ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಂಶುಪಾಲ ಲೈಂಗಿಕ ಕಿರುಕುಳ: ವದಂತಿಯದೇ ಕಾರುಬಾರು

Last Updated 16 ಡಿಸೆಂಬರ್ 2013, 6:53 IST
ಅಕ್ಷರ ಗಾತ್ರ

ಶಿರಾ: ಪ್ರಾಂಶುಪಾಲರೊಬ್ಬರು ಪ್ರಥಮ ಪಿಯುಸಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಪೊಲೀಸ್ ಠಾಣೆ ಮೆಟ್ಟಲೇರಿದ ನಂತರ ತಾಲ್ಲೂಕಿನಾದ್ಯಂತ ವದಂತಿಗಳದ್ದೇ ಕಾರುಬಾರು.

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿ ತಲೆಮರೆಸಿಕೊಂಡಿರುವ ತಾಲ್ಲೂಕಿನ ಪಟ್ಟನಾಯಕನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರು ಶಿವಮೊಗ್ಗ ಜಿಲ್ಲೆಯ ತಹಶೀಲ್ದಾರ್ ಒಬ್ಬರ ಮನೆಯಲ್ಲಿ ಅಡಗಿದ್ದಾರೆ ಎಂಬ ವದಂತಿಗಳು ಕೇಳಿ ಬರುತ್ತಿವೆ.

ಲೈಂಗಿಕ ಕಿರುಕುಳ ಅನುಭವಿಸಿದ ವಿದ್ಯಾರ್ಥಿನಿ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದರಿಂದ ಬಂಧನ ಭೀತಿಯಿಂದ ನಾಪತ್ತೆಯಾದ ಪ್ರಾಂಶುಪಾಲ ಬಿ.ಪಿ.ಪಾಂಡುರಂಗಯ್ಯ ಶಿವಮೊಗ್ಗ ಜಿಲ್ಲೆಯಲ್ಲಿ ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಸ್ನೇಹಿತರೊಬ್ಬರ ಮನೆಯಲ್ಲಿ ಅಡಗಿದ್ದಾರೆ. ನ್ಯಾಯಾಲಯದಲ್ಲಿ ಜಾಮೀನು ಪಡೆಯಲು ಅಲ್ಲಿಂದಲೇ ಪ್ರಯತ್ನ ಮುಂದುವರೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಪ್ರಾಂಶುಪಾಲರೊಬ್ಬರು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ನಡೆದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದರೂ ಈವರೆಗೂ ಆರೋಪಿ ಬಂಧಿಸದಿರುವುದು ಕಾನೂನು ಸಚಿವರ ಕ್ಷೇತ್ರದಲ್ಲೇ ಕಾನೂನು ಉಲ್ಲಂಘನೆ ಅಲ್ಲವೇ ಎಂದು ಜನಸಾಮಾನ್ಯರು ಪ್ರಶ್ನಿಸುತ್ತಿದ್ದಾರೆ. ಇದೀಗ ಆರೋಪಿ ತಾಲ್ಲೂಕು ದಂಡಾಧಿಕಾರಿಯೊಬ್ಬರ ಮನೆಯಲ್ಲಿ ಅಡಗಿದ್ದಾರೆಂಬ ವದಂತಿ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ.

ಆರೋಪಿ ಪಾಂಡುರಂಗಯ್ಯ ಕಳೆದ ಹಲ ವರ್ಷಗಳಿಂದ ಅದೇ ಕಾಲೇಜಿನಲ್ಲಿ ಉಪನ್ಯಾಸಕರಾಗಿ ನಂತರ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಹಿಂದಿ­ನಿಂ­ದಲೂ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರೂ ಯಾವೊಬ್ಬ ವಿದ್ಯಾರ್ಥಿನಿಯೂ ಈವರೆಗೆ ಪೊಲೀಸರಿಗೆ ದೂರು ನೀಡುವ ಸಾಹಸ ಮಾಡಿರಲಿಲ್ಲ ಎನ್ನಲಾಗಿದೆ.

ಆದರೆ ಈ ಪ್ರಕರಣವೂ ರಾಜಿ-ಸಂಧಾನದಲ್ಲಿ ಅಂತ್ಯವಾಗುತ್ತದೆ ಎಂದು ಭಾವಿಸಿದ ಪ್ರಾಂಶುಪಾಲರು ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಪ್ರಶ್ನಿಸಲು ಬಂದ ವಿದ್ಯಾರ್ಥಿನಿಯ ತಂದೆಯನ್ನೇ ನಿಂದಿಸಿ ‘ಪೊಲೀಸರು ನನಗೆ ಗೊತ್ತಿಲ್ಲದವರಲ್ಲ; ನೀವು ದೂರು ನೀಡಿದರೂ ನನಗೆ ಏನೂ ಆಗಲ್ಲ’ ಎಂದು ಧಮಕಿ ಹಾಕಿದ್ದೇ ಪ್ರಕರಣ ವಿಕೋಪಕ್ಕೆ ಹೋಗಲು ಕಾರಣವಾಯಿತು ಎಂದು ಹೇಳಲಾಗುತ್ತಿದೆ.

‘ಈವರೆಗೂ ಪೊಲೀಸರು ನನ್ನ ಮತ್ತು ಮಗಳ ಜತೆ ಸೌಹಾರ್ದ ರೀತಿಯಲ್ಲಿ ನಡೆದುಕೊಂಡಿದ್ದಾರೆ. ತುಮಕೂರು ನ್ಯಾಯಾಧೀಶರ ಬಳಿಗೂ ನಮ್ಮ ಮಗಳನ್ನು ಪೊಲೀಸರು ಕರೆದು­ಕೊಂಡು ಹೋಗಿದ್ದರು. ನಡೆದಿರುವ ಎಲ್ಲಾ ವಿಷಯ­ವನ್ನು ಮುಚ್ಚುಮರೆ ಇಲ್ಲದೆ ನನ್ನ ಮಗಳು ಪೊಲೀಸರು ಹಾಗೂ ನ್ಯಾಯಾಧೀಶರಿಗೆ ತಿಳಿಸಿದ್ದಾಳೆ. ಆದ್ದರಿಂದ ಪ್ರಾಂಶು­ಪಾಲರ ಬಂಧನವಾಗುತ್ತದೆ. ಮಗಳಿಗೆ ನ್ಯಾಯ ಸಿಗುತ್ತದೆ’ ಎಂದು ವಿದ್ಯಾರ್ಥಿನಿ ತಂದೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾಲೇಜಿಗೆ ಸೇರುವ ಮುಂಚೆಯೇ ಆ ಪ್ರಾಂಶುಪಾಲರ ಬಗ್ಗೆ ಹಿರಿಯ ವಿದ್ಯಾರ್ಥಿನಿಯರು ನನಗೆ ಹೇಳಿದ್ದರು. ಆದರೂ ನಾವು ಬಡವರು. ದೂರದ ಬೇರೆ ಕಾಲೇಜಿಗೆ ಸೇರಲು ಸಾಧ್ಯವಾಗದೆ ಸೇರಿದೆ. ಆದರೆ ಪ್ರಾಂಶುಪಾಲರು ಕಾಲೇಜಿನಲ್ಲಿ ನಡೆದ ಸಮಾರಂಭವೊಂದರ ದಿನ ತಮ್ಮ ಕೊಠಡಿಯಲ್ಲಿ ನನ್ನ ಜತೆಯೂ ಅದೇ ರೀತಿ ನಡೆದುಕೊಂಡರು. ನೀವು ಬಡವರು ಅಂಥ ಹೇಳಿ ಹಣದ ಆಮಿಷ ತೋರಿದರು. ಆದರೆ ನಾನು ಮಾರ್ಯಾದೆ ಅಂಥ ಲೆಕ್ಕ ಹಾಕದೆ ಮಾದರಿಯಾಗಬೇಕು ಎಂದು ಪೊಲೀಸರಿಗೆ ದೂರು ನೀಡಿದೆ. ಖಂಡಿತ ನ್ಯಾಯ ಸಿಗುತ್ತದೆ ಅಲ್ಲವೆ’ ಎಂದು ವಿದ್ಯಾರ್ಥಿನಿ ಪ್ರಶ್ನಿಸಿದರು.

ಈ ಮಧ್ಯೆ ಪಾಂಡುರಂಗಯ್ಯ ಸರ್ಕಾರಿ ಕಾಲೇಜು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಲೇ ಪಟ್ಟನಾಯಕನಹಳ್ಳಿಯಲ್ಲೇ ಖಾಸಗಿ ಶಾಲೆ ತೆರೆದಿದ್ದಾರೆ. ಇದನ್ನು ಸಹಿಸದವರ ಷಡ್ಯಂತರ ಎಂದು ಕೆಲವರು ಪ್ರಾಂಶುಪಾಲರ ಪರ ವಾದಿಸುತ್ತಾರೆ. ಈ ನಡುವೆ ಕೆಲವರು ವಿದ್ಯಾರ್ಥಿನಿಯ ಕುಟುಂಬದ ಆತ್ಮಸ್ಥೈರ್ಯ ಕುಂದಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎನ್ನಲಾಗಿದೆ.

ಕಾನೂನು ಸಚಿವರ ಕ್ಷೇತ್ರದಲ್ಲೇ ಕಾನೂನಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದ್ದು, ಆರೋಪಿ ಪ್ರಾಂಶುಪಾಲರನ್ನು ತಕ್ಷಣ ಬಂಧಿಸದಿದ್ದರೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಮಹಿಳಾ ಹಾಗೂ ವಿದ್ಯಾರ್ಥಿ ಸಂಘಟನೆಗಳು ಎಚ್ಚರಿಸಿವೆ.

ಪೊಲೀಸರಿಗೆ ದೂರು ನೀಡಿದ ವಿದ್ಯಾರ್ಥಿನಿ ಹಾಗೂ ಆಕೆ ಪರ ಸಾಕ್ಷಿ ಹೇಳಲು ಹೋಗಿದ್ದ ಇಬ್ಬರು ವಿದ್ಯಾರ್ಥಿನಿಯರು ಸೇರಿ ಮೂವರು ಈವರೆಗೆ ಕಾಲೇಜಿಗೆ ಹಾಜರಾಗುತ್ತಿಲ್ಲ ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT