರು ಇಲ್ಲಿನ ರಾಜಾಧ್ಯಕ್ಷ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 10,000 ಡಾಲರ್ ಪ್ರಶಸ್ತಿ ಮೊತ್ತದ `ಧಾರವಾಡ ಓಪನ್' ಪುರುಷರ ಐಟಿಎಫ್ ಟೂರ್ನಿಯ ಸಿಂಗಲ್ಸ್ ವಿಭಾಗದ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಶುಕ್ರವಾರ ನಡೆದ ಸೆಮಿಫೈನಲ್‌ನಲ್ಲಿ ಜರ್ಮನಿಯ ಟಾರ್ಸ್ಟನ್ ವಿಟೊಸ್ಕಾ 6-7 (3), 5-7ರಿಂದ ತಮಿಳುನಾಡಿನ ರಾಮ್‌ಕುಮಾರ್ ರಾಮನಾಥನ್ ಎದುರು ಮಂಡಿಯೂರಿದರು.      ಭಾರತ ಜೂನಿಯರ್ ತಂಡದ ಮಾಜಿ ಆಟಗಾರ ರಾಮ್ ಎದುರಾಳಿಯನ್ನು ಒತ್ತಡಕ್ಕೆ ಸಿಲುಕಿಸಿ ಅದರ ಲಾಭ ಪಡೆಯುವ ತಂತ್ರ ಅನುಸರಿಸಿದರು. ಟಾರ್ಸ್ಟನ್‌ರ ಬಲವಾದ ಸರ್ವ್‌ಗಳಿಗೆ ಅಷ್ಟೇ ತಾಳ್ಮೆಯಿಂದ ಉತ್ತರ ನೀಡಿದರು. ಮೊದಲ ಸೆಟ್‌ನಲ್ಲಿ 6-6 ಸ್ಕೋರ್ ಸಮನಾದ ಬಳಿಕ ಟೈಬ್ರೇಕ್‌ನಲ್ಲಿ ರಾಮ್ ಗೆಲುವು ಕಂಡರು.

ಈ ಸೋಲಿನಿಂದ ಕಂಗೆಟ್ಟ ಜರ್ಮನ್ ಆಟಗಾರ ಎರಡನೇ ಸೆಟ್‌ನಲ್ಲಿ ತಿರುಗೇಟು ನೀಡುವ ಪ್ರಯತ್ನ ನಡೆಸಿದರು. ಒಂದು ಹಂತದಲ್ಲಿ 5-4 ರಿಂದ ಮುಂದಿದ್ದ ಅವರು ತಮ್ಮ ಮುನ್ನಡೆಯನ್ನು ಗೆಲುವಾಗಿ ಪರಿವರ್ತಿಸಿಕೊಳ್ಳುವಲ್ಲಿ ವಿಫಲರಾದರು. ಮುಂದಿನ ಎರಡು ಸೆಟ್‌ಗಳನ್ನು ತಮ್ಮದಾಗಿಸಿಕೊಂಡ ರಾಮ್ ಎದುರಾಳಿ ಮೇಲೆ ಇನ್ನಷ್ಟು ಒತ್ತಡ ಹೇರಿದರು. 12ನೇ ಗೇಮ್‌ನಲ್ಲಿ ಎರಡು ಬಾರಿ ಸರ್ವ್ ಕೆಡಿಸಿಕೊಂಡ ಟಾರ್ಸ್ಟನ್ ಅದರಿಂದ ಭಾರಿ ಬೆಲೆಯನ್ನೇ ತೆರಬೇಕಾಯಿತು.

ತಮ್ಮ ಗೆಲುವಿನ ಬಳಿಕ ಮಾತನಾಡಿದ ರಾಮ್‌ಕುಮಾರ್ `ಟಾರ್ಸ್ಟನ್ ಉತ್ತಮವಾಗಿಯೇ ಆಡಿದರು. ತಾಳ್ಮೆಯಿಂದ ಆಡಿದ್ದೇ ನನ್ನ ಗೆಲುವಿಗೆ ಕಾರಣವಾಯಿತು' ಎಂದರು. ಫೈನಲ್ ಪಂದ್ಯ ಇನ್ನಷ್ಟು ಕಠಿಣವಾಗಲಿದೆ. ಆದರೆ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ ಎಂದು ಹೇಳಿದರು. ಏಕಪಕ್ಷೀಯವಾಗಿದ್ದ ಮತ್ತೊಂದು ಸೆಮಿಫೈನಲ್‌ನಲ್ಲಿ ಎರಡನೇ ಶ್ರೇಯಾಂಕದ ಸನಮ್ ಸಿಂಗ್ 6-1, 6-0 ಅಂತರದಲ್ಲಿ ವಿ.ಎಂ. ರಂಜಿತ್‌ರನ್ನು ಮಣಿಸಿದರು. 50 ನಿಮಿಷಗಳ ಕಾಲ ನಡೆದ ಪಂದ್ಯದ ಯಾವ ಕ್ಷಣದಲ್ಲೂ ಮೂರನೇ ಶ್ರೇಯಾಂಕದ ರಂಜಿತ್ ಸನಮ್‌ಗೆ ಸಾಟಿಯಾಗುವಂತೆ ಆಡಲೇ ಇಲ್ಲ.

ಅಮೆರಿಕಾ ಜೋಡಿಗೆ ಪ್ರಶಸ್ತಿ: ಸಂಜೆ ನಡೆದ ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ಅಮೆರಿಕಾದ ಅಮೃತ್ ನರಸಿಂಹನ್-ಮೈಕಲ್ ಶಬಾಜ್ ಜೋಡಿ ನಿರ್ಣಾಯಕ ಸೂಪರ್ ಟೈಬ್ರೇಕ್‌ನಲ್ಲಿ ಮುನ್ನಡೆಯುವ ಮೂಲಕ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಅವರು ಭಾರತದ ಅಜಯ್ ಸೆಲ್ವರಾಜ್-ಅಶ್ವಿನ್ ವಿಜಯರಾಘವನ್ ಅವರನ್ನು 6-4, 3-6, 10-7ರಲ್ಲಿ ಪರಾಭವಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT