ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಣವಾದರೂ ಬಿಟ್ಟೇವು ಕಾವೇರಿ ನೀರು ಕೊಡೆವು

Last Updated 7 ಅಕ್ಟೋಬರ್ 2012, 8:00 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ವಿವಿಧ ಸಂಘಟನೆಗಳು ಶನಿವಾರ ಕರೆ ನೀಡಿದ್ದ ರಾಜ್ಯ ಬಂದ್‌ಗೆ ನಗರದಲ್ಲಿ ಭಾರಿ ಬೆಂಬಲ ವ್ಯಕ್ತವಾಯಿತು.

ವಾಹನ ಸಂಚಾರ, ಎಂದಿನ ವಹಿವಾಟು ಇಲ್ಲದೆ ಬಿ.ಬಿ.ರಸ್ತೆ, ಗಂಗಮ್ಮ ಗುಡಿ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಶಾಲೆ- ಕಾಲೇಜುಗಳಿಗೆ ರಜೆ ಇದ್ದು, ಪೆಟ್ರೋಲ್‌ಬಂಕ್, ಚಲನಚಿತ್ರ ಮಂದಿರ, ಅಂಗಡಿ, ಹೋಟೆಲ್ ಹಾಗೂ ವಾಣಿಜ್ಯ ಸಂಸ್ಥೆಗಳು ಮುಚ್ಚಲಾಗಿತ್ತು. ಔಷಧ ಅಂಗಡಿ, ಹಾಲಿನ ಕೇಂದ್ರ ಹಾಗೂ ಆಸ್ಪತ್ರೆಗಳು ಮಾತ್ರ ಕಾರ್ಯ ನಿರ್ವಹಿಸಿದವು. ಒಟ್ಟಾರೆ ಬಂದ್ ಶಾಂತಿಯುತವಾಗಿತ್ತು. ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು 

ದೂರದ ಊರುಗಳಿಗೆ ತೆರಳಲು ಗ್ರಾಮೀಣ ಪ್ರದೇಶದಲ್ಲಿ ಪರದಾಟ ಕಂಡುಬಂತು. `ಪ್ರಾಣವನ್ನಾದರೂ ಬಿಡುತ್ತೇವೆ ಆದರೆ ಕಾವೇರಿ ನೀರನ್ನು ಬಿಡುವುದಿಲ್ಲ~ ಎಂದು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪ್ರಮುಖ ಬೀದಿಗಳಲ್ಲಿ ಘೋಷಣೆ ಕೂಗಿದರು.

ಕನ್ನಡ ಪರ ಸಂಘಟನೆಯ ಮುಖಂಡ ಶ್ರೀನಾಥ್ ಮಾತನಾಡಿ, ಕಾವೇರಿ ನೀರು ನಮ್ಮದು. ನಮಗೇ ಕುಡಿಯಲು ನೀರಿಲ್ಲ. ಇನ್ನು ತಮಿಳುನಾಡಿಗೆ ನೀರು ಬಿಡುವುದು ಸಾಧ್ಯವೆ? ಬರಗಾಲದಿಂದ ತತ್ತರಿಸುತ್ತಿರುವ ರೈತರು ಈಗಾಗಲೆ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಸರಿಯಾದ ಸಮಯಕ್ಕೆ ಮಳೆಯೂ ಇಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರ ದೇಶದ ಬಡ, ಜನಸಾಮಾನ್ಯರ ಬಗ್ಗೆ ಯಾವುದೇ ಕಾಳಜಿ ತೋರುತ್ತಿಲ್ಲ ಎಂದು ಆಕ್ಷೇಪಿಸಿದರು.

ರೈತ ಮುಖಂಡ ಚಲಪತಿ ಮಾತನಾಡಿ, ಸಂಕಷ್ಟ ಬಂದಾಗ ಬಂದ್, ಪ್ರತಿಭಟನೆ, ಜಾಥಾ ಅನಿವಾರ್ಯ. ಕೇಂದ್ರ ಸರ್ಕಾರದ ಧೋರಣೆಯಿಂದ ಕನ್ನಡಿಗರ ಪಾಲಿನ ಜೀವಜಲಕ್ಕೆ ಸಂಚಕಾರ ಬಂದಿದೆ. ಈ ವರ್ಷದಲ್ಲಿ ರಾಜ್ಯದ ಜನತೆಗೆ ಬಂದ್ ಬಿಸಿ ತಟ್ಟುತ್ತಿರುವುದು ನಾಲ್ಕನೇ ಬಾರಿ. ಹೀಗಾದರೆ ಜನರು ಸಂಕಷ್ಟಕ್ಕೆ ಸಿಲುಕುತ್ತಾರೆ. ನಮ್ಮ ಪ್ರಾಣವನ್ನಾದರೂ ನೀಡಲು ಸಿದ್ಧವಿದ್ದೇವೆ. ಆದರೆ ಒಂದು ಹನಿ ನೀರನ್ನೂ ತಮಿಳುನಾಡಿಗೆ ಬಿಡುವುದಿಲ್ಲ ಎಂದರು.
ಕನ್ನಡ ಪರ ಸಂಘಟನೆಗಳ ಮುಖಂಡರಾದ ಜಯಂತ್, ಯಲುವಹಳ್ಳಿ ಸೊಣ್ಣೇಗೌಡ, ಶ್ರೀರಾಮಗೌಡ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬಂದೋಬಸ್ತ್: ಶಾಂತಿಯುತ ಬಂದ್
ಚಿಂತಾಮಣಿ: ವಿವಿಧ ಕನ್ನಡಪರ ಸಂಘಟನೆಗಳು ನೀಡಿದ್ದ ಬಂದ್ ಶನಿವಾರ ನಗರದಲ್ಲಿ ಸಂಪೂರ್ಣ ಯಶಸ್ವಿಯಾಯಿತು.

ಜನತೆ ಸ್ವಯಂಪ್ರೇರಿತವಾಗಿ ಶಾಂತಿಯುತ ಬಂದ್ ನಡೆಸಿದರು. ಸಾಮಾನ್ಯವಾಗಿ ಬಂದ್ ಸಮಯದಲ್ಲಿ ನಗರ ಹೊರವಲಯದ ರಸ್ತೆಗಳಲ್ಲಿ ಕಲ್ಲುಗಳನ್ನು ಅಡ್ಡ ಹಾಕುವುದು, ರಸ್ತೆಯಲ್ಲಿ ಟೈರ್‌ಗಳನ್ನು ಸುಡುವುದು, ಬೆಳಿಗ್ಗೆ ಕಾರ್ಯಕರ್ತರು ಗುಂಪುಗಳಲ್ಲಿ ತೆರಳಿ ಅಂಗಡಿಗಳನ್ನು ಮುಚ್ಚಿಸುವುದು ನಡೆಯುತ್ತದೆ.

ಶನಿವಾರದ ಬಂದ್ ಸಮಯದಲ್ಲಿ ಇಂತಹ ಯಾವ ದೃಶ್ಯಗಳು ಕಂಡುಬರಲಿಲ್ಲ, ರಸ್ತೆಗಳಲ್ಲಿ ಕಲ್ಲುಗಳಾಗಲಿ, ಟೈರ್‌ಗಳನ್ನು ಸುಡುವುದಾಗಲಿ, ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸುವುದು ಎಲ್ಲೂ ಕಂಡುಬರಲಿಲ್ಲ. ಜನರು ಸ್ವಯಂಪ್ರೇರಿತರಾಗಿ ಬಂದ್ ಅಚರಿಸಿದರು.

ಬೆಳಿಗ್ಗೆಯಿಂದಲೇ ಬಂದ್ ನಡೆಯಿತು. ಎಲ್ಲ ಅಂಗಡಿ ಹಾಗೂ ವಾಣಿಜ್ಯ ಸಂಸ್ಥೆಗಳನ್ನು ಮುಚ್ಚಲಾಗಿತ್ತು. ಪೆಟ್ರೋಲ್ ಬಂಕ್, ಚಲನಚಿತ್ರ ಮಂದಿರ, ಬ್ಯಾಂಕ್, ಸರ್ಕಾರಿ ಕಚೇರಿ, ಅಂಚೆ ಕಚೇರಿ ಮುಚ್ಚಿದ್ದವು. ಅಲ್ಲೊಂದು-ಇಲ್ಲೊಂದು ಮೆಡಿಕಲ್ ಷಾಪ್‌ಗಳು ಮಾತ್ರ ತೆರೆದಿದ್ದವು. ಶಾಲೆ- ಕಾಲೇಜುಗಳಿಗೆ ರಜೆ ನೀಡಲಾಗಿತ್ತು.

ಆಟೊ, ಸರ್ಕಾರಿ- ಖಾಸಗಿ ಬಸ್‌ಗಳು ರಸ್ತೆಗೆ ಇಳಿಯಲಿಲ್ಲ. ಸದಾ ಜನ ಜಂಗುಳಿ ಮತ್ತು ವಾಹನಗಳ ಸಂಚಾರದಿಂದ ಕೂಡಿರುತ್ತಿದ್ದ ನಗರದ ಜೋಡಿ ರಸ್ತೆ, ಬೆಂಗಳೂರು ವೃತ್ತ, ಗಜಾನನ ವೃತ್ತ, ಪಿಸಿಆರ್ ಕಾಂಪ್ಲೆಕ್ಸ್, ಚೇಳೂರು ವೃತ್ತ, ಮಿನಿ ವಿಧಾನಸೌಧ, ಖಾಸಗಿ ಹಾಗೂ ಸರ್ಕಾರಿ ಬಸ್ ನಿಲ್ದಾಣಗಳು ಜನರು ಮತ್ತು ವಾಹನಗಳಿಲ್ಲದೆ ಬಿಕೋ ಎನ್ನುತ್ತಿದ್ದವು. ದ್ವಿಚಕ್ರ ವಾಹಗಳು ಮಾತ್ರ ಅತಿ ಕಡಿಮೆ ಸಂಖ್ಯೆಯಲ್ಲಿ ಸಂಚರಿಸುತ್ತಿದ್ದವು.

ಇತ್ತೀಚೆಗೆ ನಗರದಲ್ಲಿ ನಡೆದ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಪೊಲೀಸರು ಬಲವಾದ ಬಂದೋಬಸ್ತ್ ಏರ್ಪಡಿಸಿದ್ದರು. ನಗರದ ವಿವಿಧ ವೃತ್ತಗಳಲ್ಲಿ, ಬಸ್ ನಿಲ್ದಾಣಗಳು ಸೇರಿದಂತೆ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಕಾವಲು ಹಾಕಲಾಗಿತ್ತು. ಜತೆಗೆ ಸಂಚಾರಿ ಪೊಲೀಸ್ ವಾಹನಗಳು ಗಸ್ತು ನಡೆಸುತ್ತಿದ್ದವು.

ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಮೆರವಣಿಗೆ ನಡೆಸಿದರು. ಕಾವೇರಿ ನೀರಿಗಾಗಿ ಬಂದ್ ಆಚರಿಸಲಾಗುತ್ತದೆ ಎಂದು ಮೊದಲೆ ಗೊತ್ತಿದ್ದರಿಂದ ಜನರು ಸಹ ನಗರದ ಕಡೆ ಸುಳಿಯಲಿಲ್ಲ. ಬಂದ್‌ನಿಂದ ಜನರಿಗೆ ತೊಂದರೆಯಾಗಲಿಲ್ಲ, ಒಟ್ಟಾರೆ ನಗರ ಹಾಗೂ ತಾಲ್ಲೂಕಿನ ಜನತೆ ಸಂಪೂರ್ಣ ಶಾಂತಿಯುತವಾಗಿ ಬಂದ್ ಆಚರಿಸಿ, ಕಾವೇರಿ ಹೋರಾಟಕ್ಕೆ ತಮ್ಮ ಬೆಂಬಲವನ್ನು ಸೂಚಿಸಿದರು.

ವಿವಿಧ ಸಂಘಟನೆ ಬೈಕ್ ರ‌್ಯಾಲಿ
ಗೌರಿಬಿದನೂರು: ಬಂದ್‌ಗೆ ಪಟ್ಟಣದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಯಿತು.
ವಿವಿಧ ಸಂಘಟನೆ ಕಾರ್ಯಕರ್ತರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೈಕ್ ರ‌್ಯಾಲಿ ನಡೆಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಹುತೇಕ ಅಂಗಡಿ, ಮುಂಗಟ್ಟುಗಳನ್ನು ಸ್ವಯಂಪ್ರೇರಿತರಾಗಿ ಬಂದ್ ಮಾಡಿರುವುದು ಕಂಡು ಬಂತು.

ಹಿಂದೂಪುರ, ಬೆಂಗಳೂರು ರಸ್ತೆಯ ಕಲ್ಲೂಡಿ, ಮಧುಗಿರಿ ರಸ್ತೆಯ ಕೆಇಬಿ ಸಮೀಪ, ಚಿಕ್ಕಬಳ್ಳಾಪುರ ರಸ್ತೆ ಹಿರೇಬಿದನೂರು ಬಳಿ ಹೀಗೆ ಪಟ್ಟಣದ ನಾಲ್ಕೂ ದಿಕ್ಕುಗಳಲ್ಲಿ ಮರದ ದಿಮ್ಮಿ, ದೊಡ್ಡ ಕಲ್ಲುಗಳನ್ನು ರಸ್ತೆಗೆ ಅಡ್ಡಲಾಗಿ ಇಟ್ಟು, ಟೈರ್‌ಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಲಾಯಿತು. 

ಬೆಳಿಗ್ಗೆ 8ರಿಂದ ಸಂಜೆ 6ರವರೆಗೆ ಯಾವುದೇ ವಾಹನ ಪಟ್ಟಣದ ಒಳಗೆ ಬರದಂತೆ ತಡೆಯಲಾಗಿತ್ತು. ದ್ವಿಚಕ್ರ ವಾಹನ ಹೊರತುಪಡಿಸಿ ಯಾವುದೆ ವಾಹನ ರಸ್ತೆಗೆ ಇಳಿಯಲಿಲ್ಲ. ಬಸ್ಸುಗಳು ಇಲ್ಲದೆ ಸಾರ್ವಜನಿಕರು  ರೈಲನ್ನು ಅವಲಂಬಿಸಿದ್ದರು. ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು.  ಶಾಲೆ, ಕಾಲೇಜು, ಪೆಟ್ರೋಲ್ ಬಂಕ್, ಸಿನಿಮಾ ಮಂದಿರ, ಬ್ಯಾಂಕ್, ಕಚೇರಿಗಳು ಮುಚ್ಚಿದ್ದವು. ಸಾರ್ವಜನಿಕ ಆಸ್ಪತ್ರೆ, ಔಷಧಿ ಅಂಗಡಿ, ಹಾಲಿನ ಕೇಂದ್ರಗಳಿಗೆ ಬಂದ್‌ನಿಂದ ರಿಯಾಯಿತಿ ಇತ್ತು. 

ಒಟ್ಟಾರೆ  ಬಂದ್ ಯಶಸ್ವಿಯಾಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. 

ತಾಲ್ಲೂಕು ರೈತ ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ, ಕಾರ್ಯದರ್ಶಿ ಲೊಕೇಶ್‌ಗೌಡ, ಕರುನಾಡ ಕನ್ನಡಿಗರ ರಕ್ಷಣಾ ವೇದಿಕೆ  ಗೌರವಾಧ್ಯಕ್ಷ ಆರ್.ಅಶೋಕ್‌ಕುಮಾರ್, ಅಧ್ಯಕ್ಷ ಜಿ.ಬಾಲಾಜಿ, ಕೋಮುಲ್ ನಿರ್ದೇಶಕ ರಮೇಶ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಮೋಹನ್, ಎಲ್‌ಐಸಿ ರವೀಂದ್ರನಾಥ್, ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್‌ಶೆಟ್ಟಿ ಬಣದ ಅಧ್ಯಕ್ಷ ಬಾಲಕೃಷ್ಣ, ಕಾರ್ಯದರ್ಶಿ ಅಶ್ವತ್ಥನಾರಾಯಣ, ಬಷೀರ್, ಕನ್ನಡ ಸೇನೆ ಪ್ರಧಾನ ಕಾರ್ಯದರ್ಶಿ ಬೈಚಾಪುರ ಗಂಗಾಧರ, ಜಯಕರ್ನಾಟಕ ಸಂಘದ ಅಧ್ಯಕ್ಷ ಶ್ರೀನಿವಾಸ್, ಕಾರ್ಯದರ್ಶಿ ಕೋಟೆ ವೇಣು, ಹರೀಶ್, ಸುಧಾಕರ, ಸರವಣ, ಪರಮೇಶ್ ಮತ್ತಿತರರು ಪಾಲ್ಗೊಂಡಿದ್ದರು.

ವರ್ತಕರಿಂದ ಸ್ವಯಂಪ್ರೇರಿತ ಬಂದ್
ಶಿಡ್ಲಘಟ್ಟ: ತಾಲ್ಲೂಕಿನಾದ್ಯಂತ ಶನಿವಾರ ನಡೆಸಿದ ಬಂದ್ ಯಶಸ್ವಿಯಾಗಿದೆ.
ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟು, ಹೋಟೆಲ್, ಚಿತ್ರಮಂದಿರ, ಸರ್ಕಾರಿ ಕಚೇರಿ, ಶಾಲೆ, ಕಾಲೇಜು, ಪೆಟ್ರೋಲ್ ಬಂಕ್, ಅಂಚೆಕಚೇರಿ ಹಾಗೂ ಬ್ಯಾಂಕುಗಳು ಮುಚ್ಚಲಾಗಿತ್ತು.

ತಾಲ್ಲೂಕಿನ ಮೇಲೂರು, ಜಂಗಮಕೋಟೆ, ದಿಬ್ಬೂರಹಳ್ಳಿ, ಎಚ್.ಕ್ರಾಸ್ ಮುಂತಾದೆಡೆಯೂ ಬಂದ್ ಯಶಸ್ವಿಯಾಗಿದೆ. ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ರಾಜ್‌ಕುಮಾರ್ ಅಭಿಮಾನಿಗಳ ಸಂಘದ ನೇತೃತ್ವದಲ್ಲಿ ಚಂಗಲರಾಯರೆಡ್ಡಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ಬಸ್ ನಿಲ್ದಾಣ ಹುಡುಗರಿಗೆ ಆಟದ ಮೈದಾನವಾಗಿದ್ದರೆ, ಪಟ್ಟಣದ ಪ್ರಮುಖ ರಸ್ತೆಗಳು ಜನಸಂಚಾರವಿಲ್ಲದೆ ಬಿಕೋ ಎನ್ನುತ್ತಿದ್ದವು. ತಾಲ್ಲೂಕು ಕಚೇರಿ ಸೇರಿದಂತೆ ಎಲ್ಲಾ ಸರ್ಕಾರಿ ಕಚೇರಿಗಳು ಖಾಲಿಯಾಗಿದ್ದವು.

ತಾಲ್ಲೂಕು ರೈತಪರ ಸಂಘಟನೆ, ವಿವಿಧ ಕನ್ನಡಪರ ಸಂಘಟನೆಗಳು, ತಾಲ್ಲೂಕು ವಕೀಲರ ಸಂಘ, ತಾಲ್ಲೂಕು ಔಷಧಿ ವ್ಯಾಪಾರಿಗಳ ಸಂಘ, ತಾಲ್ಲೂಕು ಮೊಬೈಲ್ ಅಸೋಸಿಯೇಷನ್ ಸಂಘಟನೆ, ದಲಿತಪರ ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿ, ಕೆಲವರು ಬೈಕ್ ರ‌್ಯಾಲಿ ನಡೆಸಿದರೆ, ಕೆಲವರು ಮೌನ ಮೆರವಣಿಗೆ ನಡೆಸಿದರು. ಕೆಲ ಸಂಘಟನೆಗಳು ಒಗ್ಗೂಡಿ ತಹಶೀಲ್ದಾರರಿಗೆ ಮನವಿಯನ್ನೂ ಸಲ್ಲಿಸಿದರು.

ಆಸ್ಪತ್ರೆಗೆ ಆಗಮಿಸುವ ರೋಗಿಗಳು ಹಾಗೂ ದಿನನಿತ್ಯದ ಕೆಲಸಗಳಿಗೆ ಗ್ರಾಮಾಂತರದಿಂದ ಬರುವ ಜನರಿಗೆ ತೊಂದರೆಯುಂಟಾಯಿತು. ಒಂದು ದಿನವಷ್ಟೇ ಬಾಳಿಕೆ ಬರುವ ಹೂವು, ಹಣ್ಣು ಮತ್ತು ತರಕಾರಿ ಸಾಗಾಟ ಮಾಡಲಾಗಲಿಲ್ಲ.

ಔಷಧಿ ವ್ಯಾಪಾರಿಗಳು ಅಂಗಡಿಯನ್ನು ತೆರೆದಿದ್ದರೂ ಕಪ್ಪುಪಟ್ಟಿ ಧರಿಸಿ, ಕಾವೇರಿ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂಬ ಬರಹದ ಫಲಕವನ್ನು ಲಗತ್ತಿಸಿದ್ದರು. ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ರೇಷ್ಮೆ ಗೂಡಿನ ಆವಕ ಕಡಿಮೆಯಾಗಿತ್ತು. ದೂರದ ಊರಿಂದ ಬಂದಿರುವ ರೈತರು ತಿಂಡಿ, ಊಟವಿಲ್ಲದೆ ಉಪವಾಸ ಇರುವಂತಾಯಿತು.

ಶಾಂತಿಯುತ ಬಂದ್: ಯಶಸ್ವಿ
ಬಾಗೇಪಲ್ಲಿ: ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸಿರುವ ಕ್ರಮ ಖಂಡಿಸಿ ವಿವಿಧ ಸಂಘಟನೆಗಳು ಶನಿವಾರ ಕರೆ ನೀಡಿದ್ದ ಕರ್ನಾಟಕ ಬಂದ್ ಬಾಗೇಪಲ್ಲಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದೆ, ಸಂಪೂರ್ಣ ಯಶಸ್ವಿಯಾಯಿತು.

ಹಾಲಿನ ವಾಹನ, ಬೇಕರಿ, ಮೆಡಿಕಲ್ ಷಾಪ್, ಖಾಸಗಿ ಆಸ್ಪತ್ರೆಗಳಿಗೆ ಬಂದ್‌ನಿಂದ ವಿನಾಯಿತಿ ಇತ್ತು. ಅಂಗಡಿ- ಮುಂಗಟ್ಟು, ವಾಣಿಜ್ಯ ಕೇಂದ್ರ, ಸರ್ಕಾರಿ ಕಚೇರಿ, ಬ್ಯಾಂಕ್ ಹಾಗೂ ಶಾಲೆ- ಕಾಲೇಜುಗಳು ಮುಚ್ಚಿದ್ದವು.
ಟಿ.ಬಿ.ಕ್ರಾಸ್, ಎಚ್.ಎನ್.ವೃತ್ತ, ಸಾರಿಗೆ ಬಸ್ ನಿಲ್ದಾಣದ ವೃತ್ತದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಬೀಡು ಬಿಟ್ಟು, ವಾಹನಗಳು ಚಲಿಸದಂತೆ ರಸ್ತೆಗಳಲ್ಲಿ ಭಾರಿ ಗಾತ್ರದ ಕಲ್ಲುಗಳನ್ನು ಹಾಕಿದ್ದರು.

ಕದಿರಿ, ಹಿಂದೂಪೂರ, ಗೋರಂಟ್ಲ, ಧರ್ಮಾವರಂ, ಬೆಂಗಳೂರು, ಚಿಕ್ಕಬಳ್ಳಾಪುರ, ಚಿಂತಾಮಣಿ ಕಡೆಗೆ ತರಳಬೇಕಿದ್ದ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಪಟ್ಟಣಕ್ಕೆ ಬರಬೇಕಿದ್ದ ಸಾರ್ವಜನಿಕರು ಸುಮಾರು 2 ಕಿ.ಮೀ ನಡೆಯಬೇಕಿತ್ತು.

ಕನ್ನಡ ಸೇನೆ-ಕರ್ನಾಟಕ, ಜಯಕರ್ನಾಟಕ, ಕರವೇ ಪ್ರವೀಣ್‌ಶೆಟ್ಟಿ ಬಣದ ಕಾರ್ಯಕರ್ತರು ಎಚ್.ಎನ್.ವೃತ್ತದಲ್ಲಿ ಟೈರ್‌ಗೆ ಬೆಂಕಿ ಹಾಕಿ ಅಕ್ರೋಶ ವ್ಯಕ್ತಪಡಿಸಿದರು. ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿರುವ ರಾಜ್ಯ ಸರ್ಕಾರ ಹಾಗೂ ಕೇಂದ್ರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಕರವೇ ನಾರಾಯಣಗೌಡ ಬಣದವರು ಎಚ್.ಎನ್.ವೃತ್ತದಿಂದ ಬಸ್ ನಿಲ್ದಾಣದವರೆಗೂ ಅರೆಬೆತ್ತಲೆ ಮೆರವಣಿಗೆ ನಡೆಸಿದರು. ಕೆಲ ಚಿಲ್ಲರೆ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಿದರು. ಕಾರ್ಪೋರೇಷನ್ ಬ್ಯಾಂಕ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯನ್ನು ಹೊರಗೆ ಕಳುಹಿಸಿ, ಬ್ಯಾಂಕ್‌ಗೆ ಬೀಗ ಹಾಕುವಂತೆ ಕನ್ನಡ ಪರ ಸಂಘಟನೆಗಳ ಸದಸ್ಯರು ಆಗ್ರಹಿಸಿದರು.

ಕರವೇ ನಾರಾಯಣಗೌಡ ಬಣದ ಜಿಲ್ಲಾ ಘಟಕ ಕಾರ್ಯದರ್ಶಿ ಚಂದ್ರಶೇಖರ್, ಮುಖಂಡರಾದ ಬಿಟಿಸಿ ಸೀನಾ, ವಿಜಯ್‌ಕುಮಾರ್ ಶೆಟ್ಟಿ, ಅಥಾವುಲ್ಲಾ, ಜಬೀವುಲ್ಲಾ, ಹರೀಶ್ ಹಾಗೂ ಕರವೇ ಪ್ರವೀಣ್‌ಶೆಟ್ಟಿ ಬಣದ ಜಿಲ್ಲಾ ಮುಖಂಡ ವೆಂಕಟವರಣಪ್ಪ, ತಾಲ್ಲೂಕು ಕಾರ್ಯದರ್ಶಿ ವೆಂಕಟೇಶ್, ಕನ್ನಡ ಸೇನೆ ತಾಲ್ಲೂಕು ಅಧ್ಯಕ್ಷ ಬಾಬಾಜಾನ್, ಕಾರ್ಯದರ್ಶಿ ವೆಂಕಟೇಶ್, ಮುಖಂಡ ವೆಂಕಟರವಣಪ್ಪ ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.

ಗುಡಿಬಂಡೆ: ಬಂದ್‌ನಿಂದ ದೂರ
ಗುಡಿಬಂಡೆ: ಕಾವೇರಿ ನೀರಿಗಾಗಿ ದೊಡ್ಡ ಹೋರಾಟವೇ ನಡೆಯುತ್ತಿದೆ. ರಾಜ್ಯದಾದ್ಯಂತ ಶನಿವಾರ ಸಂಪೂರ್ಣ ಬಂದ್ ನಡೆದು ವಿವಿಧ ಸಂಘಟನೆಗಳು ಬೆಂಬಲ ನೀಡಿವೆ. ಆದರೆ ಗುಡಿಬಂಡೆ ತಾಲ್ಲೂಕಿನಲ್ಲಿ ಯಾವುದೆ ಪ್ರಗತಿಪರ, ಕನ್ನಡಪರ, ರೈತ ಸಂಘಟನೆಗಳು ಬಂದ್‌ಗೆ ಬೆಂಬಲ ನೀಡದೆ ಜನಜೀವನದಲ್ಲಿ ಯಾವದೇ ವ್ಯತ್ಯಯವಾಗಲಿಲ್ಲ.

ತಾಲ್ಲೂಕಿನಲ್ಲಿ ಎಂದಿನಂತೆ ಅಂಗಡಿ-ಮುಂಗಟ್ಟುಗಳು ವ್ಯಾಪಾರ ವಹಿವಾಟು ನಡೆಸಿದವು. ಬ್ಯಾಂಕ್, ಕೋರ್ಟ್ ವ್ಯವಹಾರಗಳು ನಡೆದವು. ಶಾಲೆ, ಕಾಲೇಜುಗಳಿಗೆ ಮಾತ್ರ ರಜೆ ನೀಡಲಾಗಿತ್ತು. ಸಾರಿಗೆ ಸಂಸ್ಥೆ ಬಸ್ಸುಗಳು, ಖಾಸಗಿ ಬಸ್ಸು ಓಡಾಟ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರಿಗೆ ತೊಂದರೆಯುಂಟಾಯಿತು. ಖಾಸಗಿ ವಾಹನಗಳ ಓಡಾಟ ಜೋರಾಗಿತ್ತು.

ತಾಲ್ಲೂಕಿನ ಜನತೆಗೆ ಕಾವೇರಿ ನೀರು ಬರುವುದಿಲ್ಲ. ನಾವೇಕೆ ಬಂದ್‌ಗೆ ಬೆಂಬಲ ನೀಡಬೇಕು ಎಂದು ಕೆಲವರು ಪಿಸುಗುಡುತ್ತಿದ್ದರು. ಅಷ್ಟೇ ಅಲ್ಲ, ಕನ್ನಡಪರ ಸಂಘಟನೆಗಳ ಸುಳಿವೇ ಇರಲಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT