ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಸ್ತುತ ಸಿನಿಮಾಗಳಲ್ಲಿ ಸಂದೇಶಗಳೇ ಇಲ್ಲ

Last Updated 6 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಪ್ರಸ್ತುತ ಸಿನಿಮಾಗಳಲ್ಲಿ ಬದುಕಿಗೆ ಅಗತ್ಯವಾದ ಸಂದೇಶಗಳು ಇಲ್ಲ. ಹೀಗಾಗಿ ಇಂದು ನೋಡಿದ ಸಿನಿಮಾ ನಾಳೆ ನೆನಪಿನಲ್ಲಿ ಉಳಿಯುವುದು ಕಷ್ಟವಾಗಿದೆ~ ಎಂದು ಕೇಂದ್ರ ಮಾನವ ಸಂಪನ್ಮೂಲ ಖಾತೆ ರಾಜ್ಯ ಸಚಿವೆ ಡಿ. ಪುರಂಧರೇಶ್ವರಿ ವಿಷಾದ ವ್ಯಕ್ತಪಡಿಸಿದರು.

ನಟರತ್ನ ಡಾ.ಎನ್.ಟಿ.ರಾಮರಾವ್ ಅವರ 89ನೇ ಜಯಂತಿ ಅಂಗವಾಗಿ ಕರ್ನಾಟಕ ತೆಲುಗು ಅಕಾಡೆಮಿ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಚಿತ್ರನಟಿ ಭಾರತಿ ಹಾಗೂ ನಟ ಶಿವರಾಜ್‌ಕುಮಾರ್ ಅವರಿಗೆ ಎನ್‌ಟಿಆರ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

`ಎನ್‌ಟಿಆರ್, ರಾಜ್‌ಕುಮಾರ್ ಅವರಂತಹ ನಟರು ಬೇರೊಬ್ಬರಿಗೆ ಮಾದರಿಯಾಗಿ ಬದುಕಿದರು. ನಟನೆಯಲ್ಲಿ ಮಾತ್ರವಲ್ಲದೇ ನಿಜ ಜೀವನದಲ್ಲಿಯೂ ಆದರ್ಶಗಳನ್ನು ರೂಪಿಸಿಕೊಂಡರು. ಇಂತಹ ನಟರಿಂದ ಇಂದಿನ ಪೀಳಿಗೆ ಶಿಸ್ತು, ನೈತಿಕತೆ ಕಲಿಯಬೇಕಿದೆ~ ಎಂದರು.

`ರಾವಣನ ಅಹಂ, ರಾಮನ ಸೌಮ್ಯಗುಣ, ದುರ್ಯೋಧನನ ಆಡಳಿತ ನೀತಿ, ಕೃಷ್ಣನ ಚಾಣಾಕ್ಷತೆ ಹೀಗೆ ಎನ್‌ಟಿಆರ್ ಅವರಿಗೆ ಪ್ರತಿ ಪಾತ್ರಗಳ ಸಾರ ತಿಳಿದಿತ್ತು. ಪ್ರೇಕ್ಷಕರ ಮನಸ್ಸಿಗೆ ತಲುಪುವ ಕಲೆ ಅವರಿಗೆ ಸಿದ್ದಿಸಿತ್ತು. ಕಲಾದೇವಿಯ ಆಶೀರ್ವಾದದಿಂದಾಗಿ ತೆಲುಗಿನ ಮನೆಮಾತೇ ಆದರು. ಮದ್ರಾಸಿಗರು ಎಂದು ಗುರುತಿಸಿಕೊಳ್ಳುತ್ತಿದ್ದ ತೆಲುಗರಿಗೆ ಪ್ರತ್ಯೇಕ ಸ್ಥಾನಮಾನ ತಂದುಕೊಟ್ಟರು~ ಎಂದು ಎನ್‌ಟಿಆರ್ ಪುತ್ರಿಯೂ ಆಗಿರುವ ಅವರು ತಿಳಿಸಿದರು.

`ಜನರಿಗೆ ಒಳ್ಳೆಯದನ್ನು ಮಾಡುವ ಇಂಗಿತದೊಡನೇ ಅವರು ರಾಜಕೀಯ ಕ್ಷೇತ್ರಕ್ಕೆ ಕಾಲಿರಿಸಿದರು. ತೆಲುಗು ಸ್ವಾಭಿಮಾನಕ್ಕೆ ಅಡ್ಡಿ ಬಂದಾಗ ಹೊಸ ಪಕ್ಷ ಕಟ್ಟಿದ ಕೆಲವೇ ತಿಂಗಳಲ್ಲಿ ಮುಖ್ಯಮಂತ್ರಿಯಾದರು. ಬಡವರಿಗೆ 2 ರೂಪಾಯಿಗೆ ಅಕ್ಕಿ ವಿತರಣೆ, ತೆಲುಗು ವಿಶ್ವವಿದ್ಯಾಲಯ, ಪದ್ಮಾವತಿ ಮಹಿಳಾ ವಿಶ್ವವಿದ್ಯಾಲಯ ಸ್ಥಾಪನೆ ಮಾತ್ರವಲ್ಲದೇ ತೆಲಂಗಾಣದಲ್ಲಿದ್ದ ಜಮೀನ್ದಾರಿ ಪದ್ದತಿಯನ್ನು ಎನ್‌ಟಿಆರ್ ಹೋಗಲಾಡಿಸಿದರು~ ಎಂದರು. 

 ಅಕಾಡೆಮಿ ಅಧ್ಯಕ್ಷ ಡಾ. ಎ.ರಾಧಾಕೃಷ್ಣರಾಜು ಮಾತನಾಡುತ್ತಾ, `ಎನ್‌ಟಿಆರ್ ಹಾಗೂ ರಾಜ್‌ಕುಮಾರ್ ಅವರಲ್ಲಿ ಅನೇಕ ಹೋಲಿಕೆಗಳಿವೆ ಇಬ್ಬರೂ ವಿಜಯನಗರದ ಅರಸ ಕೃಷ್ಣದೇವರಾಯನ ಪಾತ್ರ ಮಾಡಿದ್ದಾರೆ. ಕೃಷ್ಣ ಅರ್ಜುನನ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಅಣ್ಣಾ ಹಜಾರೆ, ಬಾಬಾ ರಾಮದೇವ್ ಅವರ ಈಗಿನ ಹೋರಾಟದಂತೆ ಆಂಧ್ರ ಪ್ರದೇಶದಲ್ಲಿ ಎನ್‌ಟಿಆರ್ ಎಂದೋ ಸಾಮಾಜಿಕ ಆಂದೋಲನ ಸೃಷ್ಟಿ ಮಾಡಿದರು~ ಎಂದು ಸ್ಮರಿಸಿದರು.

`ಎನ್‌ಟಿಆರ್ ಅವರಿಗೆ ಭಾರತ ರತ್ನ ಪ್ರಶಸ್ತಿ ದೊರೆಯಬೇಕು ಎಂಬುದು ತೆಲುಗಿನ ಜನರ ಬಹುದಿನದ ಬೇಡಿಕೆಯಾಗಿದೆ. ಹಾಗೆಯೇ ಕನ್ನಡ ಹಾಗೂ ತೆಲುಗು ಭಾಷೆಗಳಿಗೆ ಶಾಸ್ತ್ರೀಯ ಭಾಷೆ ಸ್ಥಾನಮಾನದ ಸೌಲಭ್ಯಗಳನ್ನು ದೊರಕಿಸಿಕೊಡಲು ಕೇಂದ್ರ ಸರ್ಕಾರ ಮನಸ್ಸು ಮಾಡಬೇಕು~ ಎಂದರು. 

ಪ್ರಶಸ್ತಿ ಸ್ವೀಕರಿಸಿದ ನಟಿ ಭಾರತಿ, `ತೆಲುಗಿನ ಜನ ತಮ್ಮ ಮನೆ ಹುಡುಗಿ ಎಂಬಂತೆ ನನ್ನನ್ನು ಕಂಡರು. ಈಗಲೂ ಅದನ್ನು ನೆನೆದರೆ ಆನಂದವಾಗುತ್ತದೆ. ಶಿವಾಜಿ, ಅಕ್ಕಿನೇನಿ ನಾಗೇಶ್ವರರಾವ್, ರಾಜ್‌ಕುಮಾರ್, ಎಂಜಿಆರ್, ಹಾಗೂ ಎನ್‌ಟಿಆರ್ ಅವರಿಂದಾಗಿ ಸಮಯ ಪ್ರಜ್ಞೆಯನ್ನು ಕಲಿಯಲು ಸಾಧ್ಯವಾಯಿತು~ ಎಂದು ಹೇಳಿದರು.

ನಟ ಶಿವರಾಜ್ ಕುಮಾರ್ ಮಾತನಾಡಿ `ಎನ್‌ಟಿಆರ್, ರಾಜ್‌ಕುಮಾರ್ ಅವರಿಗೆ ಭಾರತ ರತ್ನ ಗೌರವ ದೊರೆಯಲಿ ಅಥವಾ ದೊರೆಯದಿರಲಿ, ಅವರು ನಮ್ಮ ಮನಸ್ಸಿನಲ್ಲಿ ಭಾರತ ರತ್ನರಾಗಿ ಉಳಿದಿದ್ದಾರೆ. ಅವರ ಆದರ್ಶಗಳನ್ನು ಯುವಕರು ಪಾಲಿಸಿದರೆ ಸಾಕು ಅಂತಹ ಮಹಾನ್ ನಟರ ಕಾಲು ಭಾಗವಾದರೂ ಮೆರೆಯಬಹುದು~ ಎಂದರು.

   ಭಾರತ ಚಲನಚಿತ್ರ ಒಕ್ಕೂಟದ ಉಪಾಧ್ಯಕ್ಷ ಎ.ಆರ್.ರಾಜು, ಶಾಸಕ ಎಂ.ಕೃಷ್ಣಪ್ಪ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಸಂತಕುಮಾರ್ ಪಾಟೀಲ್ ಮಾತನಾಡಿದರು. ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಸಿ.ವಿ.ಶ್ರೀನಿವಾಸಯ್ಯ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT