ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೆಗಳ ಲೋಕದಲ್ಲಿ ಉತ್ತರಗಳ ಹೊಳಹು

Last Updated 1 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ವಾಸ್ತುಶಿಲ್ಪಿ ಆಗಬೇಕೆಂದುಕೊಂಡಿದ್ದ ಆದಿತ್ಯನಾಥ್ ಮುಬೇ ತಲೆಯಲ್ಲಿ ಒಂದಿಷ್ಟು ಪ್ರಶ್ನೆಗಳಿದ್ದವು. ‘ಈ ಪ್ರಶ್ನೆಗಳನ್ನೆಲ್ಲಾ ಕಟ್ಟಡದ ವಾಸ್ತುವಿನ ನಡುವೆ ಮುಚ್ಚಲು ಮನಸ್ಸಿಲ್ಲದೆ, ಕ್ವಿಜ್‌ ಮಾಸ್ಟರ್‌ ಆದೆ’ ಎಂದು ನಗುತ್ತಾರೆ ಅವರು. ಅಜ್ಜಿ ಕೊಟ್ಟ ಕ್ವಿಜ್ ಪುಸ್ತಕ ಇವರಿಗೆ ದಾರಿದೀಪವಂತೆ. ಹಿಂದಿಯಲ್ಲಿ ಅಮಿತಾಭ್‌ ಬಚ್ಚನ್‌ ನಡೆಸಿಕೊಡುತ್ತಿರುವ ‘ಕೌನ್ ಬನೇಗಾ ಕರೋಡ್‌ಪತಿ’ಯ ಕಂಟೆಂಟ್‌ ಎಡಿಟರ್‌ ಆಗಿ ಸ್ವಲ್ಪ ಸಮಯ ಕೆಲಸ ಮಾಡಿದ್ದರು. ಇತ್ತೀಚೆಗೆ ಆಕ್ಸ್‌ಫರ್ಡ್‌ ವಿಶ್ವವಿದ್ಯಾನಿಲಯದಲ್ಲಿ ನಡೆದ ‘ಷೇಕ್ಸ್‌ಪಿಯರ್ ಕುರಿತಾದ ರಸಪ್ರಶ್ನೆ’ ಕಾರ್ಯಕ್ರಮಕ್ಕೆ ಬಂದಿದ್ದ ಅವರು ‘ಮೆಟ್ರೊ’ದೊಂದಿಗೆ ಒಂದಿಷ್ಟು ಹೊತ್ತು ಮಾತಾಡಿದರು.

‘ಕೌನ್ ಬನೇಗಾ ಕರೋಡ್‌ಪತಿ’ಯ ನಿಮ್ಮ ಪಯಣದ ಅನುಭವ ಹೇಗಿತ್ತು?
ಈ ಬಗ್ಗೆ ಹೇಗೆ ಹೇಳುವುದು ಎಂದು ಖಂಡಿತ ತಿಳಿಯುತ್ತಿಲ್ಲ. ನಾನು ಆ ಎಪಿಸೋಡ್‌ಗಳ ಭಾಗವಾಗಿದ್ದೆ ಎಂಬುದು ಸಂತಸದ ಸಂಗತಿ. ಆದರೆ 2002ರಲ್ಲಿ ಕಂಪೆನಿ ಬಿಟ್ಟ ನಂತರ ನನಗೂ ಅದಕ್ಕೂ ನೇರ ಸಂಪರ್ಕ ಇಲ್ಲ. ಆದರೆ ಕಾರ್ಯಕ್ರಮವನ್ನಂತೂ ಆಗಾಗ್ಗೆ ನೋಡುತ್ತಿದ್ದೆ.

ರಸಪ್ರಶ್ನೆಗಳನ್ನು ಸಿದ್ಧಪಡಿಸುವಾಗ ಯಾವ ರೀತಿಯ ಸವಾಲುಗಳನ್ನು ಎದುರಿಸಿದ್ದೀರಿ?
ಜನರನ್ನು ಇದರಲ್ಲಿ ಭಾಗವಹಿಸುವಂತೆ ಮಾಡುವುದೇ ಮುಖ್ಯ ಸವಾಲಾಗಿತ್ತು. ಅವರಲ್ಲಿನ ಭಯವನ್ನು ಹೋಗಲಾಡಿಸಿ, ಅವರನ್ನು ವೇದಿಕೆ ಮೇಲೆ ಬರುವಂತೆ ಮಾಡುವುದು ನಿಜಕ್ಕೂ ಕಷ್ಟ. ಇದಾದ ಮೇಲೆ ಸವಾಲೆಸೆಯುವ ಪ್ರಶ್ನೆಗಳನ್ನು ಸಿದ್ಧಪಡಿಸುವುದು ಮತ್ತೊಂದು ದೊಡ್ಡ ಸವಾಲು.

  ಅದು ಅಷ್ಟೊಂದು ಕಷ್ಟದ ಕೆಲಸವಲ್ಲವಾದರೂ ಅಂದುಕೊಂಡಷ್ಟು ಸುಲಭವೂ ಅಲ್ಲ. ಪ್ರಶ್ನೆಗಳು ಆಸಕ್ತಿಯನ್ನು ಹುಟ್ಟುಹಾಕುವಂತೆ ನೋಡಿಕೊಳ್ಳುವುದು ಮುಖ್ಯವಾಗಿತ್ತು. ಅಷ್ಟೇ ಅಲ್ಲ, ಜನಜಂಗುಳಿಯ ಗದ್ದಲ ನಿವಾರಣೆಯೂ ಸಮಸ್ಯೆ ಎನಿಸಿಬಿಡುತ್ತಿತ್ತು. ನಾನು ವೇದಿಕೆ ಮೇಲೆ ಹೋದಾಕ್ಷಣ ಮಾಡುವ ಮೊದಲ ಕೆಲಸವೆಂದರೆ, ಅಲ್ಲಿರುವವರು ಕಂಫರ್ಟ್‌ ಆಗಿರುವಂತೆ ನೋಡಿಕೊಳ್ಳುವುದು. ನೋಡುಗರನ್ನೂ ಅದರಲ್ಲಿ ಭಾಗಿಯಾಗುವಂತೆ ಮಾಡುವುದು.

ಕಾರ್ಯಕ್ರಮಕ್ಕೆ ಮೊದಲು ತಯಾರಿ ಹೇಗಿರುತ್ತದೆ?
ನಾನು ಕೇಳುವ ಪ್ರಶ್ನೆಗಳ ಬಗ್ಗೆ ಮೊದಲು ತಿಳಿದುಕೊಳ್ಳುತ್ತೇನೆ. ಆ ಪ್ರಶ್ನೆಗಳಿಗೆ ಸಂಬಂಧಪಟ್ಟ ವಿಷಯ, ಪರ್ಯಾಯ ಉತ್ತರಗಳ ಕುರಿತು ಮಾಹಿತಿ ಸಂಗ್ರಹಿಸುತ್ತೇನೆ. ಪ್ರಶ್ನೆಗಳನ್ನು ನಾನೇ ಸಿದ್ಧಪಡಿಸಿಕೊಂಡಿರುವುದರಿಂದ ನಾಲ್ಕು ಆಯ್ಕೆಗಳನ್ನು ಸಿದ್ಧಪಡಿಸುವುದ ನನಗೆ ಕಷ್ಟವಾಗುವುದಿಲ್ಲ. ಕ್ವಿಜ್‌ ಮಾಸ್ಟರ್‌ ಆದಮೇಲೆ ಎಲ್ಲಾ ವಿಷಯಗಳ ಬಗ್ಗೆ ಸಮಗ್ರವಾಗಿ ತಿಳಿದುಕೊಳ್ಳುವುದು ಅನಿವಾರ್ಯ. ಅವರ ಉತ್ತರ ತಪ್ಪಾದರೆ ಅದಕ್ಕೆ ಉತ್ತರ ನೀಡುವುದೂ ನಮ್ಮ ಹೊಣೆಯಲ್ಲವೇ? ಇದು ನನ್ನ ಸಾಮರ್ಥ್ಯವನ್ನೂ ಹೆಚ್ಚಿಸುತ್ತದೆ.

ವೇದಿಕೆಗೆ ಕಾಲಿಡುವ ಮುನ್ನ ದೀರ್ಘವಾದ ಉಸಿರು ತೆಗೆದುಕೊಂಡು ಶಾಂತಚಿತ್ತನಾಗಿ ಹೋಗುತ್ತೇನೆ. ಬೇರೆಲ್ಲಾ ವಿಷಯಗಳನ್ನು ಮನಸ್ಸಿನಿಂದ ತೆಗೆದುಹಾಕಿ ಕಾರ್ಯಕ್ರಮದ ಮೇಲೆ ಏಕಾಗ್ರತೆ ಇಡುತ್ತೇನೆ. ಕ್ವಿಜ್ ಶುರುವಾಗುತ್ತಿದ್ದಂತೆ ಸಂಪೂರ್ಣ ಅದರಲ್ಲಿ ತೊಡಗಿಕೊಳ್ಳುತ್ತಿದ್ದೆ.

ನಿಮ್ಮ ಸ್ಫೂರ್ತಿ ಯಾರು?
ಇಂಥವರೇ ಎಂದು ಹೇಳಲು ಸಾಧ್ಯವಿಲ್ಲ. ಆದರೆ ನನ್ನ ಮೇಲೆ ಹೆಚ್ಚು ಪರಿಣಾಮ ಬೀರಿದವರೆಂದರೆ ನನ್ನ ಅಜ್ಜಿ. ಅವರೇ ನನಗೆ ಮೊದಲು ಕ್ವಿಜ್ ಪುಸ್ತಕ ತಂದುಕೊಟ್ಟಿದ್ದು. ಅಲ್ಲಿಂದಲೇ ನನ್ನ ಆಸಕ್ತಿಯೂ ಆರಂಭವಾಗಿದ್ದು. ನನ್ನ ಶಾಲೆಯ ಮುಖ್ಯೋಪಾಧ್ಯಾಯ ಡಿಸೋಜಾ ಅವರೂ ನನಗೆ ಸ್ಫೂರ್ತಿ. ಏಕೆಂದರೆ ನನ್ನ ಪ್ರತಿಭೆಯನ್ನು ನಂಬಿ ಹದಿನೇಳು ಹದಿನೆಂಟು ವರ್ಷದವರ ಜೊತೆ ಹತ್ತು ವರ್ಷದವನಾದ ನನ್ನನ್ನು ಕ್ವಿಜ್ ಸ್ಪರ್ಧೆಗಳಿಗೆ ಕಳುಹಿಸಿಕೊಡುವ ಮೂಲಕ ಧೈರ್ಯ ತುಂಬಿದವರು ಅವರು.

ಇಲ್ಲಿಯವರೆಗೆ ಎಷ್ಟು ಶೋ ನೀಡಿದ್ದೀರಿ?
ಸುಮಾರು ಸಾವಿರ ಶೋ ನೀಡಿದ್ದೇನೆ. ಕಳೆದ ನಾಲ್ಕೈದು ವರ್ಷಗಳಿಂದ ವರ್ಷಕ್ಕೆ 200ರಿಂದ 250 ಶೋ ನೀಡುವಷ್ಟು ಹೆಚ್ಚಿದೆ.

ಕ್ವಿಜ್‌ ಮಾಸ್ಟರ್‌ ಆದವರಿಗೆ ಯಾವ ಅರ್ಹತೆ ಇರಬೇಕು?
ಸಂವಹನ ಗುಣ ತುಂಬಾ ಮುಖ್ಯ. ಆತ್ಮವಿಶ್ವಾಸ, ಸಾಮಾನ್ಯ ಜ್ಞಾನ ಅವಶ್ಯಕ. ತುಂಬಾ ಬುದ್ಧಿವಂತರಲ್ಲದಿದ್ದರೂ ಹೆಚ್ಚು ತಿಳಿದುಕೊಂಡಿರುವುದು ಅವಶ್ಯಕ.

ನಿಮ್ಮ ಜ್ಞಾನ ಹೆಚ್ಚಿಸಿಕೊಳ್ಳಲು ಏನೇನು ಮಾಡುತ್ತೀರಿ?
ದಿನಪತ್ರಿಕೆ, ಪುಸ್ತಕ, ನಿಯತಕಾಲಿಕೆಗಳೇ ಇದಕ್ಕೆ ಮೂಲ. ಜೊತೆಗೆ ಗೈಡ್‌, ಎಲೆಕ್ಷನ್‌ ಪೋಸ್ಟರ್‌ಗಳು, ಕರೆನ್ಸಿ ಎಲ್ಲವೂ ಉಪಯೋಗಕ್ಕೆ ಬರುತ್ತವೆ. ನನ್ನಿಂದ ಎಷ್ಟು ಸಾಧ್ಯವೋ ಅಷ್ಟು ಓದಲು ಪ್ರಯತ್ನಿಸುತ್ತೇನೆ. ಇದರಿಂದ ಪ್ರಚಲಿತ ಸುದ್ದಿ, ವಿಷಯಗಳ ಬಗ್ಗೆ ತಿಳಿದಂತಾಗುತ್ತದೆ. ಟೀವಿ, ಸಿನಿಮಾ ನೋಡುವುದು ಮತ್ತು ಇಂಟರ್ನೆಟ್‌ ಕೂಡ ಇದಕ್ಕೆ ಸಹಕಾರಿ.

ಯಾವ ರೀತಿಯ ಪುಸ್ತಕಗಳನ್ನು ಓದುತ್ತೀರಿ? ನಿಮ್ಮಿಷ್ಟದ ಪುಸ್ತಕ ಯಾವುದು?
ಕಾಮಿಕ್ಸ್, ಕಾದಂಬರಿ, ಕಟ್ಟುಕಥೆಯಲ್ಲದ ಬರಹಗಳು ನನ್ನಿಷ್ಟದ ಪ್ರಕಾರಗಳು. ಎಲ್ಲಾ ಸಮಯ ಇಷ್ಟವಾಗುವ ಪುಸ್ತಕವೆಂದರೆ ಜೆ.ಆರ್.ಆರ್. ಟಾಲ್ಕಿನ್ ಅವರ ‘ಲಾರ್ಡ್‌ ಆಫ್‌ ದಿ ರಿಂಗ್ಸ್‌’ ಸರಣಿ ಪುಸ್ತಕ. ಇತ್ತೀಚೆಗೆ ಮಾಲ್ಕಂ ಗ್ಲ್ಯಾಡ್‌ವೆಲ್‌ ಅವರ ‘ಬ್ಲಿಂಕ್‌’ ಪುಸ್ತಕ ಹಿಡಿಸಿತು.

ಇಂದಿನ ಯುವಜನಾಂಗಕ್ಕೆ ನಿಮ್ಮ ಸಲಹೆ ಏನು?
ಎಲ್ಲ ವಿಷಯಗಳತ್ತಲೂ ಗಮನ ಕೊಡಿ. ಕಿವಿಗಳು ವಿಷಯಗಳಿಗೆ ಸದಾ ತೆರೆದಿರಲಿ. ಕೇಳಿಸಿಕೊಳ್ಳಿ, ನೋಡಿ, ಅನುಭವಿಸಿ. ಗ್ರಹಿಕೆಯಿರಲಿ. ನಿಮಗೆ ಎಷ್ಟು ಸಾಧ್ಯವೋ ಅಷ್ಟು ಓದಿ. ಒಳ್ಳೆಯ ಓದು ಎಂದರೆ ಏನು ಎಂಬುದನ್ನು ಮೊದಲು ಅರ್ಥೈಸಿಕೊಳ್ಳಿ. ಆದರೆ ಯಾವುದು ನಿಮಗೆ ಉಪಯೋಗ, ಯಾವುದು ಅಲ್ಲ ಎಂಬುದರ ಬಗ್ಗೆ ಅರಿವಿರಲಿ.

ಪ್ರತಿಯೊಬ್ಬರೂ ಕ್ವಿಜ್ ಮಾಸ್ಟರ್ ಆಗಲು ಸಾಧ್ಯವಿಲ್ಲ. ಆದರೆ  ತಿಳಿದುಕೊಂಡಿದ್ದರೆ, ನೀವು ಯಾವುದೇ ಕ್ಷೇತ್ರದಲ್ಲಿದ್ದರೂ ಉಪಯೋಗಕ್ಕೆ ಬರುತ್ತದೆ.

ರಸಪ್ರಶ್ನೆ ಹೊರತಾಗಿ ನಿಮಗೆ ಬೇರೇನಿಷ್ಟ?
ನಾನೊಬ್ಬ ವಾಸ್ತುಶಿಲ್ಪಿ. ಈ ಕ್ಷೇತ್ರದ ಬಗ್ಗೆ ಮಾಹಿತಿ ಕಲೆಹಾಕುವುದು, ಕಟ್ಟಡಗಳನ್ನು ನೋಡುವುದು ನನ್ನ ಮೆಚ್ಚಿನ ಕೆಲಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT