ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೆ ಕೇಳಬೇಕೆ?

Last Updated 27 ನವೆಂಬರ್ 2011, 19:30 IST
ಅಕ್ಷರ ಗಾತ್ರ

ವಿದ್ಯಾರ್ಥಿ : ಸರ್ ಹಡಗು ಹೇಗೆ ತೇಲುತ್ತದೆ ?
ಶಿಕ್ಷಕ : ಅದು ಹಡಗು ಅದಕ್ಕೆ ತೇಲುತ್ತೆ. ತಿಳಿತಾ,
ಕೂಡು, ಕೂಡು ಅಷ್ಟು ಗೊತ್ತಿಲ್ವಾ !
* * *
ವಿದ್ಯಾರ್ಥಿ : ಸರ್ ನಕ್ಷತ್ರಗಳು ಎಷ್ಟಿವೆ ?
ಶಿಕ್ಷಕ: ಹಾಂ! ಇವತ್ತು ರಾತ್ರಿ ಎಣಿಸಿ ಹೇಳ್ತಿನಿ
ವಸಿ ತಡಕ ಬಂದು ಬಿಟ್ಟ ದೊಡ್ಡ ಶ್ಯಾಣೆ ಹ್ಹ.. ಹ್ಹ... ಹ್ಹ....

ಈ ಅನುಭವಗಳು ಎಲ್ಲರ ಜೀವನದಲ್ಲೂ ಕಾಣಸಿಗುತ್ತವೆ. ಬೋಧನೆ ಹಾಗೂ ಕಲಿಕೆಯ ಪ್ರಕ್ರಿಯೆಯಲ್ಲಿ ಪ್ರಶ್ನೆಗಳು ಕಲಿಕೆಯ ದೃಢತೆಯನ್ನು ಸಾರುತ್ತವೆ. ಪ್ರಶ್ನೆಗಳೆ ಇರದಿದ್ದರೆ!?

ನಾವು ಜೀವನದ ವಿವಿಧ ಹಂತಗಳನ್ನು ತಲುಪಲು ಸಾಧ್ಯವಿತ್ತೆ? ಹಾಗಾದರೆ ಪ್ರಶ್ನೆಗಳಿಂದ ಕಲಿಕೆ ಸಾಧ್ಯವೆ? ಹೌದು, ಪ್ರಶ್ನೆಗಳಿಂದ ನಾವು ಕಲಿಕೆಯ ಫಲವನ್ನು, ಹಂತವನ್ನು, ಸಫಲತೆ, ವಿಫಲತೆ, ಶೂನ್ಯತೆಯನ್ನು ದೃಢಪಡಿಸಿಕೊಳ್ಳಬಹುದು. ಹಾಗೂ ಶಿಕ್ಷಕ ತನ್ನ ಬೋಧನೆಯು ತನ್ನ ಉದ್ದೇಶವನ್ನು ಎಷ್ಟರ ಮಟ್ಟಿಗೆ ಈಡೇರಿಸಿಕೊಂಡಿದೆ? ಎಂಬುದನ್ನು ತಿಳಿಯಲು ಸಾಧ್ಯ. ಆದ್ದರಿಂದ ಪ್ರಶ್ನೆಗಳು ಇಂದಿಗೂ ಜೀವಂತವಾಗಿವೆ ಹಾಗೂ ಮುಂದೆ ಕೂಡಾ......

ಹಲವಾರು ಬಾರಿ ನಮಗೆ  ಜೀವನವು ಒಂದು ಪ್ರಶ್ನೆಗಳ ಕೋಶ ಹಾಗೂ ನಾವು ಅದಕ್ಕೆ ಉತ್ತರಗಳನ್ನು ಹುಡುಕುವುದೇ ಕಾಯಕ ಎಂದು ಅನಿಸಿರುತ್ತದೆ. ಜೀವನವೇ ಒಂದು ಪ್ರಶ್ನಾರ್ಥಕ ಚಿನ್ಹೆ-ಜೀವನ? ಹಾಗಾದರೆ ಇದಕ್ಕೆ ಸರಿಯಾದ ಉತ್ತರದ ಪೂರ್ಣ ವಿರಾಮವೇ ಅಂತಿಮ.
 
ಸರಿ ಈ ಪ್ರಶ್ನೆಗಳು ಅವ್ಯಾಹತವಾಗಿ ಸಂಚರಿಸುವ ವ್ಯಾಪ್ತಿ ಪ್ರದೇಶ ಎಂದರೆ ಶಿಕ್ಷಣರಂಗ. ಆದರೆ ಶಿಕ್ಷಣರಂಗದಲ್ಲಿ ಸದ್ಯ ಪ್ರಶ್ನೆಗಳ ವಿರಾಟರೂಪ ದರ್ಶನವಾಗುವುದು ಪರೀಕ್ಷೆಗಳಲ್ಲಿ ಮಾತ್ರ ! ಇಲ್ಲವೆ ಪರೀಕ್ಷಾ ದೃಷ್ಟಿಯಿಂದ, ಪಠ್ಯಕ್ರಮಕ್ಕೆ ಸಿಮೀತವಾಗಿರುವ, ಪ್ರಶ್ನೆಗಳು. ಇವುಗಳು ಕೇವಲ ಪಠ್ಯಪುಸ್ತಕ ಹಾಗೂ ಪರೀಕ್ಷೆಗೆ ಸೀಮಿತವಾದರೆ ಮಕ್ಕಳು/ವಿದ್ಯಾರ್ಥಿಗಳು ಕೂಡಾ ಸೀಮಿತ ಜ್ಞಾನ ಗ್ರಾಹಿಗಳಾಗುವ ಸಂಭವನೀಯತೆ ಹೆಚ್ಚು.

ಹಾಗಾದರೆ ಶಿಕ್ಷಣದ ಮೂಲ ಉದ್ದೇಶವಾದ ಮಗುವಿನ ಸರ್ವಾಂಗೀಣ/ ಸರ್ವತೋಮುಖ ವಿಕಾಸಕ್ಕೆ ಕೊಡಲಿ ಪೆಟ್ಟನ್ನು ನೀಡಿದಂತಾಗುವುದಿಲ್ಲವೆ? ಇದಕ್ಕಾಗಿ ವರ್ಗ, ಕೋಣೆಗಳಲ್ಲಿ ಪ್ರಶ್ನೆಗಳ ಓಡಾಟ ಹೆಚ್ಚಿಸಿ ಮಕ್ಕಳಲ್ಲಿ ಪ್ರಶ್ನೆ ಕೇಳುವ ಕೌಶಲವನ್ನು ಬೆಳೆಸುವುದು ಸದ್ಯದ ಅವಶ್ಯಕತೆಯಾಗಿದೆ. ಇಲ್ಲವಾದಲ್ಲಿ ಜ್ಞಾನ ಕೇಂದ್ರಿತವಾಗಬೇಕಾದ ಜಗತ್ತು ಕೇವಲ ಮಾಹಿತಿ ಕೇಂದ್ರಿತವಾಗುತ್ತದೆ.

ಸದ್ಯದ ಜಾಗತೀಕರಣದ ಜಗತ್ತಿನಲ್ಲಿ ಮಾನವ ಪ್ರಶ್ನೆಗಳಿಂದ ದೂರ ಉಳಿದು ಅಥವಾ ಇತರರಿಗೆ ಯಾವುದನ್ನಾದರೂ ಕುರಿತು ಕೇಳುವುದು, ಚಿಂತನ ಮಂಥನ ನಡೆಸುವುದು ಕ್ಷೀಣವಾಗುತ್ತಾ ಸಾಗಿದೆ. ಇದಕ್ಕೆ ಹಲವಾರು ಕಾರಣಗಳುಂಟು. ಅದರಲ್ಲಿ ಪ್ರಮುಖವಾದುದು. ಮಾಹಿತಿ ತಂತ್ರಜ್ಞಾನದ ಸ್ಫೋಟ-ಅಂತರ್ಜಾಲ.
 
ಅಂತರ್ಜಾಲದಲ್ಲಿ ಜಾಲಾಡಿ ಮಾಹಿತಿಯನ್ನು ಹುಡುಕುತ್ತೇವೆ. ಹಾಗೂ ಅದರಲ್ಲಿ ಇರುವುದು ಖಂಡಿತ ಸತ್ಯವೆಂದು ನಂಬುವ ನಾವು ಅದರ ಕುರಿತು ಅಥವಾ ಅದರ ಸತ್ಯಾಸತ್ಯತೆ ಕುರಿತು ಒರೆಗಲ್ಲಿಗೆ ಹಚ್ಚ್ದ್ದಿದೇವೆಯೆ? ಹಾಗಾದರೆ ಒರೆಗಲ್ಲು ಎಂದರೆ ಬೆಳಕಿನೆಡೆಗೆ. ಹಾಗಾದರೆ ಕೇಳಿ ಪ್ರಶ್ನೆ !

ಪ್ರಶ್ನೆ ಪೆಟ್ಟಿಗೆ
ಪ್ರಶ್ನೆಗಳ ಮಹತ್ವ ಅರಿತು ನಮ್ಮ ಸಾರ್ವಜನಿಕ ಶಿಕ್ಷಣ ಇಲಾಖೆ ಎಲ್ಲ ಶಾಲೆಗಳಲ್ಲಿ  ಪ್ರಶ್ನೆ ಪೆಟ್ಟಿಗೆ  ಎಂಬ ಶಿರೋನಾಮೆಯ ಉಪಯುಕ್ತ ಪ್ರಯೋಗ ಮಾಡಿ ಯಶಸ್ಸನ್ನು ಗಳಿಸಿದೆ. ಇಲ್ಲಿ ಜ್ಞಾನದಾಹಿ ಮಗು ತನಗರಿಯದ ವಿಷಯವನ್ನು ತಿಳಿಯಲು ಒಂದು ಕಾಗದದಲ್ಲಿ ಬರೆದು ಅದನ್ನು ಪ್ರಶ್ನೆಕೋಶ/ಪೆಟ್ಟಿಗೆಯಲ್ಲಿ ಹಾಕುತ್ತದೆ. ನಂತರ ವಾರಕ್ಕೆ ಒಂದು ಬಾರಿ ಇಲ್ಲವೆ ಹದಿನೈದು ದಿನಗಳಿಗೊಮ್ಮೆ ಪೆಟ್ಟಿಗೆಯನ್ನು ತೆರೆದು ಉತ್ತರಗಳನ್ನು ಸಂಬಂಧಿಸಿದ ಅಧ್ಯಾಪಕರು ನೀಡುವ ಈ ಪ್ರಯತ್ನ ನಿಜಕ್ಕೂ ಜ್ಞಾನಾರ್ಜನೆಗೆ, ಜ್ಞಾನಾರ್ಪಣೆಗೆ ಪೂರಕವಾದುದು. ಈ ದಿಸೆಯಲ್ಲಿ  ಸದರಿ ಕಾರ್ಯಕ್ರಮವು ನಿರಂತರವಾಗಿ ನಡೆಯುವುದು ಅಪೇಕ್ಷಣೀಯ.

 ಶಿಕ್ಷಣದಲ್ಲಿ ಔಪಚಾರಿಕ/ಅನೌಪಚಾರಿಕ ಸಂಭಾಷಣೆಗೆ ಮಹತ್ವದ ಪಾತ್ರವಿದೆ. ಇಲ್ಲಿ ಶಿಕ್ಷಕ ಹಾಗೂ ವಿದ್ಯಾರ್ಥಿ ಪರಸ್ಪರ ಸಂಭಾಷಿಸಬೇಕೆಂದರೆ ಹಾಗೂ ಪರಸ್ಪರ ಜ್ಞಾನ ವಿನಿಮಯ ಹಾಗೂ ಹಂಚಿಕೆಯಾಗಬೇಕಾದರೆ ಪ್ರಶ್ನೆಗಳು ಅವಶ್ಯವಲ್ಲವೆ? ಹಾಗಾಗಿ ಪ್ರಶ್ನೆ ಕೇಳುವ ಹವ್ಯಾಸವನ್ನು ಮಕ್ಕಳಲ್ಲಿ ಬೆಳೆಸುವುದು ಕಲಿಕೆಯ ವೇಗವರ್ಧನೆಗೆ ಸಹಾಯಕ ಎಂದು ನಮ್ಮ ಹಿರೀಕರು ಹಾಗೂ ಇಂದಿನ ಯುವಕರ ಹಾಗೂ ಮಕ್ಕಳ  `ಐಕಾನ್~  ಆದಂತಹ  ಎ.ಪಿ.ಜೆ ಅಬ್ದುಲ್ ಕಲಾಂ ರವರು ಕೂಡಾ ಸದರಿ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ.

ಹಾಗಾದರೆ ಪ್ರಶ್ನೆಗಳು ಶಿಕ್ಷಕರ ಗುಣಾತ್ಮಕ ಹಾಗೂ ಪರಿಮಾಣಾತ್ಮಕ ಬೋಧನೆಯ ಪ್ರತಿಬಿಂಬ ಎಂತಾದರೆ, ಶಿಕ್ಷಕರು ತಮ್ಮ ಬೋಧನೆಯಲ್ಲಿ ಕುತೂಹಲಯುಕ್ತತೆ ಅಂಶವನ್ನು ಅಳವಡಿಸಿಕೊಳ್ಳುವದು ಸದ್ಯದ ಅಗತ್ಯ. ಹಾಗಾದರೆ ಶಿಕ್ಷಕರು :

*ಬೋಧನೆ ಮಧ್ಯದಲ್ಲಿ ಮಕ್ಕಳಿಂದ ತೂರಿ ಬರುವ ಪ್ರಶ್ನೆಗಳಿಗೆ ಸಮಾಧಾನದಿಂದ ಉತ್ತರಿಸುವಂತಾಗಬೇಕು.

*ಪದೇ ಪದೇ ಪ್ರಶ್ನೆಗಳು ತೂರಿಬಂದಾಗ ಪ್ರತಿ ಬಾರಿಯು ನೂತನ ಉದಾಹರಣೆಯೊಂದಿಗೆ ಉತ್ತರಿಸುವಂತಾದಲ್ಲಿ ಇನ್ನೂ ಉತ್ತಮ

*ವಿದ್ಯಾರ್ಥಿ ಪ್ರಶ್ನೆ ಕೇಳಿದಾಗ ತಕ್ಷಣವೇ  `ನೋ ಕ್ವೆಶ್ಚನ್ಸ್ ಪ್ಲೀಸ್~ ಎಂಬ ಸಿದ್ಧ ಉತ್ತರ ನೀಡುವುದು ಸೂಕ್ತವೆ?

*ಪಾಠದ ಮಧ್ಯದಲ್ಲಿ ಮಗು ಪ್ರಶ್ನೆ ಕೇಳಿದಾಗ,  `ಮಧ್ಯದಲ್ಲಿ  ಪ್ರಶ್ನೆಯನ್ನು ಕೇಳುವ ಹಾಗಿಲ್ಲ, ಅದೇನಿದ್ದರೂ ಪಾಠ ಮುಗಿದ ನಂತರವೆ~  ಎಂದರೆ ಮಗುವಿನ ತಿಳಿವಿನ ಪರದೆಯನ್ನು ಗಟ್ಟಿಮಾಡಿದಂತಾಗುತ್ತದೆಯೇ? ಮಕ್ಕಳೇನು ಧ್ವನಿ ಮುದ್ರಿಸುವ ತಟ್ಟೆಗಳೆ ಎಲ್ಲವನ್ನು ಅಂತ್ಯದವರೆಗೆ ನೆನಪಿನಂಗಳದಲ್ಲಿ ಸದಾ ಇಡುವುದಕ್ಕೆ ?

*ಪ್ರಶ್ನೆ ಕೇಳಿದ ಮಗುವಿನಲ್ಲಿ ಕಲಿಕೆಯ ವಾತಾವರಣ ಹದಗೊಂಡಿರುತ್ತದೆ. ತಕ್ಷಣವೆ ಆ ಮಗುವಿಗೆ ತಾನು ಕೇಳಿದ ಪ್ರಶ್ನೆಗೆ ಉತ್ತರ ದೊರಕಿದರೆ ಕಲಿಕೆಯ ರಸಾನುಭವ ಹೊಂದುತ್ತದೆ.

ವಿಶೇಷ ಎಂದರೆ ಧೈರ್ಯದಿಂದ ಮಗು ಎದ್ದುನಿಂತು ಪ್ರಶ್ನಿಸಿದಾಗ ಹಾಗೂ ಅದು ಹೊಸ ಅಥವಾ ವಿಶಿಷ್ಟ ಪ್ರಶ್ನೆಯಾಗಿದ್ದಲ್ಲಿ ಮೊದಲು ಶಿಕ್ಷಕ  (ಉತ್ತರಿಸುವವರು) ` ಉತ್ತಮ ಪ್ರಶ್ನೆ~ ಎಂದು ಮೆಚ್ಚುಗೆ ವ್ಯಕ್ತಪಡಿಸಿ ತಾನೂ ಮೊದಲ್ಗೊಂಡು ಮಕ್ಕಳಿಂದ ಚಪ್ಪಾಳೆ ತಟ್ಟಿಸಿದರೆ ಆ ಮಗುವಿನ ಆತ್ಮಸ್ಥೈರ‌್ಯ ಇಮ್ಮಡಿಗೊಂಡು ಕಲಿಕೆ ಬಲಗೊಂಡು, ಉಳಿದ ಮಕ್ಕಳು ಕೂಡಾ ಸಾಮಾನ್ಯವಾಗಿ ತಮ್ಮಲ್ಲಿರುವ ಅಳಕು ಸ್ವಭಾವ ತೋರ್ಪಡಿಸದೇ ತಮಗೂ ಕೂಡಾ ಸಕಾರಾತ್ಮಕ ಪ್ರತಿಕ್ರಿಯೆ ಕಾದಿದೆ ಎಂದು ಎಗ್ಗಿಲ್ಲದೆ ಅರಿವಿನ ಹರವನ್ನು ವಿಸ್ತಾರಗೊಳಿಸಲು ಪ್ರಶ್ನೆಗಳೆಂಬ  ಕಲಿಕೆಯ ಸಂಭಾಷಣೆಗೆ ಅಣಿಯಾಗುತ್ತಾರೆ.

ಇದರ ಬದಲಾಗಿ `ಸುಮ್ಮನಿರಬೇಕು ! ಮಧ್ಯ ಯಾರೂ ಏನು ಕೇಳಕೂಡದು !~ ಇತ್ಯಾದಿ ನಕಾರಾತ್ಮಕ ಧೋರಣೆಯ, ಕಲಿಕೆಯನ್ನು ಹಿಮ್ಮೆಟ್ಟಿಸುವ ಪದಪುಂಜಗಳನ್ನಾಡಿದರೆ ಕಲಿಕೆಗೆ ಪೂರಕವಾದಂತಹ ವಾತಾವರಣವನ್ನು ಒದಗಿಸಿದಂತಾಗುವುದೇ ?

ಪ್ರಶ್ನೆ ಕೇಳುವಿಕೆಯಲ್ಲಿ  ಈ ಕೆಳಗಿನ ಪ್ರಾಥಮಿಕ ಕ್ರಮಗಳನ್ನು ಅನುಸರಿಸಬಹುದು.
* ಮಕ್ಕಳಿಂದ ಅತ್ಯುತ್ತಮ ಪ್ರಶ್ನೆಗಳು ತೂರಿ ಬಂದಾಗ ಅವುಗಳನ್ನು ವರ್ಗದ ಕಪ್ಪು ಹಲಗೆಯ ಮೇಲೆ ಬರೆಯುವುದು. ಸಾಧ್ಯವಾದಲ್ಲಿ ಆ ಪ್ರಶ್ನೆಯನ್ನು ಎಲ್ಲ ವಿದ್ಯಾರ್ಥಿಗಳಿಗೆ ಬರೆಯಲು ಹೇಳುವುದು.

*ಮಕ್ಕಳು ಯೋಚನಾ ಲಹರಿಯಲ್ಲಿ ವಿಹರಿಸುವ ಪ್ರಶ್ನೆಗಳನ್ನು ಕೇಳುವುದು.

*ಎಲ್ಲರಿಗೂ ಅವರದೇ ಆದ ಉತ್ತರವನ್ನು ಹೇಳಲು ಪ್ರೋತ್ಸಾಹಿಸುವುದು.

*ಸಂದರ್ಭಕ್ಕನುಗುಣವಾಗಿ ವಿದ್ಯಾರ್ಥಿಗಳು ಸಮರ್ಥನೆ ನೀಡುವಂತ ಪ್ರಶ್ನೆಗಳನ್ನು ಕೇಳುವುದು.

*ಅಗತ್ಯವಿದ್ದಲ್ಲಿ ವಿದ್ಯಾರ್ಥಿಗಳನ್ನು ಗುಂಪುಗಳಾಗಿ ವಿಂಗಡಿಸಿ ಚರ್ಚೆಗೆ ನೂಕಿ ಆರೋಗ್ಯಕರ ಪ್ರಶ್ನೋತ್ತರ ಮಾಲೆ ರೂಪಿಸುವುದು.

*ಮಕ್ಕಳು ಉತ್ತರಿಸುವಾಗ ತಾವೇ ಸ್ವತಃ ವ್ಯಾಖ್ಯಾನಿಸುವ ರೀತಿಯಲ್ಲಿ ಪ್ರಶ್ನೆ ಕೇಳುವುದು.

*ಮಕ್ಕಳು ಹೋಲಿಸುವ, ವ್ಯತ್ಯಾಸ ತಿಳಿಸುವ, ಉದಾಹರಿಸುವ, ವಿಶ್ಲೇಷಿಸುವ, ವಿಷಯ ವಿಸ್ತರಿಸುವ ಪ್ರಶ್ನೆಗಳನ್ನು ಅನುಸರಿಸುವುದು.

*ಪ್ರಶ್ನೆಯನ್ನು ವರ್ಗಕೋಣೆಗೆ ಹಾಕಿದಾಗ ಅದು ಎಲ್ಲರಿಗೂ ಕೇಳಿದ ಪ್ರಶ್ನೆಯಾಗಿರುತ್ತದೆ.

ಆದರೆ ಒಬ್ಬ ವಿದ್ಯಾರ್ಥಿ ಉತ್ತರಿಸುವಾಗ ಎಲ್ಲ ವಿದ್ಯಾರ್ಥಿಗಳು  ಉತ್ತರದ ಕಡೆಗೆ ಗಹನವಾಗಿ ಗಮನಿಸಿ, ಉತ್ತರವನ್ನು ಖಚಿತಪಡಿಸಿಕೊಂಡಾಗ ಮಾತ್ತ ಬಹುಪಾಲು ಕಲಿಕೆಯುಂಟಾಗುತ್ತದೆ. ಇಲ್ಲವಾದಲ್ಲಿ ಕೇವಲ ಪ್ರಶ್ನಿಸುವವರ ಹಾಗೂ ಉತ್ತರಿಸುವವರ ಸಂಭಾಷಣೆಯಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಒಂದೇ ಉತ್ತರವನ್ನು ಹಲವು ವಿದ್ಯಾರ್ಥಿಗಳಿಂದ ಪುನಃ ಹೇಳಿಸುವುದು.

*ಕೆಲವು ಬಾರಿ ತಕ್ಷಣದ ಪ್ರತಿಕ್ರಿಯೆಗೆ ಹಾಗೂ ಹಲವಾರು ಬಾರಿ ಯೋಚಿಸಿ ಪ್ರತಿಕ್ರಿಯಿಸುವ ಹವ್ಯಾಸ ಬೆಳಸಿ ಆಯಾ ಸಂದರ್ಭಕ್ಕೆ ನಿರಾಯಾಸವಾಗಿ  ಉತ್ತರಿಸುವ ಸಾಮರ್ಥ್ಯವನ್ನು ಬೆಳೆಸುವದು ಅಪೇಕ್ಷಣೀಯ.

*ಶಾಲಾ ಪ್ರಕಟಣಾ ಫಲಕದ ಮೇಲೆ  ಮಾಸದ ಪ್ರಶ್ನೆ  (ಎಂದರೆ ಆಯಾ ತಿಂಗಳಲ್ಲಿ ಮಕ್ಕಳಿಂದ ತೂರಿಬಂದ ಪ್ರಶ್ನೆಗಳಲ್ಲಿಯೇ ಉತ್ತಮವಾದುದು) ಪ್ರಕಟಿಸಿ ಅದು ಮಕ್ಕಳಲ್ಲಿ ಮಾಸದ ಪ್ರಶ್ನೆಯಾಗಿ ಉಳಿದು ಹೆಚ್ಚು ಚರ್ಚಿತವಾಗಿ, ಕುತೂಹಲ ಮೂಡಿ ಅದರ ಉತ್ತರವು ಕೂಡಾ ಮಕ್ಕಳ ಮನಸ್ಸಿನಿಂದ ಮಾಸದೇ ಹಸಿರಾಗಿರಿಸಲು ಪ್ರಯತ್ನಿಸುವದು.

*ಆದರೆ ಪ್ರಶ್ನೆ ಕೇಳುವುದಕ್ಕಾಗಿಯೇ ಪ್ರಶ್ನೆ ಕೇಳು  ಚಾಳಿ  ಬೆಳೆಸದೇ, ಬೆಳಸಿಕೊಳ್ಳದೇ ವಿಷಯ ವಸ್ತುವನ್ನು ಅರ್ಥೈಸಲು, ಅರ್ಥೈಸಿಕೊಳ್ಳುವಂತೆ ಮಾಡುವುದು ಸಹಜ ಕಲಿಕೆಗೆ ನೀರು ಗೊಬ್ಬರ ಪೂರೈಸಿದಂತೆ.

*ಪ್ರತಿಯೊಬ್ಬ ಶಿಕ್ಷಕರು ತಮ್ಮ ವಿಷಯಾವಾರು ಪ್ರಶ್ನಾವಳಿ/ಪ್ರಶ್ನಾಕೋಶ, ಹೊಂದುವುದು.
   ಆದ್ದರಿಂದ ಮಕ್ಕಳನ್ನು ಮಾಹಿತಿ ಕೇಂದ್ರಿತ ಜಗತ್ತಿನ ದಾಸರನ್ನಾಗಿಸದೇ, ಜ್ಞಾನಕೇಂದ್ರಿತ ಪ್ರಪಂಚದ ಪ್ರಭಾವಿ ಮತಿಗಳನ್ನಾಗಿಸಿ ಯಾವುದೇ ವಿಷಯ ವಸ್ತುವನ್ನು ಕೇವಲ ಮಾಹಿತಿಗಾಗಿ ಪ್ರಶ್ನಿಸದೇ, ಅದನ್ನು ವಿಶ್ಲೇಷಿಸುವ, ವಿವರಿಸುವ, ಮಾರ್ಪಾಡು ಮಾಡುವ, ಹೋಲಿಸುವ ಹಾಗೂ ಘನತೆ ಹೆಚ್ಚಿಸುವ ಕುಶಲತೆಯನ್ನು ಹೊಂದುವುದನ್ನೇ ಹವ್ಯಾಸವಾಗಿ ಬೆಳೆಸುವುದು ತೀರಾ ಅಗತ್ಯವಾಗಿದೆ.

 ಇದಕ್ಕೆ ಪೂರಕವಾಗಿಯೇ ಇದು ಸದ್ಯದ ನಮ್ಮ ದೇಶವಾಸಿಗಳ ಅದರಲ್ಲಿಯೂ ಸಾಮಾನ್ಯರ ಅಸಾಮಾನ್ಯ ಕಾನೂನಾತ್ಮಕ ಆಯುಧವಾದ ಮಾಹಿತಿ  ಹಕ್ಕಿಗೆ ರೆಕ್ಕೆಪುಕ್ಕ ಬಂದಿದ್ದೆ ಈ ಪ್ರಶ್ನಿಸುವ  ಹಕ್ಕಿನಿಂದಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT