ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಸ್ತಾವಿತ ಭೂಮಿಯಲ್ಲಿ ಸ್ಮಶಾನ: ಭಿನ್ನಾಭಿಪ್ರಾಯ

Last Updated 6 ಫೆಬ್ರುವರಿ 2013, 6:37 IST
ಅಕ್ಷರ ಗಾತ್ರ

ಮೂಡುಬಿದಿರೆ: ಪ್ರಾಂತ್ಯ ಗ್ರಾಮದ ಜ್ಯೋತಿನಗರದಲ್ಲಿ ಪ್ರಸ್ತಾವಿತ ಸ್ಮಶಾನ ನಿರ್ಮಾಣ ವಿವಾದಕ್ಕೆ ಕಾರಣವಾಗಿದ್ದು ಪುರಸಭೆ ಸದಸ್ಯರಲ್ಲೂ ಈ ವಿಚಾರ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ.

ಪ್ರಾಂತ್ಯ ಗ್ರಾಮದಲ್ಲಿ ಈಗಾಗಲೇ ಪುರಸಭೆ ನಿರ್ಮಿಸಿದ ಸ್ಮಶಾನವಿದ್ದರೂ ಸರಿಯಾದ ಮೂಲ ಸೌಕರ್ಯಗಳಿಲ್ಲದೆ ಅನಾನುಕೂಲ ಇದೆ. ಇಲ್ಲಿ ಏಕ ಕಾಲದಲ್ಲಿ ಎರಡು ಹೆಣ ಸುಡುವುದಕ್ಕೆ ಮಾತ್ರ ಅವಕಾಶವಿದೆ. ಇದನ್ನು 10 ಲಕ್ಷ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಹಣ ವಿನಿಯೋಗಿಸಿದ ಪುರಸಭೆ ಈಗಾಗಲೇ ಆವರಣಗೋಡೆ, ರಸ್ತೆ ವಿಸ್ತರಣೆ, ಮತ್ತೆರಡು ಹೆಣ ಸುಡಲು ವ್ಯವಸ್ಥೆಗಳನ್ನು ಅಳವಡಿಸಲು ಯೋಜನೆ ಹಾಕಿದ್ದು ಕೆಲಸ ಪ್ರಗತಿಯಲ್ಲಿದೆ.

ಇರುವ ರುದ್ರಭೂಮಿಯನ್ನು ಅಭಿವೃದ್ಧಿಪಡಿಸುತ್ತಿರುವಾಗಲೇ ಹತ್ತಿರದಲ್ಲಿ ಸ್ಮಶಾನಕ್ಕೆ ಕಾದಿರಿಸಿದ 0.46 ಸೆಂಟ್ಸ್ ಜಾಗದಲ್ಲಿ ದಾನಿಗಳ ಮೂಲಕ ಆಧುನಿಕ ರೀತಿಯಲ್ಲಿ ಇನ್ನೊಂದು ಸ್ಮಶಾನ ನಿರ್ಮಿಸಲು ಅವಕಾಶ ಕೋರಿ ಬರೆದ ಪತ್ರಕ್ಕೆ ಪುರಸಭೆ ಅನುಮಿತಿ ನೀಡಿದ್ದೆ ಈಗ ವಿವಾದಕ್ಕೆ ಕಾರಣವಾಗಿದೆ.

ಸ್ಮಶಾನವನ್ನು ಸ್ಥಳಾಂತರಿಸುವುದಿಲ್ಲ ಎಂದು ಪುರಸಭೆ ಈ ಹಿಂದೆಯೇ ನಿರ್ಣಯ ಕೈಗೊಂಡಿತ್ತು. ಅಲ್ಲದೆ ಸ್ಮಶಾನವನ್ನು ಅಭಿವೃದ್ಧಿಪಡಿಸಲು ಎಂಸಿಎಸ್ ಬ್ಯಾಂಕ್, ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಮೂಡುಬಿದಿರೆ ಸಾರ್ವಜನಿಕ ಗಣೇಶೋತ್ಸವ ಸಮಿತಿ ಮುಂದೆ ಬಂದರೂ ಸಕಾರಾತ್ಮಕವಾಗಿ ಸ್ಪಂದಿಸದ ಪುರಸಭೆ ದಾನಿಗಳ ಮೂಲಕ ನಿರ್ಮಿಸಲು ಉದ್ದೇಶಿಸಿದ ಹೊಸ ರುದ್ರಭೂಮಿಗೆ ಜನವರಿ 30ರಂದು ನಡೆದ ವಿಶೇಷ ಸಭೆಯಲ್ಲಿ ದಿಢೀರ್ ಅನುಮತಿ ನೀಡಿದೆ. ಹೊಸ ರುದ್ರಭೂಮಿ ಅಸ್ತಿತ್ವಕ್ಕೆ ಬಂದ ನಂತರ ಈಗಿರುವ ಸ್ಮಶಾನವನ್ನು  ಮುಚ್ಚುವುದೆಂಬ ತೀರ್ಮಾನಕ್ಕೂ ಬಂದಿದೆ.

ವರ್ಷದ ಹಿಂದೆಯೇ ಪುರಸಭೆಯು ಪ್ರಸ್ತಾವಿತ ಹೊಸ ಜಾಗದಲ್ಲೆ ಸ್ಮಶಾನ ನಿರ್ಮಾಣಕ್ಕೆ ಮುಂದಾಗಿತ್ತು. ಆದರೆ ಆ ಜಾಗ ಪುರಸಭೆ ನೀರು ಶುದ್ಧೀಕರಣ ಘಟಕಕ್ಕೆ ಹತ್ತಿರವಾಗಿದೆ ಹಾಗೂ ದಲಿತ ಮನೆಗಳಿಗೆ ಸಮೀಪವಾಗಿದೆ. ಅಲ್ಲದೆ ಹತ್ತಿರದ ದಲಿತ ನಿವಾಸಿಯೊಬ್ಬರು ಆಕ್ಷೇಪ ಎತ್ತಿದ್ದರಿಂದ ಪ್ರಸ್ತಾವಿತ ಜಾಗಕ್ಕೆ ರುದ್ರಭೂಮಿಯನ್ನು ಸ್ಥಳಾಂತರಿಸುವುದನ್ನು ಪುರಸಭೆ ಕೈಬಿಟ್ಟಿತ್ತು. ಶಾಸಕ ಅಭಯಚಂದ್ರ ಅವರ ಉಪಸ್ಥಿತಿಯಲ್ಲಿ ಈ ಹಿಂದೆ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲೂ ರುದ್ರಭೂಮಿಯನ್ನು ಸ್ಥಳಾಂತರಕ್ಕೆ ವಿರೋಧ ವ್ಯಕ್ತವಾಗಿತ್ತು.

`ಹೊಸ ರುದ್ರಭೂಮಿ ನಿರ್ಮಿಸುವ ಬದಲು ಸಾಕಷ್ಟು ಜಾಗವಿರುವ ಈಗಿನ ರುದ್ರಭೂಮಿಯನ್ನೇ ಅಭಿವೃದ್ಧಿಪಡಿಸಲು ನಮ್ಮ ಅಭ್ಯಂತರ ಇಲ್ಲ' ಎಂಬುದು ಬಿಜೆಪಿಯ ಅಭಿಪ್ರಾಯವಾಗಿದೆ. ಆದರೆ ಹೊಸ ರುದ್ರಭೂಮಿ ನಿರ್ಮಿಸಲು ಮುಂದೆ ಬಂದವರು ಈಗಿರುವ ರುದ್ರಭೂಮಿಯನ್ನು ಅಭಿವ್ಧೃಪಡಿಸಲು ನಿರಾಕರಿಸಿದ್ದಾರೆ. ಜನವರಿ 30ರಂದು ನಡೆದ ವಿಶೇಷ ಸಭೆಯಲ್ಲಿ ಹೊಸ ಸ್ಮಶಾನ ನಿರ್ಮಾಣಕ್ಕೆ ಅನುಮತಿ ನೀಡಿದ ಪುರಸಭೆ ಇದರ ಸಾಧಕ- ಬಾಧಕದ ಬಗ್ಗೆ ವರದಿ ನೀಡಲು ಸದಸ್ಯರ ಸಮಿತಿಯನ್ನು ಕೂಡ ರಚಿಸಿದೆ. ಈ ವರದಿ ಆಧರಿಸಿ ಪುರಸಭೆ ಮುಂದಿನ ಹೆಜ್ಜೆ ಇಡಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT