ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ

Last Updated 17 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

–ರವಿ, ಮುರ್ಡೇಶ್ವರ
ಪ್ರಶ್ನೆ: ನನ್ನ ವಯಸ್ಸು 23 ವರ್ಷ. ಖಾಸಗಿ ಕಂಪೆನಿಯಲ್ಲಿ ಕೆಲಸ, ಸಂಬಳ ₨ 6000. ನನ್ನ ಉಳಿತಾಯದ ಹಣವನ್ನು ಪ್ರತಿ ತಿಂಗಳೂ ಕರ್ಣಾಟಕ ಬ್ಯಾಂಕಿನ ಉಳಿತಾಯ ಖಾತೆಗೆ ಜಮಾ ಮಾಡುತ್ತೇನೆ. ಈಗ ಉಳಿತಾಯ ಖಾತೆಯಲ್ಲಿ ₨50,000 ಇದೆ. ಇಲ್ಲಿ ಕಡಿಮೆ ಬಡ್ಡಿ ಬರುತ್ತದೆ. ಆಕರ್ಷಕ ಬಡ್ಡಿ ಬರಲು ಯೋಜನೆ ಯಾವುದು ಹಾಗೂ ಉತ್ತಮ ಬ್ಯಾಂಕ್‌ ಯಾವುದು ತಿಳಿಸಿರಿ.

ಉತ್ತರ: ಖಾಸಗಿ ಕ್ಷೇತ್ರದ ಕರ್ಣಾಟಕ ಬ್ಯಾಂಕ್‌ ಉತ್ತಮ ಬ್ಯಾಂಕ್‌. ಸದ್ಯ ನಿಮ್ಮ ಉಳಿತಾಯ (ಎಸ್‌.ಬಿ) ಖಾತೆಯಲ್ಲಿ ರುವ ಹಣವನ್ನು ಅದೇ ಬ್ಯಾಂಕಿನ ‘ಅಭ್ಯುದಯ ನಗದು ಸರ್ಟಿಫಿಕೆಟ್‌’ನಲ್ಲಿ ಐದು ವರ್ಷಗಳ ಅವಧಿಗೆ ತೊಡಗಿಸಿರಿ. ಈ ಬ್ಯಾಂಕ್‌ ನೀಡುವಷ್ಟು ಬಡ್ಡಿ ಬೇರೆ ಬ್ಯಾಂಕಿನಲ್ಲಿ ಸಿಗಲಾರದು. ಜತೆಗೆ ‘ಅಭ್ಯುದಯ ನಗದು ಸರ್ಟಿಫಿಕೆಟ್‌’ ಉತ್ತಮ ಉಳಿತಾಯ ಯೋಜನೆ ಕೂಡಾ. ಎಸ್‌.ಬಿ ಖಾತೆಯಲ್ಲಿ ₨5000 ಜಮಾ ಆದ ತಕ್ಷಣ, ‘ಅಭ್ಯುದಯ ನಗದು ಸರ್ಟಿಫಿಕೆಟ್‌’ ಪಡೆಯುತ್ತಾ ಬನ್ನಿರಿ. ಎಸ್‌.ಬಿ ಖಾತೆಯಲ್ಲಿ ನೀವೇ ತಿಳಿಸಿದಂತೆ ಅತಿ ಕಡಿಮೆ ಬಡ್ಡಿ ಬರುವುದರಿಂದ ಇಲ್ಲಿ ಹೆಚ್ಚಿನ ಹಣ ಇರಿಸುವುದು ಜಾಣತನವಲ್ಲ.

–ಅಶೋಕ್‌ ಕುಮಾರ್‌, ಪಡುವಾರಹಳ್ಳಿ
ಪ್ರಶ್ನೆ: ನಾನು ಈಗ ತಾನೆ ಕಟ್ಟಿದ ಮನೆಯನ್ನು ₨80 ಲಕ್ಷಕ್ಕೆ ಮಾರಾಟ ಮಾಡಬೇಕೆಂದಿದ್ದೇನೆ. ಈ ಹಣವನ್ನೇ ಮೂಲಧನವಾಗಿಟ್ಟು ಬಡ್ಡಿಯಲ್ಲಿ ಜೀವನ ನಡೆಸಬೇಕೆಂದಿದ್ದೇನೆ. ₨80 ಲಕ್ಷದಷ್ಟು ದೊಡ್ಡ ಮೊತ್ತವನ್ನು ಬ್ಯಾಂಕಿನಲ್ಲಿ ಇಟ್ಟುಕೊಳ್ಳುತ್ತಾರಾ? ತೆರಿಗೆ ಕಡಿತಾ ಮಾಡುತ್ತಾರಾ? ಬೇರೇನಾದರೂ ತೊಂದರೆಗಳಿವೆಯೆ? ದಯವಿಟ್ಟು ತಿಳಿಸಿರಿ. ಮತ್ತೊಂದು ಪ್ರಶ್ನೆ(ಕುತೂಹಲಕ್ಕಾಗಿ), ಕೋಟ್ಯಧಿಪತಿಯಂತಹ ಸ್ಪರ್ಧೆಯಲ್ಲಿ ಗೆದ್ದವರು ಆದಾಯ ತೆರಿಗೆ ಕಟ್ಟಬೇಕೇ?

ಉತ್ತರ: ನೀವು–ಈಗ ತಾನೆ ಕಟ್ಟಿದ ಮನೆಯನ್ನು ಮಾರಾಟ ಮಾಡುವಾಗ ಬಂಡವಾಳವೃದ್ಧಿ (ಕ್ಯಾಪಿಟಲ್‌ ಗೇನ್‌) ತೆರಿಗೆ ಕೊಡಬೇಕಾಗುತ್ತದೆ. ನಿವೇಶನದ ಬೆಲೆ ಹಾಗೂ ಮನೆಯನ್ನು ಕಟ್ಟಲು ಮಾಡಿರುವ ಒಟ್ಟು ವೆಚ್ಚವನ್ನು ₨80 ಲಕ್ಷದಲ್ಲಿ ಕಳೆದು ಉಳಿದ ಮೊತ್ತಕ್ಕೆ ತೆರಿಗೆ ಸಲ್ಲಿಸಬೇಕಾಗುತ್ತದೆ. ಹೀಗೆ ಬಂದ ಲಾಭದಲ್ಲಿ ಗರಿಷ್ಠ ₨50 ಲಕ್ಷವನ್ನು ಗ್ರಾಮೀಣ ವಿದ್ಯುದೀಕರಣ ಯೋಜನೆ (ರೂರಲ್‌ ಎಲೆಕ್ಟ್ರಿಫಿಕೇಷನ್‌) ಬಾಂಡ್‌ಗಳಲ್ಲಿ ಅಥವಾ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ದ(ನ್ಯಾಷನಲ್‌ ಹೈವೇ ಅಥಾರಿಟಿ ಆಫ್‌ ಇಂಡಿಯಾ) ಬಾಂಡ್‌ಗಳಲ್ಲಿ ಕನಿಷ್ಠ ಮೂರು ವರ್ಷಗಳವರೆಗೆ ಹೂಡಿಕೆ ಮಾಡಿದರೆ ಆ ಮೊತ್ತಕ್ಕೆ ಕ್ಯಾಪಿಟಲ್‌ ಗೇನ್‌ ತೆರಿಗೆಯಿಂದ ವಿನಾಯ್ತಿ ಪಡೆಯಬಹುದು.

ಪಾನ್‌ ಕಾರ್ಡ್‌ ಪ್ರತಿ ಸಲ್ಲಿಸಿ, ವಿಳಾಸ ದೃಢೀಕರಣದ ಪುರಾವೆಗಳಿದ್ದರೆ ಯಾವುದೇ ಬ್ಯಾಂಕಿನಲ್ಲಿ  ಆದರೂ ₨80 ಲಕ್ಷ ಅಥವಾ ಇನ್ನೂ ಹೆಚ್ಚಿನ ಹಣ ಠೇವಣಿಯಾಗಿ ಇರಿಸಿಕೊಳ್ಳುತ್ತಾರೆ. ವಾರ್ಷಿಕವಾಗಿ ₨10,000 ಕ್ಕಿಂತ ಹೆಚ್ಚಿಗೆ ಬಡ್ಡಿ ಬಂದಲ್ಲಿ ಬಡ್ಡಿಯಲ್ಲಿ ಶೇ 10ರಷ್ಟನ್ನು ಮೂಲದಲ್ಲೇ ಕಡಿತ ಮಾಡಿ ಆದಾಯ ತೆರಿಗೆ ಇಲಾಖೆಗೆ ರವಾನಿಸುತ್ತಾರೆ. ನಿಮ್ಮ ಕುತೂಹಲಕಾರಿ ಪ್ರಶ್ನೆ ಚೆನ್ನಾಗಿದೆ. ಕೋಟ್ಯಧಿಪತಿ ಸ್ಪರ್ಧೆಯಲ್ಲಿ ಎಷ್ಟು ಹಣ ಗೆದ್ದರೂ ಈ ಆದಾಯಕ್ಕೆ ನೇರವಾಗಿ ಶೇ 30 ಆದಾಯ ತೆರಿಗೆ ಸಲ್ಲಿಸಬೇಕು. ನಿಮಗೊಂದು ಕಿವಿಮಾತು: ತೆರಿಗೆ ಬರುತ್ತದೆ ಎನ್ನುವ ಭಯದಿಂದ ಸ್ಪರ್ಧೆಯಲ್ಲಿ ಭಾಗವಹಿಸುವುದನ್ನು ನಿಲ್ಲಿಸಬೇಕಿಲ್ಲ.

–ಎನ್‌.ವಿ.ಸುರೇಶ, ಭಟ್ರಹಳ್ಳಿ
ಪ್ರಶ್ನೆ: ನನ್ನ ಸಂಬಳ ₨12,500. ನನಗೆ ಐದಾರು ತಿಂಗಳಿಗೊಮ್ಮೆ ಸಂಬಳ ವಾಗುತ್ತದೆ. ಮನೆ ಕಟ್ಟುವ ಆಸೆ ಇದೆ. ಬ್ಯಾಂಕ್‌ ಸಾಲ ದೊರೆಯಬಹುದೇ?
ಉತ್ತರ:
ಗೃಹ ಸಾಲ ಪಡೆಯಲು ಆದಾಯದ ಮೂಲ ದಾಖಲೆಗಳನ್ನು ಬ್ಯಾಂಕಿಗೆ ಒದಗಿಸಬೇಕಾಗುತ್ತದೆ. ನಿಮಗೆ ಕಾಲಕಾಲಕ್ಕೆ ಸಂಬಳ ಬಾರದೇ ಇದ್ದರೆ ಗೃಹ ಸಾಲ ಪಡೆಯುವುದು ಕಷ್ಟವಾಗು ತ್ತದೆ. ಕೆಲಸ ಕಾಯಂ ಆಗುವವರೆಗೂ ತಾಳ್ಮೆಯಿಂದ ಇರಿ. ಮುಂದೆ ಉತ್ತಮ ದಿನಗಳು ಬಂದಾಗ ಒಂದು ನಿವೇಶನ ಖರೀದಿಸಿ. ನಂತರ ಆರ್ಥಿಕ ಪರಿಸ್ಥಿತಿ ಸುಧಾರಿಸಿದಾಗ ಮನೆ ನಿರ್ಮಾಣ ಆರಂಭಿಸಿ.

–ಕೆ.ಪಿ.ಕೊಟ್ಟೂರು, ಹುಬ್ಬಳ್ಳಿ
ಪ್ರಶ್ನೆ: ನನಗೆ ಇಬ್ಬರು ಸಹೋದರರಿದ್ದಾರೆ. ನಾವು ಫುಟ್‌ಪಾತ್‌ ವ್ಯಾಪಾರಿಗಳು. ತಂದೆ 2011ರಲ್ಲಿ ನಿಧನರಾದರು. ಅವರ ಹೆಸರಿನಲ್ಲೊಂದು ನಿವೇಶನವಿದೆ. ಅದರಲ್ಲಿ ಮನೆ ಕಟ್ಟಬೇಕೆಂದು ತಂದೆಯವರು ಆಶಿಸಿದ್ದರು. ಅವರ ಕನಸು ನನಸಾಗಿಸಲು ನಾವು ಸಹೋದರರು ಸೇರಿ ಆ ನಿವೇಶನದಲ್ಲಿ ಮನೆಕಟ್ಟ ಬೇಕೆಂದಿದ್ದೇವೆ. ನಮಗೆ ಬ್ಯಾಂಕಿನಲ್ಲಿ ಸಾಲ ಸಿಗಬಹುದೇ? ನಮಗೆ ಮಾರ್ಗದರ್ಶನ ಮಾಡಿ.

ಉತ್ತರ: ಬ್ಯಾಂಕಿನಲ್ಲಿ ಗೃಹ ಸಾಲ ಪಡೆಯಲು, ಸಾಲ ಮರು ಪಾವತಿಗೆ ವ್ಯಕ್ತಿಯ ಆದಾಯದ ಪುರಾವೆ ಸಲ್ಲಿಸ ಬೇಕು. ನೀವು ಫುಟ್‌ಪಾತ್‌ ವ್ಯಾಪಾರಿಗ ಳಾದ್ದರಿಂದ ಆದಾಯದ ಪುರಾವೆ ಸಲ್ಲಿಸುವುದು ಕಷ್ಟವಾದೀತು. ಇದೇ ವೇಳೆ ನೀವು ಆರ್.ಡಿ ಹಾಗೂ ಎಫ್‌.ಡಿ ಮಾಡುತ್ತಾ ಬಂದು ಮುಂದೆ ಮನೆ ಕಟ್ಟುವುದೂ ಕಷ್ಟದ ಕೆಲಸ. ನಿಮ್ಮ ತಂದೆಯವರ ಕನಸು ನನಸು ಮಾಡುವ ಭಾವನೆ ನಿಮ್ಮಲ್ಲಿದ್ದರೆ ಖಾಲಿ ಜಾಗದಲ್ಲಿ ಅರ್ಧಾಂಶ ಮಾರಾಟ ಮಾಡಿ, ಬರುವ ಹಣದಿಂದ ಮನೆ ಕಟ್ಟಿಸಿರಿ. ಇದರಿಂದ ಮನೆ ಕಟ್ಟಿಸಿದ ಹಾಗೂ ಆಯಿತು, ಸಾಲ ರಹಿತ ಜೀವನವೂ ನಿಮ್ಮದಾದಂತೆ ಆಯಿತು.

–ವಿಜಯಾನಂದ, ಊರು ಬೇಡ
ಪ್ರಶ್ನೆ: ನಾನು ವೃತ್ತಿಯಲ್ಲಿ ವೈದ್ಯ. ನನ್ನ ಹತ್ತಿರವಿದ್ದ ₨10 ಲಕ್ಷ ಹಣವನ್ನು ಬ್ಯಾಂಕ್‌ ಉಳಿತಾಯ ಖಾತೆಯಲ್ಲಿ ಮತ್ತು ₨5 ಲಕ್ಷವನ್ನು ವಿವಿಧ ಎಫ್‌.ಡಿಗಳ ರೂಪದಲ್ಲಿ ಬೇರೆ ಬೇರೆ ಬ್ಯಾಂಕುಗಳಲ್ಲಿ ಇಟ್ಟಿದ್ದೇನೆ. ಕಳೆದ 15 ವರ್ಷಗಳಿಂದ ಕೂಡಿಟ್ಟಿರುವ ಹಣ ಇದಾಗಿದೆ. ಬ್ಯಾಂಕಿನಲ್ಲಿ ಪಾನ್‌ ಕಾರ್ಡ್‌ ಕೇಳುತ್ತಾರೆ. ನಾನು ಯಾವುದೇ ತೆರಿಗೆ ಕಟ್ಟುತ್ತಿಲ್ಲ. ಪಾನ್‌ ಕಾರ್ಡ್‌ ಕೊಟ್ಟರೆ ತೊಂದರೆ ಇದೆಯೇ?

ಉತ್ತರ: ನಿಮ್ಮ ಮಾಸಿಕ–ವಾರ್ಷಿಕ ಆದಾಯ ತಿಳಿಸಲಿಲ್ಲ. ನಿಮ್ಮ ವಾರ್ಷಿಕ ಆದಾಯ ₨2 ಲಕ್ಷಕ್ಕೂ ಅಧಿಕವಾಗಿದ್ದಲ್ಲಿ, ಆ ಅಧಿಕ ಮೊತ್ತ ಮತ್ತು ಬ್ಯಾಂಕ್‌ ಠೇವಣಿಗಳಿಂದ ಬರುವ ಬಡ್ಡಿಗೆ ನೀವು ಪ್ರತಿ ವರ್ಷವೂ ಆದಾಯ ತೆರಿಗೆ ಕಟ್ಟಬೇಕಾಗುತ್ತದೆ. ಠೇವಣಿ ಇರಿಸಲು ಪಾನ್‌ ಕಾರ್ಡು ಕಡ್ಡಾಯವಾಗಿ ಬ್ಯಾಂಕಿಗೆ ಒದಗಿಸಬೇಕು. ನಿಮ್ಮ ಒಟ್ಟು ಠೇವಣಿ ವಿಂಗಡಿಸಿ ಬೇರೆ ಬೇರೆ ಬ್ಯಾಂಕುಗಳಲ್ಲಿ ಇರಿಸಿದರೂ, ಪಾನ್‌ ಕಾರ್ಡಿನಿಂದಾಗಿ ಈ ವಿಚಾರ ಆದಾಯ ತೆರಿಗೆ ಇಲಾಖೆಗೆ ತಿಳಿಯುತ್ತದೆ. ಉಳಿತಾಯ ಖಾತೆಯಲ್ಲಿ ಹಣವಿಟ್ಟರೆ ಅತಿ ಕಡಿಮೆ ಬಡ್ಡಿ ಬರುತ್ತದೆ. ₨10 ಲಕ್ಷ ವನ್ನು ಅವಧಿ ಠೇವಣಿಗೆ ವರ್ಗಾಯಿಸಿ ಹೆಚ್ಚಿನ ಬಡ್ಡಿ ಪಡೆಯಿರಿ. ನಿಮ್ಮ ಊರಿನಲ್ಲಿರುವ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿ. ಪ್ರತಿ ವರ್ಷ ಜುಲೈ 31ರೊಳಗೆ ವಾರ್ಷಿಕ ಆದಾಯ ತೆರಿಗೆ ಲೆಕ್ಕಪತ್ರ ಸಲ್ಲಿಸಿ ನಿಶ್ಚಿಂತರಾಗಿರಿ.

–ಮಹಾತೇಶ–ಗರಜೂರ– ಧಾರವಾಡ
ಪ್ರಶ್ನೆ: ವಯಸ್ಸು 31 ವರ್ಷ ಹಾಗೂ ಅವಿವಾಹಿತ. ನಾನು ಮಾರ್ಕೆಟಿಂಗ್‌ನಲ್ಲಿ ಎಂ.ಬಿ.ಎ ಮಾಡಿ ಎಚ್‌.ಡಿ.ಎಫ್‌.ಸಿ ಜೀವ ವಿಮಾ ಕಂಪೆನಿಯಲ್ಲಿ ಸೇಲ್‌್ಸ ಡೆವಲಪ್‌ಮೆಂಟ್‌ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದೇನೆ. ನನ್ನ ತಿಂಗಳ ಸಂಬಳ ₨15,000. ಎಲ್ಲಾ ಕಡಿತವಾಗಿ ₨12,729 ಕೈಗೆ ಬರುತ್ತದೆ. ಹಣ ಹೂಡಲು ಯಾವ ಉತ್ತಮ ಕಂಪೆನಿ ಷೇರು ಆಯ್ಕೆ ಮಾಡಿಕೊಳ್ಳಬಹುದು. ಯಾವ ಬ್ಯಾಂಕಿನಲ್ಲಿ ಆರ್‌.ಡಿ ಮಾಡಿ ದರೆ ಹೆಚ್ಚಿನ ಬಡ್ಡಿ ಬರುತ್ತದೆ. ನಿವೃತ್ತಿ ನಂತರ ಪಿಂಚಣಿಗಾಗಿ ಯಾವ ಆಯ್ಕೆ ಮಾಡಬಹುದು ತಿಳಿಸಿರಿ.
ಉತ್ತರ:
ಷೇರು ಮಾರುಕಟ್ಟೆ ಹೂಡಿಕೆ ಊಹಾಪೋಹಗಳಿಂದ ಕೂಡಿದ್ದು, ಅದರ ಲಾಭ ನಷ್ಟ ವಿಚಾರಗಳು ಸಂವೇದಿ ಸೂಚ್ಯಂಕದ ಏರಿಳಿತಕ್ಕೆ ಅನುಗುಣವಾಗಿರುತ್ತವೆ. ಹಾಗಾಗಿ, ಸದ್ಯಕ್ಕೆ ಇಲ್ಲಿ ಹಣ ಹೂಡುವುದು ಸಮಂಜಸವಲ್ಲ. ನಿಮ್ಮ ಸಂಬಳದಲ್ಲಿ ಕಡಿತವಾಗುವ ಹಣದಲ್ಲಿ ಜೀವ ವಿಮೆ ಇದೆಯೆಂದು ಭಾವಿಸುವೆ. ಆರ್‌.ಡಿ ಬಡ್ಡಿ ದರದಲ್ಲಿ ಬ್ಯಾಂಕಿನಿಂದ ಬ್ಯಾಂಕಿಗೆ ಬಹಳಷ್ಟು ವ್ಯತ್ಯಾಸವೇನೂ ಇರುವುದಿಲ್ಲ. ನಿವೃತ್ತಿ ನಂತರ ಪಿಂಚಣಿ ಪಡೆಯಲು ಒಂದು ಸ್ವಯಂ ಪಿಂಚಣಿ ಯೋಜನೆ ಹಾಕಿಕೊಳ್ಳಿ.

₨3,000ವನ್ನು ಪ್ರತಿ ತಿಂಗಳೂ 30 ವರ್ಷಗಳ ಕಾಲ  ನಿರಂತರವಾಗಿ ಬ್ಯಾಂಕಿನಲ್ಲಿ ಆರ್‌.ಡಿ ರೂಪದಲ್ಲಿ ಉಳಿತಾಯ ಮಾಡಿ. ನಿಮಗೆ 61ನೇ ವರ್ಷವಾದಾಗ ಪ್ರತೀ ತಿಂಗಳೂ  ಕನಿಷ್ಠ ₨50,000 ಬಡ್ಡಿಯನ್ನು ಪಿಂಚಣಿ ರೂಪದಲ್ಲಿ ಪಡೆಯಬಹುದು. ಬ್ಯಾಂಕುಗಳಲ್ಲಿ ಗರಿಷ್ಠ 10 ವರ್ಷಗಳ ವರೆಗೆ ಆರ್‌.ಡಿ ಮಾಡಬಹುದು. ನೀವು ಪ್ರತಿ 10 ವರ್ಷಗಳಿಗೂ ಆರ್‌.ಡಿ ಮಾಡಿರಿ. 30 ವರ್ಷಗಳ ಅವಧಿಯಲ್ಲಿ ಹೀಗೆ ಮೂರು ಬಾರಿ ಮಾಡಿರಿ. ಹಾಗೂ ಪ್ರತೀ ಆರ್‌.ಡಿ ಪೂರ್ಣಗೊಳ್ಳುತ್ತಲೇ ಆ ಮೊತ್ತ ಒಮ್ಮೆಲೇ ಬಡ್ಡಿ ಬರುವ ಠೇವಣಿಗೆ ವರ್ಗಾಯಿಸಿರಿ.

–ಕೆ.ಜಿ.ಮಂಜುಳ, ಚಿತ್ರದುರ್ಗ
ಪ್ರಶ್ನೆ: ನಾನು ಹಿರಿಯ ನಾಗರಿಕ ಮಹಿಳೆ. ಎರಡು ವರ್ಷ ಅವಧಿಗೆ ₨2 ಲಕ್ಷ ಎಫ್‌.ಡಿ ಮಾಡಬೇಕೆಂದಿದ್ದೇನೆ. ₨10,000 ವಾರ್ಷಿಕ ಬಡ್ಡಿ ಬಂದರೆ ತೆರಿಗೆ ಮುರಿಯುತ್ತಾರೆ ಎಂದು ಹೇಳುತ್ತಾರೆ. ಇದು ನಿಜವೇ? ನನ್ನ ಸ್ನೇಹಿತರಿಗೆ ₨49,000ದಂತೆ ನಾಲ್ಕು ಎಫ್‌.ಡಿ ಬಾಂಡ್‌ ಮಾಡಿದರೆ ತೆರಿಗೆ ಮುರಿಯುವುದಿಲ್ಲ ಎಂದು ಹೇಳಿದರಂತೆ. ನಾನು ಏನು ಮಾಡಲಿ? ದಯಮಾಡಿ ತಿಳಿಸಿರಿ.

ಉತ್ತರ: ನೀವು ಧೈರ್ಯ ಮಾಡಿ ₨2 ಲಕ್ಷವನ್ನು ನಿಮ್ಮ ಸಮೀಪದ ಬ್ಯಾಂಕಿನಲ್ಲಿ ₨50,000ದಂತೆ ನಾಲ್ಕು ಬಾಂಡು ಮಾಡಿಸಿ ಎಫ್‌.ಡಿ ಮಾಡಿರಿ. ಅವಧಿ ಮಧ್ಯದಲ್ಲಿ ಹಣ ಬೇಕಾದಲ್ಲಿ ಯಾವುದಾದರೂ ಒಂದು ಬಾಂಡ್‌ ಮುರಿಸಿ ಹಣ ಪಡೆಯಿರಿ. ಫಾರಂ ನಂಬ್ರ 15ಎಚ್‌ ಪ್ರತಿ ವರ್ಷ ಏಪ್ರಿಲ್‌ ಮೊದಲ ವಾರ ದ್ವಿಪ್ರತಿಯಲ್ಲಿ ಬ್ಯಾಂಕಿಗೆ ಸಲ್ಲಿಸಿರಿ ಹಾಗೂ ಪಾನ್‌ಕಾರ್ಡ್ ನಕಲು ಠೇವಣಿ ಇರಿಸುವಾಗ ಬ್ಯಾಂಕಿಗೆ ಸಲ್ಲಿಸಿರಿ. ಇದರಿಂದ ಬ್ಯಾಂಕಿನವರು ನೀವು ವಾರ್ಷಿಕವಾಗಿ ₨10,000ಕ್ಕೂ ಹೆಚ್ಚಿನ ಬಡ್ಡಿ ಠೇವಣಿ ಮೇಲೆ ಪಡೆದರೂ, ಬಡ್ಡಿಯಲ್ಲಿ ಮೂಲದಲ್ಲೇ ತೆರಿಗೆ ಮುರಿಯುವುದಿಲ್ಲ. ನಿಮ್ಮ ಸ್ನೇಹಿತರು ಕೂಡಾ ಇದೇ ರೀತಿ ಮಾಡಿರಬೇಕು, ವಿಚಾರಿಸಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT