ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೆ ಉತ್ತರ

Last Updated 14 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಕೆ.ಎಂ.ಚಂದ್ರಾಮ್
*ನಾನು ಈಗ ನ್ಯಾಯಾಲಯದಲ್ಲಿ ಪ್ರೋಸೆಸ್ ಸರ್ವರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಕೆಲಸದ ನಂತರ ನನಗೆ ಓದಲು ಸಮಯ ಉಳಿದಿರುತ್ತದೆ. ಹೀಗಾಗಿ ಮುಂದೆ ಓದಲು ನಿರ್ಧರಿಸಿದ್ದೇನೆ. ಪಿ.ಯು ಕಲಾ ವಿಭಾಗದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾಗಿದ್ದೇನೆ.  ನನಗೆ ಮುಂದೆ ಒಬ್ಬ ಉತ್ತಮ ಮನೋರೋಗ ತಜ್ಞನಾಗುವ ಬಯಕೆ ಇದೆ. ಹಾಗಾಗಿ ದಯಮಾಡಿ ಸೂಕ್ತ ಮಾರ್ಗದರ್ಶನ ನೀಡಿ.

ನೀವು ಮನಃಶಾಸ್ತ್ರ ವಿಷಯವನ್ನು ಆರಿಸಿಕೊಂಡು ಎಂ.ಎ ಮಾಡಿಕೊಳ್ಳಿ. ಹಾಗೆಯೇ ಮನಃಶಾಸ್ತ್ರ ಸಲಹೆಗಾರರಾಗಿ ಹೆಚ್ಚಿನ ತರಬೇತಿ ಪಡೆದುಕೊಳ್ಳಿ. ಇದರಿಂದ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಅರ್ಹತೆ ಸಿಗುತ್ತದೆ. ಇದಲ್ಲದೆ ಶಿಕ್ಷಣ, ಕೈಗಾರಿಕೆ ಮುಂತಾದ ಕ್ಷೇತ್ರಗಳಲ್ಲಿಯೂ ಸೇವೆಗೆ ಅವಕಾಶವಿದೆ.

ಅಮರ ಎನ್. ಹಾಗರಣೆ, ಗುಲ್ಬರ್ಗ
* ನಾನು ಡಿ.ಇಡಿ ಹಾಗೂ ಬಿ.ಎ, ಪದವಿ ಮುಗಿಸಿರುತ್ತೇನೆ. ನನಗೆ ಇಂಗ್ಲಿಷ್ ವಿಷಯದಲ್ಲಿ ಬಹಳ ಆಸಕ್ತಿ ಇದೆ. ಅದಕ್ಕಾಗಿ ನಾನು ಈಗ ಇಂಗ್ಲಿಷ್ ಎಂ.ಎ, ಮಾಡುತ್ತಿದ್ದೇನೆ. ಮುಂದೆ ಈ ವಿಷಯದಲ್ಲಿ ಶಿಕ್ಷಕ ಅಥವಾ ಪ್ರಾಧ್ಯಾಪಕ ಆಗಬಹುದೇ ತಿಳಿಸಿ.

ನೀವು ಎಂ.ಎ., ನಂತರ ಬಿ.ಇಡಿ, ಮಾಡಿಕೊಂಡಲ್ಲಿ ಹನ್ನೆರಡನೆಯ ತರಗತಿವರೆಗೆ ಬೋಧಿಸಬಹುದು. ಕಾಲೇಜಿನಲ್ಲಿ ಕಲಿಸಲು ಅರ್ಹತಾ ಪರೀಕ್ಷೆ ಮುಗಿಸಿಕೊಳ್ಳಬೇಕಾಗುತ್ತದೆ. ಇದಲ್ಲದೆ ಪಿಎಚ್.ಡಿ ಕೂಡ ಮಾಡಿಕೊಂಡು ಪ್ರಾಧ್ಯಾಪಕರಾಗಬಹುದು.

ಸಿ.ವೆಂಕಟೇಶ್ ಯಾದವ್, ಪರಶುರಾಮಪುರ
* ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಲ್ಲಿರುವ ಎಸ್ಸೆಸ್ಸೆಲ್ಸಿಗೆ ತತ್ಸಮಾನವಾದ ಇತರೆ ಕೋರ್ಸುಗಳು ಯಾವುವು? ಈ ಕೋರ್ಸುಗಳ ಬಗ್ಗೆ  ಖಾಸಗಿಯಾಗಿ ಪರೀಕ್ಷೆ ಬರೆಯಬಹುದೇ? ಈ ಕೋರ್ಸುಗಳು ಲಭ್ಯವಿರುವ ಶಾಲೆಗಳನ್ನು ತಿಳಿಸಿ
.

ಭಾರತದಲ್ಲಿ ಅಧಿಕೃತವಾದ ನಲವತ್ತಕ್ಕೂ ಹೆಚ್ಚು ಪರೀಕ್ಷಾ ಮಂಡಳಿಗಳು ಹತ್ತನೇ ತರಗತಿ ಪರೀಕ್ಷೆಯನ್ನು ಬೇರೆ ಬೇರೆ ಹೆಸರುಗಳಿಂದ ನಡೆಸುತ್ತಿವೆ.  ಮಾನ್ಯತೆ ಹೊಂದಿದ ಶಿಕ್ಷಣ ಸಂಸ್ಥೆಗಳ ಮೂಲಕ ಖಾಸಗಿ ಅಭ್ಯರ್ಥಿಯಾಗಿ ಸಹಾ ನೋಂದಣಿ ಮಾಡಿಕೊಳ್ಳಬಹುದು. ಕೆಲವು ಟ್ಯುಟೋರಿಯಲ್‌ಗಳು ಈ ಪರೀಕ್ಷೆಗೆ ತರಬೇತಿ ನೀಡುತ್ತವೆ. ಭಾರತ ಸರ್ಕಾರವೂ ರಾಷ್ಟ್ರ ಮಟ್ಟದಲ್ಲಿ ಇಂತಹ ಪರೀಕ್ಷೆಗಳನ್ನು ಇತ್ತೀಚೆಗೆ ಮುಕ್ತ ಶಾಲೆಗಳ ಮೂಲಕ ನಡೆಸುತ್ತಿದೆ. ಇವುಗಳ ಹೊರತು ನನಗೆ ತಿಳಿದಿರುವಂತೆ ಬೇರೆ ಯಾವುದೇ ಅಧಿಕೃತ ಸಂಸ್ಥೆಗಳಿಲ್ಲ.

ಅನಿಲ್ ಕುಮಾರ್ ಎಚ್.ಎಸ್, ಗುಂಡ್ಲುಪೇಟೆ
*ಸರ್ಕಾರಿ ಶಾಲೆಯೊಂದರ ಶಿಕ್ಷಕನಾಗಿರುವ ನಾನು 2009-10ರಲ್ಲಿ ಎಂ.ಎ ಅಂತಿಮ ಪರೀಕ್ಷೆಯಲ್ಲಿ ಒಂದು ಪತ್ರಿಕೆಯಲ್ಲಿ ಅನುತ್ತೀರ್ಣನಾಗಿದ್ದೆ. ನಂತರ 2010ರಲ್ಲಿ ಬಿ.ಇಡಿ ಕೋರ್ಸಿಗೆ ದಾಖಲಾಗಿದ್ದು, ಅಂತಿಮ ವರ್ಷದಲ್ಲಿರುವಾಗ ಎಂ.ಎ, ಕೋರ್ಸಿನ ಉಳಿದ ಒಂದು ಪತ್ರಿಕೆಯಲ್ಲಿ ಉತ್ತೀರ್ಣನಾಗಿದ್ದೇನೆ.  ನಾನು ಬಿ.ಇಡಿ ಅಂತಿಮ ವರ್ಷದಲ್ಲಿರುವಾಗ ಎಂ.ಎ, ಪೂರಕ ಪರೀಕ್ಷೆ ತೆಗೆದುಕೊಂಡಿದ್ದು ಅಸಿಂಧುವೇ? ನಮ್ಮ ಇಲಾಖೆಯು ನನ್ನ ಸೇವಾ ಪುಸ್ತಕದಲ್ಲಿ ಎಂ.ಎ., ಹಾಗೂ ಬಿ.ಇಡಿ ಎರಡೂ ಕೋರ್ಸುಗಳನ್ನು ಸೇರಿಸಲು ಸಮಸ್ಯೆಗಳಿವೆಯೇ? ಪದೋನ್ನತಿಯಲ್ಲಿ ಇದು ಅಡಚಣೆಯಾಗುತ್ತದೆಯೇ?

ನೀವು ಬಿ.ಇಡಿ. ಸೇರುವಾಗಲೇ ಎಂ.ಎ., ಕೋರ್ಸು ಮುಗಿದಿದ್ದು, ಉಳಿದ ಪತ್ರಿಕೆಯನ್ನು ಮಾತ್ರ ಮುಂದೆ ಮುಗಿಸಿಕೊಂಡಿದ್ದೀರಿ. ಹೀಗಾಗಿ ಒಮ್ಮೆಲೇ ಎರಡು ಕೋರ್ಸುಗಳನ್ನು ಕಲಿತಲ್ಲ. ಈ ಅಂಶವನ್ನು ಇಲಾಖೆಗೆ ಮನದಟ್ಟು ಮಾಡಿಕೊಡಿ. ಈ ಎರಡೂ ಪರೀಕ್ಷೆಗಳ ಅರ್ಹತೆಯನ್ನು ಸೇವಾ ಪುಸ್ತಕದಲ್ಲಿ ಸೇರಿಸಲು ಮನವಿ ಸಲ್ಲಿಸಿ, ತಕರಾರು ಬಂದಲ್ಲಿ ಮೇಲಧಿಕಾರಿಗಳನ್ನು ನೇರವಾಗಿ ಭೇಟಿ ಮಾಡಿ ಪರಿಹಾರ ಪಡೆಯಿರಿ.

ಪ್ರತಿಭಾ ಪಾಟೀಲ, ಮುಧೋಳ ತಾಲ್ಲೂಕು
*ನಾನು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 2010-11ರಲ್ಲಿ ಪರೀಕ್ಷೆ ಬರೆದಿದ್ದು, ಅನಾರೋಗ್ಯದ ಕಾರಣದಿಂದ ಮೂರು ವಿಷಯಗಳಲ್ಲಿ ಮಾತ್ರ ಉತ್ತೀರ್ಣಳಾಗಿದ್ದೇನೆ. ಉಳಿದುವುಗಳಲ್ಲೂ ಉತ್ತಮ ಅಂಕ ಗಳಿಸಿಲ್ಲ. ಎರಡು ವರ್ಷ ವ್ಯರ್ಥ ಕಾಲಹರಣ ಮಾಡಿದ್ದೇನೆ. ನನಗೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಅತೀವ ಆಸಕ್ತಿ ಇದೆ. ಯಾವ ರೀತಿ ವಿದ್ಯಾಭ್ಯಾಸ ಮುಂದುವರಿಸಲಿ.
 
ನೀವು ಈಗಾಗಲೇ ಎರಡು ವರ್ಷ ಕಳೆದುಕೊಂಡಿದ್ದೀರಿ. ಆದ್ದರಿಂದ ಮೊದಲು ಪಿಯುಸಿ ಮುಗಿಸಿಕೊಂಡು. ಬಿ.ಎಸ್ಸಿ., ಸೇರಿಕೊಳ್ಳಿ ಅದರಲ್ಲಿ ಉತ್ತಮ ಸಾಧನೆ ಮಾಡಿ ಮುಂದೆ ಎಂ.ಎಸ್ಸಿ., ಮಾಡಿಕೊಳ್ಳಿ. ಇದರಿಂದ ನಿಮ್ಮ ಗುರಿ ಸಾಧಿಸುವ ಮಾರ್ಗ ಸುಲಲಿತವಾಗುತ್ತದೆ.

ಆನಂದ ಬಿ.ಆರ್, ದೊಡ್ಡಬಳ್ಳಾಪುರ ತಾಲ್ಲೂಕು 
* ನಾನು ಬಿ.ಎ., ಬಿ.ಇಡಿ ಓದಿದ್ದು ಸಮಾಜ ವಿಜ್ಞಾನ ವಿಷಯದ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ನಾನು ಬಿ.ಎ.ಯಲ್ಲಿ ಕನ್ನಡವನ್ನು ಐಚ್ಛಿಕ ವಿಷಯವಾಗಿ ಕಲಿತಿಲ್ಲ. ಹೀಗಾಗಿ ಪ್ರಥಮ ಭಾಷೆ ಕನ್ನಡ ಕಲಿಸುವ ಅರ್ಹತೆ ಗಳಿಸಿಲ್ಲ. ಇದಕ್ಕಾಗಿ ಯಾವ ಕೋರ್ಸು ಮಾಡುವುದು ಸೂಕ್ತ.

ನೀವು ಬಿ.ಎ. ಪದವಿಯಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಕಲಿತಿದ್ದರೆ, ಕನ್ನಡ ಎಂ.ಎ ಮಾಡಬಹುದು. ಆಗ ನಿಮಗೆ ಪ್ರಥಮ ಭಾಷೆ ಕನ್ನಡ ಕಲಿಸಬಲ್ಲ ಶಿಕ್ಷಕರಾಗಿ ಸೇವೆ ಸಲ್ಲಿಸಲು ಅರ್ಜಿ ಸಲ್ಲಿಸುವ ಅರ್ಹತೆ ಸಿಗುತ್ತದೆ.

ಸೋಮಶೇಖರ್ ಎಚ್.ಎ, ದೇವನಹಳ್ಳಿ
* ನಾನು 2010ರಲ್ಲಿ ಬಿ.ಎ. (ಹೆಚ್‌ಇಪಿ) ಪದವಿಯನ್ನು ಮುಗಿಸಿದ್ದು ಶೇ. 51 ಅಂಕಗಳಿಸಿದ್ದೇನೆ.  ನನಗೆ ಮುಂದೆ ಓದಬೇಕೆಂಬ ಆಸೆಯಿದೆ. ಆದರೆ ಬಡತನ ಅಡ್ಡಿ ಬರುತ್ತದೆ. ನನಗೆ ಕೆ.ಎ.ಎಸ್. ಅಧಿಕಾರಿಯಾಗುವ ಅಥವಾ ಮನೋವಿಜ್ಞಾನ ಓದುವ ಆಸೆ ಇದೆ. ಯಾವುದು ಒಳ್ಳೆಯದು.  ನಾನು ಪರಿಶಿಷ್ಟ ಜಾತಿಗೆ ಸೇರಿದ್ದು ಸರ್ಕಾರದ ಆರ್ಥಿಕ ನೆರವು ಅಥವಾ ಬ್ಯಾಂಕಿನಿಂದ ಸಾಲ ಸಿಗಬಹುದೇ ?  ದಯಮಾಡಿ ಮಾರ್ಗದರ್ಶನ ನೀಡಿ.

ಕೆ.ಎ.ಎಸ್. ಬರೆಯಲು ನಿಮಗೆ ಸರಕಾರದಿಂದ ಉಚಿತ ತರಬೇತಿ ಸಿಗುತ್ತದೆ.  ಕೆಲವು ವಿದ್ಯಾರ್ಥಿ ನಿಲಯಗಳಲ್ಲೂ ಉಳಿಯಲು ಅವಕಾಶ ಸಿಗಬಹುದು.  ಮನೋವಿಜ್ಞಾನಕ್ಕೆ ಸಂಬಂಧಿಸಿದ ವಿಷಯವನ್ನು ನೀವು ದೂರಶಿಕ್ಷಣದ ಮೂಲಕವೂ ಕಲಿಯಬಹುದು.  ಇಲ್ಲವಾದರೆ ಎಂ.ಎ., ತರಗತಿಗೆ ಸೇರಿಕೊಂಡು ಹೆಚ್ಚಿನ ಅರ್ಹತೆಗಳಿಸಿಕೊಂಡರೆ ಉತ್ತಮ ನೌಕರಿಗಳಿಸುವ ಮಾರ್ಗ ಸುಲಭವಾಗುತ್ತದೆ. 

ವಿಧ್ಯಾಭ್ಯಾಸ ಮುಂದುವರಿಸಲು ಆಸಕ್ತಿಯುಳ್ಳವರಿಗೆ ಸರ್ಕಾರ ಅನೇಕ ಬಗೆಯ ನೆರವು ನೀಡುತ್ತಿದೆ.  ಬ್ಯಾಂಕುಗಳ ನೆರವು ಕೋರ್ಸಿಗೆ ತಗಲುವ ವೆಚ್ಚದಷ್ಟು ಮಾತ್ರ ಆಗಿರುತ್ತದೆ.  ನೀವು ಆಸಕ್ತಿ ವಹಿಸಿ, ಅಭ್ಯಾಸ ಮುಂದುವರಿಸಿ ಮುಂದೆ ಬನ್ನಿ.

ಅರ್ಪಿತಾ ಕುಮಾರಿ, ಧರ್ಮಸ್ಥಳ
*ನಾನು ಇಂಟಿಗ್ರೇಟೆಡ್ ಎಂ.ಎಸ್ಸಿ.ಯನ್ನು ಭೌತಶಾಸ್ತ್ರದಲ್ಲಿ 2010ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಮುಗಿಸಿದ್ದೇನೆ.  ನಂತರ ನಮ್ಮ ಊರಿನ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇರಿರುತ್ತೇನೆ.  ನಾನು ಬಿ.ಎಡ್., ಪದವಿಯನ್ನು ದೂರಶಿಕ್ಷಣದ ಮೂಲಕ ಮಾಡಲು ಆಶಿಸಿದ್ದೇನೆ.  ಕೆಲವು ದೂರಶಿಕ್ಷಣ ಕೇಂದ್ರಗಳಲ್ಲಿ ವಿಚಾರಿಸಿದಾಗ ಅವರು ಪದವಿ ತರಗತಿಯ ಅಂಕಪಟ್ಟಿಯನ್ನು ಕಡ್ಡಾಯವಾಗಿ ತರಬೇಕು ಎಂದು ತಿಳಿಸಿದರು.  ನಾನು ಪಿಯುಸಿ ಮುಗಿಸಿ ನೇರವಾಗಿ ಇಂಟಿಗ್ರೇಟೆಡ್ ಎಂ.ಎಸ್ಸಿ., ಮಾಡಲು ತೆರಳಿದ್ದರಿಂದ ಪದವಿ ಅಂಕಪಟ್ಟಿ ಇಲ್ಲ.  ಹಾಗೂ ಭಾಷಾ ವಿಷಯವನ್ನು ಅಧ್ಯಯನ ಮಾಡಿಲ್ಲಿವಾದ್ದರಿಂದ ಅವರು ನನ್ನ ಅರ್ಜಿಯನ್ನು ನಿರಾಕರಿಸಿದರು.  ನಾನು ಬಿ.ಎಡ್. ಮಾಡಬೇಕೆಂದರೆ ಏನು ಮಾಡಬೇಕು ದಯಮಾಡಿ ತಿಳಿಸಿ.

ನೀವು ನೇರವಾಗಿ ಮೈಸೂರಿನ ಮುಕ್ತ ವಿವಿ ರಿಜಿಸ್ಟ್ರಾರ್‌ರವರಿಗೆ ಎಲ್ಲಾ ವಿವರಗಳನ್ನು ತಿಳಿಸಿ ಪತ್ರ ಬರೆದು ಮಾರ್ಗದರ್ಶನಕ್ಕಾಗಿ ಕೇಳಿ. ನೀವು ಇಗ್ನೋ ಮೂಲಕ ಬಿ.ಎಡ್., ಕಲಿಯುವುದು ಸಾಧ್ಯವೇ ಪ್ರಯತ್ನಿಸಿ. ಸಾಧ್ಯವಾದರೆ ಮೈಸೂರಿಗೆ ಸ್ವತಃ ತೆರಳಿ ನಿಮ್ಮ ಮಾತೃ ವಿವಿ ಹಾಗೂ ಮುಕ್ತ ವಿವಿಯಲ್ಲಿ ಈ ಬಗ್ಗೆ ವಿವರಣೆ ಪಡೆದುಕೊಳ್ಳಿ.  ಬಿ.ಎಡ್. ಪದವಿ ಪಡೆಯಲು ಇಂಟಿಗ್ರೇಟೆಡ್ ಎಂ.ಎಸ್ಸಿ. ಕಲಿತವರಿಗೆ ಅರ್ಹತೆ ಇದೆಯೇ ಇಲ್ಲವೇ ಎಂಬುದನ್ನು ಯುಜಿಸಿ ಅಥವಾ ಎನ್‌ಸಿಟಿಇಗೆ ನೇರವಾಗಿ ಪತ್ರ ಬರೆದು ವಿಚಾರಿಸಬಹುದು.

ಸುರೇಶ್ ಎಂ.ವಿ, ಸಕಲೇಶಪುರ
* ನಾನು 2008-09ನೇ ಸಾಲಿನಲ್ಲಿ ಪಿಯುಸಿಯನ್ನು ಶೇ. 59.99 ಅಂಕಗಳಿಸಿ ವಾಣಿಜ್ಯ ವಿಭಾಗದಲ್ಲಿ ಮುಗಿಸಿದ್ದೇನೆ. ನಂತರ ಕಂಪ್ಯೂಟರ್ ಜೆ.ಓ.ಸಿಯಲ್ಲಿ ಎರಡು ವರ್ಷದ ಕೋರ್ಸುನ್ನು ಮುಗಿಸಿದೆ. ಈಗ ಅಂಚೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.  ಈಗ ನಾನು ಪಿಯುಸಿಯ ಆಧಾರದ ಮೇಲೆ ಮುಕ್ತ ವಿವಿಯಲ್ಲಿ ಪದವಿ ಮುಗಿಸಿ ಕೆ.ಎ.ಎಸ್. ಮಾಡಬೇಕಂದಿದ್ದೇನೆ.  ಇದಕ್ಕೆ ಅವಕಾಶವಿದೆಯೇ ? ದಯವಿಟ್ಟು ತಿಳಿಸಿಕೊಡಿ.

ಯುಜಿಸಿಯಿಂದ ಮಾನ್ಯತೆ ಪಡೆದಿರುವ ಯಾವುದೇ ಪದವೀಧರರು ಕೆ.ಎ.ಎಸ್. ಪರೀಕ್ಷೆಗೆ ಬರೆಯುವ ಅರ್ಹತೆ ಹೊಂದಿರುತ್ತಾರೆ.  ನೀವು ಖಂಡಿತಾ ಪ್ರಯತ್ನಿಸಬಹುದು.

ಅಮೃತ, ದಾವಣಗೆರೆ
* ನಾನು ಬಿ.ಬಿ.ಎಂ. ಐದನೇ ಸೆಮೆಸ್ಟಿರ್ ಓದುತ್ತಿದ್ದೇನೆ. ಮುಂದೆ ಎಂ.ಬಿ.ಎ. ಮಾಡಬೇಕೆಂದಿದ್ದೇನೆ.  ಅದಕ್ಕೆ ಉತ್ತಮ ಭವಿಷ್ಯವಿದೆಯೇ ?  ಅದರಲ್ಲಿ  ಮಾನವ ಸಂಪನ್ಮೂಲ ನಿರ್ವಹಣೆ ಕೋರ್ಸಿಗೆ ಉದ್ಯೋಗ ಅವಕಾಶಗಳಿವೇಯೇ ?  ಎಂ.ಬಿ.ಎ. ಓದಲು ಯಾವ ಯಾವ ಪರೀಕ್ಷೆಗಳನ್ನು ಬರೆಯಬೇಕು. ದಯಮಾಡಿ ಮಾರ್ಗದರ್ಶನ ನೀಡಿ.

ಎಂ.ಬಿ.ಎ. ಕಲಿತವರು ಭವಿಷ್ಯದಲ್ಲಿ ಯಶಸ್ಸುಗಳಿಸಲು ವೈಯುಕ್ತಿಕ ಸಾಮರ್ಥ್ಯ, ವೃತ್ತಿಪರತೆ ಮುಂತಾದುವು ಮುಖ್ಯ ಪಾತ್ರವಹಿಸುತ್ತವೆ.  ನೀವು ಕೇಳಿರುವ ಮಾನವ ಸಂಪನ್ಮೂಲ ನಿರ್ವಹಣೆ ಬಗ್ಗೆ ಸಹಾ ಇದೇ ಮಾತು ಅನ್ವಯಿಸುತ್ತದೆ.

  ಇನ್ನೂ ಎಂ.ಬಿ.ಎ. ಪ್ರವೇಶಕ್ಕೆ ಅರ್ಹತಾ ಪರೀಕ್ಷೆಗಳು ಕಾಲೇಜಿನಿಂದ ಕಾಲೇಜಿಗೆ ಭಿನ್ನವಾಗಿರುತ್ತವೆ.  ತುಂಬಾ ಹೆಸರು ಮಾಡಿರುವ ಸಂಸ್ಥೆಗಳು, ವಿವಿಗಳು ನಡೆಸುವ ಕಾಲೇಜುಗಳು, ಮತ್ತು ಇನ್ನೂ ಕೆಲವು ಕಡೆ ಸಾಕಷ್ಟು ಸ್ಪರ್ಧಾತ್ಮಕವಾದ ಪರೀಕ್ಷೆ ಇರುತ್ತವೆ.  ಕೆಲವು ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವುದು ಹೆಚ್ಚಿನ ಸಮಸ್ಯೆಯಾಗದಿರಲೂಬಹುದು.

ಕಾವ್ಯ, ಮಂಡ್ಯ
*ನಾನು ಬಿ.ಇ. ಮುಗಿಸಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದೇನೆ.  ನನಗೆ ಸ್ಪರ್ಧಾತ್ಮಾಕ ಪರೀಕ್ಷೆಗಳಿಗೆ ಬರೆಯುವ ಆಸೆ ಇದೆ.  ಕೆಲವರು ತಾಂತ್ರಿಕ ವಿಷಯಗಳಲ್ಲಿ ಪರಿಣಿತಿ ಇರುವವರಿಗೆ ಈ ಪರೀಕ್ಷೆ ಬರೆಯುವುದು ಕಷ್ಟ ಎನ್ನುತ್ತಾರೆ. ನಾನು ಯಾವ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ಗೊಂದಲದಲ್ಲಿದ್ದೇನೆ.  ದಯಮಾಡಿ ತಿಳಿಸಿ.

ಸ್ಪರ್ಧಾತ್ಮಾಕ ಪರೀಕ್ಷೆಗಳಲ್ಲಿ ಐಚ್ಛಿಕ ವಿಷಯಗಳನ್ನು ಆರಿಸಿಕೊಳ್ಳುವುದು ಒಂದು ದೊಡ್ಡ ಸವಾಲು.  ತಾಂತ್ರಿಕ, ವೈದ್ಯಕೀಯ ಕ್ಷೇತ್ರಗಳ ಅನೇಕರು ಈ ಪರೀಕ್ಷೆಗಳನ್ನು ತಮ್ಮ ವಿಷಯಗಳನ್ನೇ ಆರಿಸಿಕೊಂಡು ಬರೆದು ತೇರ್ಗಡೆಯಾಗಿರುವ ಅನೇಕ ಉದಾಹರಣೆಗಳಿವೆ.
ಆದರೆ ಇನ್ನೂ ಕೆಲವರು ಪಠ್ಯಕ್ರಮವನ್ನು ಕೂಲಂಕುಶವಾಗಿ ಪರಿಶೀಲಿಸಿ, ಅದನ್ನು ಆರಿಸಿಕೊಂಡು ಪರೀಕ್ಷೆ ಬರೆಯುವವರ ಸಂಖ್ಯೆ ಮುಂತಾದುವುಗಳನ್ನು ಗಮನಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ.  ಇಂತಹ ಪರೀಕ್ಷೆಗಳಲ್ಲಿ ಉತ್ತರಿಸುವುದು ಕೇವಲ ವಿಷಯ ಜ್ಞಾನಕ್ಕಿಂತ, ಹೆಚ್ಚಿನ ಪರಿಣಿತಿಯನ್ನು ಬೇಡುತ್ತದೆ.  ಆದ್ದರಿಂದ ವಿಷಯಗಳ ಆಯ್ಕೆ ಅಭ್ಯರ್ಥಿಗಳ ವೈಯುಕ್ತಿಕ ನಿರ್ಧಾರಕ್ಕೆ ಬಿಟ್ಟ ಅಂಶವಾಗಿರುತ್ತದೆ.

ಅಂಬ್ರೇಶ ಕೆ. ಭೋವಿ
* ನಾನು ಪ್ರಥಮ ಪಿಯುಸಿಯಲ್ಲಿ ಓದುತ್ತಿದ್ದೇನೆ. ನಾನು ಉದ್ಯೋಗಕ್ಕೆ ಅರ್ಜಿ ಹಾಕಬೇಕೆಂದಿದ್ದೇನೆ. ಆದ್ದರಿಂದ ಸರ್ಕಾರಿ ಅರ್ಹತಾ ಪರೀಕ್ಷೆ. ವೃತಿ ಪರೀಕ್ಷೆ ಮುಂತಾದವುಗಳ ಬಗ್ಗೆ ತಿಳಿಸಿ ಕೊಡಿ.

ಇತ್ತೀಚೆಗೆ ಕೆಲವು ಉದ್ಯೋಗಗಳನ್ನು ಹೊರತು ಪಡಿಸಿದರೆ ಹೆಚ್ಚಿನ ಕೆಲಸಗಳಿಗೆ ಅರ್ಜಿಸಲ್ಲಿಸಲು ಕನಿಷ್ಠ ವಿದ್ಯಾರ್ಹತೆ ಪಿಯುಸಿಯಲ್ಲಿ ತೇರ್ಗಡೆ ಆಗಿರುತ್ತದೆ.  ಆದ್ದರಿಂದ ನೀವು ಮೊದಲು ಪಿಯುಸಿ ಮುಗಿಸುವ ಕಡೆ ಗಮನ ನೀಡಿ, ನಂತರ ಉದ್ಯೋಗಕ್ಕೆ ಪ್ರಯತ್ನಿಸಬಹುದು. ಸರ್ಕಾರಿ ಕೆಲಸಗಳಿಗೆ ಅರ್ಜಿ ಹಾಕುವುದರ ಬಗ್ಗೆ ಮಾಧ್ಯಮಗಳ ಮೂಲಕ ತಿಳಿದುಕೊಳ್ಳಬಹುದು.  ಹಾಗೂ ಹೆಚ್ಚಿನ ವಿವರಗಳು ಸಹಾ ಆಗಲೇ ಲಭ್ಯವಾಗುತ್ತವೆ.

ವೀರೇಶ ಎಸ್. ಕೋಳೆ, ನೀಲೂರ, ಅಫಜಲಪುರ ತಾಲ್ಲೂಕು
* ನಾನೀಗ ಬಿ.ಕಾಂ. ಓದುತ್ತಿದ್ದೇನೆ. ನನ್ನ ಜನ್ಮ ದಿನಾಂಕ 20-9-1992 ಆಗಿದ್ದು, ಇದು ಪ್ರಾಥಮಿಕ ಶಾಲಾ ದಾಖಲೆಯಲ್ಲಿ 20-9-1996 ಎಂದು ಬದಲಾಗಿದೆ. ಇದನ್ನು ಈಗ ಸರಿಪಡಿಸಿಕೊಳ್ಳಬಹುದೇ? ಇದು ಹಾಗೆಯೇ ಮುಂದುವರಿದರೆ, ಮುಂದೆ ಉದ್ಯೋಗಕ್ಕೆ ತೊಂದರೆಯಾಗಬಹುದೇ ? ಇದಕ್ಕೆ ಸೂಕ್ತ ಪರಿಹಾರ ನೀಡಬೇಕಾಗಿ ವಿನಂತಿ.

ನೀವು ಜನ್ಮ ದಿನದ ದಾಖಲೆಯಲ್ಲಿ ಆಗಿರುವ ತಪ್ಪನ್ನು ತಿದ್ದುಪಡಿ ಮಾಡಿಸಿಕೊಳ್ಳುವುದೇ ಉತ್ತಮ.  ಇದಕ್ಕಾಗಿ ನೀವು ವಕೀಲರ ನೆರವು ಪಡೆದು, ಕೋರ್ಟಿನ ಆದೇಶ ಪಡೆಯ ಬೇಕಾಗುತ್ತದೆ.  ನಿಮ್ಮ ಸರಿಯಾದ ವಯಸ್ಸನ್ನು ತೋರಿಸುವ ಎಲ್ಲ ದಾಖಲೆಗಳನ್ನು ಸಂಗ್ರಹಿಸಿ, ಈ ಬಗ್ಗೆ ಪ್ರಯತ್ನಿಸಿ.

ಎಸ್.ಎ.ಎಂ.
* ಕಲಾ ವಿಭಾಗದಲ್ಲಿ ಪಿಯುಸಿ ಮುಗಿಸಿ ಕಳೆದ ಎರಡು ವರ್ಷಗಳಿಂದ ನಮ್ಮ ಊರಿನಲ್ಲಿ ಬಿ.ಕಾಂ. ಪ್ರವೇಶ ಪಡೆದಿರುತ್ತೇನೆ.   ನನಗೆ ಇದರಲ್ಲಿ ಆಸಕ್ತಿ ಇಲ್ಲ. ಹೆಚ್ಚಿನ ವಿಷಯಗಳಲ್ಲಿ ಫೇಲಾಗಿದ್ದೇನೆ. ಪತ್ರಿಕೋದ್ಯಮದಲ್ಲಿ ಹೆಚ್ಚು ಆಸಕ್ತಿ ಇದೆ.  ಈಗ ಬಿ.ಕಾಂ. ಕೊನೆಯ ವರ್ಷದ ಪ್ರವೇಶ ಪಡೆದುಕೊಂಡಿಲ್ಲ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ.  ದೂರಶಿಕ್ಷಣದ ಮೂಲಕ ಬಿ.ಎ. ಮಾಡಬಹುದೇ? ದಯಮಾಡಿ ಮಾರ್ಗದರ್ಶನ ನೀಡಿ.

ನೀವು ದೂರ ಶಿಕ್ಷಣದ ಮೂಲಕ ಬಿ.ಎ. ಮಾಡಬಹುದು. ಪತ್ರಿಕೋದ್ಯಮವೂ ಸೇರಿದಂತೆ ನಿಮ್ಮ ಆಸಕ್ತಿಯ ಯಾವುದೇ ವಿಷಯವನ್ನು ಆರಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT