ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೆ -ಉತ್ತರ

Last Updated 9 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಯತೀಶ್‌ಗೌಡ
ನಾನು ಬಿ.ಕಾಂ.ನಲ್ಲಿ ಕೆಲವು ವಿಷಯಗಳಲ್ಲಿ ಅನುತ್ತೀರ್ಣನಾಗಿದ್ದು, ಮುಂದಿನ ಡಿಸೆಂಬರ್‌ನಲ್ಲಿ ಮುಗಿಸಿಕೊಳ್ಳುತ್ತೇನೆ. ನಂತರ ಮುಂದೆ ಎಂ.ಬಿ.ಎ. ಮಾಡಬೇಕೆಂದಿದ್ದೇನೆ. ಇದಕ್ಕೆ ಉಪಯುಕ್ತ ಮಾಹಿತಿ ನೀಡಿ
.
ನೀವು ಈಗ ಉಳಿಸಿಕೊಂಡಿರುವ ಬಿ.ಕಾಂ. ವಿಷಯಗಳನ್ನು ಚೆನ್ನಾಗಿ ಅಭ್ಯಾಸ ಮಾಡಿ ಅವುಗಳಲ್ಲಿ ತೇರ್ಗಡೆಯಾಗಿ.
 

ಮುಂದೆ ಎಂ.ಬಿ.ಎ. ಮಾಡುವ ಯೋಚನೆ ಇದ್ದರೆ ಉಳಿದ ಸಮಯದಲ್ಲಿ ಎಂ.ಬಿ.ಎ.ಗೆ ಸಂಬಂಧಪಟ್ಟ ಪುಸ್ತಕಗಳನ್ನು ಓದಲು ಪ್ರಾರಂಭಿಸಿ. ಬಿಡುವಿನ ವೇಳೆಯಲ್ಲಿ ಕಂಪ್ಯೂಟರ್ ತರಬೇತಿಯನ್ನು ಪಡೆಯಿರಿ.

ಮಾಧುರಿ
ನಾನು ಮಾಹಿತಿ ವಿಜ್ಞಾನ ವಿಷಯದಲ್ಲಿ ಬಿ.ಇ. ಮುಗಿಸಿದ್ದು, ಮೂರು ವಿಷಯಗಳಲ್ಲಿ ತೇರ್ಗಡೆಯಾಗಿಲ್ಲ. ಆದ್ದರಿಂದ ನನಗೆ ಕೆಲಸ ಸಿಗುವುದೇ? ದಯಮಾಡಿ ಸಲಹೆ ಕೊಡಿ.

ನೀವು ಈಗ ಅನುತ್ತೀರ್ಣರಾಗಿರುವ ವಿಷಯಗಳಲ್ಲಿ ಉತ್ತೀರ್ಣರಾಗಲು ಪ್ರಯತ್ನಿಸಿ. ಶ್ರದ್ಧೆ ಮತ್ತು ಕಠಿಣ ಪರಿಶ್ರಮದಿಂದ ಅತ್ಯಂತ ಹೆಚ್ಚು ಅಂಕಗಳನ್ನು ಪಡೆದು ಹೊರಬನ್ನಿ.

ಉದ್ಯೋಗಾವಕಾಶಗಳು ಖಾಸಗಿ ಕ್ಷೇತ್ರದಲ್ಲಿ ವಿಪುಲವಾಗಿವೆ. ಆದ್ದರಿಂದ ಸರ್ಕಾರಿ ಕೆಲಸದ ಬಗ್ಗೆ ನೀವು ಯೊಚಿಸಬೇಕಾಗಿಲ್ಲ. ಖಾಸಗಿ ಕ್ಷೇತ್ರದಲ್ಲಿ ನೀವು ಗಳಿಸಿರುವ ಅಂಕಗಳಿಗಿಂತ, ನಿಮ್ಮ ತಾಂತ್ರಿಕ ಕೌಶಲಕ್ಕೆ ಹೆಚ್ಚು ಬೆಲೆ ಇರುತ್ತದೆ.

ದಿನೇಶ್ ಪಿ.ಕೆ
ನಾನು ಮಾರ್ಕೆಟಿಂಗ್ ವಿಷಯದಲ್ಲಿ ಎಂ.ಬಿ.ಎ ಮಾಡಿಕೊಂಡಿದ್ದೇನೆ. 10 ವರ್ಷಗಳ ಪರಿಶ್ರಮದ ಉತ್ತಮ ಅನುಭವವೂ ಇದೆ. ನನಗೆ ಈಗ 40 ವರ್ಷ. ಬಿ.ಎಸ್ಸಿ. ನಂತರ ಎಂ.ಬಿ.ಎ. ಮಾಡಿಕೊಂಡೆ.

ಈಗ ನಾನು ಶಿಕ್ಷಣ ಕ್ಷೇತ್ರಕ್ಕೆ ಬರಬೇಕೆಂದಿದ್ದೇನೆ. ಇದು ನನಗೆ ಸಾಧ್ಯವೇ? ಸರ್ಕಾರಿ ಕಾಲೇಜುಗಳಲ್ಲಿ ಅವಕಾಶ ಸಿಗಬಹುದೇ? ಹಾಗಿದ್ದಲ್ಲಿ ಯಾವ ಕಾಲೇಜುಗಳಲ್ಲಿ ಅವಕಾಶ ಸಿಗಬಹುದು? ದಯಮಾಡಿ ಮಾರ್ಗದರ್ಶನ ನೀಡಿ.

ಹತ್ತು ವರ್ಷ ಮಾರ್ಕೆಟಿಂಗ್‌ನಲ್ಲಿ ಕೆಲಸ ಮಾಡಿದ ನಂತರ ಶಿಕ್ಷಣ ಕ್ಷೇತ್ರದಲ್ಲಿ ನಿಮಗೆ ಆಸಕ್ತಿ ಮೂಡಿರುವುದು ಆಶ್ಚರ್ಯವೇ ಸರಿ.

ಹೀಗೆ ಬೇರೆ ಬೇರೆ ಕ್ಷೇತ್ರದಲ್ಲಿ, ವಿವಿಧೆಡೆಗಳಲ್ಲಿ ಕೆಲಸ ಮಾಡಿ ಅನುಭವ ಇರುವವರು ಶಿಕ್ಷಣ ಕ್ಷೇತ್ರಕ್ಕೆ ಬರುವುದು ಒಳ್ಳೆಯ ವಿಚಾರವೇ.

ವಯಸ್ಸಿನ ಕಾರಣದಿಂದ ಸರ್ಕಾರಿ ಉದ್ಯೋಗ ಸಿಗುವುದು ದುರ್ಲಭ. ಬಿ.ಬಿ.ಎಮ್/ಬಿ.ಕಾಂ ಮೊದಲಾದ ವಾಣಿಜ್ಯ ಕೋರ್ಸುಗಳನ್ನು ನೀಡುವ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಉದ್ಯೋಗಕ್ಕೆ ಪ್ರಯತ್ನಿಸಬಹುದು.

ಅದಿತಿ ರಾವ್
ನಾನು ದ್ವಿತೀಯ ಪಿ.ಯು.ಸಿ. (ಪಿ.ಸಿ.ಎಂ.ಬಿ.) ಮಾಡುತ್ತಿದ್ದೇನೆ. ಮುಂದೆ ಎಂಜಿನಿಯರಿಂಗ್ ಮಾಡಬೇಕೆಂದುಕೊಂಡಿದ್ದೇನೆ. ಯಾವ ಕೋರ್ಸ್ ಅನ್ನು ಆಯ್ದುಕೊಳ್ಳಲಿ? ಯಾವುದಕ್ಕೆ ಉದ್ಯೋಗಾವಕಾಶಗಳು ಹೆಚ್ಚು? ದಯಮಾಡಿ ಮಾಹಿತಿ ನೀಡಿ.

ಮುಂದೆ ಒಳ್ಳೆಯ ಕಾಲೇಜಿನಲ್ಲಿ ಮತ್ತು ನಿಮ್ಮ ಆಯ್ಕೆಯ ವಿಷಯದಲ್ಲಿ ಬಿ.ಇ. ಮಾಡಲು ನೀವು ಸಿ.ಇ.ಟಿ. ಪರೀಕ್ಷೆಯಲ್ಲಿ 500ಕ್ಕಿಂತ ಉತ್ತಮ ರ‌್ಯಾಂಕ್ ಪಡೆಯಬೇಕು. ಇದಕ್ಕೆ ಈಗಿನಿಂದಲೇ ಬೋರ್ಡ್ ಪರೀಕ್ಷೆಯ ಜೊತೆ ಜೊತೆಗೆ ಸಿ.ಇ.ಟಿ. ಪರೀಕ್ಷೆಯ ಸಿದ್ಧತೆಯನ್ನೂ ಪ್ರಾರಂಭಿಸಿ.

ಈ ಎರಡೂ ಪರೀಕ್ಷೆಗಳ ಸರಾಸರಿ ಅಂಕಗಳು ನಿಮ್ಮ ರ‌್ಯಾಂಕ್ ಅನ್ನು ನಿರ್ಧರಿಸುತ್ತವೆ. ಬಿ.ಇ.ಯ ಎಲ್ಲ ವಿಷಯಗಳಲ್ಲೂ ಉದ್ಯೋಗಾವಕಾಶಗಳು ಇವೆ.

ಆದರೆ ಇದಕ್ಕೆ ನೀವು ಬಿ.ಇ.ಯನ್ನು ಅತ್ಯುತ್ತಮ ಜ್ಞಾನ ಮತ್ತು ಅಂಕಗಳೊಂದಿಗೆ ಮುಗಿಸಬೇಕು. ಹೀಗಾಗಲು ನೀವು ನಿಮಗೆ ಇಷ್ಟವಾದ ವಿಚಾರವನ್ನೇ ಅಧ್ಯಯನಕ್ಕೆ ಆರಿಸಿಕೊಳ್ಳಬೇಕು.

ನವೀನ್ ಪಿ.
ನಾನು ಪ್ರಥಮ ಪಿ.ಯು. ಓದುತ್ತಿದ್ದೇನೆ. ನನ್ನ ಕಾಲೇಜಿಗೂ ಮನೆಗೂ ತುಂಬಾ ದೂರ ಇದೆ. ಓದಲು ಸಮಯಾವಕಾಶವೇ ಸಿಗುತ್ತಿಲ್ಲ.

ನನಗೆ ಭರವಸೆಯೇ ಹೊರಟು ಹೋಗಿಬಿಟ್ಟಿದೆ. ನಾನು ವಿಜ್ಞಾನ ವಿಷಯಗಳನ್ನು ತೆಗೆದುಕೊಂಡಿದ್ದೇನೆ. ಆದರೆ ಅದು ನನಗೆ ಕಷ್ಟವೆನಿಸುತ್ತಿದೆ. ನಾನು ದ್ವಿತೀಯ ಪಿ.ಯು.ಸಿಯಲ್ಲಿ ವಿಷಯ ಬದಲಾಯಿಸಿಕೊಳ್ಳಬಹುದೇ? ದಯಮಾಡಿ ಮಾರ್ಗದರ್ಶನ ನೀಡಿ
.
ನೀವು ವಿಜ್ಞಾನವನ್ನು ಇಷ್ಟಪಟ್ಟು ಆರಿಸಿಕೊಂಡಿದ್ದರೆ ಈಗ ಬದಲಾಯಿಸುವ ಅಗತ್ಯವಿಲ್ಲ. ಕಾಲೇಜು ದೂರದಲ್ಲಿದ್ದರೆ, ಕಾಲೇಜಿಗೆ ಹೋಗುವಾಗ ಮತ್ತು ಬರುವಾಗಲೂ ಓದಿರುವ ಮತ್ತು ಕಾಲೇಜಿನಲ್ಲಿ ಕಲಿತ ವಿಚಾರಗಳ ಬಗ್ಗೆ ಮೆಲುಕು ಹಾಕುತ್ತಾ ಸಮಯವನ್ನು ಸದುಪಯೋಗಪಡಿಸಿಕೊಳ್ಳಬಹುದು.

ಬಸ್ಸಿನಲ್ಲಿ ಕುಳಿತಾಗಲೂ ಅಧ್ಯಯನ ಮಾಡುವ ಅನೇಕ ವಿದ್ಯಾರ್ಥಿಗಳನ್ನು ನಾನು ನೋಡಿದ್ದೇನೆ. ಕಠಿಣ ಪರಿಶ್ರಮ, ಯೋಜನೆ ಮತ್ತು ಶ್ರದ್ಧೆಯಿಂದ ಓದಿ ನೀವು ಆತ್ಮವಿಶ್ವಾಸವನ್ನು ಪುನಃ ಗಳಿಸಿಕೊಳ್ಳಬಹುದು.

ಒಂದು ವೇಳೆ ವಿಜ್ಞಾನದ ವಿಷಯಗಳಲ್ಲಿ ನಿಮಗೆ ಆಸಕ್ತಿ ಇಲ್ಲದಿದ್ದರೆ ಮುಂದಿನ ವರ್ಷವೇ ಪ್ರಥಮ ಪಿ.ಯು.ಸಿ. ಕಾಮರ್ಸ್‌ಗೆ ಸೇರಿಕೊಳ್ಳುವುದು ಒಳ್ಳೆಯದು.

ಅರುಂಧತಿ, ಬೀದರ್
ನನಗೆ ಈಗ 32 ವರ್ಷ. ನಾನು ಎಂ.ಎ. ಎಕನಾಮಿಕ್ಸ್ ಮಾಡಬಯಸಿದ್ದೇನೆ. ನೇರವಾಗಿ (ರೆಗ್ಯುಲರ್) ಮಾಡುವ ಮತ್ತು ದೂರಶಿಕ್ಷಣದಲ್ಲಿ ಮಾಡುವ ಎಂ.ಎ.ಗೂ ಇರುವ ವ್ಯತ್ಯಾಸವೇನು? ದೂರಶಿಕ್ಷಣದಲ್ಲಿ ಮಾಡಿದರೆ ಪಿಹೆಚ್.ಡಿ. ಮಾಡಬಹುದೇ? ಎಂ.ಎ. ಮಾಡಲು ಯಾವ ವಿಷಯ ಸೂಕ್ತ (ಪೊಲಿಟಿಕಲ್ ಸೈನ್ಸ್, ಹಿಸ್ಟರಿ, ಎಕನಾಮಿಕ್ಸ್)? ದಯಮಾಡಿ ಸಲಹೆ ಕೊಡಿ.

ನೀವು ಬಿ.ಎ. ಮಾಡುವಾಗ ಐಚ್ಛಿಕ ವಿಷಯವಾಗಿ ಅರ್ಥಶಾಸ್ತ್ರವನ್ನು ಆರಿಸಿಕೊಂಡಿದ್ದರೆ ಮತ್ತು ಹೆಚ್ಚು ಅಂಕ ಗಳಿಸಿದ್ದರೆ ಮಾತ್ರ ರೆಗ್ಯುಲರ್ ಶಿಕ್ಷಣದ ಮೂಲಕ ಎಂ.ಎ. ಮಾಡಬಹುದು.

ಹಾಗಿಲ್ಲದಿದ್ದರೆ ದೂರಶಿಕ್ಷಣದ ಮೂಲಕವೇ ಎಂ.ಎ. ಮಾಡಬೇಕಾಗುತ್ತದೆ. ಯಾವ ಶಿಕ್ಷಣದ ಮೂಲಕ ಎಂ.ಎ. ಮಾಡಿದರೂ ಪಿ ಎಚ್.ಡಿ. ಮಾಡಲು ಸಾಧ್ಯ. ಆದರೆ ಇದಕ್ಕೆ ಆಯಾ ವಿಶ್ವವಿದ್ಯಾಲಯದವರು ನಡೆಸುವ ಆಯ್ಕೆ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕಾಗುತ್ತದೆ.

ಎಂ.ಎ. ಯಾವ ವಿಷಯದಲ್ಲಿ ಮಾಡಬೇಕೆಂಬುದು ನಿಮ್ಮ ಇಷ್ಟವನ್ನೇ ಆಧರಿಸಿದೆ. ಅಭ್ಯಾಸದ ದೃಷ್ಟಿಯಿಂದ ಹೇಳುವುದಾದರೆ ಅರ್ಥಶಾಸ್ತ್ರಕ್ಕಿಂತ ಇತಿಹಾಸ ಮತ್ತು ರಾಜನೀತಿಶಾಸ್ತ್ರ ಸುಲಭ.

ಸೌಮ್ಯ, ಕೊಡಗು
ನಾನು ಬಿ.ಎಸ್ಸಿ. ಪದವಿ ಪಡೆದಿದ್ದೇನೆ. ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿರುವುದರಿಂದ ನಾನು ನನ್ನ ಸಂವಹನ ಕೌಶಲವನ್ನು ಹೇಗೆ ಹೆಚ್ಚಿಸಿಕೊಳ್ಳಲಿ. ನಾನು ಎಂ.ಎಸ್ಸಿ. ಭೌತಶಾಸ್ತ್ರ ಮಾಡಬಹುದೇ? ಇದು ನನಗೆ ಸುಲಭವೇ? ದಯಮಾಡಿ ಸಲಹೆ ಕೊಡಿ.

ಕನ್ನಡ ಮಾಧ್ಯಮದಲ್ಲಿ ಓದಿರುವೆನೆಂಬ ಕೀಳರಿಮೆ ಬೇಡ. ಮಾತೃಭಾಷೆಯಲ್ಲಿ ಅಧ್ಯಯನ ಮಾಡಿರುವುದರಿಂದ ನಿಮಗೆ ಎಲ್ಲ ವಿಷಯಗಳೂ ಚೆನ್ನಾಗಿ ಮನದಟ್ಟಾಗಿರುತ್ತದೆ.

ಭೌತಶಾಸ್ತ್ರದಲ್ಲಿ ಎಂ.ಎಸ್ಸಿ. ಮಾಡಲು ನೀವು ಬಿ.ಎಸ್ಸಿ.ಯಲ್ಲಿ ಭೌತಶಾಸ್ತ್ರದಲ್ಲಿ ಹೆಚ್ಚು ಅಂಕಗಳನ್ನು ತೆಗೆದಿರಬೇಕು. ಅದಿಲ್ಲದಿದ್ದರೆ, ಕುವೆಂಪು ವಿಶ್ವವಿದ್ಯಾಲಯದ ದೂರಶಿಕ್ಷಣದ ಮೂಲಕ ಎಂ.ಎಸ್ಸಿ. ಮಾಡಬಹುದು.

ಈ ಮಧ್ಯೆ ನಿಮ್ಮ ಸಂವಹನ ಸಾಮರ್ಥ್ಯವನ್ನು (ಕಮ್ಯುನಿಕೇಷನ್ ಸ್ಕಿಲ್) ಹೆಚ್ಚಿಸಿಕೊಳ್ಳಲು ಪ್ರಯತ್ನಮಾಡಿ.

ಇಂಗ್ಲಿಷ್ ವೃತ್ತಪತ್ರಿಕೆಗಳನ್ನು, ಕಾದಂಬರಿಗಳನ್ನು ಓದಿ. ಟಿ.ವಿ. ಚಾನೆಲ್‌ಗಳಲ್ಲಿ ಬರುವ ಇಂಗ್ಲಿಷ್ ಚರ್ಚೆಗಳನ್ನು ಕೇಳಿ. ನಿಮ್ಮ ಸ್ನೇಹಿತರೊಂದಿಗೆ ಇಂಗ್ಲಿಷ್‌ನಲ್ಲೆ ಮಾತನಾಡಿ.

ಪ್ರವೀಣ್ ಆರ್.ಪಾಲನಕರ್
2007-08ರಲ್ಲಿ ಬಿ.ಬಿ.ಎಮ್.ಗೆ ಪ್ರವೇಶ ಪಡೆದೆ. ನಂತರ 3,  4ನೇ ಸೆಮಿಸ್ಟರ್‌ಗಳಲ್ಲಿ ಕೆಲವು ವಿಷಯಗಳಲ್ಲಿ ತೇರ್ಗಡೆ ಹೊಂದದೇ ಇರುವುದರಿಂದ 6ನೇ ಸೆಮಿಸ್ಟರ್ ಫಲಿತಾಂಶ ಪ್ರಕಟವಾಗಿಲ್ಲ.

ಈ ಪರಿಸ್ಥಿತಿಯಲ್ಲಿ ಏನೂ ಮಾಡಲು ತೋಚುತ್ತಿಲ್ಲ. ಬೇರೆ ಯಾವುದಾದರೂ ಕೋರ್ಸ್ ಮಾಡಬಹುದೇ? ನನಗೆ ಈಗ 23 ವರ್ಷ; ಕೆಲಸಕ್ಕೆ ಅರ್ಜಿ ಹಾಕಬೇಕಾದರೆ ಏನಾದರೂ ಅಡ್ಡಿ ಬರುತ್ತದಯೇ? ತಿಳಿಸಿಕೊಡಿ.

ನೀವು ಆರಿಸಿಕೊಂಡಿರುವ ಬಿ.ಬಿ.ಎಂ. ಉತ್ತಮವಾದದ್ದೇ ಆಗಿದೆ. ನೀವು ನಿಮ್ಮ ಆಸಕ್ತಿಯ ಆಧಾರದ ಮೇಲೆ ಈ ಕೋರ್ಸ್ ಅನ್ನು ಆಯ್ಕೆ ಮಾಡಿಕೊಂಡಿದ್ದರೆ, ಉತ್ತಮವಾಗಿ ಅಧ್ಯಯನ ಮಾಡಿ ಎಲ್ಲ ವಿಚಾರಗಳಲ್ಲೂ ಉತ್ತೀರ್ಣರಾಗಬೇಕಾಗಿತ್ತು.

ನಿಮ್ಮ ಅಸಫಲತೆಯ ಕಾರಣವನ್ನು ನೀವೇ ವಿಶ್ಲೇಷಿಸಿ ಬಗೆಹರಿಸಿಕೊಳ್ಳಬೇಕು. ಈಗಲೂ ಕಠಿಣ ಪರಿಶ್ರಮ ಮತ್ತು ಶ್ರದ್ಧೆಯಿಂದ ಅಧ್ಯಯನ ಮಾಡಿದರೆ ನೀವು ಈಗಿರುವ ಸಂಕಷ್ಟದಿಂದ ಬಿಡಿಸಿಕೊಳ್ಳಬಹುದು.

ಬಿ.ಬಿ.ಎಂ. ಮುಗಿಸಿಯೇ ಕೆಲಸದ ಯೋಚನೆ ಮಾಡುವುದು ಒಳ್ಳೆಯದು. ಈಗ ಸರ್ಕಾರಿ ಕೆಲಸಗಳಿಗಿಂತ ಖಾಸಗಿ ಕೆಲಸಗಳೇ ಹೆಚ್ಚಿರುವುದರಿಂದ ನೀವು ವಯೋಮಿತಿಯ ಬಗ್ಗೆ ಚಿಂತಿತರಾಗಬೇಕಿಲ್ಲ.

ಶೀಲಾ. ರಾಯಚೂರು.
ನಾನು ಕೆಲಸ ಮಾಡುವುದರ ಜೊತೆಗೆ ಬಿ.ಎ. ಶೇ. 75 ಅಂಕ ಗಳಿಸಿ ಪಾಸ್ ಮಾಡಿದ್ದೇನೆ. ನಮ್ಮದು ತುಂಬಾ ಬಡ ಕುಟುಂಬ ಮತ್ತು ನನ್ನ ತಂದೆ ಅನಾರೋಗ್ಯದಿಂದ ಬಳಲುತ್ತಿದ್ದಾರೆ.

ನಾನು ಹಿರಿಯ ಮಗಳಾಗಿರುವುದರಿಂದ ನಮ್ಮ ಕುಟುಂಬದ ಜವಾಬ್ದಾರಿ ಶೇ.80ರಷ್ಟು ನನ್ನ ಮೇಲಿರುವುದರಿಂದ ನಾನು ಸಂಸ್ಥೆಯೊಂದರಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ತುಂಬಾ ದಿನಗಳಿಂದ ಕೆಲಸ ಮಾಡುತ್ತಿದ್ದೇನೆ.

ನನಗೆ ಮುಂದೆ ಇನ್ನೂ ಓದಬೇಕು ಅನ್ನುವ ಆಸೆ ಇದೆ. ಆದರೆ ಬಿ.ಇಡಿ., ಪಿ.ಜಿಯಂತಹ ಕೋರ್ಸುಗಳನ್ನು ಮಾಡುವಷ್ಟು ಹಣ ನನ್ನಿಂದ ಹೊಂದಿಸಲಿಕ್ಕಾಗದು. ಅದೂ ಅಲ್ಲದೇ ಕೆಲಸ ಬಿಟ್ಟು ಓದುವಂತಹ ಪರಿಸ್ಥಿತಿಯಲ್ಲೂ ನಾನು ಇಲ್ಲ.

ಜೊತೆಗೆ ಕೆ.ಎ.ಎಸ್. ಮತ್ತು ಐ.ಎ.ಎಸ್ ಪರಿಕ್ಷೆಗಳಲ್ಲಿ ತುಂಬಾ ಆಸಕ್ತಿಯನ್ನು ಹೊಂದಿದ್ದೇನೆ. ನಾನು ಕನ್ನಡ ಮಾಧ್ಯಮ ವಿದ್ಯಾರ್ಥಿ ಆಗಿದ್ದು, ಡಿಗ್ರಿಯಲ್ಲಿ ನಾನು ತೆಗೆದುಕೊಂಡ ವಿಷಯಗಳು ಇತಿಹಾಸ, ಕನ್ನಡ ಮತ್ತು ಶಿಕ್ಷಣ ಆಗಿರುತ್ತವೆ. ಇದರಿಂದ ನಾನು ಐ.ಎ.ಎಸ್ ಪರಿಕ್ಷೆ ಬರೆಯಲು ಅರ್ಹಳಿದ್ದೇನೆಯೇ? ದಯವಿಟ್ಟು ನನಗೆ ತಿಳಿಸಿ.

ಜೊತೆಗೆ ಇಂತಹ ಪರಿಸ್ಥಿತಿಯಲ್ಲಿ ನಾನು ಏನು ಮಾಡುವುದು ಒಳ್ಳೆಯದೆಂದು ನೀವೇ ಸಲಹೆ ನೀಡಬೇಕು. ದಯವಿಟ್ಟು ನಾನು ತುಂಬಾ ಗೊಂದಲದಲ್ಲಿದ್ದೇನೆ ಮುಂದಿನ ನನ್ನ ನಿರ್ಧಾರದ ಬಗ್ಗೆ ನಿಮ್ಮ ಸಲಹೆಗಾಗಿ ಕಾಯುತ್ತಿರುತ್ತೇನೆ.


 ನಿಮ್ಮೆಲ್ಲ ಕೌಟುಂಬಿಕ ಸಮಸ್ಯೆಗಳ ಮಧ್ಯದಲ್ಲೂ ನೀವು ಅತೀ ಹೆಚ್ಚು ಅಂಕಗಳೊಂದಿಗೆ ಬಿ.ಎ. ಮುಗಿಸಿರುವುದು ಶ್ಲಾಘನೀಯ. ಕೆಲಸ ಮಾಡುತ್ತಲೇ ವಿದ್ಯಾಭ್ಯಾಸ ಮುಂದುವರೆಸಬೇಕೆಂಬ ಮತ್ತು ಐ.ಎ.ಎಸ್/ಕೆ.ಎ.ಎಸ್. ಮಾಡಬೇಕೆಂಬ ನಿಮ್ಮ ಹಂಬಲ ಮೆಚ್ಚತಕ್ಕದ್ದಾಗಿದೆ.

ನೀವು ಹೀಗೆಯೇ ಧೃತಿಗೆಡದೆ ಮುಂದವರಿದರೆ ಖಂಡಿತಾ ನಿಮ್ಮ ಕನಸು ನನಸಾಗುವುದು. ನೀವು ಕೆಲಸ ಮಾಡುತ್ತಲೇ ಕೆ.ಎ.ಎಸ್/ಐ.ಎ.ಎಸ್‌ಗೆ ತಯಾರಿ ನಡೆಸಬಹುದು.

ಈ ಪರೀಕ್ಷೆಗಳ ಪಠ್ಯವನ್ನು ನೋಡಿ ಈಗಿನಿಂದಲೇ ತಯಾರಿ ಪ್ರಾರಂಭಿಸಿ. ಯಾವುದಾದರೂ ಮುಕ್ತ ವಿಶ್ವವಿದ್ಯಾಲಯದ ಮೂಲಕ ಎಂ.ಎ. ಮಾಡುವುದೂ ಸಹಾಯಕವಾಗುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT