ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಪ್ರಸ್ತುತ ರಾಜಕಾರಣ-ಸ್ಥಿತ್ಯಂತರ' ಗೋಷ್ಠಿ

ಎಂ.ಪಿ.ಪ್ರಕಾಶ್ 73ನೇ ಜನ್ಮದಿನ
Last Updated 8 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: `ನಾಡು ಕಂಡ ಅಪರೂಪದ ರಾಜಕಾರಣಿ ದಿವಂಗತ ಎಂ.ಪಿ.ಪ್ರಕಾಶ್ ಅವರ 73ನೇ  ಜನ್ಮದಿನದ ಅಂಗವಾಗಿ ಇದೇ ಗುರುವಾರ (ಜುಲೈ 11) ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಎಂ.ಪಿ.ಪ್ರಕಾಶ್ ಅವರ ಛಾಯಾಚಿತ್ರ ಪ್ರದರ್ಶನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ' ಎಂದು ಎಂ.ಪಿ.ಪ್ರಕಾಶ್ ಪ್ರತಿಷ್ಠಾನದ ಗೌರವ ಅಧ್ಯಕ್ಷ ಎಂ.ಪಿ.ರವೀಂದ್ರ ತಿಳಿಸಿದರು.

ಸೋಮವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂ.ಪಿ.ಪ್ರಕಾಶ್ ಅವರ ಚಿಂತನೆಗಳಿಗೆ ಅನುಗುಣವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಚಿತ್ರಕಲಾ ಪ್ರದರ್ಶನ, ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ ಎಂದರು.

`ಪ್ರಸ್ತುತ ರಾಜಕಾರಣ ಮತ್ತು ಸ್ಥಿತ್ಯಂತರಗಳು' ವಿಷಯ ಕುರಿತ ವಿಚಾರ ಸಂಕಿರಣದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್‌ಮಟ್ಟು, ಶಾಸಕ ವೈಎಸ್‌ವಿ ದತ್ತ, ವಿಮರ್ಶಕ ಡಾ.ನಟರಾಜ್ ಹುಳಿಯಾರ್, ಡಾ.ಎಲ್.ಹನುಮಂತಯ್ಯ ಮತ್ತಿತರರು ಭಾಗವಹಿಸಲಿದ್ದಾರೆ. `ಪ್ರಕಾಶ್ ಚಿಂತನೆಗಳು' ವಿಷಯ ಕುರಿತ ಸಂವಾದವನ್ನು ನಿರ್ದೇಶಕ ಟಿ.ಎನ್.ಸೀತಾರಾಂ ಅವರು ನಡೆಸಿಕೊಡಲಿದ್ದಾರೆ ಎಂದು ಹೇಳಿದರು.

ಪ್ರತಿಷ್ಠಾನದ ವತಿಯಿಂದ ಕೋಣಂದೂರು ಲಿಂಗಪ್ಪ ಅವರಿಗೆ `ರಾಷ್ಟ್ರೀಯ ಸಮಾಜಸೇವಾ ಸಿರಿ' ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಉಮಾಶ್ರೀ ಅವರಿಗೆ `ಕಲಾಸಿರಿ' ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ತಲಾ ್ಙ1 ಲಕ್ಷ ಮತ್ತು 50 ಸಾವಿರ ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ ಎಂದರು.

ಎಂ.ಪಿ.ಪ್ರಕಾಶ್ ಅವರು ರಚಿಸಿದ್ದ `ಸಾಂಸ್ಕೃತಿಕ ರಾಯಭಾರಿ' ಕೃತಿಯನ್ನು ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅವರು ಬಿಡುಗಡೆ ಮಾಡಲಿದ್ದಾರೆ. ಆರು ಮಂದಿ ಬಡ ಕ್ಯಾನ್ಸರ್ ರೋಗಿಗಳಿಗೆ ತಲಾ ರೂ25 ಸಾವಿರ ನೆರವು ನೀಡಲಾಗುವುದು ತಿಳಿಸಿದರು.

ಸಹಕಾರ ಸಚಿವ ಎಚ್.ಎಸ್.ಮಹದೇವ ಪ್ರಸಾದ್ ಮಾತನಾಡಿ, ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಎಂ.ಪಿ.ಪ್ರಕಾಶ್ ಅಧ್ಯಯನ ಪೀಠ ಸ್ಥಾಪಿಸುವ ಉದ್ದೇಶವಿದೆ. ಹೂವಿನ ಹಡಗಲಿಯಲ್ಲಿ ಅಪೂರ್ಣಗೊಂಡಿರುವ ಎಂ.ಪಿ.ಪ್ರಕಾಶ್ ರಂಗ ಮಂದಿರವನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ವಿಧಾನ ಪರಿಷತ್ ಸದಸ್ಯ ಎಂ.ವಿ.ರಾಜಶೇಖರನ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಶಾಸಕ ಸುರೇಶ್ ಕುಮಾರ್ ಮತ್ತಿತರರು ಭಾಗವಹಿಲಿದ್ದಾರೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT