ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಣಿ ಬಲಿ ಖಂಡಿಸಿ ಧರಣಿ

Last Updated 8 ಅಕ್ಟೋಬರ್ 2011, 7:30 IST
ಅಕ್ಷರ ಗಾತ್ರ

ಬೆಳಗಾವಿ: “ಖಾನಾಪುರ ತಾಲ್ಲೂಕಿನ ಕಕ್ಕೇರಿ ಗ್ರಾಮದಲ್ಲಿ ವಿಜಯದಶಮಿ ಅಂಗವಾಗಿ ನಡೆದ ಸಾವಿರಾರು ಪ್ರಾಣಿಗಳ ಬಲಿ ಘಟನೆ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿಯ ಅಧ್ಯಕ್ಷ ದಯಾನಂದ ಸ್ವಾಮೀಜಿ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಕಕ್ಕೇರಿಯ ಭಿಷ್ಠಾದೇವಿ ಜಾತ್ರೆಯಲ್ಲಿ ಗುರುವಾರ ಬೆಳಗಿನ ಜಾವ ನಡೆದ ಸಾಮೂಹಿಕ ಪ್ರಾಣಿ ಬಲಿಯನ್ನು ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಧರಣಿ ನಡೆಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.

“ಕರ್ನಾಟಕ ಪ್ರಾಣಿ ಬಲಿ ಪ್ರತಿಬಂಧಕ ಕಾಯ್ದೆ-1959 ಹಾಗೂ ಪ್ರಾಣಿ ಬಲಿ ಕುರಿತು ಹೈಕೋರ್ಟ್ ಆದೇಶವಿದ್ದರೂ ಸಹ ಜಾತ್ರೆಯಲ್ಲಿ ಸಾಮೂಹಿಕವಾಗಿ ಸಾವಿರಾರು ಪ್ರಾಣಿಗಳ ಮಾರಣಹೋಮ ಮಾಡಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿದ್ದರೂ ಅದನ್ನು ತಡೆಯಲಿಲ್ಲ. ಹೀಗಾಗಿ ಘಟನೆ ಕುರಿತು ಸಮಗ್ರವಾಗಿ ತನಿಖೆ ನಡೆಸಬೇಕು” ಎಂದು ಅಖಿಲ ಕರ್ನಾಟಕ ಪ್ರಾಣಿ ದಯಾ ಸಂಘದ ಮುಖ್ಯಸ್ಥರೂ ಆಗಿರುವ ದಯಾನಂದ ಸ್ವಾಮೀಜಿ ಆಗ್ರಹಿಸಿದರು.

“ಪ್ರಾಣಿ ಬಲಿಗೆ ಕಾರಣೀಭೂತರಾದ ದೇವಾಲಯದ ಆಡಳಿತ ಮಂಡಳಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಪ್ರಾಣಿದಯೆ ಕುರಿತು ಜಾಗೃತಿ ಮೂಡಿಸುತ್ತಿದ್ದ ನಮ್ಮ ಹಾಗೂ ಅಖಿಲ ಕರ್ನಾಟಕ ಪ್ರಾಣಿದಯಾ ಸಂಘದ ರಾಜ್ಯ ಮಹಿಳಾ ಸಂಚಾಲಕಿ ಸುನಂದಾ ದೇವಿ ಹಾಗೂ ಕಾರ್ಯಕರ್ತ ಚಂದ್ರಶೇಖರ ತಡಸದ ಅವರ ಮೇಲೆ ಹಲ್ಲೆ ನಡೆಸಿ ಕ್ಯಾಮೆರಾದಲ್ಲಿ ಸೆರೆ ಹಿಡಿದ ದೃಶ್ಯಗಳನ್ನು ನಾಶಪಡಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.

ಧರಣಿಯಲ್ಲಿ ಸುನಂದಾ ದೇವಿ, ಚಂದ್ರಶೇಖರ ತಡಸದ, ಲಿಂಗರಾಜ ಜಗಜಂಪಿ, ಬಸವ ಸೈನ್ಯದ ಅಧ್ಯಕ್ಷ ಸುರೇಶ ಕಿರಾಯಿ, ಪರ್ಯಾವರಣಿಯ ಅಮೃತ ಚರಂತಿಮಠ, ಜಗದೀಶ ಜಕಾತಿ, ಜೈನ ಸಮಾಜದ ಸುನಿಲ್ ಕಠಾರಿಯಾ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT