ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೆ - ಉತ್ತರ

Last Updated 19 ಜೂನ್ 2011, 19:30 IST
ಅಕ್ಷರ ಗಾತ್ರ

ಅಶ್ವಿನಿ, ಬೆಂಗಳೂರು.
ಪ್ರಶ್ನೆ:
ನಾನು ದ್ವಿತೀಯ ಪಿ.ಯು.ಸಿ.,  ಪಿಸಿಎಂಬಿ ಚೆನ್ನಾಗಿ ಅಭ್ಯಾಸ ಮಾಡುತ್ತಿದ್ದೇನೆ. ಮುಂದೆ ಮೆಡಿಕಲ್- ಎಂಜಿನಿಯರಿಂಗ್ ಮಾಡಬೇಕೆಂಬ ಆಸೆಯಿದೆ. ಇದರ ಬಗ್ಗೆ ಹೆಚ್ಚು ಮಾಹಿತಿ ನೀಡಿ. ಹಾಗೆಯೇ  ಬೆಂಗಳೂರಿನ ಯಾವ ಕಾಲೇಜಿನಲ್ಲಿ ಇದನ್ನು ಮಾಡಬಹುದು?

ಉತ್ತರ: ಮೆಡಿಕಲ್ ಎಂಜಿನಿಯರಿಂಗ್ ಈಗ ಹೆಚ್ಚು ಬೇಡಿಕೆಯಲ್ಲಿರುವ ವಿಷಯಗಳಲ್ಲಿ ಒಂದು. ವೈದ್ಯಕೀಯ ಕ್ಷೇತ್ರದಲ್ಲಿ ರೋಗ ನಿದಾನ, ರೋಗಿಗಳ ಆರೈಕೆ ಮುಂತಾದವು ಈಗ ಹೆಚ್ಚಿನ ತಂತ್ರಜ್ಞಾನವನ್ನು ಅವಲಂಬಿಸಿವೆ.

ಈ ಕ್ಷೇತ್ರದಲ್ಲಿ ಸಂಶೋಧನೆ, ಉಪಕರಣಗಳ ನಿರ್ವಹಣೆ, ಮಾರಾಟ ಮುಂತಾದ ವಿಷಯಗಳಲ್ಲಿ ಪರಿಣಿತರ ಬೇಡಿಕೆ ಇದೆ. ಬೆಂಗಳೂರಿನ ಅನೇಕ ಕಾಲೇಜುಗಳಲ್ಲಿ ಈ ವಿಷಯ ಓದುವ ಅವಕಾಶವಿದೆ. ವಿವರಗಳನ್ನು  ಸಿಇಟಿ  ಮಾಹಿತಿ ಪುಸ್ತಕ ಅಥವ ಕಾಲೇಜು ವೆಬ್‌ಸೈಟುಗಳ ಮೂಲಕ ಪಡೆದುಕೊಳ್ಳಬಹುದು.

ತುಳಜಾ.ಜೆ,  ಹೊಸಪೇಟೆ
ಪ್ರಶ್ನೆ:
ನಾನು ದ್ವಿತೀಯ ಪಿ.ಯು.ಸಿ., ವಿಜ್ಞಾನ ವಿಭಾಗದಲ್ಲಿ ಒಂದು ವರ್ಷದ ಹಿಂದೆ ಅನುತ್ತೀರ್ಣಳಾಗಿದ್ದೇನೆ. ನನಗೆ ಮುಂದೆ ಓದುವ ಆಸೆ ಇದೆ. ನಾನು ಪಿ.ಯು.ಸಿ.,ಯಲ್ಲಿ ಮುಂದುವರೆಯುವುದು ಒಳ್ಳೆಯದೋ ಅಥವಾ ಬೇರೆ ಯಾವುದಾದರೂ ಕೋರ್ಸುಗಳಿಗೆ ಹೋದರೆ ಒಳ್ಳೆಯದೋ ಎಂಬುದರ ಬಗ್ಗೆ ಮಾಹಿತಿ ನೀಡಿ.

ಉತ್ತರ: ನಿಮಗೆ ಓದುವ ಆಸೆ ಇರುವುದರಿಂದ ಅನುಕೂಲತೆ ಇದ್ದಲ್ಲಿ ಮತ್ತೆ ಪಿ.ಯು.ಸಿ., ಕಟ್ಟಿ ಉತ್ತಮ ಅಂಕ ಗಳಿಸಲು ಪ್ರಯತ್ನಿಸಬಹುದು. ಇದಕ್ಕೆ ದೃಢನಿರ್ಧಾರ, ಶಿಸ್ತುಬದ್ಧ ಓದು ಹಾಗೂ ಹಿಂದೆ ಅನುತ್ತೀರ್ಣವಾಗಲು ಕಾರಣವಾದ ಅಂಶಗಳನ್ನು ಸರಿಪಡಿಸಿಕೊಳ್ಳುವ ಅಗತ್ಯವಿದೆ. ಪಿ.ಯು.ಸಿ., ನಂತರ ಪದವಿ ಹಾಗು ಇತರ ಅನೇಕ ಕೋರ್ಸುಗಳು ಲಭ್ಯ ಇವೆ.
 
ಕಲಿಕೆಯ ಅವಧಿ ಸುದೀರ್ಘ ಎಂದು ನಿಮಗೆ ಅನಿಸಿದರೆ, ಎಸ್.ಎಸ್.ಎಲ್.ಸಿ., ಅಂಕಗಳ ಆಧಾರದ ಮೇಲೆ ಡಿಪ್ಲೊಮಾ ಕೋರ್ಸಿಗೆ ಸೇರಿಕೊಳ್ಳಬಹುದು. ಶೀಘ್ರ ಉದ್ಯೋಗ ಬೇಕಾದಲ್ಲಿ  ವೃತ್ತಿ ಶಿಕ್ಷಣ ತರಬೇತಿ  ಪಡೆಯಬಹುದು. ನಿಮ್ಮ ಅನುಕೂಲ ನೋಡಿಕೊಂಡು ನಿರ್ಧಾರ ಕೈಗೊಳ್ಳಿ.

ಅಶ್ವಿನಿ.ಟಿ. ದಾವಣಗೆರೆ.
ಪ್ರಶ್ನೆ:
ನಾನು ದ್ವಿತೀಯ ಪಿ.ಯು.ಸಿ.,ಯಲ್ಲಿ ಗಳಿಸಿರುವ ಅಂಕಗಳು ಹಾಗೂ ಸಿ.ಇ.ಟಿ., ಕೀ ಉತ್ತರಗಳ ಪ್ರಕಾರ ನನಗೆ ಬರಬಹುದಾದ ಅಂಕಗಳನ್ನು ತಿಳಿಸಿರುತ್ತೇನೆ. ನಾನು ಯಾವ ಕೋರ್ಸಿಗೆ ಸೇರಬಹುದು ತಿಳಿಸಿ.

ಉತ್ತರ: ಪ್ರಾಯಶಃ ಈ ಪತ್ರಕ್ಕೆ ಉತ್ತರ ಪ್ರಕಟವಾಗುವ ವೇಳೆಗೆ ಸಿ.ಇ.ಟಿ., ಫಲಿತಾಂಶ ಹೊರಬಿದ್ದರಬಹುದು ಅಥವಾ ಕೆಲವು ದಿನಗಳಲ್ಲೇ ಬರಬಹುದು. ನನ್ನ ಅನಿಸಿಕೆಯ ಪ್ರಕಾರ ನೀವು ಸಿ.ಇ.ಟಿ.,ಯಲ್ಲಿ ಅರ್ಹತೆ ಗಳಿಸಲು ವಿಫಲರಾದಲ್ಲಿ ಯಾವುದಾದರೂ ಪದವಿ ಕೋರ್ಸನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ.

ಮಲ್ಲಿಕಾರ್ಜುನ, ಗುಡ್ಲನೂರ, ಕೊಪ್ಪಳ
ಪ್ರಶ್ನೆ: 
 ನಾನೀಗ ಬಿ.ಎಸ್‌ಸಿ., ಓದುತ್ತಿದ್ದೇನೆ. ಮುಂದೆ ವಿದೇಶದಿಂದ ಮಾಸ್ಟರ್ ಡಿಗ್ರಿ ಪಡೆದುಕೊಳ್ಳಬೇಕೆಂಬ ಆಸೆಯಿದೆ. ಇದಕ್ಕೆ ಎಷ್ಟು ಅಂಕಗಳಿಸಬೇಕು ಹಾಗೂ ಅಂತಹ ಅವಕಾಶಗಳ ಬಗ್ಗೆ ವಿವರ ನೀಡಿ.

ಉತ್ತರ: ಸಾಮಾನ್ಯವಾಗಿ ವಿದೇಶಗಳಲ್ಲಿ ಓದಲು ಖಾಸಗಿಯಾಗಿ ಹೆಚ್ಚು ಹಣ ಖರ್ಚು ಮಾಡಬೇಕು ಅಥವಾ ಹೊರಗಿನ ವಿ.ವಿ.ಗಳ ಬಗ್ಗೆ ಮಾಹಿತಿ ಪಡೆದುಕೊಂಡು, ಸ್ಕಾಲರ್‌ಶಿಪ್ ಪಡೆಯಲು ಪ್ರಯತ್ನಿಸಬೇಕು.
 
ಖಾಸಗಿಯಾಗಿ ಸ್ವಂತ ಹಣದಿಂದ ವಿದೇಶಕ್ಕೆ ಹೋಗ ಬಯಸುವವರು ವಿವಿಧ ಮೂಲಗಳಿಂದ  ಮಾಹಿತಿ ಪಡೆದುಕೊಳ್ಳಬಹುದು. ವೆಬ್‌ಸೈಟ್‌ಗಳಲ್ಲದೆ ದೊಡ್ಡ ನಗರಗಳಲ್ಲಿ ಆಗಿಂದಾಗ್ಗೆ ಶಿಕ್ಷಣ ಮಾಹಿತಿ ಮೇಳಗಳು ಸಹ ನಡೆಯುತ್ತಿರುತ್ತವೆ. ಇವುಗಳಲ್ಲಿ ಕೆಲವು ನಂಬಿಕೆಗೆ ಅನರ್ಹವಾದವೂ ಇರಬಹುದು.
 
ನನ್ನ ಅನಿಸಿಕೆಯ ಪ್ರಕಾರ ನೀವು ಇಲ್ಲಿಯೇ ಸ್ನಾತಕೋತ್ತರ ಪದವಿ ಪಡೆದು, ಮುಂದೆ ವಿದೇಶಕ್ಕೆ ಹೋಗುವುದು ಒಳ್ಳೆಯದು. ನಿಮ್ಮ ಶಿಕ್ಷಣ ಪೂರೈಸಿದ ನಂತರ ಕಂಪೆನಿಗಳ ಬಗ್ಗೆ ಹಾಗೂ ಅವು ನೀಡುವ ವೇತನದ ಬಗ್ಗೆ ಮಾಹಿತಿ ತಾನಾಗಿ ದೊರಕುತ್ತದೆ.

ಸುಷ್ಮಾ.ಜಿ. ಕೊಡಿಗೆಹಳ್ಳಿ
ಪ್ರಶ್ನೆ: ನಾನು ಸಮಾಜಶಾಸ್ತ್ರದಲ್ಲಿ ಎಂ.ಎ., ಮಾಡುತ್ತಿದ್ದೇನೆ.  ಕೆಸೆಟ್ ಪರೀಕ್ಷೆ ಬರೆಯುತ್ತಿದ್ದೇನೆ, ಕನ್ನಡದಲ್ಲಿ ಇರುವ ಪುಸ್ತಕಗಳ ಬಗ್ಗೆ ಮಾಹಿತಿ ನೀಡಿ. ಹಾಗೆಯೇ ಇಂಗ್ಲಿಷ್‌ನಲ್ಲಿ ನೆಟ್ ಬರೆಯಲು ನಿರ್ಧರಿಸಿದ್ದೇನೆ. ಅದಕ್ಕೆ ಹೇಗೆ ತಯಾರಿ ನಡೆಸಿಕೊಳ್ಳಬೇಕು?

ಉತ್ತರ: ಕೆಸೆಟ್ ಹಾಗೂ ನೆಟ್ ಈ ಪರೀಕ್ಷೆಗಳಿಗೆ ನಿರ್ದಿಷ್ಟವಾಗಿ ಬಳಕೆಯಾಗುವ ಪುಸ್ತಕಗಳು ಮಾರುಕಟ್ಟೆಯಲ್ಲಿ ಕಡಿಮೆ. ಸಾಮಾನ್ಯವಾಗಿ ಈ ಪರೀಕ್ಷೆಯನ್ನು ಕಟ್ಟುವ ವಿದ್ಯಾರ್ಥಿಗಳು ಪಠ್ಯವಿಷಯವನ್ನು ಅನುಸರಿಸಿ ತಾವೇ ಸಾಮಗ್ರಿಯನ್ನು ಸಿದ್ದಪಡಿಸಿಕೊಳ್ಳುತ್ತಾರೆ. ಇದಕ್ಕೆ ಲಭ್ಯವಿರುವ ಇತರ ಆಕರ ಗ್ರಂಥಗಳು ಸಹಾಯವಾಗುತ್ತವೆ, ಇದಲ್ಲದೆ ವಿಷಯ ತಜ್ಞರ ನೆರವನ್ನು ಪಡೆದುಕೊಳ್ಳುತ್ತಾರೆ.
 
ಆದ್ದರಿಂದ ನೀವು ಇಂಗ್ಲಿಷ್‌ನಲ್ಲಿ ಲಭ್ಯವಿರುವ ಮಾರುಕಟ್ಟೆ ಪುಸ್ತಕಗಳು ಹಾಗೂ ಆಕರ ಪುಸ್ತಕಗಳನ್ನು ಸಂಗ್ರಹಿಸಿ ಅದರಿಂದ ನಿಮ್ಮದೇ ಆದ ಟಿಪ್ಪಣಿಯನ್ನು ಕನ್ನಡದಲ್ಲಿ ಸಿದ್ದಪಡಿಸಿಕೊಳ್ಳುವುದು ಒಳ್ಳೆಯದು. ಈಗಾಗಲೇ ಈ ಪರೀಕ್ಷೆ ಬರೆದು ಉತ್ತೀರ್ಣರಾದವರು ನಿಮಗೆ ನೆರವಾಗಬಲ್ಲರು.

ಶಾರದ. ಎಸ್. ಗದಗ
ಪ್ರಶ್ನೆ: ಪಿ.ಯು.ಸಿ., ವಾಣಿಜ್ಯ ವಿಭಾಗದಲ್ಲಿ ಓದುತ್ತಿರುವ ನನಗೆ ರಾಜ್ಯಕ್ಕೆ ಪ್ರಥಮ ಬರುವ ಆಸೆ ಇದೆ. ಅದಕ್ಕಾಗಿ ಹೇಗೆ ತಯಾರಿ ನಡೆಸಬೇಕು? ಮುಂದೆ ಸಿ.ಎ., ಮಾಡಲು ಏನು ಮಾಡಬೇಕು?

ಉತ್ತರ: ಪಿ.ಯು.ಸಿ.,ಯಲ್ಲಿ ಉತ್ತಮ ಅಂಕ ಗಳಿಸಲು ಈಗಿನಿಂದಲೇ ತಯಾರಿ ನಡೆಸಬೇಕು. ಅಂದಿನ ಪಾಠಗಳನ್ನು ಅಂದಂದೇ ಅಧ್ಯಯನ ಮಾಡುತ್ತಾ ಹೋಗಬೇಕು. ಓದಿದ ವಿಷಯವನ್ನು ಮತ್ತೆ ಮತ್ತೆ ಮನನ ಮಾಡಿ ಬರವಣಿಗೆಗೆ ಹೆಚ್ಚಿನ ಮಹತ್ವ ನೀಡಬೇಕು. ವಾಣಿಜ್ಯ ವಿಷಯದ ಸಮಸ್ಯೆಗಳನ್ನು ಸರಿಯಾಗಿ ಬಿಡಿಸುವ ಸಾಮರ್ಥ್ಯ ಬೆಳಸಿಕೊಳ್ಳಬೇಕು.
 
ಆದಷ್ಟು ಹೆಚ್ಚು ಪ್ರಶ್ನೆಗಳ ಭಂಡಾರವನ್ನು ಸಂಗ್ರಹಿಸಿ ಉತ್ತರಿಸಬೇಕು. ಸಿ.ಎ., ಪರೀಕ್ಷೆಯನ್ನು ಪಿ.ಯು.ಸಿ., ಅಥವಾ ಪದವಿಯ ನಂತರ ತೆಗೆದುಕೊಳ್ಳಬಹುದು. ಹಿರಿಯ ವೃತ್ತಿಪರರ ಬಳಿ ಮೂರು ವರ್ಷ ಅನುಭವ ಗಳಿಸಿಕೊಳ್ಳಬೇಕು ಹಾಗೂ ಎಲ್ಲಾ ವಿಷಯಗಳನ್ನು ಪರೀಕ್ಷೆಯಲ್ಲಿ ಮುಗಿಸಿಕೊಳ್ಳಬೇಕು.

ವಿದ್ಯಾಶ್ರೀ, ಕೊಪ್ಪಳ
ಪ್ರಶ್ನೆ: ನಾನು ದ್ವಿತೀಯ ಪಿ.ಯು.ಸಿ.ಯಲ್ಲಿ  ವಿಜ್ಞಾನ ವಿಷಯದಲ್ಲಿ ಶೇಕಡ 58 ಅಂಕ ಗಳಿಸಿದ್ದೇನೆ. ನನಗೆ ಬಿ.ಎಸ್ಸಿ, ಕಲಿಯುವ ಆಸೆ. ಮನೆಯಲ್ಲಿ ಅಗ್ರಿಕಲ್ಚರ್ ಮಾಡಲು ಹೇಳುತ್ತಿದ್ದಾರೆ. ಯಾವುದು ಒಳ್ಳೆಯದು? ಎಂ.ಎಸ್ಸಿ, ಮಾಡಿ ಎಂ.ಇಡಿ, ಪಿ.ಎಚ್.ಡಿ, ಮಾಡಬಹುದೇ? ಅಥವಾ ಎಂ.ಎಸ್ಸಿ, ಮಾಡಿ ಪಿ.ಎಚ್.ಡಿ ಮಾಡಬಹುದೇ?

ಉತ್ತರ: ಬಿ.ಎಸ್ಸಿ. ಆಗಲಿ ಅಥವಾ ಬಿ.ಎಸ್ಸಿ.ಎ.ಜಿ. ಆಗಲಿ ಎಲ್ಲಾ ಕೋರ್ಸುಗಳು ಒಳ್ಳೆಯದೇ ಆಗಿವೆ. ಯಾವುದನ್ನು ಮಾಡಿದರೂ ವೃತ್ತಿಜೀವನದಲ್ಲಿ ಮುಂದುವರಿಯಲು ಧಾರಾಳವಾದ ಅವಕಾಶಗಳಿವೆ.

ಆದ್ದರಿಂದ ನಿಮಗೆ ಇಷ್ಟವಾದ ಕೋರ್ಸನ್ನು ಆರಿಸಿಕೊಂಡು ಅದಕ್ಕೆ ಸೇರಿಕೊಳ್ಳಿ. ಈ ಎರಡು ವಿಷಯಗಳಲ್ಲಿ ಪದವಿಯ ನಂತರ ಎಂ.ಎಸ್ಸಿ. ಕಲಿಯಬಹುದು. ಆ ನಂತರ ಎಂ.ಫಿಲ್. ಮಾಡಬಹುದು ಅಥವಾ ನೇರವಾಗಿ ಪಿ.ಎಚ್.ಡಿ ಕೂಡ ಮಾಡಬಹುದು.

ಶಿಕ್ಷಕರ ತರಬೇತಿಯಾದ ಬಿ.ಎಡ್. ಮಾಡಿದರೆ ಮಾತ್ರ  ಎಂ.ಎಡ್.ಗೆ ಹೋಗುವುದು ಸಾಧ್ಯ. ನೀವು ಕಲಿಯಬಯಸುವ ಯಾವುದೇ ವಿಭಾಗವು ತೀರ ಸುಲಭವೂ ಅಲ್ಲ ಅಥವಾ ಕಠಿಣವೂ ಅಲ್ಲ. ನೀವು ಶ್ರದ್ಧೆಯಿಂದ ಅಭ್ಯಾಸ ಮಾಡಿ ಮುಂದುವರೆಯಿರಿ.

ಸುರೇಶ, ಮಾನವಿ,  ರಾಯಚೂರು
ಪ್ರಶ್ನೆ: ನಾನು ಈಗ ಗುಲ್ಬರ್ಗ ವಿ.ವಿ.ಯಲ್ಲಿ ಬಿ.ಎ., ಎರಡನೆ ಸೆಮಿಸ್ಟರ್ ಓದುತ್ತಿದ್ದೇನೆ. ನಾನು ಆರಿಸಿಕೊಂಡಿರುವ ವಿಷಯಗಳು ಇತಿಹಾಸ, ರಾಜ್ಯಶಾಸ್ತ್ರ ಹಾಗು ಕಂಪ್ಯೂಟರ್ ಅಪ್ಲಿಕೇಶನ್. ಪದವಿ ನಂತರ ಮುಂದಿನ ಉದ್ಯೋಗ ಮಾರ್ಗವೇನು? ಕಂಪ್ಯೂಟರ್ ಅಪ್ಲಿಕೇಶನ್ ವಿಷಯದ ಮೇಲೆ ನನಗಿರುವ ಅವಕಾಶಗಳನ್ನು ತಿಳಿಸಿ.

ಉತ್ತರ: ನೀವು ಆರಿಸಿಕೊಂಡಿರುವುದು ಸ್ವಲ್ಪ ಅಪರೂಪವಾದ ಕಾಂಬಿನೇಷನ್. ಈ ವಿಷಯಗಳನ್ನು ವಿ.ವಿ.ಯಲ್ಲಿ ಅಳವಡಿಸಿಕೊಂಡಿರುವುದರಿಂದ, ಅದರಲ್ಲಿ ಯಾವುದಾದರೂ ಒಂದು ವಿಷಯಲ್ಲಿ ಸ್ನಾತಕೋತ್ತರ ಪದವಿಗೆ ಅವಕಾಶ ಇರಲೇಬೇಕು. ಅಥವಾ ಬಿ.ಎ., ಮುಗಿಸಿದ ನಂತರ ಇತರ ಕೋರ್ಸುಗಳಿಗೆ ಅಥವಾ ಉದ್ಯೋಗಕ್ಕೆ ಪ್ರಯತ್ನಿಸಬಹುದು.

ಇತ್ತೀಚೆಗೆ ಕಂಪ್ಯೂಟರ್ ಅಪ್ಲಿಕೇಶನ್ ಹೆಚ್ಚಿನ ಚಾಲನೆ ಪಡೆದುಕೊಳ್ಳುತ್ತಿದೆ. ನಿಮ್ಮ ಪರಿಣತಿ ಆಧಾರದ ಮೇಲೆ ಉದ್ಯೋಗ ಗಳಿಸಿಕೊಳ್ಳಬಹುದು. ಇತ್ತೀಚೆಗೆ ಮಾನವಿಕ ವಿಷಯಗಳಲ್ಲೂ ಕಂಪ್ಯೂಟರ್ ಬಳಕೆ ಹೆಚ್ಚುತ್ತಿರುವುದರಿಂದ ಅಂತಹ ವಿಶೇಷ ಉದ್ಯೋಗಗಳಲ್ಲಿ ನಿಮಗೆ ಅವಕಾಶವಿದೆ ಎಂದು ಭಾವಿಸುತ್ತೇನೆ.

ಪ್ರಶ್ನೆ ಕಳಿಸಬೇಕಾದ ವಿಳಾಸ: ಸಂಪಾದಕರು, ಶಿಕ್ಷಣ ವಿಭಾಗ, ಪ್ರಜಾವಾಣಿ, 75 ಎಂಜಿ ರಸ್ತೆ,ಬೆಂಗಳೂರು 560001
ಪ್ರಶ್ನೆಗಳನ್ನು ಇಮೇಲ್‌ನಲ್ಲೂ ಕಳಿಸಬಹುದು:shikshanapv@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT