ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಪ್ರಾಚೀನ ಕವಿಗಳ ಜನ್ಮಸ್ಥಳ ಸಂಶೋಧನೆ ಅಗತ್ಯ'

Last Updated 3 ಏಪ್ರಿಲ್ 2013, 20:02 IST
ಅಕ್ಷರ ಗಾತ್ರ

ಬೆಂಗಳೂರು: `ಕನ್ನಡದ ಪ್ರಾಚೀನ ಕವಿಗಳ ಜನ್ಮಸ್ಥಳ ಹಾಗೂ ಅವರ ವಂಶಸ್ಥರ ಬಗ್ಗೆ ಹೆಚ್ಚಿನ ಸಂಶೋಧನೆಗಳು ನಡೆಯಬೇಕು' ಎಂದು ಹಿರಿಯ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಕನ್ನಡ ಗೆಳೆಯರ ಬಳಗ ಬುಧವಾರ ಹಮ್ಮಿಕೊಂಡಿದ್ದ `ಒಂದು ತಿಂಗಳ ಪ್ರಾಚೀನ ಕನ್ನಡ ಇನ್ನೊಂದು ತಿಂಗಳು ಪ್ರಚಲಿತ ಸಮಸ್ಯೆ ಕುರಿತ ಕನ್ನಡ ಹಿರಿಮೆ-ಹಿನ್ನೆಡೆ ಉಪನ್ಯಾಸ ಮಾಲೆ' ಕಾರ್ಯಕ್ರಮದಲ್ಲಿ `ಪ್ರಾಚೀನ ಕನ್ನಡ ಕವಿ ಮನೆಗಳು ಮತ್ತು ಕವಿ ವಂಶಸ್ಥರು' ಎಂಬ ವಿಷಯ ಕುರಿತು ಮಾತನಾಡಿದರು.

`ಇತರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡದ ಪ್ರಾಚೀನ ಕವಿಗಳ ಸ್ಮಾರಕಗಳು ಸುಸ್ಥಿತಿಯಲ್ಲಿವೆ. ಅವರ ವಂಶಸ್ಥರು ಇಂದಿಗೂ ರಾಜ್ಯದ ವಿವಿಧೆಡೆ ನೆಲೆಸಿದ್ದಾರೆ. ಆದಿಕವಿ ಪಂಪನ ತಂದೆ ಹಾಗೂ ತಾಯಿಯ ವಂಶಸ್ಥರು ಈಗಲೂ ಗದಗ ಜಿಲ್ಲೆಯ ಅಣ್ಣಿಗೇರಿಯಲ್ಲಿ ವಾಸಿಸುತ್ತಿದ್ದಾರೆ. ಇದು ನಾವೆಲ್ಲಾ ಹೆಮ್ಮೆಪಡುವ ಸಂಗತಿಯಾಗಿದೆ. ಆದರೆ ಹಲವು ಪ್ರಾಚೀನ ಕವಿಗಳ ಜನ್ಮಸ್ಥಳ ಹಾಗೂ ವಂಶಸ್ಥರ ಬಗ್ಗೆ ಮಾಹಿತಿ ಇಲ್ಲ. ಆದ್ದರಿಂದ ರಾಜ್ಯದಲ್ಲಿ ಕನ್ನಡ ಶಾಸ್ತ್ರೀಯ ಉನ್ನತ ಕೇಂದ್ರ ಪ್ರಾರಂಭವಾದ ತಕ್ಷಣ ಈ ಬಗ್ಗೆ ಹೆಚ್ಚಿನ ಸಂಶೋಧನೆಗಳನ್ನು ಕೈಗೆತ್ತಿಕೊಳ್ಳಬೇಕು' ಎಂದು ಚಿದಾನಂದ ಮೂರ್ತಿ ತಿಳಿಸಿದರು.

`ಉತ್ತರ ಚಾಲುಕ್ಯ ವಂಶದ ಚಕ್ರವರ್ತಿ 6ನೇ ವಿಕ್ರಮಾದಿತ್ಯ ಉತ್ತರ ಭಾರತವನ್ನು ಗೆದ್ದ ನಂತರ ನೇಪಾಳ ಹಾಗೂ ಬಿಹಾರ ಪ್ರಾಂತ್ಯಗಳ ಆಳ್ವಿಕೆ ನಡೆಸಲು ನಾನ್ಯದೇವ ಎಂಬುವವನನ್ನು ನೇಮಿಸಿದ್ದ. ನಾನ್ಯದೇವ ಕನ್ನಡಿಗನಾಗಿದ್ದು, ಅವನ ವಂಶಸ್ಥರು ಈಗಲೂ ನೇಪಾಳದಲ್ಲಿದ್ದಾರೆ. ಪಶುಪತಿನಾಥ ದೇವಾಲಯದ ಅರ್ಚಕರು ಕನ್ನಡಿಗರೇ ಆಗಿದ್ದಾರೆ' ಎಂದರು.

`ಬಸವಣ್ಣನ ವಂಶಸ್ಥರು ಬಾಗೇವಾಡಿ ಸಮೀಪದ ಇಂಗಳೇಶ್ವರದಲ್ಲಿದ್ದಾರೆ. ಕುಮಾರವ್ಯಾಸನ ವಂಶಸ್ಥರು ಹುಬ್ಬಳ್ಳಿ ತಾಲೂಕಿನ ಕೋಳಿವಾಡದಲ್ಲಿ ನೆಲೆಸಿದ್ದಾರೆ. ಶರಣೆ ಅಕ್ಕಮಹಾದೇವಿಯ ವಂಶಸ್ಥರು ಶಿಕಾರಿಪುರ ತಾಲೂಕಿನಲ್ಲಿ ಇದ್ದಾರೆ ಎಂಬ ಮಾಹಿತಿಗ ಳಿವೆ. ಆದ್ದರಿಂದ ಪ್ರಾಚೀನ ಕವಿಗಳ ವಂಶಸ್ಥರು ಹಾಗೂ ಜನ್ಮಸ್ಥಳಗಳ ಬಗ್ಗೆ ಹೆಚ್ಚಿನ ಅಧ್ಯಯನಗಳು ನಡೆಯಬೇಕು' ಎಂದು ಚಿದಾನಂದ ಮೂರ್ತಿ ಹೇಳಿದರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ, ಕನ್ನಡ ಗೆಳೆಯರ ಬಳಗದ ಸಂಚಾಲಕರಾದ ರಾ.ನಂ.ಚಂದ್ರಶೇಖರ್, ಬ.ಹ.ಉಪೇಂದ್ರ  ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT