ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನಿಸದೇ ಒಪ್ಪಲಾರೆ, ಒಪ್ಪದ್ದನ್ನು ಸಹಿಸಲಾರೆ

Last Updated 9 ನವೆಂಬರ್ 2012, 19:30 IST
ಅಕ್ಷರ ಗಾತ್ರ

ಮುಸ್ಲಿಂ ಮಹಿಳೆಯ ಕತ್ತಲ ಬದುಕನ್ನು ಕನ್ನಡದಲ್ಲಿ ಬಿಚ್ಚಿಟ್ಟ ಲೇಖಕಿ ಸಾರಾ ಅಬೂಬಕ್ಕರ್ ಅವರಿಗೆ ಈಗ `ನೃಪತುಂಗ~ ಪ್ರಶಸ್ತಿಯ ಗರಿ. ಕನ್ನಡ ಸಾಹಿತ್ಯ ಪರಿಷತ್ ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ವತಿಯಿಂದ ನೀಡುವ ಈ ಪ್ರಶಸ್ತಿಗೆ ಅವರ ಸಮಗ್ರ ಸಾಹಿತ್ಯ ಸೇವೆಯನ್ನು ಪರಿಗಣಿಸಲಾಗಿದೆ. ಡಿಸೆಂಬರ್‌ನಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ಮುಸ್ಲಿಂ ಸಮುದಾಯದ ಒಂದು ಭಾಗವೇ ಆಗಿದ್ದು, ಸಮುದಾಯದ ಹುಳುಕುಗಳನ್ನೇ ಬಿಚ್ಚಿಟ್ಟ ಸಾರಾ ಅವರ ಹಾದಿ ಹೂವಿನದೇನೂ ಆಗಿರಲಿಲ್ಲ. ಪ್ರೋತ್ಸಾಹದ ಜತೆಗೆ ಆಗಾಗ ಕಟು ಪ್ರತಿರೋಧ ಎದುರಿಸಿದ ಕಹಿ ಅನುಭವವೂ ಸಾಕಷ್ಟಿದೆ. ಹಾಗಾಗಿ ಸರಿಸುಮಾರು 4 ದಶಕಗಳ ಕಾಲದ ಲೇಖನಿಯೊಂದಿಗಿನ ನಿರಂತರ ಹೋರಾಟವನ್ನು ಅವರಿಲ್ಲಿ ತೆರೆದಿಟ್ಟಿದ್ದಾರೆ.

1. ಮುಸ್ಲಿಂ ಮಹಿಳೆಯ ಸಮಸ್ಯೆಯನ್ನು ಕನ್ನಡದಲ್ಲಿ ಮೊತ್ತಮೊದಲು ಪರಿಚಯಿಸಿದವರು ನೀವು. ನಿಮ್ಮ ಸಮಕಾಲೀನ ಲೇಖಕರಿಗಿಂತ ನೀವು ಹೇಗೆ ಭಿನ್ನ?
ಸಾರಾ: ನಾನು ಭಿನ್ನ ಅಲ್ಲವೇ ಅಲ್ಲ. ಆದರೆ ನನ್ನ ಸಮಕಾಲೀನ ಲೇಖಕರಲ್ಲಿ ಅನೇಕ ಮುಸ್ಲಿಮರಿದ್ದಾರೆ. ಅವರಲ್ಲಿ ಬಹುತೇಕರು ವಿಶಾಲ ಮನೋಭಾವವನ್ನು ಹೊಂದಿಲ್ಲ. ಅನೇಕರಲ್ಲಿ ಮತಾಂಧತೆ ಇದೆ. ಕೆಲವರು ಜಮಾತ್- ಎ- ಇಸ್ಲಾಮಿ ಮೊದಲಾದ ಸಂಘಟನೆಗಳೊಂದಿಗೆ ಗುರುತಿಸಿಕೊಂಡದ್ದೂ ಇದೆ. ನಂತರ ಅವರು ಬದಲಾಗಿ ಮತಾಂಧತೆ ಬಿಟ್ಟಿರಬಹುದು. ಆದರೆ ನಾನು ಮೊದಲಿಂದಲೂ ಸ್ವತಂತ್ರಳು. ನಾನು ಒಳಗಿದ್ದುಕೊಂಡೇ ಸಮಸ್ಯೆಗಳನ್ನು ಬಿಚ್ಚಿಟ್ಟಿದ್ದೇನೆ. ಕಂದಾಚಾರ ಗಳನ್ನು ಒಪ್ಪಿಕೊಳ್ಳುವ ಜಾಯಮಾನವೇ ನನ್ನದಲ್ಲ.

ನನ್ನ ಅಜ್ಜ ಪುಡಿಯಾಪುರ ಮಹಮದ್ ಅವರು ಕೇರಳದ ಕಾಸರಗೋಡಿನಲ್ಲಿ ಕೃಷಿಕರಾಗಿದ್ದರು. ಹಳೆಯ ಕಾಲದವರಾಗಿದ್ದರೂ ಪ್ರಗತಿಪರ ಧೋರಣೆ ಹೊಂದಿದ್ದರು. ಅವರ ಕಾಲದಲ್ಲೇ ಮಹಿಳಾ ಸ್ವಾತಂತ್ರ್ಯದ ಕನಸು ಕಂಡಿದ್ದರು. ನನ್ನ ತಂದೆ ಪುಡಿಯಾಪುರ ಅಹಮದ್ ವಕೀಲರಾಗಿದ್ದುಕೊಂಡು ಪ್ರಶ್ನಿಸುವ ಮನೋಭಾವ ಬೆಳೆಸಿಕೊಂಡಿದ್ದರು. ಏನನ್ನೇ ಆದರೂ ಪ್ರಶ್ನಿಸದೇ ಒಪ್ಪಿಕೊಳ್ಳಬಾರದು ಎಂಬ ಪಾಠ ನನಗೆ ಹೇಳಿಕೊಟ್ಟರು. ನನ್ನನ್ನು ಶಾಲೆಗೆ ಸೇರಿಸಿ ಓದಿಸಿದರು. ಹಾಗಾಗಿ ನಾನು ಪ್ರತಿಯೊಂದನ್ನೂ ಪ್ರಶ್ನಿಸಲು ಆರಂಭಿಸಿದೆ. ಮುಸ್ಲಿಂ ಮಹಿಳೆಗೆ ಪ್ರತಿನಿತ್ಯ ಆಗುವ ಶೋಷಣೆ, ಅವಮಾನಗಳನ್ನು ನನಗೆ ಸಹಿಸಲಾಗಲಿಲ್ಲ. ಅದನ್ನು ಲೇಖನಿಯ ಮೂಲಕ ಬಿಚ್ಚಿಟ್ಟೆ. ನಾನು ಓದಿದ್ದು ಮೆಟ್ರಿಕ್‌ವರೆಗೆ ಮಾತ್ರ (11ನೇ ತರಗತಿ) ನನ್ನನ್ನು ಮತ್ತಷ್ಟು ಓದಿಸಬೇಕು ಎಂಬ ಆಸೆ ತಂದೆಗೆ ಇತ್ತು. ಆದರೆ ಅಂದಿನ ಸಮಾಜ ಮುಸ್ಲಿಂ ಹೆಣ್ಣು ಮಕ್ಕಳು ಓದುವುದನ್ನು ಸಹಿಸುತ್ತಿರಲಿಲ್ಲ. ಹಾಗಾಗಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಸಿಗಲೇಬೇಕು, ಇದಕ್ಕಾಗಿ ಹೋರಾಡಬೇಕು ಎಂದು ನಾನು ಆಗಲೇ ನಿರ್ಧರಿಸಿಕೊಂಡೆ.

2. ಮುಸ್ಲಿಂ ಸಮಸ್ಯೆಗಳನ್ನು ಮುಕ್ತವಾಗಿ ಬಿಚ್ಚಿಟ್ಟಿದ್ದಕ್ಕೆ ಪ್ರತಿಕ್ರಿಯೆ ಹೇಗಿತ್ತು, ಅದನ್ನು ಎದುರಿಸಿದ್ದು ಹೇಗೆ?
ಸಾರಾ: ಮುಸ್ಲಿಂ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಮಾತ್ರ ನಾನು ಚಿತ್ರಿಸಿದ್ದೇನೆ. ನನ್ನ ಕತೆಯ ಪಾತ್ರಗಳು ಈ ಕೆಲಸ ಮಾಡಿವೆ. ಪ್ರತಿಕ್ರಿಯೆ ಆರಂಭದಿಂದಲೂ ಉತ್ತಮವಾಗೇ ಇತ್ತು. ಮುಸ್ಲಿಂ ಸಮುದಾಯ ಮಾತ್ರವೇ ಅಲ್ಲದೆ, ಹಿಂದೂಗಳೂ ನನ್ನ ಬರಹಗಳನ್ನು ಮೆಚ್ಚಿ ಶ್ಲಾಘಿಸಿದ್ದಾರೆ. ನಾನು ಬರವಣಿಗೆ ಆರಂಭಿಸಿದಾಗ ಆವರೆಗೆ ಈ ವಿಷಯದ ಬಗ್ಗೆ ಹೆಚ್ಚು ಬರಹಗಳು ಬಂದಿರಲಿಲ್ಲ. ಹಾಗಾಗಿ ಬೆರಗುಗಣ್ಣುಗಳಿಂದ ಕನ್ನಡ ಸಾಹಿತ್ಯ ಲೋಕ ನನ್ನನ್ನು ಗುರುತಿಸಿತು. ನನ್ನ ಮನೆಗೆ ನಾನು ಚಿಕ್ಕವಳಿದ್ದಾಗ ಕೆಲಸಕ್ಕೆಂದು ಬರುತ್ತಿದ್ದ ನಾದಿರಾ ಎಂಬ ಯುವತಿಯ ವಿವಾಹ ವಿಚ್ಛೇದನ, ಮರು ವಿವಾಹ ವಿವಾದ ನನ್ನನ್ನು ಬರವಣಿಗೆಗೆ ಪ್ರೇರೇಪಿಸಿತು. ನಾದಿರಾಳಿಗೆ ಆಕೆಯ ಪತಿ ವಿಚ್ಛೇದನ ನೀಡಿದ್ದ. ಮತ್ತೆ ಆಕೆಯನ್ನು ಆತ ಮರು ವಿವಾಹವಾಗಬೇಕಾದರೆ, ಆಕೆ ಮತ್ತೊಬ್ಬನನ್ನು ಮದುವೆಯಾಗಿ ವಿಚ್ಛೇದನ ಪಡೆಯಬೇಕು ಎಂಬ ಕರಾರನ್ನು ಮುಸ್ಲಿಂ ಸಮುದಾಯ ಹಾಕಿತ್ತು. ಅದನ್ನು ವಿರೋಧಿಸಿ ಏಕಾಂಗಿಯಾಗೇ ಇರಲು ನಿರ್ಧರಿಸಿದ ಆಕೆ ನನಗೆ ಕ್ರಾಂತಿಕಾರಳಾಗಿ ಕಂಡಿದ್ದಳು. ಅಂದೇ ನಾನು ಬರೆಯಲು ಆರಂಭಿಸಿದೆ.

ಇದರಿಂದ ಅನುಭವಿಸಿದ್ದು ಅಷ್ಟಿಷ್ಟೇನಲ್ಲ. ನಾನಿಂದು ಜೀವಂತವಾಗಿ ಇರುವುದೇ ಒಂದು ಆಶ್ಚರ್ಯ. ಮುಸ್ಲಿಂ ಸಮುದಾಯದ ಕಂದಾಚಾರಗಳನ್ನು ಪ್ರಶ್ನಿಸಿದ ಕೇರಳದ ಸಾಹಿತಿ ಅಬುಲ್ ಹಸನ್ ಅವರ ಕೊಲೆಯೇ ಆಗಿ ಹೋಯಿತಲ್ಲ. ಜಮಾತ್- ಎ- ಇಸ್ಲಾಮಿ ಸಂಘಟನೆಯ ಅನೇಕ ಲೇಖಕರು ನನಗೆ ವಿಪರೀತ ಕಿರುಕುಳ ನೀಡಿದ್ದಾರೆ. ನನ್ನನ್ನು ಧರ್ಮದಿಂದ ಹೊರಹಾಕುವಂತೆ ಧಮಕಿ ಹಾಕಿದ್ದಾರೆ. ಇದನ್ನು ಪ್ರಶ್ನಿಸಿ 1985ರಲ್ಲಿ ನಾನು ಹೈಕೋರ್ಟ್ ಮೆಟ್ಟಿಲು ಹತ್ತಿದೆ. ನನ್ನ ತಂದೆ ಪುಡಿಯಾಪುರ ಅಹಮದ್ ನನ್ನ ಜತೆ ನಿಂತು ಹೋರಾಟ ನಡೆಸಿದರು. ನನ್ನ ಹೋರಾಟದ ಹಿಂದೆ ನನ್ನ ಕುಟುಂಬದ ಶ್ರಮ ದೊಡ್ಡದು. ನನ್ನ ಉದ್ದೇಶ ಇಷ್ಟೇ- ಮುಸ್ಲಿಮ್ ಸಮುದಾಯದಲ್ಲಿ ಮಹಿಳೆಯ ಮೇಲಿನ ಅನ್ಯಾಯವನ್ನು ಹೊರಹಾಕಬೇಕಿತ್ತು. ಹೆಣ್ಣು ಅನುಭವಿಸುವ ಅವಮಾನವನ್ನು ತೋರಿಸಬೇಕಿತ್ತು. ಧರ್ಮದ ನಿಯಮವನ್ನು ಬದಲಿಸಿ, ಧರ್ಮದ ನೆಪದಲ್ಲಿ ನಡೆಸುವ ಕ್ರೌರ್ಯವನ್ನು ಬಿಚ್ಚಿಡಬೇಕಿತ್ತು. ಇದರಿಂದ ಮುಂದೊದಗುವ ಅಪಾಯದ ಬಗ್ಗೆ ನನಗೆ ಚಿಂತೆಯೇ ಇರಲಿಲ್ಲ.

3. ನಿಮ್ಮ ಹೋರಾಟದಲ್ಲಿ ಪ್ರಗತಿಪರರ ಬೆಂಬಲ ಇತ್ತೇ?
ಸಾರಾ: ಪ್ರಗತಿಪರರು ಎಲ್ಲಿದ್ದಾರೆ? ನಾನೊಬ್ಬಳೇ ಇಲ್ಲಿ ಪ್ರಗತಿಪರಳು. ನನಗೆ ಒದಗಿದ ಎಲ್ಲ ಸಮಸ್ಯೆಗಳನ್ನೂ ಏಕಾಂಗಿಯಾಗಿ ಅನುಭವಿಸಿದ್ದೇನೆ. ನನಗೆ ಒಮ್ಮಮ್ಮೆ ಅನ್ನಿಸುತ್ತದೆ, ಕರ್ನಾಟಕಕ್ಕಿಂತ ಕೇರಳವೇ ಎಷ್ಟೋ ವಾಸಿ ಎಂದು. ಅಲ್ಲಿ ಧಾರ್ಮಿಕತೆ ಇದೆ ಅಥವಾ ಇಲ್ಲ ಎನ್ನಲಾಗದು. ಆದರೆ ಇಲ್ಲಿನಷ್ಟು ಮತಾಂಧತೆ ಇಲ್ಲ. ಟೀಕೆಯನ್ನು ಒಪ್ಪಿಕೊಳ್ಳುವ ಮನಃಸ್ಥಿತಿ ಅಲ್ಲಿದೆ. ಕಾಸರಗೋಡು ಬಿಟ್ಟು ಮಂಗಳೂರು ಸೇರಿದ ಮೇಲಂತೂ ನಾನು ನೀರಿನಿಂದ ಹೊರಗೆ ತೆಗೆದ ಮೀನಿನಂತೆ ಆಗಿದ್ದೇನೆ.

ಹೆಣ್ಣು ಮಕ್ಕಳು ಪ್ರಾಣಿಗಳು, ಹೆರಲು ಇರುವ ಯಂತ್ರಗಳು ಎಂದು ಬಿಂಬಿಸಿರುವ ಸಮಾಜ ನಮ್ಮದು. ಇಸ್ಲಾಂನ ಮೂಲದಲ್ಲಿ ಹೆಣ್ಣಿಗೆ ಅಪಾರ ಗೌರವವಿವೆ. ಆದರೆ ಸೌದಿ ಅರೇಬಿಯಾ ಮೂಲದ `ವಹಾದಿಸಂ~ ಅನ್ನು ಮುಂದಿಟ್ಟುಕೊಂಡು ಈಗೀಗ ವಿಶ್ವದ ನಾನಾ ಭಾಗಗಳಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಬಾರದು ಎಂದೆಲ್ಲಾ ವಾದಿಸುತ್ತಿದ್ದಾರೆ. ಮಹಿಳೆಗೆ ಶಿಕ್ಷಣ ಸಿಗಬೇಕು. ಅದರಲ್ಲೂ ತಾಯಂದಿರಿಗೆ ಅಕ್ಷರ ಜ್ಞಾನ ಬೇಕು. ಆದರೆ ಕೇರಳ, ಕರ್ನಾಟಕ ಕರಾವಳಿ ಭಾಗದ ಬಹುತೇಕ ಮುಸ್ಲಿಂ ಕುಟುಂಬಗಳಲ್ಲಿನ ತಾಯಂದಿರಿಗೆ ಶಿಕ್ಷಣ ಇಲ್ಲ. ಎಲ್ಲೋ ದೂರದ ದುಬೈನಲ್ಲೋ, ಮತ್ತೊಂದೆಡೆಯೋ ಕುಳಿತ ಪತಿ ಹಣ ಕಳುಹಿಸುತ್ತಾನೆ. ಅದನ್ನು ಮಕ್ಕಳು ಮಜಾ ಮಾಡುತ್ತಾರೆ. ಹಣವನ್ನು ಸರಿಯಾಗಿ ನಿರ್ವಹಿಸಲೂ ಬಾರದ ಮಕ್ಕಳು ಕುಟುಂಬ ಸಮೇತ ಹಾಳಾಗಿದ್ದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಹಾಗಾಗಿ ಮಹಿಳೆಯನ್ನು ಶಿಕ್ಷಣದಿಂದ ವಂಚಿಸುವುದು ಸರಿಯಲ್ಲ.

4. ಲೇಖಕಿಯಾಗಿ ಪಯಣ ಆರಂಭ ಹೇಗಾಯಿತು? ಪ್ರೋತ್ಸಾಹ ಕೊಟ್ಟವರಾರು?
ಸಾರಾ: ನಾನು ಮನೆಯಿಂದ ಹೊರಬಂದವಳೇ ಅಲ್ಲ. 1969ರಲ್ಲಿ ಮೊದಲು ಸಣ್ಣಕತೆ ಬರೆದಿದ್ದೆ. ಆಮೇಲೆ ಅನೇಕ ಕತೆಗಳನ್ನು ಬರೆದು ಅನೇಕ ಪತ್ರಿಕೆಗಳಿಗೆ ಕಳುಹಿಸಿದೆ. ಪ್ರಕಟವಾಗಲೇ ಇಲ್ಲ. 1981ರಲ್ಲಿ ಲಂಕೇಶ್ ಪತ್ರಿಕೆಗೆ ಒಂದು ಪತ್ರ ಬರೆದಿದ್ದೆ. ಅದು ಅಚ್ಚಾಗಿಬಿಟ್ಟಿತು. ಲಂಕೇಶ್ ಅವರೇ ನನಗೆ ಪತ್ರ ಬರೆದು, ಮುಸ್ಲಿಂ ಸಮುದಾಯದ ಸಮಸ್ಯೆಗಳ ಬಗ್ಗೆ ಒಂದು ಕಥೆ ಬರೆದುಕೊಡುವಂತೆ ಕೇಳಿದ್ದರು. ಆಗ ಬರೆಯಲು ಆರಂಭಿಸಿದ್ದು ತಿರುಗಿ ನೋಡಲೇ ಇಲ್ಲ. ಬರೆಯುವುದು ತಡವಾದರೆ, ಏಕೆ ಬರೆಯುತ್ತಿಲ್ಲ ಎಂದು ಲಂಕೇಶ್ ಪ್ರಶ್ನಿಸುತ್ತಿದ್ದರು. ಲಂಕೇಶ್ ಇಲ್ಲದೇ ಇದ್ದರೆ ನಾನು ಲೇಖಕಿಯೇ ಆಗುತ್ತಿರಲಿಲ್ಲ.

5. ನೀವು ಮಹಿಳಾಪರ ಹೋರಾಟಗಾರ್ತಿಯೋ, ಮಹಿಳಾ ಲೇಖಕಿಯೋ?
ಸಾರಾ: ನಾನು ಮಹಿಳಾಪರ ಹೋರಾಟಗಾರ್ತಿಯಲ್ಲ. ನನ್ನ ಹೋರಾಟವೇನಿದ್ದರೂ ಲೇಖನಿಯ ಮೂಲಕ. ಈವರೆಗೂ ನನ್ನ ನಂಬಿಕೆ, ಸಿದ್ಧಾಂತಗಳೊಂದಿಗೆ ಯಾರ ಬಳಿಯೂ ರಾಜಿ ಮಾಡಿಕೊಂಡಿಲ್ಲ. ಅನೇಕ ಸಾಹಿತಿಗಳು ರಾಜಿ ಮಾಡಿಕೊಂಡಿರುವುದು ನನಗೂ ಗೊತ್ತು, ಅನೇಕರಿಗೂ ಗೊತ್ತು. ಇದಕ್ಕೆ ಕಾರಣ ಬರವಣಿಗೆಯಿಂದ ನನಗೆ ಯಾವ ಲಾಭವೂ ಬೇಕಿಲ್ಲ. ನನಗಾದ ಲಾಭವೇನು ಗೊತ್ತೇ? ಸರಿಸುಮಾರು 4 ದಶಕ ಮೀರಿದ ನನ್ನ ಹೋರಾಟದ ಫಲವಾಗಿ ನನ್ನ ಪ್ರಾಂತ್ಯದಲ್ಲಿ ಮುಸ್ಲಿಂ ಹೆಣ್ಣು ಮಕ್ಕಳು ಶಾಲೆಗೆ ಹೋಗಲು ಆರಂಭಿಸಿದ್ದಾರೆ. ಶಾಲೆ, ಕಾಲೇಜುಗಳು ಈಗ ಮುಸ್ಲಿಂ ಹೆಣ್ಣು ಮಕ್ಕಳಿಂದ ತುಂಬಿವೆ. ಇದನ್ನು ನೋಡಿದಾಗ ನನಗೆ ಹೆಮ್ಮೆ ಅನ್ನಿಸುತ್ತದೆ. ಆದರೂ ಹೆಣ್ಣು ಮಕ್ಕಳಿಗೆ ಬುರ್ಖಾ ಹಾಕಿಸಿ ಓದಲು ಕಳುಹಿಸುವುದು ಒಪ್ಪುವ ಸಂಗತಿ ಅಲ್ಲ. ಈ ಪದ್ಧತಿಯನ್ನು ನಾನು ವಿರೋಧಿಸುತ್ತೇನೆ. ಪ್ರವಾದಿಗಳೆಂದೂ ಬುರ್ಖಾ ಹಾಕಬೇಕು ಎಂದು ಹೇಳಿಲ್ಲ. ಬುರ್ಖಾ ಕೇವಲ ರಕ್ಷಣೆಗೆ ಮಾತ್ರ. ಬಿಸಿಲು, ದೂಳಿನಿಂದ ಪುರುಷ- ಮಹಿಳೆಯರಿಬ್ಬರೂ ಪರದೆಯಿಂದ ಮುಖವನ್ನು ಮುಚ್ಚಿಕೊಳ್ಳಬೇಕು, ಪರದೆ ಮಹಿಳೆಯ ಎದೆಯವರೆಗೂ ವಿಸ್ತರಿಸಬೇಕು ಎಂದಷ್ಟೇ ಇದೆ. ಆದರೆ ಇದನ್ನು ನಿಯಮ ಮಾಡಿದ್ದು ಮಾತ್ರ ನಂತರದವರು. ಬುರ್ಖಾ ಹೋಗಲಾಡಿಸಲು ನನ್ನ ಹೋರಾಟ ಇದೆ.

6. ನಿಮ್ಮ ಮಾತೃಭಾಷೆ ಮಲಯಾಳಂ ಆದರೂ, ಕನ್ನಡದಲ್ಲಿ ಬರೆದಿದ್ದು ಏಕೆ? ಮಲಯಾಳಂನಲ್ಲಿ ಬರೆದಿದ್ದರೆ ಮತ್ತಷ್ಟು ಪ್ರೋತ್ಸಾಹ ಸಿಗುತ್ತಿತ್ತು ಎಂದು ಅನಿಸಿದ್ದುಂಟೇ?
ಸಾರಾ: ನಾನು ಮೆಟ್ರಿಕ್‌ವರೆಗೂ ಓದಿದ್ದು ಕನ್ನಡ ಮಾಧ್ಯಮ ಶಾಲೆಯಲ್ಲಿ. ಹಾಗಾಗಿ ಬರವಣಿಗೆ ಕನ್ನಡದಲ್ಲೇ ಪ್ರಾರಂಭವಾಯಿತಷ್ಟೇ. ಕನ್ನಡದಲ್ಲಿ ಬರೆದು ನಾನು ಸಾಧಿಸಿದ್ದು ಹೆಚ್ಚು. ಆದರೆ ಮಲಯಾಳಂನಲ್ಲಿ ಬರೆದಿದ್ದರೆ, ಕೇರಳದ ಮಂದಿಯ ಪ್ರೋತ್ಸಾಹ ಹೆಚ್ಚು ಸಿಗುತ್ತಿತ್ತು ಎಂದು ಅನ್ನಿಸ್ದ್ದಿದೂ ಉಂಟು. ಈಗ ಸಾಕಷ್ಟು ಕೀರ್ತಿ ಲಭಿಸಿದೆ. ಆದರೆ ಅದಕ್ಕಾಗಿ ನಾನು ಕಳೆದುಕೊಂಡ ಮಾನಸಿಕ ಯಾತನೆ ದೊಡ್ಡದು. ಜೀವನದಲ್ಲಿ ನೆಮ್ಮದಿ ಮುಖ್ಯ. ನಾನು ಕೇರಳದಲ್ಲಿ ನೆಲೆಸಿದ್ದರೆ ನನ್ನ ಸಮುದಾಯದ ಬೆಂಬಲ ಮತ್ತಷ್ಟು ಹೆಚ್ಚು ಸಿಗುತ್ತಿತ್ತೋ ಏನೋ. ಆದರೆ ಕನ್ನಡ ಸಾಹಿತ್ಯ ಲೋಕ ನನ್ನನ್ನು ಸಾಕಷ್ಟು ಗುರುತಿಸಿದೆ. ವಿಮರ್ಶಾ ಲೋಕ ಪ್ರೋತ್ಸಾಹಿಸಿದೆ. ಕನ್ನಡದಲ್ಲಿ ಬರೆದುದಕ್ಕೆ ಹೆಮ್ಮೆ ಇದೆ.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT