ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೆ -ಉತ್ತರ

Last Updated 6 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

* ರಮ್ಯ ರಕ್ಷಿತಾ
23 ವರ್ಷದ ಗೃಹಿಣಿ. 2ನೇ ಪಿಯುಸಿ ಪೂರ್ತಿ ಮಾಡಿಲ್ಲ (2004). ಎರಡು ವಿಷಯಗಳು ಬಾಕಿ ಇವೆ. ಈಗ ಕಲಾ ವಿಷಯದಲ್ಲಿ ಪರೀಕ್ಷೆ ತೆಗೆದುಕೊಳ್ಳುತ್ತಿದ್ದೇನೆ. ಆ ನಂತರ ನಾನು ಏನು ಮಾಡಬಹುದು? ಅಂತಿಮ ಪದವಿ ಪರೀಕ್ಷೆಯನ್ನು ನೇರ ತೆಗೆದುಕೊಳ್ಳಬಹುದೆ? ಉದ್ಯೋಗ ಅವಕಾಶಗಳ ದೃಷ್ಟಿಯಿಂದ ಮತ್ಯಾವುದಾದರೂ ಕೋರ್ಸ್‌ಗೆ ಹೋಗಬಹುದೆ? ನನಗೆ ಅಧ್ಯಾಪನದಲ್ಲಿ ಆಸಕ್ತಿ ಇದೆ.

ನೀವು ಪ್ರಸ್ತುತ ಪದವಿಪೂರ್ವ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಲು ಆಸಕ್ತಿ ವಹಿಸಿ ಅಭ್ಯಾಸಮಾಡಿ. ಆ ನಂತರ ಪದವಿಯನ್ನು ಪಡೆಯಲು ದೂರಶಿಕ್ಷಣದ ಮೂಲಕ ಯಾವುದಾದರೂ ಸಮೀಪವಿರುವ ವಿಶ್ವವಿದ್ಯಾಲಯ ಅಥವಾ ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾಲಯದಲ್ಲಿ ನೋಂದಣಿ ಮಾಡಿಕೊಳ್ಳಿ. ಪದವಿಯ ನಂತರ ಶಿಕ್ಷಕಿಯಾಗಿ ಕೆಲಸ ಮಾಡುವ ಇಚ್ಛೆ ಇದ್ದರೆ ಮೂರು ವರ್ಷದ ಪದವಿಯ ನಂತರ ಬಿ.ಇಡಿ (ಬಿ.ಎಡ್) ಪದವಿಯನ್ನು ಪಡೆಯಬೇಕು. ಇದರ ಆಧಾರದ ಮೇಲೆ ನೀವು ಶಿಕ್ಷಕರಾಗಿ ವೃತ್ತಿಯನ್ನು ಪ್ರಾರಂಭಿಸಲು ಅವಕಾಶಗಳು ಹೇರಳವಾಗಿ ಇರುತ್ತವೆ.

ಗಣೇಶ್ ಎಸ್ ಆರ್, ದಾವಣಗೆರ
ನಾನು ಈ ವರ್ಷ ಸಿವಿಲ್ ಬ್ರಾಂಚ್ ಆಯ್ಕೆ ಮಾಡಿಕೊಂಡಿದ್ದೇನೆ. ಆದರೆ ನನ್ನ ಸ್ನೇಹಿತರು ಸಿವಿಲ್ ಬ್ರಾಂಚ್‌ಗೆ ಏನೂ ಸ್ಕೋಪ್ ಇಲ್ಲ ಎನ್ನುತ್ತಿದ್ದಾರೆ. ನನಗೆ ಗೊಂದಲವಾಗಿದೆ. ಪರಿಹಾರ ಸೂಚಿಸಿ.

ನೀವು ಸದ್ಯಕ್ಕೆ ಆಯ್ಕೆ ಮಾಡಿಕೊಂಡಿರುವ ಸಿವಿಲ್ ತಾಂತ್ರಿಕ ಶಿಕ್ಷಣ ಪದವಿಗೆ ತುಂಬಾ ಉದ್ಯೋಗಾವಕಾಶಗಳು ಇವೆ. ಏತಕ್ಕೆಂದರೆ ನಮ್ಮ ದೇಶದಲ್ಲಿ ಕಟ್ಟಡದ ನಿರ್ಮಾಣ, ರಸ್ತೆ ನಿರ್ಮಾಣ, ನೀರಾವರಿ ಯೋಜನೆಗಳು ದೊಡ್ಡಮಟ್ಟದಲ್ಲಿ ಈಗಷ್ಟೇ ಪ್ರಾರಂಭಿಕ ಹಂತದಲ್ಲಿ ಇವೆ. ಆದ್ದರಿಂದ ಮುಂದಿನ ದಿನಗಳಲ್ಲಿ ಈ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಮತ್ತು ವೃತ್ತಿಯಲ್ಲಿ ಮೇಲೆತ್ತರಕ್ಕೆ ಏರಲು ಬೇಕಾದಂತಹ ಪರಿಸ್ಥಿತಿ ವಿಪುಲವಾಗಿ ಇರುತ್ತದೆ. ಆದ್ದರಿಂದ ನೀವು ಅಭ್ಯಾಸ ಮಾಡುತ್ತಿರುವ ಪದವಿಯ ಬಗ್ಗೆ ಯಾವುದೇ ಅನುಮಾನ, ಅಸಮಾಧಾನ ಅಥವಾ ಕೀಳರಿಮೆ ಇಟ್ಟುಕೊಳ್ಳಬೇಡಿ. ಶ್ರದ್ಧೆಯಿಂದ ಅಭ್ಯಾಸ ಮಾಡಿ ಉತ್ತಮ ದರ್ಜೆಯಲ್ಲಿ ಪದವಿಯನ್ನು ಗಳಿಸುವುದರ ಕಡೆಗೆ ಪೂರ್ಣ ಗಮನ ಕೊಡಿ. ಸ್ನೇಹಿತರು ಹೇಳುವ ಊಹಾಪೋಹಗಳಿಗೆ ಕಿವಿಗೊಡಬೇಡಿ.

* ರವೀಂದ್ರ ಸಿ ಜಿ
ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಇಲಾಖೆಯಲ್ಲಿ ಲ್ಯಾಬ್ ಇನ್‌ಸ್ಟ್ರಕ್ಟರ್ ಆಗಿದ್ದೇನೆ.  ಜೆಓಡಿಸಿ ಎಲೆಕ್ಟ್ರಿಕಲ್ ಶಾಖೆಯಲ್ಲಿ ಪಾಸಾಗಿದ್ದೇನೆ. ಉನ್ನತ ತಂತ್ರಜ್ಞಾನ ಅಧ್ಯಯನದ ಆಸಕ್ತಿ ಇದೆ. ಮುಂದುವರಿಯುವುದು ಹೇಗೆ?
ಗಣಕಯಂತ್ರ ವಿಭಾಗದಲ್ಲಿ ನೀವು ಈಗಾಗಲೇ ಒಂದು ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಕೆಲಸಮಾಡುತ್ತಿರುವುದರಿಂದ ಆ ಕ್ಷೇತ್ರದಲ್ಲಿ ಮುಂದುವರೆಯಲು ನೀವು ಗಣಕಯಂತ್ರದ ಯಾವುದಾದರೂ ಅಲ್ಪಾವಧಿಯ ಕೋರ್ಸನ್ನು ಮಾಡುವುದು ಒಳ್ಳೆಯದು. ಇಂತಹ ಅಲ್ಪಾವಧಿಯ ಕೋರ್ಸುಗಳನ್ನು ಕಲಿಸುವ ಅನೇಕ ಖಾಸಗಿ ವಿದ್ಯಾಸಂಸ್ಥೆಗಳು ಇವೆ. ನಿಮಗೆ ಆಸಕ್ತಿಯಿರುವ ವಿಷಯದಲ್ಲಿ ಅದಕ್ಕೆ ಹೊಂದುವಂತಹ ಸಂಸ್ಥೆಯಲ್ಲಿ ಅಭ್ಯಾಸ ಮಾಡಿ ಕೋರ್ಸನ್ನು ಮುಗಿಸಿಕೊಂಡರೆ ನಿಮ್ಮ ವೃತ್ತಿಯಲ್ಲಿ ಎತ್ತರಕ್ಕೆ ಏರುವುದು ಸುಲಭ ಸಾಧ್ಯ.

* ಮಂಜುನಾಥ್ ಎಲ್
ಕನ್ನಡ ಮಾಧ್ಯಮದಲ್ಲಿ ಹೈಸ್ಕೂಲ್ ಮುಗಿಸಿದ್ದೇನೆ. ಜವಳಿ ತಂತ್ರಜ್ಞಾನದಲ್ಲಿ ಡಿಪ್ಲೊಮಾ ಮುಗಿಸಿದ್ದೇನೆ. ಆದರೆ ಡಿಪ್ಲೊಮಾ ಮುಗಿಸಲು ಆರು ವರ್ಷಗಳು ತೆಗೆದುಕೊಂಡೆ. ಇನ್ನೂ ಒಂದು ವಿಷಯ ಬಾಕಿ ಉಳಿದಿದೆ. ಸಮಸ್ಯೆ ಇರುವುದರಿಂದ ಮುಂದುವರಿಸಲಾರೆ. ನನಗೀಗಾಗಲೇ 24 ವರ್ಷ. ಭವಿಷ್ಯದ ಬಗ್ಗೆ ಚಿಂತೆ ಆಗುತ್ತಿದೆ.
ಸದ್ಯಕ್ಕೆ ನೀವು ಪಡೆದಿರುವ ಡಿಪ್ಲೊಮಾ ಇನ್ ಟೆಕ್ಸ್‌ಟೈಲ್ ಟೆಕ್ನಾಲಜಿ ಆಧಾರದ ಮೇಲೆ ಯಾವುದಾದರೂ ಸೂಕ್ತವಾದ ಸಂಸ್ಥೆಯಲ್ಲಿ ಉದ್ಯೋಗ ಅರಸುವುದು ಒಳ್ಳೆಯದು. ಇಂತಹ ಉದ್ಯೋಗಾವಕಾಶಗಳು ಅನೇಕ ಖಾಸಗಿ ಸಂಸ್ಥೆಗಳಲ್ಲಿ ದೊರೆಯುತ್ತವೆ. ಅವುಗಳೆಂದರೆ ಸಿದ್ಧ ಉಡುಪುಗಳನ್ನು ತಯಾರಿಸುವ ಸಂಸ್ಥೆಗಳು, ರೇಷ್ಮೆ ನೂಲು ತಯಾರಿಸುವ ಗಿರಣಿಗಳು, ರೇಷ್ಮೆ ವಸ್ತ್ರ ಮತ್ತು ರೇಷ್ಮೆ ಸೀರೆಗಳನ್ನು ತಯಾರಿಸುವ ಖಾಸಗಿ ಸಂಸ್ಥೆಗಳು ಇವೆ. ಇದೇ ರೀತಿ ಹತ್ತಿ, ಉಣ್ಣೆ ಮತ್ತು ನಾರು ಉಪಯೋಗಿಸಿ ಸಿದ್ಧ ಉಡುಪುಗಳನ್ನು ಅಥವಾ ಅದಕ್ಕೆ ಸಂಬಂಧಿಸಿದ ದಿನನಿತ್ಯ ಬಳಕೆಯ ವಸ್ತುಗಳನ್ನು ತಯಾರಿಸುವ ಸಂಸ್ಥೆಗಳಲ್ಲಿಯೂ ಉದ್ಯೋಗವನ್ನು ಪಡೆಯಬಹುದು. ಆ ನಂತರ ನಿಮಗೆ ಆಸಕ್ತಿ ಇದ್ದರೆ ಈಗ ಬಾಕಿ ಇರುವ ಒಂದು ಪಠ್ಯವನ್ನು ಅಭ್ಯಾಸ ಮಾಡಿ ತೇರ್ಗಡೆ ಹೊಂದಲು ಪ್ರಯತ್ನಿಸಬಹುದು.

*ಸುಭಾಷ್ ರೆಡ್ಡಿ
ರೇಡಿಯೊದಲ್ಲಿ ಆರ್‌ಜೆ ಆಗಲು ನನಗೆ ಇಷ್ಟ. ಹೇಗೆ ಇದು ಸಾಧ್ಯವಾಗುತ್ತದೆ?
ಆಕಾಶವಾಣಿಯಲ್ಲಿ ನಿರೂಪಣಾಕಾರನಾಗಿ (ಆರ್‌ಜೆ) ಕೆಲಸ ಮಾಡಲು ತರಬೇತಿ ನೀಡುವ ವ್ಯವಸ್ಥೆ ಹಲವು ಖಾಸಗಿ ಆಕಾಶವಾಣಿ ಸಂಸ್ಥೆಗಳಲ್ಲಿ ಇವೆ. ಇದಕ್ಕೆ ಬೇಕಾದ ವಿವರಗಳು ಸಂಬಂಧಪಟ್ಟ ಆಕಾಶವಾಣಿಯ ಅಂತರ್ಜಾಲದಲ್ಲಿ (http://www.planetradiocity.com/radiocity/index.php) ದೊರೆಯುತ್ತವೆ. ಇದಲ್ಲದೆ ಇದಕ್ಕೆಂದೇ ಕೆಲವು ಸಂಸ್ಥೆಗಳು ಅಲ್ಪಾವಧಿಯ ಕೋರ್ಸುಗಳನ್ನು ನಡೆಸುತ್ತಿವೆ.
ಆ ವಿದ್ಯಾಸಂಸ್ಥೆಗಳ ಮಾಹಿತಿ ಈ ಅಂತರ್ಜಾಲ ತಾಣದಲ್ಲಿ ಲಭ್ಯ. http://www.careeramp.com/institutes/radio-jockey-courses-in-bangalore/

* ಮೊಹಮ್ಮದ್ ಅಲಿ
ಕಂಪ್ಯೂಟರ್ ಸೈನ್ಸ್ ಡಿಪ್ಲೊಮಾ ಮುಗಿಸಿದ್ದೇನೆ. ಎರಡನೇ ವರ್ಷದ್ದು ಒಂದು ಸಬ್ಜೆಕ್ಟ್ ಬಾಕಿ ಇದೆ.  2004ನೇ ಸಾಲಿನ ವಿದ್ಯಾರ್ಥಿ ನಾನು. ಈಗಿನ ಮುಂದುವರಿದ ಪಠ್ಯ ಅನುಸರಿಸಲಾಗದೆ ಪಾಸ್ ಮಾಡಿಕೊಳ್ಳಲಾಗುತ್ತಿಲ್ಲ. ಇದುವರೆಗೆ ಕಳೆದ ಆರು ವರ್ಷಗಳಿಂದ ಖಾಸಗಿ ಕಂಪೆನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡಿದ್ದೇನೆ. ಮುಂದುವರಿಯುವುದು ಹೇಗೆ? ನನಗೀಗ 29 ವರ್ಷ.

ನೀವು ಸದ್ಯಕ್ಕೆ ಉಳಿಸಿಕೊಂಡಿರುವ ಅಡ್ವಾನ್ಸ್ ಸಿ  ಡೇಟಾ ಸ್ಟ್ರಕ್ಚರ್ (Advance C & Data Structure) ವಿಷಯದಲ್ಲಿ ಸಂಬಂಧಪಟ್ಟ ಪಠ್ಯಕ್ರಮವನ್ನು ಕಾಲೇಜಿನಲ್ಲಿ ಪಾಠ ಮಾಡುತ್ತಿರುವ ಯಾರಾದರೂ ಅಧ್ಯಾಪಕರನ್ನು ಸಂಪರ್ಕಿಸಿ ಅದಕ್ಕೆ ಬೇಕಾದ ತರಬೇತಿಯನ್ನು ಪಡೆದು ಪರೀಕ್ಷೆಯನ್ನು ತೆಗೆದುಕೊಂಡು ಉತ್ತೀರ್ಣನಾಗಬಹುದು ಅಥವಾ ನಿಮ್ಮ ಕೆಲಸದ ಬಿಡುವಿನ ಬೇಳೆಯಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಪುಸ್ತಕದಿಂದ ವಿಷಯ ಸಂಗ್ರಹಿಸಿ ಹಿಂದಿನ ವರ್ಷದ ಎಲ್ಲಾ ಪ್ರಶ್ನೆಪತ್ರಿಕೆಗಳಲ್ಲಿ ಇರುವ ಪ್ರಶ್ನೆಗಳಿಗೆ ಉತ್ತರ ಬರೆದು ನಂತರ ಪರೀಕ್ಷೆಯನ್ನು ತೆಗೆದುಕೊಂಡರೆ ಉತ್ತೀರ್ಣರಾಗುವ ಅವಕಾಶ ಹೆಚ್ಚು ಇರುತ್ತದೆ.

* ಮಹೇಶ್ ಗೌಡ, ಗದಗ
ಸಿವಿಲ್ ವಿಷಯದಲ್ಲಿ ಅಂತಿಮ ವರ್ಷದ ಡಿಪ್ಲೊಮಾ ಓದುತ್ತಿದ್ದೇನೆ. ಕರೆಸ್ಪಾಂಡೆನ್ಸ್‌ನಲ್ಲಿ ಎಂಜಿನಿಯರಿಂಗ್ ಮುಗಿಸುವ ಆಸಕ್ತಿ ಇದೆ. ವಿವರಗಳನ್ನು ನೀಡುತ್ತೀರಾ. ಕರ್ನಾಟಕದಲ್ಲಿ ಯಾವ ವಿಶ್ವವಿದ್ಯಾಲಯದಲ್ಲಿ, ಕಾಲೇಜಿನಲ್ಲಿ ಈ ಸೌಲಭ್ಯ ಇದೆ?
ತಾಂತ್ರಿಕ ಪದವಿಯನ್ನು ದೂರಶಿಕ್ಷಣದ ಮೂಲಕ ಪಡೆಯುವ ಸೌಲಭ್ಯ ನನಗೆ ತಿಳಿದಂತೆ ಯಾವುದೇ ವಿಶ್ವವಿದ್ಯಾಲಯಲ್ಲಿ ಇರುವುದಿಲ್ಲ. ಆದರೆ ಈ ಸೌಲಭ್ಯ ಸಂಜೆ ಕಾಲೇಜಿನಲ್ಲಿ ಇರುತ್ತದೆ. ಉದಾಹರಣೆಗೆ ಬೆಂಗಳೂರಿನ ಬಸವನ ಗುಡಿ ರಸ್ತೆಯಲ್ಲಿರುವ ಬಿ.ಎಂ.ಎಸ್. ತಾಂತ್ರಿಕ ವಿದ್ಯಾಲಯದಲ್ಲಿ ಇಂತಹ ಸೌಲಭ್ಯ ಇದೆ. ಆದ್ದರಿಂದ ನಿಮ್ಮ ಡಿಪ್ಲೊಮಾ ಆಧಾರದ ಮೇಲೆ ಬೆಂಗಳೂರಿನಲ್ಲಿ ಒಂದು ಉದ್ಯೋಗಕ್ಕೆ ಸೇರಿ ಸಂಜೆ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರೆಸಬಹುದು.

* ಆನಂದ್ ಕಿಣಿ
ನಾನು ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಎಂ ಎಸ್‌ಸಿ (geospatial application in regional development. ) ಮಾಡುತ್ತಿದ್ದೇನೆ.  ಕೆಲಸದ ಅವಕಾಶಗಳು ಮುಂದೆ ಇವೆಯೆ?

ಪ್ರಸ್ತುತ ಪರಿಸ್ಥಿತಿಯಲ್ಲಿ ಯಾವುದೇ ವಿಭಾಗದಲ್ಲಿ ಪದವಿಯನ್ನು ಪಡೆದರೂ ಉದ್ಯೋಗಾವಕಾಶಗಳು ಹೇರಳವಾಗಿವೆ. ಸದ್ಯಕ್ಕೆ ನೀವು ಅಭ್ಯಾಸ ಮಾಡುತ್ತಿರುವ ಜಿಯೋಸ್ಪೇಷಿಯಲ್ ಅಪ್ಲಿಕೇಷನ್ಸ್ ಈಗ ತಾನೇ ಪ್ರವರ್ಧಮಾನಕ್ಕೆ ಬರುತ್ತಿರುವ ವಿಜ್ಞಾನದ ಒಂದು ವಿಭಾಗ. ಆದ್ದರಿಂದ ಉದ್ಯೋಗಾವಕಾಶದ ಬಗ್ಗೆ ನಿಮಗೆ ಯಾವುದೇ ಭೀತಿ ಇರುವ ಅವಶ್ಯಕತೆ ಇಲ್ಲ. ನಿಮ್ಮ ಈ ಪದವಿಯ ಜೊತೆಗೆಒಂದು ಅಲ್ಪಾವಧಿಯ ಗಣಕಯಂತ್ರದ ಕೋರ್ಸ್‌ಲ್ಲಿ ತರಬೇತಿ ಪಡೆಯುವುದು ಒಳ್ಳೆಯದು.

* ವಿಶ್ವನಾಥ್ ಜಿ
ಇಇಇ ಮುಗಿಸಿ ಕೆಲಸ ಮಾಡುತ್ತಿದ್ದೇನೆ. ಇಂಡಸ್ಟ್ರಿಯಲ್ ಡ್ರೈವ್ಸ್ ಸ್ಪೆಷಲೈಸೇಷನ್‌ನಲ್ಲಿ ಕಂಪ್ಯೂಟರ್ ಅಪ್ಲಿಕೇಷನ್‌ನಲ್ಲಿ ಎಂ ಟೆಕ್ ಮಾಡುವ ಆಸಕ್ತಿ ಇದೆ. ಯಾವ ಕಾಲೇಜು ಹಾಗೂ ವಿಶ್ವವಿದ್ಯಾಲಯ ಒಳ್ಳೆಯದು ಎಂಬ ಬಗ್ಗೆ ಸಲಹೆ ನೀಡುವಿರಾ?

ದೂರಶಿಕ್ಷಣದ ಮೂಲಕ ಎಂ.ಎಸ್. ಪದವಿಯನ್ನು ಪಡೆಯಲು ಬಿಟ್ಸ್ ಪಿಲಾನಿ (BITS Pilani) ವಿಶ್ವವಿದ್ಯಾಲಯದಲ್ಲಿ ಅವಕಾಶ ಇರುತ್ತದೆ. ಈ ವಿಶ್ವವಿದ್ಯಾಲಯದಲ್ಲಿ ಪಡೆಯುವ ಎಂ.ಎಸ್. ಪದವಿಗೆ ಭಾರತ ಮತ್ತು ವಿದೇಶಗಳಲ್ಲಿಯೂ ಮಾನ್ಯತೆ ಇದೆ. ಇದಕ್ಕೆ ಬೇಕಾದ ಹೆಚ್ಚಿನ ವಿವರಗಳನ್ನು ಈ ವಿಶ್ವವಿದ್ಯಾಲಯದ ಅಂತರ್ಜಾಲ ತಾಣ http://www.bits-pilani.ac.in/  ದಲ್ಲಿ ಪಡೆಯಬಹುದು.

* ಶಿವಪ್ರಸಾದ್
ಬಿ.ಕಾಂ. ಎಲ್‌ಎಲ್‌ಬಿ ಮುಗಿಸಿದ್ದೇನೆ. ವ್ಯಾಕರಣಬದ್ಧ ಇಂಗ್ಲಿಷ್ ಗೊತ್ತಿದೆ.   ನನ್ನ ಕನ್ನಡ ಭಾಷೆಯೂ ಒಳ್ಳೆಯದಿದೆ. ನನಗೆ ಅಧ್ಯಾಪನದಲ್ಲಿ ಆಸಕ್ತಿ. ಅಧ್ಯಾಪನಕ್ಕೆ ಅನುಕೂಲವಾಗುವಂತೆ ಯಾವುದಾದರೂ ಇಂಗ್ಲಿಷ್ ಅಲ್ಪಾವಧಿ ಕೋರ್ಸ್‌ಗೆ ಸೇರಬಹುದೆ?

ಆಂಗ್ಲಭಾಷೆಯಲ್ಲಿ ಒಬ್ಬ ವ್ಯಕ್ತಿಯನ್ನು ಉತ್ತಮ ವಾಗ್ಮಿಯನ್ನಾಗಿ ಮಾಡಲು ತರಬೇತಿ ನೀಡುವ ಅನೇಕ ಖಾಸಗಿ ಸಂಸ್ಥೆಗಳು ಇವೆ. ನಿಮಗೆ ಹತ್ತಿರ ಇರುವ ಇಂತಹ ಯಾವುದೇ ಸಂಸ್ಥೆಯಲ್ಲಿ ಈ ತರಬೇತಿಯನ್ನು ಪಡೆಯಬಹುದು. ಅಲ್ಲದೇ ಸ್ವಪ್ರಯತ್ನದಿಂದ ಆಂಗ್ಲಭಾಷೆಯಲ್ಲಿ ಬೇಕಾದ ಪ್ರಾವೀಣ್ಯತೆ ಪಡೆಯಲು ಸಾಧ್ಯ. ಇದಕ್ಕೆ ಪೂರಕವಾಗಿ ನೀವು ಆಂಗ್ಲಭಾಷೆಯ ವೃತ್ತಪತ್ರಿಕೆಗಳನ್ನು, ನಿಯತಕಾಲಿಕೆಗಳನ್ನು ಮತ್ತು ಸಾಹಿತ್ಯವನ್ನು ಅಭ್ಯಾಸಮಾಡುವುದು; ಇದರ ಜೊತೆಗೆ ಯಾವುದಾದರೂ ಹೊಸ ಪದ ಅಭ್ಯಾಸ ಮಾಡುವಾಗ ಕಾಣಿಸಿದರೆ ಸಂದರ್ಭಕ್ಕೆ ಅನುಸಾರವಾಗಿ ಅದರ ಅರ್ಥವನ್ನು ನಿಮ್ಮ ಮಾತೃಭಾಷೆಯಲ್ಲಿ ಪಟ್ಟಿ ಮಾಡುತ್ತಾ ಹೋಗಬಹುದು. ಇದಲ್ಲದೆ ಸ್ನೇಹಿತರ ಜೊತೆ ಅಥವಾ ಮನೆಯಲ್ಲಿ ಆಂಗ್ಲಭಾಷೆಯ ಪರಿಚಯ ಇರುವವರ ಜೊತೆ ಮಾತನಾಡುವಾಗ ಸಾಧ್ಯವಾದಷ್ಟೂ ಅದೇ ಭಾಷೆಯನ್ನು ಬಳಸುವುದು ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT