ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶಾಂತ ಹಳ್ಳಿಯಲ್ಲೊಂದು ಮೌನ ಕ್ರಾಂತಿ

ಅಕ್ಷರ ಗಾತ್ರ

ಷಿಕಾಗೊದ ಧಾರ್ಮಿಕ ಸಂಸತ್ತಿನಲ್ಲಿ 1893ರ ಸೆಪ್ಟೆಂಬರ್‌ನಲ್ಲಿ ಸ್ವಾಮಿ ವಿವೇಕಾನಂದರು ಮಾಡಿದ ಭಾಷಣ ಈಗ ಇತಿಹಾಸದ ಭಾಗವೇ ಆಗಿದೆ. ಈ ಧಾರ್ಮಿಕ ಸಂಸತ್ತಿನ ಪ್ರಸ್ತಾಪವಾದಾಗಲೆಲ್ಲಾ ಭಾರತೀಯರು ವಿವೇಕಾನಂದರ ಭಾಷಣವನ್ನು ಹೆಮ್ಮೆಯಿಂದ ಸ್ಮರಿಸುತ್ತಾರೆ ಮತ್ತು ಈ ಭಾಷಣವೇ ಸ್ವಾಮೀಜಿಯನ್ನು ವಿಶ್ವ ವೇದಿಕೆಗೆ ಪರಿಚಯಿಸಲು ಪ್ರಮುಖ ಮೈಲಿಗಲ್ಲಾಯಿತು ಎಂದು ಇತಿಹಾಸಕಾರರು ಕೂಡ ವ್ಯಾಖ್ಯಾನಿಸುತ್ತಾರೆ.

ಸ್ವಾಮೀಜಿ ಧಾರ್ಮಿಕ ಸಂಸತ್ತಿನಲ್ಲಿ ಪಾಲ್ಗೊಳ್ಳುವಲ್ಲಿ ಹಾಗೂ ಅಲ್ಲಿ ತಮ್ಮ ಚಿಂತನೆಗಳನ್ನು ಮಂಡಿಸುವ ಸುವರ್ಣಾವಕಾಶವನ್ನು ಪಡೆಯುವಲ್ಲಿ ಪ್ರೊ. ರೈಟ್ ಅವರ ಕೊಡುಗೆಯ ಬಗ್ಗೆಯೂ ಹಲವರಿಗೆ ತಿಳಿದಿದೆ. ಆದರೆ ವಿವೇಕಾನಂದರು ಅಮೆರಿಕದಲ್ಲಿ ನೀಡಿದ ಮೊತ್ತ ಮೊದಲ ಪ್ರವಚನದ ವಿಷಯ ಬಹು ಜನರಿಗೆ ತಿಳಿದಿರಲಾರದು. ಅಂದು 1893ರ ಆಗಸ್ಟ್ 25ನೇ ದಿನ. ಮಸಾಚುಸೆಟ್ಸ್ ಕರಾವಳಿಯಲ್ಲಿರುವ ಆ್ಯನಿಸ್‌ಕ್ವಾಮ್ ಎಂಬ ಪ್ರಶಾಂತವಾದ ಹಳ್ಳಿಯಲ್ಲಿ ಷಿಕಾಗೊ, ಬಾಸ್ಟನ್ ಸೇರಿದಂತೆ ಹಲವಾರು ಊರುಗಳಿಂದ ಪ್ರೊಫೆಸರುಗಳು, ಕಲಾವಿದರು, ಪಾದ್ರಿಗಳು, ಬರಹಗಾರರು ಎಲ್ಲರೂ ಬಂದು ಸೇರಿದ್ದರು. ಹಾರ್ವರ್ಡ್ ವಿಶ್ವವಿದ್ಯಾಲಯದ ಪ್ರೊಫೆಸರ್ ಜಾನ್ ಹೆನ್ರಿ ರೈಟ್ ಅವರ ಆಹ್ವಾನದ ಮೇರೆಗೆ, ಗ್ರಾಮದಲ್ಲೇ ಅತ್ಯಂತ ವಿಶಾಲವಾದ ಕೊಠಡಿಗಳು ಮತ್ತು ದೊಡ್ಡ ಊಟದ ಕೋಣೆಯಿದ್ದ `ಮಿಸ್ ಲೇನ್ ಭೋಜನಶಾಲೆ~ಯಲ್ಲಿ ಎಲ್ಲರೂ ಸಮಾವೇಶಗೊಂಡಿದ್ದರು. ತಾವು ಇತ್ತೀಚೆಗೆ ಭೇಟಿಯಾದ ಒಬ್ಬ ಯುವ ಹಿಂದೂ ಸನ್ಯಾಸಿಯೊಟ್ಟಿಗೆ ಅಲ್ಲಿಗೆ ಬರುವುದಾಗಿ ರೈಟ್, ಅವರಿಗೆ ತಿಳಿಸಿದ್ದರು. ಸ್ವಾಮೀಜಿ ಧಾರ್ಮಿಕ ಸಂಸತ್ತಿನಲ್ಲಿ ಪಾಲ್ಗೊಳ್ಳಲು ಅಗತ್ಯವಾದ ಸಿದ್ಧತೆಗಳನ್ನು ಮಾಡುತ್ತಿದ್ದ ಪ್ರೊಫೆಸರ್, `ರಾಷ್ಟ್ರದ ಬಹುತೇಕರಿಗೆ ನಿಮ್ಮನ್ನು ಪರಿಚಯಿಸಿಕೊಡಲು ಇದೇ ಅತ್ಯಂತ ಪ್ರಶಸ್ತವಾದ ವೇದಿಕೆ~ ಎಂದು ಹೇಳಿದ್ದರು.

ತನ್ನನ್ನು ಸೆಳೆಯುತ್ತಿರುವ ಯಾವುದೋ ಒಂದು ಶಕ್ತಿಯ ಸಾನ್ನಿಧ್ಯದಲ್ಲಿ ತಾನಿದ್ದೇನೆ ಎಂಬ ಭಾವನೆ ಅದಾಗಲೇ ಪ್ರೊಫೆಸರ್ ಅವರಲ್ಲಿ ಮೂಡಿತ್ತು. 29 ವರ್ಷದ ಆ ಯುವಕನ ಮಧುರವಾದ ಕಂಠ, ಸಿಂಹಸದೃಶ ನಡಿಗೆ ಮತ್ತು ಕಪ್ಪು ಕಣ್ಣುಗಳಲ್ಲಿ ಹೊಳೆಯುತ್ತಿದ್ದ ಅಧ್ಯಾತ್ಮ ಪ್ರಭೆ ಅವರನ್ನು ಭೇಟಿಯಾದ ಎಲ್ಲರನ್ನೂ ಆಕರ್ಷಿಸಿತು. ಬಳಿಕ ಅವರ ಮಾತುಗಳನ್ನು ಆಲಿಸಿದ ಎಲ್ಲರ ಅಂತರಂಗದಲ್ಲೂ ಅಚ್ಚರಿಯ ಹಾಗೂ ಮೋಡಿಗೊಳಗಾದಂತಹ ಭಾವನೆ ಅನುರಣಿಸಿತು. ವಿವೇಕಾನಂದರ ಈ ಆ್ಯನಿಸ್‌ಕ್ವಾಮ್ ಭೇಟಿಯನ್ನು ದಾಖಲಿಸಿರುವ ಶ್ರೀಮತಿ ರೈಟ್ ಅವರ ಪ್ರಕಾರ, `ಅವರು ವಿಚಿತ್ರವಾದ ಬಳಲಿಕೆಯ ಧಾಟಿಯಲ್ಲಿ ನಡೆದುಬಂದರು. ಆದರೆ ಆ ನಡಿಗೆಯಲ್ಲಿದ್ದ ಆಜ್ಞಾಧಾರಕ ಘನತೆ ಹಾಗೂ ಭಾವಭಂಗಿಯಲ್ಲಿದ್ದ ಸೆಳೆತ ಪ್ರತಿಯೊಬ್ಬರೂ ಅರೆಕ್ಷಣ ನಿಂತು ಅವರನ್ನು ನೋಡಬೇಕೆನಿಸುವಂತಿತ್ತು. ಅವರ ನಡಿಗೆಯ ಲಹರಿಯು ಎಂದೂ ಯಾವುದಕ್ಕೂ ಆತುರವನ್ನೇ ಪಡುವುದಿಲ್ಲವೇನೋ ಎಂಬಂತಹ ಭಾವನೆ ಮೂಡಿಸುತ್ತಿದ್ದರೆ, ಆ ಕಪ್ಪು ಕಂಗಳಲ್ಲಿ ಪುರಾತನ ನಾಗರಿಕತೆಯ ಸೊಬಗು ಮಿಂಚುತ್ತಿತ್ತು.~

ಚಳಿಗಾಲದ ಭಾನುವಾರ ಆ ಗ್ರಾಮದ ಯೂನಿವರ್ಸಲಿಸ್ಟ್ ಚರ್ಚ್‌ನಲ್ಲಿ ಮಾತನಾಡುವಂತೆ ಪಾದ್ರಿ ರೆವರೆಂಡ್ ಜಿ.ಡಬ್ಲ್ಯು.ಪೆನ್ನಿಮ್ಯಾನ್ ಅವರಿಂದ ಸ್ವಾಮೀಜಿಗೆ ಆಹ್ವಾನ ಬಂತು. ಸ್ವಾಮೀಜಿಯ ಅಮೆರಿಕ ಭೇಟಿಯ ಬಗ್ಗೆ ಸಂಶೋಧನೆ ಮಾಡಿರುವ ಎಲ್ವಾ ನೆಲ್ಸನ್, ಆ್ಯನಿಸ್‌ಕ್ವಾಮ್‌ನಲ್ಲಿ ಅವರು ಮಾಡಿದ ಈ ಸಾರ್ವಜನಿಕ ಭಾಷಣದ ಬಗ್ಗೆ `ಪಾಶ್ಚಿಮಾತ್ಯ ರಾಷ್ಟ್ರದಲ್ಲಿ ವಿವೇಕಾನಂದರ ಅಭೂತಪೂರ್ವ ಕಾರ್ಯದ ಆರಂಭಕ್ಕೆ ಈ ಉಪನ್ಯಾಸ ಬುನಾದಿ ಒದಗಿಸಿಕೊಟ್ಟಿತು. ಕ್ರಾಂತಿಕಾರಿ ಕಾಲಘಟ್ಟಕ್ಕೂ ಮುನ್ನ ಚೀನಾ ಮತ್ತು ಭಾರತಕ್ಕೆ ಹಡಗುಗಳನ್ನು ಕಳುಹಿಸಿಕೊಡುತ್ತಿದ್ದ ಕರಾವಳಿಯ ಈ ಪ್ರಶಾಂತ ಗ್ರಾಮದಲ್ಲಿ ಮತ್ತೊಂದು ಕ್ರಾಂತಿ ಈ ಮೂಲಕ ಸದ್ದಿಲ್ಲದೇ ಆರಂಭವಾಯಿತು~ ಎಂದು ಬರೆದಿದ್ದಾರೆ.

ಹೀಗೆ ಹಳ್ಳಿಯೊಂದರ ಸಣ್ಣ ಚರ್ಚ್‌ನಲ್ಲಿ ಮಾಡಿದ ಮೊದಲ ಭಾಷಣ ವಿವೇಕಾನಂದರು ಪಶ್ಚಿಮದ ರಾಷ್ಟ್ರಗಳಲ್ಲಿ ನಂತರ ಮಾಡಿದ ಕಾರ್ಯಗಳಿಗೆ ನಾಂದಿಯಾಯಿತು. ಇಲ್ಲಿಂದಲೇ ಅವರ ಅಧ್ಯಾತ್ಮದ ಬಿರುಗಾಳಿ ಇಡೀ ದೇಶಕ್ಕೆ ಪಸರಿಸಿತು. ಈ ಭಾಗದಲ್ಲಿ ವಿವೇಕಾನಂದರು ಮಾಡಿದ ಕಾರ್ಯ ಐದು ವರ್ಷಕ್ಕಿಂತ ಹೆಚ್ಚಿಲ್ಲ. ಆದರೆ ಅವರು ಸದ್ದಿಲ್ಲದೇ ಮಾಡಿದ ಈ ಕ್ರಾಂತಿ, ಹೇಗೆ ಜನರಲ್ಲಿ ಅಂತರಂಗ ಶೋಧನೆಯ ಪುನಶ್ಚೇತನಕ್ಕೆ ಬುನಾದಿಯಾಯಿತು ಎಂಬುದು ಚರಿತ್ರೆಯ ಪುಟಗಳಲ್ಲಿ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT