ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಸೂತಿಗೆ 6 ತಿಂಗಳು, ಮಕ್ಕಳ ಶುಶ್ರೂಷೆಗೆ 2 ವರ್ಷ ರಜೆ!

Last Updated 25 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಮೈಸೂರು: ಸರ್ಕಾರಿ ಮಹಿಳಾ ನೌಕರರಿಗೆ ಈಗ ಸಿಹಿ ಸುದ್ದಿ. 6 ತಿಂಗಳು ಪ್ರಸೂತಿ ರಜೆ ಜೊತೆಗೆ ಮಕ್ಕಳ ಶುಶ್ರೂಷೆಗೆ 2 ವರ್ಷಗಳ ರಜೆ ಪಡೆಯಬಹುದು!

-ಹೌದು. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ನೌಕರರು ಇನ್ನು ಮುಂದೆ ನೆಮ್ಮದಿಯಿಂದ ಕೆಲಸ ಮಾಡಬಹುದಾಗಿದ್ದು, ಅವರಿಗೆ ವಿಶೇಷ ರಜೆ ನೀಡಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್ ಸರ್ಕಾರಕ್ಕೆ ಆದೇಶ ನೀಡಿದ್ದಾರೆ.

ಚಾಮರಾಜನಗರದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿ.ಶಕುಂತಲ ಆನಂದಗೌಡ ಅವರು ಪ್ರಸೂತಿ ರಜೆಗೆ ಆಗ್ರಹಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಏನಿದು ಪ್ರಕರಣ: ವೆಂಕಟಯ್ಯನಛತ್ರದಲ್ಲಿ ಪಿಡಿಒ ಆಗಿ ಕೆಲಸ ನಿರ್ವಹಿಸುತ್ತಿರುವ ಶಕುಂತಲ ಮೂಲತಃ ವಕೀಲರು. 2011ರ ಏಪ್ರಿಲ್ 4ರಂದು ಚಾಮರಾಜನಗರ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗೆ ಪ್ರಸೂತಿ ರಜೆ ಬೇಕು ಎಂದು ಮನವಿ ಸಲ್ಲಿಸಿದ್ದರು. ಆದರೆ, ಕರ್ನಾಟಕ ನಾಗರಿಕ ಸೇವಾ ನಿಯಮದಂತೆ ಇಒ ಅವರು ನಾಲ್ಕೂವರೆ ತಿಂಗಳು ಮಾತ್ರ ರಜೆ ಮಂಜೂರು ಮಾಡಿದ್ದರು. ಇದನ್ನು ಪ್ರಶ್ನಿಸಿ ಶಕುಂತಲ ಹೈಕೋರ್ಟ್ ಮೊರೆ ಹೋಗಿದ್ದರು.

ಕರ್ನಾಟಕ ನಾಗರಿಕ ಸೇವಾ ನಿಯಮದ ಅಧಿನಿಯಮ 135 (1) ಅಸಂವಿಧಾನಿಕವಾಗಿದ್ದು, ಅದನ್ನು ತಿದ್ದುಪಡಿ ಮಾಡಿ ಘೋಷಣೆ ಮಾಡಬೇಕು ಎಂದು ಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದರು. ಕೇಂದ್ರ ಸರ್ಕಾರವು ವಿವಾಹಿತ ಮಹಿಳಾ ಉದ್ಯೋಗಿಗಳಿಗೆ 2008ರ ಸೆಪ್ಟೆಂಬರ್ 1ರಿಂದ 6 ತಿಂಗಳು ಪ್ರಸೂತಿ ರಜೆ, 2 ವರ್ಷ ಮಗುವಿನ ಶುಶ್ರೂಷೆಗೆ ರಜೆ ನೀಡುತ್ತಿದೆ. ತಮಿಳುನಾಡು, ಕೇರಳ, ಆಂಧ್ರಪ್ರದೇಶ ರಾಜ್ಯಗಳಲ್ಲೂ ರಜೆ ನೀಡಲಾಗುತ್ತಿದೆ.

ಆದ್ದರಿಂದ ಶಕುಂತಲ ಅವರಿಗೂ ರಜೆ ನೀಡಬೇಕು ಎಂದು ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶರು ಶಕುಂತಲ ಅವರ ಮನವಿಯನ್ನು ಪುರಸ್ಕರಿಸಿ ರಜೆ ನೀಡಬೇಕು ಎಂದು ಸರ್ಕಾರಕ್ಕೆ ಆದೇಶಿಸಿದ್ದಾರೆ.

ಈ ಪ್ರಕರಣದಲ್ಲಿ ಹಿರಿಯ ವಕೀಲ ಚಂದ್ರಕಾಂತ ಆರ್.ಗೌಳೆ, ಎಚ್.ಎಚ್.ಈಶ್ವರ, ಎನ್.ನಂಜೇಗೌಡ ವಾದ ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT