ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ

Last Updated 16 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಪ್ರಕಾಶ್, ಕೊಪ್ಪಳ
ಪ್ರಶ್ನೆ: ಸರ್ಕಾರಿ ನೌಕರನ ಕೃಷಿಯೇತರ ಆದಾಯ ರೂ.2 ಲಕ್ಷ ಮೀರಿದಲ್ಲಿ ಕೃಷಿ ಭೂಮಿ ಖರೀದಿಸಲು ಬರುವುದಿಲ್ಲ ಎಂದು ಕೇಳಿದ್ದೇನೆ, ಇದು ನಿಜವೇ? ಕೃಷಿ ಮೂಲದಿಂದ ಬರುವ ಆದಾಯಕ್ಕೆ ತೆರಿಗೆ ಇಲ್ಲ ಎಂದು ಕೇಳಿದ್ದೇನೆ, ಇದಕ್ಕೇನಾದರೂ ಮಿತಿ ಇದೆಯೇ? ಕೃಷಿ ಆದಾಯದ ಬಗ್ಗೆ ಪುರಾವೆ ಇಟ್ಟುಕೊಳ್ಳಬೇಕಾದ್ದು ಅವಶ್ಯವೇ? ನನ್ನ ತಿಂಗಳ ಸಂಬಳ ರೂ.25,000. ನನಗೊಂದು ಉತ್ತಮ ಉಳಿತಾಯ ಮಾರ್ಗ ತಿಳಿಸಿರಿ.


ಉತ್ತರ: ಸರ್ಕಾರಿ ನೌಕರನ ಕೃಷಿಯೇತರ ವಾರ್ಷಿಕ ಆದಾಯ ರೂ.2 ಲಕ್ಷ ಮೀರಿದಲ್ಲಿ ಕೃಷಿ ಜಮೀನು ಖರೀದಿಸಲು ಬರುವುದಿಲ್ಲ. ಕೃಷಿ ಮೂಲದಿಂದ ಬರುವ ಪೂರ್ಣ ಆದಾಯಕ್ಕೆ ಸೆಕ್ಷನ್ 10(1) ಪ್ರಕಾರ ತೆರಿಗೆ ಇರುವುದಿಲ್ಲ ಹಾಗೂ ಇಲ್ಲಿ ಮಿತಿಯ ಪ್ರಶ್ನೆಯೂ ಇರುವುದಿಲ್ಲ. ನಿಮಗೆ ಬರುವ ಯಾವುದೇ ಆದಾಯವಿದ್ದರೂ ಅವುಗಳ ಪುರಾವೆ ಇರಿಸಿಕೊಳ್ಳಿ. ಹೀಗೆ ಉಳಿತಾಯ ಮಾಡುವಾಗ ಮುಂದೆ ಈ ಹಣ ಎಲ್ಲಿಂದ ಬಂದಿದೆ? ಎನ್ನುವ ಪ್ರಶ್ನೆ ಎದುರಾದರೆ ಸಹಾಯವಾಗುತ್ತದೆ. ನೀವು ಸಂಬಳದಲ್ಲಿ ಎಷ್ಟು ಉಳಿಸಬಹುದು ಎನ್ನುವುದನ್ನು ತಿಳಿಸಿಲ್ಲ. ನಿಮಗೆ ಕೃಷಿ ಆದಾಯ ಇರುವುದರಿಂದ, ಕನಿಷ್ಠ ರೂ. 10,000ವನ್ನು 10 ವರ್ಷಗಳ ಆರ್.ಡಿ ಮಾಡಿರಿ, ಅವಧಿ ಮುಗಿಯುತ್ತಲೇ ರೂ.19,42,120 ಪಡೆಯುವಿರಿ.

ನಾಗರಾಜ ರಾವ್, ಶಿವಮೊಗ್ಗ
ಪ್ರಶ್ನೆ: ಕಳೆದ 50 ತಿಂಗಳಿಂದ `ಎಸ್.ಬಿ.ಐ ಲೈಫ್'ನಲ್ಲಿ ರೂ.1000ರ ಮಾಸಿಕ ಕಂತಿನಂತೆ ಒಟ್ಟು ರೂ.50,000 ತುಂಬಿರುವೆ. ಈಗ ಅದರ ಮೊತ್ತ(ನೆಟ್ ಅಸೆಟ್ ವ್ಯಾಲ್ಯು-ಎನ್‌ಪಿಎ) ರೂ.43,000ದ ಹತ್ತಿರವಿದೆ. ಈ ಹಣವನ್ನು ಹಾಗೇ ಬೆಳೆಯಲು ಬಿಡುವುದು ಸೂಕ್ತವೇ ಅಥವಾ ವಾಪಸ್ ಪಡೆಯುವುದು ಒಳ್ಳೆಯದೇ?


ಉತ್ತರ: ಎಸ್.ಬಿ.ಐ ಲೈಫ್ ಇನ್ಸ್ಯುರೆನ್ಸ್ ಸಂಸ್ಥೆ ಮ್ಯೂಚುವಲ್ ಫಂಡ್‌ನಲ್ಲಿ ಹಣ ಹೂಡಿದಂತಿದೆ. ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕ(ಸೆನ್ಸೆಕ್ಸ್) ಏರಿಳಿತದಿಂದಾಗಿ ನೀವು ಕಟ್ಟಿದ ಹಣಕ್ಕಿಂತ ಎನ್.ಎ.ಪಿ ಕಡಿಮೆ ಆಗಿರುವಂತೆ ಕಾಣುತ್ತಿದೆ. ಸ್ವಲ್ಪ ಸಮಯ ಕಾಯ್ದು, ಅಸಲಿಗೆ ಸ್ವಲ್ಪವಾದರೂ ಹೆಚ್ಚಿನ ಮೊತ್ತ ಸೇರಿಕೊಂಡಿದೆ ಎನಿಸಿದಾಗ ಯೋಜನೆಯಿಂದ ಹೊರಬರುವುದು ಸೂಕ್ತ. ಆಗ ಎಸ್‌ಬಿಐ ಲೈಫ್‌ನ ಎಲ್ಲ ಯುನಿಟ್‌ಗಳನ್ನೂ ನಗದೀಕರಿಸಿಕೊಂಡು ಬರುವ ಹಣವನ್ನು ನಿಮಗೆ ಸಮೀಪದ ಯಾವುದೇ ಬ್ಯಾಂಕಿನಲ್ಲಿ ಅವಧಿ ಠೇವಣಿಯಲ್ಲಿ ಇರಿಸಿ ನಿಶ್ಚಿಂತರಾಗಿರಿ.

ಕೆ.ದೇವೇಂದ್ರ, ಹುಬ್ಬಳ್ಳಿ
ಪ್ರಶ್ನೆ: ನಾನು ಕೇಂದ್ರ ಸರ್ಕಾರದ ನೌಕರ. ನಿವೇಶನ ಹಾಗೂ ಮನೆ ಕಟ್ಟಲು ರೂ.9 ಲಕ್ಷವನ್ನು ಸೆಂಟ್ರಲ್ ಬ್ಯಾಂಕ್‌ನಿಂದ ಸಾಲವಾಗಿ ಪಡೆದಿದ್ದೇನೆ, ಸಮಾನ ಮಾಸಿಕ ಕಂತು (ಇ.ಎಂ.ಐ) ಲೆಕ್ಕದಲ್ಲಿ ಪ್ರತಿ ತಿಂಗಳೂ ಸಾಲ ಮರುಪಾವತಿ ಮಾಡುತ್ತಿದ್ದೇನೆ. ಬಡ್ಡಿ ದರ ಆಗಾಗ ಬದಲಾಗುತ್ತಿರುತ್ತದೆ. ಇ.ಎಂ.ಐ ಹೆಚ್ಚು ಕಡಿಮೆ ಆಗುವುದೇ ತಿಳಿಯುವುದಿಲ್ಲ. ಇದರ ಪರಿಶೀಲನೆ ಹೇಗೆ ಮಾಡುವುದು? ಯಾರನ್ನು ಸಂಪರ್ಕಿಸಬೇಕು? ಮನೆ ಸಾಲಕ್ಕೆ ಕೇಂದ್ರ ಸರ್ಕಾರ ನೀಡುವ ಶೇ 1ರ ಬಡ್ಡಿ ಅನುದಾನದ ಸವಲತ್ತು ನಮಗೂ ಅನ್ವಯಿಸುವುದೇ?


ಉತ್ತರ: ಗೃಹ ಸಾಲ ಪಡೆಯುವಾಗ ನಿಗದಿತ (ಫಿಕ್ಸೆಡ್) ಬಡ್ಡಿ ದರ ಅಥವಾ ಬದಲಾಗುತ್ತಿರುವ ಬಡ್ಡಿ ದರ (ಫ್ಲೋಟಿಂಗ್) ಎಂಬ ಎರಡು ವಿಧಾನದಲ್ಲಿ ಒಂದನ್ನು ಆರಿಸಿಕೊಳ್ಳಬೇಕು. ನಿಮ್ಮದು ಬದಲಾಗುವ ಬಡ್ಡಿದರವಾಗಿದ್ದು ಕಳೆದೊಂದು ವರ್ಷದಿಂದ ಗೃಹ ಸಾಲದ ಬಡ್ಡಿ ದರ ಕಡಿಮೆಯಾಗುತ್ತಿದೆ.  ಅದಕ್ಕೆ ತಕ್ಕಂತೆ ಇ.ಎಂ.ಐ ಕಡಿಮೆ ಆಗಿರಬೇಕು. ಒಂದು ವೇಳೆ ಕಡಿಮೆಯಾಗದೇ ಇದ್ದರೆ ನೀವು ಹೆಚ್ಚಿಗೆ ಕಟ್ಟಿದ ಹಣವನ್ನು ಬ್ಯಾಂಕ್‌ನವರೇ ಅಸಲಿಗೆ ಸೇರಿಸುತ್ತಾರೆ. ಆಗ ಒಟ್ಟು ಸಾಲದ ಮೊತ್ತ ಕಡಿಮೆಯಾಗುತ್ತದೆ. ಕನಿಷ್ಠ ಆರು ತಿಂಗಳಿಗೊಮ್ಮೆ ಬ್ಯಾಂಕ್‌ನಿಂದ ನಿಮ್ಮ ಸಾಲ ಖಾತೆಯ ವಹಿವಾಟಿನ ವಿವರ (ಸ್ಟೇಟ್‌ಮೆಂಟ್ ಆಫ್ ಅಕೌಂಟ್) ಪಡೆಯಿರಿ ಅಥವಾ ಆನ್‌ಲೈನ್‌ನಲ್ಲಿ ನೀವೇ ಪಡೆದುಕೊಳ್ಳಬಹುದು.

ಬಡ್ಡಿದರ ಕಡಿಮೆ ಅಥವಾ ಹೆಚ್ಚು ಆದ ತಕ್ಷಣ ಗಣಕೀಕೃತ(ಕಂಪ್ಯೂಟರ್) ವ್ಯವಸ್ಥೆಯಡಿ ಬ್ಯಾಂಕುಗಳಲ್ಲಿ ತಕ್ಷಣ ಅಳವಡಿಕೆ ಆಗುತ್ತದೆ. ಇದರಿಂದಾಗಿ ಬಡ್ಡಿದರ ವ್ಯತ್ಯಯದ ಪ್ರಕ್ರಿಯೆ ಎಲ್ಲಾ ಸಾಲಗಾರರ ಖಾತೆಗಳಿಗೂ ಸ್ವಯಂಚಾಲಿತವಾಗಿ ಅನ್ವಯವಾಗುತ್ತದೆ. ಒಂದೊಮ್ಮೆ ದೊಡ್ಡಮಟ್ಟದಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಚಾರ್ಟರ್ಡ್‌ ಅಕೌಂಟೆಂಟ್ ಅವರನ್ನು ಸಂಪರ್ಕಿಸಿ ಮಾರ್ಗದರ್ಶನ ಪಡೆಯಬಹುದು. ನಿಮ್ಮ ಒಟ್ಟ ಆದಾಯದ ಮಿತಿ ಹಾಗೂ ಗೃಹಸಾಲಕ್ಕೆ ನೀವು ಕೊಟ್ಟಿರುವ ಪುರಾವೆಗಳನ್ನು ಆಧರಿಸಿ ನೀವು ಬಡ್ಡಿ ಅನುದಾನಕ್ಕೆ ಅರ್ಹರಿದ್ದಲ್ಲಿ ಶೇ 1ರಷ್ಟು ಬಡ್ಡಿ ದರವೂ ತಾನಾಗಿಯೇ ಕಡಿಮೆ ಆಗುತ್ತದೆ.

ಡಿ.ಗಿರೀಶ್, ಭದ್ರಾವತಿ
ಪ್ರಶ್ನೆ: ಸರ್ಕಾರಿ ನೌಕರ, ವಯಸ್ಸು 28. ತಿಂಗಳ ಸಂಬಳ ರೂ.18,000. ಎಲ್ಲಾ ಕಡಿತವಾಗಿ ರೂ.15000 ಕೈಗೆ ಬರುತ್ತದೆ. ಮನೆ ಖರ್ಚು ತಿಂಗಳಿಗೆ ರೂ.5000. ನನಗೆ ಬೇರಾವುದೇ ಆದಾಯವಿಲ್ಲ. ನಮ್ಮ ಊರಿನಲ್ಲಿ 30/40 ನಿವೇಶನಕ್ಕೆ ರೂ.4 ಲಕ್ಷದಿಂದ 5 ಲಕ್ಷದವರೆಗೂ ಬೆಲೆ ಇದೆ. ಬ್ಯಾಂಕಿನಿಂದ ಸಾಲ ಪಡೆಯಲು ಹಾಗೂ ಆದಾಯ ತೆರಿಗೆಯಿಂದ ವಿನಾಯಿತಿ ಪಡೆಯಲು ಮಾರ್ಗದರ್ಶನ ಮಾಡಿರಿ.


ಉತ್ತರ: ನಿಮ್ಮ ಪತ್ರದ ಪ್ರಕಾರ ನೀವು ತಿಂಗಳಿಗೆ ರೂ.10,000 ಉಳಿಸಬಹುದು. ಎಸ್.ಬಿ.ಐ ಗೃಹ ಸಾಲ ಯೋಜನೆಯಲ್ಲಿ ನಿಮ್ಮ ನೌಕರಿ ಅವಧಿ ಮತ್ತು ವೇತನದ ಆಧಾರದ ಮೇಲೆ ರೂ.12 ಲಕ್ಷದವರೆಗೂ ಸಾಲ ಪಡೆದು ನಿವೇಶನ ಹಾಗೂ ಮನೆ ನಿರ್ಮಿಸಿಕೊಳ್ಳಬಹುದು ಅಥವಾ ನಿರ್ಮಿಸಿದ ಮನೆಯನ್ನೇ ಖರೀದಿಸಬಹುದು. ಇಷ್ಟು ಪ್ರಮಾಣದ ಗೃಹ ಸಾಲಕ್ಕೆ ಸಮಾನ ಮಾಸಿಕ ಕಂತು(ಇಎಂಐ) ರೂ. 10,536 ಬರುತ್ತದೆ. ಈ ರೂ.10536 ಸಾಲದ ಕಂತಿನಲ್ಲಿ ಅಸಲು ಮತ್ತು ಬಡ್ಡಿ ಎರಡೂ ಸೇರಿರುತ್ತದೆ.

ಈ ಕಡಿಮೆ `ಇಎಂಐ'ನ  ಗೃಹಸಾಲ 30 ವರ್ಷ ಅವಧಿವರೆಗೂ ಇರುತ್ತದೆ. ಮುಂದೆ ನಿಮಗೆ ಬಡ್ತಿಯಾಗಿ ಹೆಚ್ಚಿನ ಸಂಬಳ ಬಂದಲ್ಲಿ ಹೆಚ್ಚಿನ `ಇ.ಎಂ.ಐ' ಕಟ್ಟುವ ಮೂಲಕ ಸಾಲ ತೀರಿಸುವ ಅವಕಾಶವೂ ಇರುತ್ತದೆ. ನಿಮ್ಮ 58ನೇ ವರ್ಷದಲ್ಲಿ ನೀವು ಸಾಲ ರಹಿತವಾದ ಸ್ವಗೃಹದಲ್ಲಿ ನೆಮ್ಮದಿಯಿಂದ ಜೀವಿಸಬಹುದು. ಭಗವಂತ ಜೀವನದಲ್ಲಿ ನಿಮಗೆ ಹೆಚ್ಚಿನ ಸಂತಸ ಕೊಡಲಿ.

ವಿಜಯಕುಮಾರ್, ಬೆಂಗಳೂರು
ಪ್ರಶ್ನೆ: ವಯಸ್ಸು 42. ಸಹಕಾರಿ ಬ್ಯಾಂಕ್ ಹಾಗೂ ಖಾಸಗಿ ಕೊರಿಯರ್ ಸಂಸ್ಥೆ ಎರಡೂ ಕಡೆ ಕೆಲಸ ಮಾಡುತ್ತಿರುವೆ. ತಿಂಗಳ ವರಮಾನ ರೂ. 7000ವಿದೆ. ರೂಮಿನ ಬಾಡಿಗೆ ರೂ.2000 ಕಳೆದು ರೂ. 5000 ಉಳಿಸುತ್ತಿರುವೆ. ಬೇರೆ ಖರ್ಚು ಇಲ್ಲ. ಆದರೆ, ಯಾವುದೇ ವ್ಯವಸ್ಥಿತ ರೀತಿಯ ಉಳಿತಾಯ ಮಾಡುತ್ತಿಲ್ಲ. ಈ ಕುರಿತು ಮಾರ್ಗದರ್ಶನ ಮಾಡಿ.


ಉತ್ತರ: ಸಹಕಾರಿ ಬ್ಯಾಂಕಿನಲ್ಲಿ ಸೇವೆ ಸಲ್ಲಿಸುತ್ತಿದ್ದೂ ಉಳಿತಾಯದ ಮಾರ್ಗ ಕೇಳುತ್ತಿರುವುದು ಸೋಜಿಗ. ಉಳಿತಾಯಕ್ಕೆ ಗಟ್ಟಿ ಮನಸ್ಸು ಮಾಡಬೇಕು. ಯಾವಾಗ ಆರಂಭಿಸುವುದು ಎಂದು ಕಾಯುತ್ತಾ ಕೂರಬಾರದು. ಇನ್ನು 18 ವರ್ಷಗಳಲ್ಲಿ ನೀವು ನಿವೃತ್ತರಾಗುವಿರಿ. ಪ್ರತಿ ತಿಂಗಳೂ ರೂ. 5000 ಉಳಿಸಬಹುದು ಎನ್ನುವುದಾದರೆ ನಿಮ್ಮದೇ ಸಹಕಾರಿ ಬ್ಯಾಂಕಿನಲ್ಲಿ ರೂ.3000 ಹಾಗೂ ರೂ.2000ಕ್ಕೆ ಪ್ರತ್ಯೇಕವಾಗಿ ಎರಡು ಆರ್.ಡಿ ಖಾತೆಗಳನ್ನು 10 ವರ್ಷಗಳ ಅವಧಿಗೆ ಮಾಡಿರಿ. ಏನಾದರೂ ತೊಂದರೆಯಾದಲ್ಲಿ ಒಂದು ಆರ್.ಡಿ ಸ್ಥಗಿತಗೊಳಿಸಿ ಇನ್ನೊಂದನ್ನು ಮುಂದುವರಿಸಿ. ಇಂದೇ ದೃಢ ನಿರ್ಧಾರ ಮಾಡಿದಲ್ಲಿ 10 ವರ್ಷಗಳ ನಂತರ ನೀವು ಒಟ್ಟು ರೂ.10 ಲಕ್ಷ ಮೊತ್ತ ನಿಮ್ಮ ಕೈಯಲ್ಲಿರುತ್ತದೆ. ಏಪ್ರಿಲ್ 17ಕ್ಕೆ- ಸೇರಿಸಿಕೊಳ್ಳಿ

ಯಲ್ಲಪ್ಪ ಕೋರೆ, ಬಬಲೇಶ್ವರ
ಪ್ರಶ್ನೆ: ನಾನು ಹಾಗೂ ಪತ್ನಿ ಸರಕಾರಿ ನೌಕರರು. ಸಂಬಳದಲ್ಲಿ ಎಲ್ಲಾ ಕಡಿತವಾಗಿ ರೂ.16,000 ಬರುತ್ತದೆ. ನನ್ನ ಪತ್ನಿ ಸಂಬಳ ಮನೆ ಖರ್ಚಿಗೆ ಆಗುತ್ತದೆ. ಇಂಡಿ ಪಟ್ಟಣದಲ್ಲಿ ಒಂದು ನಿವೇಶನ ಇದೆ. ಹುಟ್ಟೂರಿನಲ್ಲಿ 3 ಎಕರೆ ಜಮೀನಿದೆ. ಅದನ್ನು ಮಾರಾಟ ಮಾಡಿದರೆ ಐದೂವರೆ ಲಕ್ಷ ರೂಪಾಯಿ ಸಿಗುತ್ತದೆ. ಮನೆ ಕಟ್ಟುವವರೆಗೂ ಆ ಹಣವನ್ನು ಬ್ಯಾಂಕಿನಲ್ಲಿ ಇಡಬಹುದೇ?


ಉತ್ತರ: ನೀವು ಪಿತ್ರಾರ್ಜಿತ ಜಮೀನು ಮಾರಾಟ ಮಾಡಿದಾಗ ಬರುವ ಹಣವನ್ನು ನಿಮ್ಮ ಹಾಗೂ ಪತ್ನಿ ಇಬ್ಬರ ಹೆಸರಿನಲ್ಲಿಯೂ ಬ್ಯಾಂಕಿನಲ್ಲಿ ಮನೆಕಟ್ಟುವವರೆಗೂ ಇರಿಸಬಹುದು. ಪ್ರತಿ ತಿಂಗಳೂ ಉಳಿಸಬಹುದಾದ ರೂ.16,000ದಲ್ಲಿ ತಲಾ ರೂ. 8,000ವನ್ನು ನಿಮ್ಮ ಹಾಗೂ ಪತ್ನಿ ಹೆಸರಿನಲ್ಲಿ ಎರಡು ಆರ್.ಡಿ ಖಾತೆ ತೆರೆದು ಐದು ವರ್ಷಗಳವರೆಗೆ ಜಮಾ ಮಾಡುತ್ತಾ ಬನ್ನಿರಿ.

ರಾಮಕೃಷ್ಣ, ಬೆಂಗಳೂರು
ಪ್ರಶ್ನೆ: ನಾನು ಕೇಂದ್ರ ಸರ್ಕಾರಿ ಹಾಗೂ ಪತ್ನಿ ರಾಜ್ಯ ಸರ್ಕಾರಿ ನೌಕರರು. ನನಗೆ ಇನ್ನೂ 10 ವರ್ಷ, ಪತ್ನಿಗೆ 23 ವರ್ಷ ಸೇವಾವಧಿ ಇದೆ. ಜಿ.ಪಿ.ಎಫ್‌ಗೆ ನಾನು ರೂ. 17,000 ಹಾಗೂ ಪತ್ನಿ ರೂ.3,000 ಕಟ್ಟುತ್ತಿದ್ದೇವೆ. ಸಂಬಳದಲ್ಲಿನ ಎಲ್ಲಾ ಕಡಿತ ಮತ್ತು ಮನೆ ವೆಚ್ಚದ ನಂತರ ಪ್ರತಿ ತಿಂಗಳು ರೂ. 30,000ವನ್ನು ಉಳಿತಾಯ ಖಾತೆಯಲ್ಲಿ ಇರಿಸುತ್ತಿದ್ದೇವೆ. ಇದೊಂದು ಉತ್ತಮ ಉಳಿತಾಯವಲ್ಲ ಎನ್ನುವುದು ನಮ್ಮ ಭಾವನೆ. ಸರಿಯಾದ ಹೂಡಿಕೆ ವಿಚಾರದಲ್ಲಿ ಮಾರ್ಗದರ್ಶನ ಮಾಡಿರಿ.


ಉತ್ತರ: ನಿಮ್ಮ ಪ್ರಶ್ನೆಯಲ್ಲಿಯೇ ಉತ್ತರವೂ ಇದೆ!  ಶೇ 70ರಷ್ಟು ಜನರು ತಮ್ಮ ದುಡಿಮೆಯಲ್ಲಿನ ಉಳಿತಾಯದ ಸಿಂಹಪಾಲನ್ನು ಉಳಿತಾಯ ಖಾತೆಯಲ್ಲಿಯೇ ಇರಿಸಿ, ಅತಿ ಕಡಿಮೆ ವರಮಾನ ಪಡೆಯುತ್ತಿದ್ದಾರೆ. ಇದರಿಂದಾಗಿಯೇ ಭಾರತೀಯ ಬ್ಯಾಂಕುಗಳ ಒಟ್ಟು ಠೇವಣಿಯಲ್ಲಿ ಶೇ 30ರಷ್ಟು ಮೊತ್ತ ಉಳಿತಾಯ ಖಾತೆಗಳಲ್ಲಿಯೇ ಇದೆ. ನೀವು ಕನಿಷ್ಠ 30್ಡ40 ಅಡಿ ಉದ್ದಗಲದ ಒಂದು ನಿವೇಶನವನ್ನು     ಬೆಂಗಳೂರು ಸಮೀಪದಲ್ಲಿ (ಬಿ.ಎಂ.ಆರ್.ಡಿ ಅಪ್ರೂವ್ಡ್) ಖರೀದಿಸಿರಿ. ಇದಕ್ಕಾಗಿ ಬ್ಯಾಂಕ್‌ನಿಂದ ಸಾಲ ಪಡೆದು ಸಮಾನ ಮಾಸಿಕ ಕಂತು(ಇ.ಎಂ.ಐ) ಲೆಕ್ಕದಲ್ಲಿ ಕಟ್ಟಿ ಅಸಲು-ಬಡ್ಡಿ ತೀರಿಸಿರಿ. ನಂತರದ ದಿನಗಳಲ್ಲಿ ನಿವೇಶನದ ಬೆಲೆ ದ್ವಿಗುಣವಾಗುತ್ತಾ ಹೋಗುತ್ತದೆ.

ಇನ್ನೊಂದು ಸಲಹೆ, ನಿವೇಶನ ಖರೀದಿಸಲು ಮನಸ್ಸು ಇಲ್ಲದೇ ಇದ್ದರೆ ನಿಮಗೆ ಉಳಿದಿರುವ 10 ವರ್ಷಗಳ ಸೇವಾವಧಿವರೆಗೂ ಆಗುವಂತೆ ಆರ್.ಡಿ ಮಾಡಿ ರೂ.25,000 ಕಟ್ಟುತ್ತಾ ಬನ್ನಿರಿ. ಕೊನೆಗೆ ರೂ.50 ಲಕ್ಷದಷ್ಟು ದೊಡ್ಡ ಮೊತ್ತ ಪಡೆಯುವಿರಿ. ಈ ಮೊತ್ತವನ್ನು ಠೇವಣಿಯಾಗಿಟ್ಟರೆ ತಿಂಗಳಿಗೆ ರೂ.45,000ರಷ್ಟು ಬಡ್ಡಿ (ಪಿಂಚಣಿ ರೂಪದಲ್ಲಿ) ಪಡೆದು ನೆಮ್ಮದಿಯಿಂದ ಜೀವಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT