ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಚಾರ್ಯರ ಮಗಳ ಮದುವೆ: ಕಾಲೇಜಿಗೆ ಬೀಗ!

Last Updated 11 ಫೆಬ್ರುವರಿ 2012, 7:00 IST
ಅಕ್ಷರ ಗಾತ್ರ

ಶಹಾಪುರ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರ ಮಗಳ ಮದುವೆಯ ಕಾರ್ಯಕ್ರಮದಲ್ಲಿ ಶುಕ್ರವಾರ ಭಾಗವಹಿಸುವ ಸಲುವಾಗಿ ತೆರಳಿದ್ದ ಸಿಬ್ಬಂದಿ ಕಾಲೇಜಿಗೆ ಬೀಗ ಜಡಿದು ಹೋಗಿದ್ದಾರೆ. ಕಾಲೇಜಿನ ಆಡಳಿತ ಮಂಡಳಿಯು ತುಘಲಕ ದರ್ಬಾರದಂತೆ ನಡೆದುಕೊಳ್ಳುತ್ತಿದೆ ಎಂದು ತಾಲ್ಲೂಕು ಎಸ್‌ಎಫ್‌ಐ ಸಂಘಟನೆಯೂ ತೀವ್ರ ಆಕ್ರೋಶ ವ್ಯಪ್ತಡಿಸಿದ್ದಾರೆ.

ಎಂದಿನಂತೆ ಹೆಚ್ಚಿನ ವಿದ್ಯಾರ್ಥಿಗಳು ಕಾಲೇಜಿಗೆ ತೆರಳಿದ್ದರು. ಪ್ರಾಚಾರ್ಯರ ಮಗಳ ಮದುವೆ ಸಮಾರಂಭವಿದ್ದು ಅದರಲ್ಲಿ ಭಾಗವಹಿಸಲು ತೆರಳುತ್ತಿರುವುದಾಗಿ ಸಿಬ್ಬಂದಿಯೊಬ್ಬರು ತಿಳಿಸಿದರು. ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಿ ನಾವೆಲ್ಲರು ತೆರಳುತ್ತಿದ್ದೇವೆ. ನೀವು ಮನೆಗೆ ಹೋಗಿ ಎಂದು ಕಾಲೇಜಿನ ಉಪನ್ಯಾಸಕರೊಬ್ಬರು ಸೂಚಿಸಿದರು. ಕೆಲ ಹೊತ್ತಿನ ನಂತರ ಕಾಲೇಜಿನ ಮುಖ್ಯದ್ವಾರಕ್ಕೆ ಬೀಗ ಜಡಿದು ಹೆಚ್ಚಿನ ಸಿಬ್ಬಂದಿ ತೆರಳಿದರು ಎಂದು ವಿದ್ಯಾರ್ಥಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

ಸುದ್ದಿ ತಿಳಿದ ತಕ್ಷಣ ಕಾಲೇಜಿಗೆ ದೌಡಾಯಿಸಿದ ಬಹುಜನ ಹೋರಾಟ ಸಮಿತಿ ರಾಜ್ಯ ಉಪಾಧ್ಯಕ್ಷ ಭೀಮರಡ್ಡಿ ಹುಮನಾಬಾದ ಹಾಗೂ ಕಲ್ಯಾಣ ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷರಾದ ಅಂಬರೇಶ ಬಿಲ್ಲವ ಬೀಗ ಹಾಕಿರುವ ಬಗ್ಗೆ ವಿಚಾರಿಸಲು ಸಹ ಒಬ್ಬ ನರಪಿಳ್ಳೆಯೂ ಅಲ್ಲಿ ಇಲ್ಲ. 

ಸಾವಿರಾರು ರೂಪಾಯಿ ಸಂಬಳ ಪಡೆಯುವ ಉಪನ್ಯಾಸಕರು ಹಾಜರಾತಿ ಪುಸ್ತಕಕ್ಕೆ ಸಹಿ ಮಾಡಿ ಕಾಲೇಜಿಗೆ ಬೀಗ ಜಡಿದಿರುವುದು ತಮ್ಮ ಕರ್ತವ್ಯ ನಿರ್ಲಕ್ಷ್ಯತನವನ್ನು ತೋರಿಸುತ್ತಿದೆ. ಇದರ ಬಗ್ಗೆ ಶಿಕ್ಷಣ ಇಲಾಖೆಯ ಕಮೀಷನರ್‌ಗೆ ದೂರವಾಣಿಯ ಮೂಲಕ ತಿಳಿಸಲಾಗಿದೆ ಕಲ್ಯಾಣ ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷರಾದ ಅಂಬರೇಶ ಬಿಲ್ಲವ ತಿಳಿಸಿದ್ದಾರೆ.

ಅಲ್ಲದೆ ಕರ್ತವ್ಯಲೋಪ ಎಸಗಿದ ಸಿಬ್ಬಂದಿಯ ಮೇಲೆ ದೂರು ಸಲ್ಲಿಸಲು ಯಾರು ಇಲ್ಲದ ಕಾರಣ ಅನಿವಾರ್ಯವಾಗಿ ಶಹಾಪುರ ಪೊಲೀಸ್ ಠಾಣೆಗೆ ತೆರಳಿ ಕಾಲೇಜು ಬಂದ್ ಮಾಡಿ ಮನಬಂದಂತೆ ವರ್ತಿಸಿದ ಸಿಬ್ಬಂದಿ ವಿರುದ್ದ ಶಿಸ್ತುಕ್ರಮ ತೆಗೆದುಕೊಳ್ಳಬೇಕೆಂದು ಲಿಖಿತವಾಗಿ ದೂರು ಸಲ್ಲಿಸಲಾಗಿದೆ ಎಂದು ಬಹುಜನ ಹೋರಾಟ ಸಮಿತಿ ರಾಜ್ಯ ಉಪಾಧ್ಯಕ್ಷಭೀಮರಡ್ಡಿ ಹುಮನಾಬಾದ ಹೇಳಿದ್ದಾರೆ.

ವಿದ್ಯಾರ್ಥಿಗಳು ಶಾಲೆಗೆ ಹಾಗೂ ಕಾಲೇಜಿಗೆ ಚಕ್ಕರ ಹೊಡೆಯುವುದು ಸಾಮಾನ್ಯ. ವಿಚಿತ್ರವೆಂದರೆ ಶಹಾಪುರ ತಾಲ್ಲೂಕಿನಲ್ಲಿ ಶಿಕ್ಷಕರು ಹಾಗೂ ಉಪನ್ಯಾಸಕರು ಶಾಲಾ ಕಾಲೇಜಿಗೆ ಚಕ್ಕರ ಹೊಡೆಯುವುದು ತಮ್ಮ ಕರ್ತವ್ಯವೆಂದು ಭಾವಿಸಿದ್ದಾರೆ.
 
ಯಾವುದೇ ಮೇಲಾಧಿಕಾರಿಯೂ ಕ್ರಮವನ್ನು ತೆಗೆದುಕೊಳ್ಳದೆ ಇರುವುದು ದೊಡ್ಡ ಪಿಡುಗು ಆಗಿ ಪರಿಣಮಿಸಿದೆ. ಅದರಲ್ಲಿ ರಾಜ್ಯ ಹೆದ್ದಾರಿಯ ಮೇಲೆ ಕಾಲೇಜು ಇದೆ. ಸುಮಾರು 1,200 ವಿದ್ಯಾರ್ಥಿಗಳು ಅಭ್ಯಾಸ ಮಾಡುವ ಪ್ರಥಮ ದರ್ಜೆಯ ಕಾಲೇಜಿನ ಸ್ಥಿತಿ ಇದಾದರೆ ಗ್ರಾಮೀಣ ಪ್ರದೇಶದ ಕಾಲೇಜಿನ ದುಸ್ಥಿತಿ ಅಯೋಮಯವಾಗಿದೆ. ಇದರ ಬಗ್ಗೆ ಸಮಗ್ರ ತನಿಖೆ ನಡೆಸಿ ಕ್ರಮತೆಗೆದುಕೊಳ್ಳಬೇಕೆಂದು ರೈತ ಮುಖಂಡ ಸಿದ್ದಯ್ಯ ಹಿರೇಮಠ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

ಪ್ರಾಚಾರ್ಯರ ವಿರುದ್ಧ ಎಫ್‌ಐಆರ್ ದಾಖಲು
ಶಹಾಪುರ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆಯ ಕಾಲೆಲಿನ ಪ್ರಾಚಾರ್ಯಾರಾದ ಪ್ರೋ.ಶಿವರಾಜ ಎಂ.ದೇವಪ್ಪ ಹಾಗೂ ಹುಬ್ಬಳ್ಳಿ ಎಂಟರಪ್ರೈಸೆಸ್‌ಪುಸ್ತಕ ಮಳಿಗೆಯ ಮಾಲಿಕ ಬಸವರಾಜ ಕಡಗಂಚಿ ಎನ್ನುವರ ಮೇಲೆ ಗುರುವಾರ ಯಾದಗಿರಿ ಲೋಕಾಯುಕ್ತ ಡಿವೈಎಸ್ಪಿಯವರು ಎಫ್‌ಐಆರ್ ದಾಖಲಿಸಿದ್ದಾರೆ.

ಕಾಲೇಜಿಗೆ ಪಿಠೋಪಕರಣ ಸರಬರಾಜಿನಲ್ಲಿ ವ್ಯಾಪಕವಾಗಿ ಅವ್ಯವಹಾರವಾಗಿದೆ. 22.49ಲಕ್ಷಮೊತ್ತದ ಹಣದ ದುರ್ಬಳಕೆಯಾಗಿದೆ ಎಂದು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಫಿರ್ಯಾದಿದಾರ ಸಿದ್ದಯ್ಯ ಹಿರೇಮಠ ಈಚೆಗೆ ಜಿಲ್ಲಾ ಸೇಷನ್ಸ್ ನ್ಯಾಯಾಧೀಶರಾದ ಹಂಚಾಟೆ ಸಂಜೀವಕುಮಾರ ಮುಂದೆ ದೂರು ಸಲ್ಲಿಸಿದ್ದರು.
 

ಸಮಗ್ರ ವಿಚಾರಣೆ ಮಾಡಿ 25ರ ಒಳಗೆ ವರದಿ ಸಲ್ಲಿಸುವಂತೆ  ಜಿಲ್ಲಾ ಸೇಷನ್ಸ್ ನ್ಯಾಯಾಧೀಶರು ಯಾದಗಿರಿ ಡಿವೈಎಸ್ಪಿಗೆ ನಿರ್ದೇಶನ ನೀಡಿದ್ದರು. ಅದರಂತೆ ಪ್ರಥಮ ಹಂತವಾಗಿ ಈಗ ಕಾಲೇಜಿನ ಪ್ರಾಚಾರ್ಯರು ಹಾಗೂ ಪುಸ್ತಕ ಮಳಿಗೆ ಮಾಲಿಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT