ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೆ– ಉತ್ತರ

Last Updated 15 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

–ಮೋಹನ, ವಿಜಾಪುರ
ನಾನು 2006ರಲ್ಲಿ ಐಐಟಿ ಮುಗಿಸಿದ್ದೇನೆ. ನಂತರ ಅನಿವಾರ್ಯ ಕಾರಣಗಳಿಂದ ಎರಡು ವರ್ಷ ಶಿಕ್ಷಣ ನಿಲ್ಲಿಸಬೇಕಾಯಿತು. ಪುನಃ 2009ರಲ್ಲಿ ಪಿಯುಸಿ ನೇರವಾಗಿ ಎರಡನೇ ವರ್ಷ ಬರೆಯಬಹುದು ಎಂಬ ಮಾತು ಕೇಳಿ ಪರೀಕ್ಷೆ ಬರೆದೆ. ಫಲಿತಾಂಶ ಬಂದ ನಂತರ ಅದು 10+2ಕ್ಕೆ ಸಮಾನ ಎಂದು ತಿಳಿಯಿತು. ಈಗ ನಾನು ಕೆ.ಯು.ಡಿ.ಯಲ್ಲಿ ದೂರಶಿಕ್ಷಣದ ಮೂಲಕ ಅಂತಿಮ ವರ್ಷದ ಬಿ.ಕಾಂ. ಬರೆಯುತ್ತಿದ್ದೇನೆ. ಈಗ 10+2 ಆಧಾರದ ಮೇಲೆ  ನಾನು ಯಾವ ಹುದ್ದೆಗೆ ಅರ್ಹನಾಗಿದ್ದೇನೆ,  ಬಿ.ಕಾಂ. ನಂತರ ಯಾವ ನೇಮಕಾತಿಗೆ ಅರ್ಹನಾಗುತ್ತೇನೆ?

-–ನೀವು ತಿಳಿಸಿರುವ ಸಂಸ್ಥೆಯು ನನ್ನ ತಿಳಿವಳಿಕೆಯ ಮಟ್ಟಿಗೆ ಅಂಗೀಕೃತ ಸಂಸ್ಥೆ ಅಲ್ಲ. ಆದ್ದರಿಂದ ಅದರ ಆಧಾರದ ಮೇಲೆ, ಅದರಲ್ಲೂ ಸರ್ಕಾರಿ ಕೆಲಸ ಪಡೆಯುವುದು ಕಷ್ಟವಾಗಬಹುದು. ಹೇಗಿದ್ದರೂ ಈಗ ನೀವು ಬಿ.ಕಾಂ. ಮಾಡುತ್ತಿದ್ದೀರಿ. ಈ ಪರೀಕ್ಷೆಗೆ ಪಿಯುಸಿ ಇಲ್ಲದೆಯೂ ನೇರವಾಗಿ ಪಾಸು ಮಾಡುವ ಅವಕಾಶ ಇದೆ ಹಾಗೂ ಇದು ರೆಗ್ಯುಲರ್ ಬಿ.ಕಾಂ.ಗೆ ತತ್ಸಮಾನವಾಗಿರುತ್ತದೆ. ಬಿ.ಕಾಂ. ಆಧಾರದ ಮೇಲೆ ನೀವು ನೌಕರಿ ಪಡೆಯಬಹುದು.

–ಜಯಶ್ರೀ ಭಟ್, ಶಿರಸಿ
ನಾನು ಬಿ.ಎ. ಅಂತಿಮ ವರ್ಷದಲ್ಲಿ ಓದುತ್ತಿದ್ದೇನೆ. ಹಿಂದಿನ ಪರೀಕ್ಷೆಗಳಲ್ಲಿ ಶೇ 76 ಅಂಕ ಗಳಿಸಿದ್ದು ಮುಂದೆ ಎಂ.ಲಿಬ್. ಮಾಡಬೇಕೆಂದಿದ್ದೇನೆ. ಇದು ಹೆಣ್ಣು ಮಕ್ಕಳಿಗೆ ಸೂಕ್ತವೇ? ಇದಕ್ಕೆ ಪೂರಕ ಕೋರ್ಸ್‌ಗಳನ್ನು ತಿಳಿಸಿ. ಮತ್ತಿತರ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ನೀಡಿ.

– ಲೈಬ್ರರಿ ಸೈನ್ಸ್ ಒಂದು ಉತ್ತಮ ಕೋರ್ಸ್‌ ಆಗಿದ್ದು ಇತ್ತೀಚೆಗೆ ಇದು ಮಾಹಿತಿ ವಿಜ್ಞಾನ ಎಂಬುದಾಗಿಯೂ ಸಾಕಷ್ಟು ಬದಲಾವಣೆ ಸಹಿತ ಚಾಲ್ತಿಯಲ್ಲಿದೆ.  ಪಿ.ಜಿ. ನಂತರ ಪಿ.ಎಚ್.ಡಿ. ಸಹಾ ಮಾಡಬಹುದು. ಪ್ರತಿಭೆ ಹಾಗೂ ಕಾರ್ಯಕ್ಷಮತೆ ಇರುವ ಯಾರಿಗೇ ಆಗಲಿ ಇದು ಉತ್ತಮ ಕೋರ್ಸ್‌.  ಕೇವಲ ಗ್ರಂಥಾಲಯಗಳಲ್ಲಿ ಮಾತ್ರವಲ್ಲದೆ ಇನ್ನೂ ಹಲವಾರು ಕಡೆಗಳಲ್ಲಿ ಉದ್ಯೋಗಾವಕಾಶ ಸಿಗುತ್ತದೆ. ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ಇತ್ತೀಚೆಗೆ ವೇಗವಾಗಿ ಬೆಳೆಯುತ್ತಿದೆ. ಇದಕ್ಕೆ ಕಂಪ್ಯೂಟರ್ ಜ್ಞಾನ ಅಗತ್ಯ.  ನೀವು ಈ ದಿಸೆಯಲ್ಲಿಯೂ ತರಬೇತಿ ಪಡೆಯುವ ಬಗ್ಗೆ ಚಿಂತಿಸಬಹುದು.

–ಸಹನಾ ಎಚ್.ಟಿ., ಬೆಂಗಳೂರು
ನಾನು ಈಗ ಹತ್ತನೇ ತರಗತಿಯಲ್ಲಿ ಓದುತ್ತಿದ್ದೇನೆ.  ನನಗೆ ಪೈಲಟ್ ಆಗಬೇಕೆಂಬ ಆಸೆ ಇದೆ.  ಆದರೆ ಅದರ ಬಗ್ಗೆ ಪೂರ್ಣ ಮಾಹಿತಿ ಇಲ್ಲ.  ಪೈಲಟ್ ಆಗಬೇಕಾದರೆ ಏನನ್ನು ಓದಬೇಕು? ಯಾವ ಕಾಲೇಜಿಗೆ ಸೇರಬೇಕು?

–ಪೈಲಟ್ ಆಗಬೇಕಾದರೆ ವಿಜ್ಞಾನ ವಿಭಾಗದಲ್ಲಿ ಪದವಿ ಅಥವಾ ಎಂಜಿನಿಯರಿಂಗ್ ಓದಿದವರಿಗೆ ಆದ್ಯತೆ.  ಖಾಸಗಿ ಪೈಲಟ್‌ಗಳು, ಸಾರ್ವಜನಿಕ ಸಾರಿಗೆಯಲ್ಲಿ ಕೆಲಸ ಮಾಡುವವರು, ರಕ್ಷಣಾ ವಿಭಾಗದಲ್ಲಿ ಇರುವವರು... ಹೀಗೆ ಬೇರೆ ಬೇರೆ ಕ್ಷೇತ್ರಗಳಿಗೆ, ಬೇರೆ ಬೇರೆ ಆಯ್ಕೆಯ ಮಾನದಂಡಗಳಿವೆ.  ಪೈಲಟ್‌ಗಳಿಗೆ ತರಬೇತಿ ನೀಡುವ ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳಿವೆ.  ಸಾಮಾನ್ಯವಾಗಿ ಇಲ್ಲಿನ ಶುಲ್ಕ ದುಬಾರಿಯಾಗಿರುತ್ತದೆ.  ಅಲ್ಲದೆ ಕೆಲವು ದೈಹಿಕ ಅರ್ಹತೆಗಳೂ ಬೇಕಾಗುತ್ತವೆ.  ಮೊದಲು ನೀನು ಓದಿ ಉತ್ತಮ ಅಂಕ ಗಳಿಸಿ ಪದವಿ ಮುಗಿಸಿಕೊಳ್ಳುವುದು ಅತಿ ಅಗತ್ಯ.

–ಹಾಸಿನಿ, ಮೈಸೂರು
ನಾನು ಪಿ.ಸಿ.ಎಂ.ಬಿ. ತೆಗೆದುಕೊಂಡು ಪಿಯುಸಿ ಓದುತ್ತಿದ್ದೇನೆ.  ಮುಂದೆ ಮನೋರೋಗ ತಜ್ಞೆ ಆಗಬೇಕೆಂದಿದ್ದೇನೆ.  ದ್ವಿತೀಯ ಪಿಯುಸಿ ನಂತರ ಯಾವ ಕೋರ್ಸ್‌ ಆಯ್ದುಕೊಳ್ಳಬೇಕೆಂದು ತಿಳಿಸಿ.  ಬಿ.ಎಸ್ಸಿ. ಸೈಕಾಲಜಿ ನಂತರ ಎಂಎಸ್ಸಿ., ಕ್ಲಿನಿಕಲ್ ಸೈಕಾಲಜಿ ಮಾಡಬಹುದೇ? ಹಾಗೆ ಮಾಡಿದರೆ ನಾನು ಪೂರ್ಣ ಪ್ರಮಾಣದ ಮನೋರೋಗ ತಜ್ಞೆಯಾಗಿ ಚಿಕಿತ್ಸೆ ನೀಡಬಹುದೇ ಅಥವಾ ಎಂ.ಬಿ.ಬಿ.ಎಸ್. ಓದಬೇಕೇ?

–ಮನೋರೋಗ ಚಿಕಿತ್ಸೆಯಲ್ಲಿ ಎಂ.ಬಿ.ಬಿ.ಎಸ್. ಮಾಡಿ ಮುಂದೆ ಸೂಕ್ತ ತರಬೇತಿ ಪಡೆದ ವೈದ್ಯರು ಮಾತ್ರ ಔಷಧೋಪಚಾರ ಹಾಗೂ ಹೆಚ್ಚಿನ ಚಿಕಿತ್ಸೆ ನೀಡುವ ಅರ್ಹತೆ ಗಳಿಸುತ್ತಾರೆ.  ಕ್ಲಿನಿಕಲ್ ಸೈಕಾಲಜಿ ಓದಿದವರು ಇವರಿಗೆ ಸಹಾಯಕರಾಗಿ ಕೆಲಸ ಮಾಡುತ್ತಾರೆ.  ಕೆಲವು ವೇಳೆ ಅವರ ತರಬೇತಿಯ ಪರಿಧಿಯೊಳಗೆ ಸ್ವತಂತ್ರವಾಗಿ ವೃತ್ತಿ ನಡೆಸಿದರೂ ಔಷಧಿ ನೀಡುವ ಅರ್ಹತೆ ಹೊಂದಿರುವುದಿಲ್ಲ.  ಮುಖ್ಯವಾಗಿ ಇವರು ಆಪ್ತ ಸಲಹೆಗಾರರಾಗಿ ಕೆಲಸ ನಿರ್ವಹಿಸುತ್ತಾರೆ.  ಇದಲ್ಲದೆ ಎಂ.ಎ. ಸೈಕಾಲಜಿ ಮಾಡಿದವರೂ ಈ ಕ್ಷೇತ್ರದಲ್ಲಿ ವಿವಿಧ ಕಾರ್ಯ ನಿರ್ವಹಿಸುತ್ತಾರೆ.  ಉತ್ತಮ ತರಬೇತಿ ಹಾಗೂ ಕಾರ್ಯದಕ್ಷತೆ ಹೊಂದಿದವರಿಗೆ ಈ ವಿಭಾಗದಲ್ಲಿ ಉದ್ಯೋಗ ಅವಕಾಶಗಳು ಹೇರಳವಾಗಿವೆ.  ಹಾಗೆ ನೋಡಿದರೆ ನಮ್ಮ ದೇಶದಲ್ಲಿ ಮನೋರೋಗ ಚಿಕಿತ್ಸಕರ ಕೊರತೆ ಇದೆ.

–ಸರಸ್ವತಿ, ಬೆಂಗಳೂರು
ನಾನು ಬಿ.ಕಾಂ. ಕೊನೆಯ ವರ್ಷದಲ್ಲಿ ಇದ್ದೇನೆ. ಸಿ.ಎ. ಮಾಡಲು ಆಸೆ ಇದೆ. ನನಗೆ ಮುಂದೆ ಕೆಲಸ ಮಾಡುವ ಅಗತ್ಯವಿದೆ. ಸಿ.ಎ. ಓದುವುದು ಹೇಗೆ?

–ಸಿ.ಎ. ಮಾಡಲು ಐ.ಪಿ.ಸಿ.ಸಿ. ಎಂಬ ಅರ್ಹತಾ ಪರೀಕ್ಷೆ ಮುಗಿಸಿಕೊಳ್ಳಬೇಕಾಗುತ್ತದೆ.  ನಂತರ ಮೂರು ವರ್ಷ ಹಿರಿಯ ಸಿ.ಎ. ಬಳಿ ಕೆಲಸಮಾಡಬೇಕಾಗುತ್ತದೆ. ಬಿ.ಕಾಂ. ಮಾಡಿದವರಿಗೆ ಪರೀಕ್ಷೆ ಬೇಕಿಲ್ಲ.  ಆದರೆ ಅವರಿಗೆ ತರಬೇತಿ ಅವಧಿಯಲ್ಲಿ ದೊರೆಯುವ ಸ್ಟೈಫಂಡ್ ಅತ್ಯಲ್ಪ.  ಸಿ.ಎ. ಪರೀಕ್ಷೆ ಕಠಿಣವಾದರೂ ಅದನ್ನು ಮಾಡಿದವರಿಗೆ ಈಗ ಅವಕಾಶಗಳು ಚೆನ್ನಾಗಿವೆ.  ಬಿ.ಕಾಂ. ಮಾಡಿಕೊಂಡವರು ಸಹ ಈಗ ಉತ್ತಮ ಉದ್ಯೋಗ ಗಳಿಸುತ್ತಿದ್ದಾರೆ. ಸಿ.ಎ. ಮಾಡುವಾಗ ಇತರ ಕೆಲಸ ಮಾಡುವುದು ಅಪೇಕ್ಷಣೀಯವಲ್ಲ.  ಹೀಗಾಗಿ ಬಿ.ಕಾಂ.ನಿಂದ ನೌಕರಿ ಪಡೆದುಕೊಂಡರೆ ಮುಂದೆ ಭವಿಷ್ಯ ಉತ್ತಮ ಪಡಿಸಿಕೊಳ್ಳಬಹುದಾದ ಅನೇಕ ಕೋರ್ಸ್‌ಗಳು ಲಭ್ಯವಿವೆ.

–ರಘುರಾಮ, ಉಡುಪಿ
ನಾನು ಹಿಂದಿ ಎಂ.ಎ., ಅನ್ನು ಪ್ರಥಮ ದರ್ಜೆಯಲ್ಲಿ ಮುಗಿಸಿದ್ದೇನೆ.  ಸರ್ಕಾರಿ  ಉದ್ಯೋಗ ಸಿಗಲು ಏನು ಮಾಡಬೇಕು?  ನನಗೆ ಪದವಿ ಕಾಲೇಜು ಉಪನ್ಯಾಸಕನಾಗುವ ಆಸೆ ಇದೆ.  ಮುಂದೆ ಯಾವ ಕೋರ್ಸ್‌ ಮಾಡಬೇಕು?

–ನೀವು ಸರ್ಕಾರಿ ನೌಕರಿ ಪಡೆಯಲು ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆ ಪಾಸು ಮಾಡಬೇಕಾಗುತ್ತದೆ. ಪದವಿ ಕಾಲೇಜು ಉಪನ್ಯಾಸಕರಾಗಲು ನೆಟ್ ಅಥವಾ ಸೆಟ್ ಪರೀಕ್ಷೆ ಮಾಡಿಕೊಳ್ಳಬೇಕು. ಪಿಎಚ್.ಡಿ. ಮಾಡಿದವರಿಗೆ ಹೆಚ್ಚಿನ ಅವಕಾಶಗಳಿವೆ.

–ಲೋಕೇಶ್, ಗುಂಡ್ಲುಪೇಟೆ
ನಾನು ಬಿ.ಕಾಂ. ನಾಲ್ಕನೇ ಸೆಮಿಸ್ಟರ್ ನಂತರ ಬಿಟ್ಟುಬಿಟ್ಟಿದ್ದೇನೆ.  ಬಿ.ಕಾಂ. ಓದಲು ಆಸಕ್ತಿ ಇಲ್ಲ. ಮುಂದೆ ಯಾವ ಕೋರ್ಸ್‌ ಮಾಡಲಿ? ನನಗೆ ಬಿ.ಎ. ಸೇರುವ ಆಸೆ ಇದೆ.  ದೂರಶಿಕ್ಷಣದ ಮೂಲಕ ಈ ಪದವಿ ಪಡೆಯಬಹುದೇ?  ಇದಕ್ಕೆ ಮಾನ್ಯತೆ ಇದೆಯೇ ? ಸ್ಪರ್ಧಾತ್ಮಕ ಪರೀಕ್ಷೆ ಬರೆಯಬಹುದೇ?

–ನಿಮಗೆ ಕೂಡಲೇ ನೌಕರಿ ಪಡೆಯುವ ಅವಶ್ಯಕತೆ ಇದ್ದಲ್ಲಿ ಅಲ್ಪಾವಧಿ ತರಬೇತಿಯ ಡಿಪ್ಲೊಮಾ, ಕಂಪ್ಯೂಟರ್ ತರಬೇತಿ ಮುಂತಾದವುಗಳಿಗೆ ಸೇರಬಹುದು.  ನೀವು ಬಿ.ಎ. ಮಾಡಲು ಆಸಕ್ತಿ ವ್ಯಕ್ತಪಡಿಸಿದ್ದೀರಿ. ಅದನ್ನು ದೂರಶಿಕ್ಷಣದ ಮೂಲಕ ಮಾಡಬಹುದು.  ಇದಕ್ಕೆ ಮಾನ್ಯತೆ ಇದ್ದು, ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಅರ್ಹತೆ ನಿಮಗೆ ಲಭಿಸುತ್ತದೆ.

–ವಾಯ್ ಡಿ, ಲಿಗಾಡಿ
ನಾನು ಬಿ.ಇಡಿ. ಪದವೀಧರನಾಗಿದ್ದು ಹಿಂದಿ ವಿಷಯವನ್ನು ಬಿ.ಇಡಿ.ಯಲ್ಲಿ ಆಯ್ಕೆ ಮಾಡಿಕೊಂಡಿದ್ದೇನೆ.  ಈಗ ನಾನು ಸಿ.ಬಿ.ಎಸ್ಸಿ. ಇಂದ ನಡೆಯುವ ಸಿ.ಟಿ.ಇ.ಟಿ. ಪರೀಕ್ಷೆ ತೆಗೆದುಕೊಳ್ಳ ಬಯಸಿದ್ದೇನೆ. ಈ ಬಗ್ಗೆ ನನಗೆ ಮಾಹಿತಿ ನೀಡಿ.

–ಸಿ.ಬಿ.ಎಸ್ಸಿ. ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ನಡೆಸುತ್ತಿದೆ. ಇದಕ್ಕಾಗಿ ಅಲ್ಲಿ ಪ್ರತ್ಯೇಕ ವಿಭಾಗವಿದೆ. ನೀವು ಸಿ.ಬಿ.ಎಸ್ಸಿ. ವೆಬ್‌ಸೈಟ್‌ಗೆ ಭೇಟಿ ನೀಡಿದರೆ ಎಲ್ಲ ವಿವರಗಳನ್ನು ಪಡೆಯಬಹುದು.

–ಶಿಲ್ಪ ಹನುಮಂತಪ್ಪ, ಅಂತರವಳ್ಳಿ, ಹಾವೇರಿ
2ನೇ ಪಿಯುಸಿ ಓದುತ್ತಿದ್ದೇನೆ.  ಎಲ್ಎಲ್‌ಬಿ ಮಾಡಬೇಕೆಂದಿದ್ದೇನೆ. ಪಿಯುಸಿ ನಂತರ ಅಥವಾ ಬಿ.ಎ. ನಂತರ ಯಾವುದು ಸುಲಭ ತಿಳಿಸಿ.

–ಪಿಯುಸಿ ನಂತರ ಐದು ವರ್ಷಗಳ ಎಲ್.ಎಲ್.ಬಿ. ಪರೀಕ್ಷೆ ಇರುತ್ತದೆ.  ಪದವಿಯ ನಂತರ ಮೂರು ವರ್ಷದ ಕೋರ್ಸ್‌ ಸಹಾ ಮುಂದುವರಿದಿದೆ. ಎರಡೂ ಸಮಾನ ಮಾನ್ಯತೆ ಹೊಂದಿದ್ದು, ಸುಲಭ ಅಥವಾ ಕಷ್ಟದ ಪ್ರಶ್ನೆ ಬರುವುದಿಲ್ಲ. ನಿಮ್ಮ ಅನುಕೂಲ ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳಿ.

–ಪ್ರವೀಣ್, ದಾವಣಗೆರೆ
ನಾನು ಬಿ.ಎ. ಪದವಿ ಪಡೆದಿದ್ದು ಬೆರಳಚ್ಚು ಮತ್ತು ಶೀಘ್ರಲಿಪಿ ಕಲಿಯಬೇಕೆಂಬ ಹಂಬಲವಿದೆ. ಇವುಗಳಿಗಿರುವ ವ್ಯತ್ಯಾಸವೇನು?  ಯಾವ ಭಾಷೆಯಲ್ಲಿ ಇವುಗಳಿಗೆ ಬೇಡಿಕೆ ಇದೆ.  ಇವನ್ನು ಮುಕ್ತ ವಿ.ವಿ.ಯಲ್ಲಿ ಕಲಿಯಲು ಅವಕಾಶ ಇದೆಯೇ?

–ಹಿಂದೆ ದೊಡ್ಡ ಪಟ್ಟಣಗಳಲ್ಲಿ ಬೆರಳಚ್ಚು ಮತ್ತು ಶೀಘ್ರಲಿಪಿಯನ್ನು ಕಲಿಸುವ ಇನ್ಸಟಿಟ್ಯೂಟ್‌ಗಳು ಇರುತ್ತಿದ್ದವು. ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಲಿಯ ಇತರ ಪರೀಕ್ಷೆಗಳ ವಿಭಾಗವು ಈ ಪರೀಕ್ಷೆ ನಡೆಸಿ, ಪ್ರಮಾಣಪತ್ರ ನೀಡುತ್ತಿತ್ತು.  ಈಚೆಗೆ ಕಂಪ್ಯೂಟರ್‌ಗಳ ಬಳಕೆಯಿಂದ ಕೆಲವೇ ಊರುಗಳಲ್ಲಿ ಇವನ್ನು ಕಲ್ಪಿಸುವ ಸೌಲಭ್ಯ ಉಳಿದುಕೊಂಡಿದೆ.

ಬೆರಳಚ್ಚು ಕಂಪ್ಯೂಟರ್‌ನ ಮೂಲಕ ನಡೆಯುವುದೇ ಹೆಚ್ಚು. ಟೈಪು ಮಾಡುವ ಬದಲು, ಬಾಯಿಯಿಂದ ಹೇಳುವ ಉಕ್ತಲೇಖನವನ್ನು ಬೇಗನೇ ಬರೆದುಕೊಳ್ಳುವುದು ಶೀಘ್ರಲಿಪಿ.  ನೀವು ಇದನ್ನು ಇಂಗ್ಲಿಷ್‌ ಹಾಗೂ ಕನ್ನಡ ಎರಡೂ ಭಾಷೆಗಳಲ್ಲಿ ಕಲಿತರೆ ಉತ್ತಮ.  ಹಿಂದಿಗೂ ಸಾಕಷ್ಟು ಬೇಡಿಕೆ ಇದೆ.  ಮುಕ್ತ ವಿ.ವಿ.ಯಲ್ಲಿ ಇದೇ ವಿಷಯಕ್ಕೆ ಸಂಬಂಧಿಸಿದ ವಿಸ್ತೃತವಾದ ಸೆಕ್ರೆಟೇರಿಯಲ್ ಪ್ರಾಕ್ಟೀಸು ಲಭ್ಯವಿದೆ.

–ನರಸಿಂಹಮೂರ್ತಿ, ಮಧುಗಿರಿ
ನಾನು 2012ನೇ ಸಾಲಿನಲ್ಲಿ ಬಿ.ಇಡಿ.ಯನ್ನು ಇತಿಹಾಸ ಮತ್ತು ಕನ್ನಡ ವಿಷಯಗಳನ್ನು ತೆಗೆದುಕೊಂಡು ಮುಗಿಸಿದ್ದೇನೆ. ಪದವಿಯಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಮಾತ್ರ ಅಭ್ಯಾಸ ಮಾಡಿದ್ದೇನೆ. ನನಗೆ ಇತಿಹಾಸಕ್ಕಿಂತ ಕನ್ನಡ ಕಲಿಸುವ ಬಗ್ಗೆ ಆಸಕ್ತಿ ಇದೆ. ಹೀಗಾಗಿ ನಾನು ಕನ್ನಡ ಶಿಕ್ಷಕನಾಗಿ ಆಯ್ಕೆಯಾಗಬೇಕಾದರೆ ಒಂದು ವರ್ಷದ ಕನ್ನಡ ಡಿಪ್ಲೊಮಾ ಓದಬೇಕೇ ಅಥವಾ ಎಂ.ಎ. ಮಾಡಬೇಕೇ? ದಯಮಾಡಿ ಗೊಂದಲ ಪರಿಹರಿಸಿ.

–ನೀವು ಬಿ.ಇಡಿ.ಯಲ್ಲಿ ಕನ್ನಡ ವಿಷಯ ಕಲಿತಿರುವುದರಿಂದ ಹಾಗೂ ಕನ್ನಡವನ್ನು ಒಂದು ಭಾಷೆಯಾಗಿ ಪದವಿಯಲ್ಲಿ ಓದಿರುವುದರಿಂದ ಕನ್ನಡ ಕಲಿಸುವ ಅರ್ಹತೆ ಗಳಿಸಿಕೊಂಡಿದ್ದೀರಿ. ಆದರೆ, ಆಯ್ಕೆ ಸಮಿತಿಯವರು ಕನ್ನಡ ಮೇಜರ್ ಕಲಿತವರನ್ನು ಮಾತ್ರ ಪರಿಗಣಿಸಿದರೆ ನೀವು ಹೇಳುವ ರೀತಿ ತೊಂದರೆಯಾಗುತ್ತದೆ.  ಆದ್ದರಿಂದ ನೀವು ಎರಡು ವರ್ಷದ ಕನ್ನಡ ಎಂ.ಎ. ಮಾಡಿಕೊಳ್ಳುವುದು ಒಳಿತು. ಇದರಿಂದ ಮುಂದಕ್ಕೂ ಸಹಾಯವಾದೀತು. ಕನ್ನಡ ಡಿಪ್ಲೊಮಾ ಸಾಮಾನ್ಯವಾಗಿ ಕನ್ನಡೇತರರಿಗಾಗಿ ಇರುವ ಕೋರ್ಸ್‌. ಈ ನಡುವೆ ನಿಮ್ಮ ಆಯ್ಕೆ ಇತಿಹಾಸ ವಿಭಾಗದಲ್ಲಿ ನಡೆದರೂ ಮುಂದೆ ಬದಲಾವಣೆಗಾಗಿ ಕೋರಬಹುದು.

–ಶೋಭಾ, ಭದ್ರಾವತಿ
ನನ್ನ ಯಜಮಾನರು ಪೊಲೀಸ್‌ ಕಾನ್ಸಟೇಬಲ್‌ ಆಗಿದ್ದು, ಅವರ ವಯಸ್ಸು 33. ಈ ಹಿಂದೆ ಅವರು ಬಿ.ಎ. ಎರಡನೇ ವರ್ಷದಲ್ಲಿ ಉತ್ತೀರ್ಣರಾಗಿದ್ದಾರೆ. ಈಗ ಪದವಿ  ಮುಗಿಸಿದರೆ ಅವರು ಪಿ.ಎಸ್.ಐ. ಪರೀಕ್ಷೆಗೆ ಕೂಡಬಹುದು. ಆದರೆ ಆರು ವರ್ಷ ಕಳೆದ ಮೇಲೆ ಮತ್ತೆ ಪರೀಕ್ಷೆಗೆ ಕೂಡಲು ಅವಕಾಶವಿಲ್ಲ ಎಂದು ಹೇಳುತ್ತಾರೆ. ಯಾವುದಾದರೂ ದಾರಿ ತೋರಿಸಿ.

ನಿಮ್ಮ ಯಜಮಾನರು ಓದಿದ ಕಾಲೇಜು ಅಥವಾ ಕುವೆಂಪು ಯೂನಿವರ್ಸಿಟಿಗೆ ಹೋಗಿ ಅವರಿಗೆ ತೃತೀಯ ಬಿ.ಎ. ಕಟ್ಟಲು ಅವಕಾಶ ಉಳಿದಿದೆಯೇ ಎಂದು ಖಚಿತ ಪಡಿಸಿಕೊಳ್ಳಿ. ಇಲ್ಲವಾದರೆ ಮತ್ತೆ ದೂರಶಿಕ್ಷಣದ ಮೂಲಕ ಬಿ.ಎ. ಮಾಡಿಕೊಳ್ಳಿ. ಒಂದೇ ಬಾರಿಗೆ ಬಿ.ಎ. ಮುಂತಾದ ಪರೀಕ್ಷೆಗಳಲ್ಲಿ ತೊಂದರೆಗೆ ಸಿಲುಕಿ ಹಾಕಿಕೊಳ್ಳುವ ಅವಕಾಶ ಇರಬಹುದು. ಬಿ.ಎ. ಮುಗಿಸಿದ ಮೇಲೆ ಅವರು ವಯಸ್ಸಿನ ಕಾರಣದಿಂದ ಪರೀಕ್ಷೆ ಬರೆಯಲಾಗದಿದ್ದರೂ, ಮುಂದೆ ಅವರಿಗೆ ಇದರಿಂದ ಅನುಕೂಲ ಆಗಬಹುದು.

–ಹೆಸರಿಲ್ಲ
ನಾನು ಎಸ್ಸೆಸೆಲ್ಸಿಯನ್ನು ಮುಕ್ತ ವಿಧಾನದಲ್ಲಿ ತೇರ್ಗಡೆಯಾಗಿದ್ದೇನೆ. ನನಗೆ ಸರ್ಟಿಫಿಕೇಟ್ ನೀಡಿರುವ ಸಂಸ್ಥೆಯ ಹೆಸರು ಕರ್ನಾಟಕ ಸೆಕೆಂಡರಿ ಎಜುಕೇಷನ್ ಎಕ್ಸಾಮಿನೇಷನ್ ಬೋರ್ಡ್‌. ಇತರ ಪರೀಕ್ಷೆಗಳು ಬೆಂಗಳೂರು ಎಂದಿದೆ. ಇದು ಯೋಗ್ಯವಾದ ಮಾನ್ಯತೆ ಹೊಂದಿದ ಸಂಸ್ಥೆಯೇ? ನಾನು ಸರ್ಕಾರಿ ನೌಕರಿಗೆ ಅರ್ಹನೇ ತಿಳಿಸಿ.

ನೀವು ಬರೆದಿರುವ ಸಂಸ್ಥೆಯಿಂದಲೇ ನಿಮಗೆ ಪ್ರಮಾಣಪತ್ರ ದೊರಕಿದ್ದರೆ, ಅದು ಸಂಪೂರ್ಣವಾಗಿ ಸರ್ಕಾರಿ ಸಂಸ್ಥೆಯಾಗಿದ್ದು ಅದರ ಮಾನ್ಯತೆ ಬಗ್ಗೆ ಸಂಶಯ ಪಡಬೇಕಿಲ್ಲ ಹಾಗೂ ನಿಮಗೆ ಸರ್ಕಾರಿ ನೌಕರಿಗೆ ಅರ್ಜಿ ಸಲ್ಲಿಸಲು ಎಲ್ಲ ಅರ್ಹತೆಗಳೂ ದೊರೆಯುತ್ತವೆ.  ಆದರೆ ನಿಮ್ಮಲ್ಲಿ ಇನ್ನೂ ಸಂಶಯ ಉಳಿದಿದ್ದಲ್ಲಿ ಒಮ್ಮೆ ಬೆಂಗಳೂರಿನ ಮಲ್ಲೇಶ್ವರದಲ್ಲಿ ಇರುವ ಅದರ ಕಚೇರಿಯಲ್ಲಿ ಅಥವಾ ಇದು ಸಾಧ್ಯವಾಗದಿದ್ದಲ್ಲಿ ನಿಮ್ಮ ಜಿಲ್ಲಾ ಕೇಂದ್ರದಲ್ಲಿರುವ ಡಿ.ಡಿ.ಪಿ.ಐ. ಕಚೇರಿಯಲ್ಲಿ ಸರ್ಟಿಫಿಕೇಟ್ ತೋರಿಸಿ ಖಚಿತಪಡಿಸಿಕೊಳ್ಳಿ.

ಪ್ರಶ್ನೆ ಕಳುಹಿಸಬಹುದು ವಿಳಾಸ: ಸಂಪಾದಕರು, ಶಿಕ್ಷಣ ವಿಭಾಗ, ಪ್ರಜಾವಾಣಿ, 75 ಎಂ.ಜಿ. ರಸ್ತೆ,ಬೆಂಗಳೂರು 560 001
ಪ್ರಶ್ನೆಗಳನ್ನು ಇ— ಮೇಲ್‌ನಲ್ಲೂ ಕಳಿಸಬಹುದು: shikshana@prajavani.co.in 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT