ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾತಿನಿಧ್ಯ ವಂಚಿತ ಹಿಂದುಳಿದ ವರ್ಗಗಳು

Last Updated 2 ಫೆಬ್ರುವರಿ 2011, 16:20 IST
ಅಕ್ಷರ ಗಾತ್ರ

ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳು ಮುಗಿದು ಈಗ ಅವುಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಆಯ್ಕೆಯ ಪ್ರಕ್ರಿಯೆ ನಡೆಯುತ್ತಿದೆ. ಈ ಚುನಾವಣೆಗೆ ಮುಂಚೆ ಸರ್ಕಾರ ‘ಕರ್ನಾಟಕ ಪಂಚಾಯತ್‌ರಾಜ್ ಕಾಯ್ದೆ’ಯನ್ನು ತಿದ್ದುಪಡಿ ಮಾಡಿದ್ದರ ಪರಿಣಾಮ 1993ರ ಮಂಡಲ್ ಪ್ರಕರಣದ ತೀರ್ಪಿನಡಿಯಲ್ಲಿ ಮೀಸಲಾತಿಯ ಪ್ರಮಾಣ ಶೇಕಡ 50 ಮೀರಬಾರದು ಎಂಬ ಕಾರಣವನ್ನು ಒಡ್ಡಿ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿಗಳಲ್ಲಿ ಹಿಂದುಳಿದ ವರ್ಗಗಳು ಪಡೆಯಬೇಕಿದ್ದ ಸ್ಥಾನಗಳಲ್ಲಿ ಹಿಂದುಳಿದ ವರ್ಗಗಳಿಗೆ ಅಪಾರ ಅನ್ಯಾಯ ಮಾಡಲಾಗಿದೆ.

 ಈ ಬಗ್ಗೆ ಅಲ್ಲಲ್ಲಿ ಪ್ರತಿಭಟನೆಯ ಧ್ವನಿಗಳು ಕೇಳಿಸಿವೆ. ಅಂತೆಯೇ ವಿರೋಧ ಪಕ್ಷಗಳು ಸ್ಪಲ್ಪ ಮಟ್ಟಿಗೆ  ದನಿ ಎತ್ತಿದಂತೆ  ಮಾಡಿ ಸುಮ್ಮನಾಗಿವೆ. ಪ್ರಸಕ್ತ ಬಿಜೆಪಿ ಆಳ್ವಿಕೆಗೆ ಬಂದ ನಂತರ ರಾಜ್ಯದ ಇತಿಹಾಸದಲ್ಲಿ ಹಿಂದೆಂದೂ ಆಗದಷ್ಟು ಅನ್ಯಾಯ ಹಿಂದುಳಿದ ವರ್ಗಗಳಿಗೆ ಆಗುತ್ತಿರುವುದಕ್ಕೆ ಅನೇಕ ಪುರಾವೆಗಳಿವೆ. ಆ ಎಲ್ಲವನ್ನೂ ಬದಿಗೊತ್ತಿ ಕೇವಲ ಚುನಾವಣೆಯಿಂದಾದ ಅನ್ಯಾಯಗಳ ಬಗ್ಗೆ ವಿಶ್ಲೇಷಿಸಲಿಕ್ಕೆ ಹೊರಟರೂ ಸಾಕು, ಸಾಕಷ್ಟು ಅಂಕಿ-ಅಂಶಗಳು ಕಣ್ಣಿಗೆ ಢಾಳಾಗಿ ರಾಚುತ್ತವೆ.

ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಹಿಂದುಳಿದ ವರ್ಗಗಳ ಬಿಸಿಎ ಸ್ಥಾನಮಾನಗಳಿಗೆ ವೀರಶೈವ ಸಾದರು, ಗಾಣಿಗರೇ ಮುಂತಾದ ಪ್ರಬಲ ಜಾತಿಗಳವರು ಬಿಸಿಎ ಸುಳ್ಳು ಸರ್ಟಿಫಿಕೇಟ್‌ಗಳನ್ನು ಪಡೆದು ಸಾವಿರಾರು ಸಂಖ್ಯೆಯಲ್ಲಿ ಆಯ್ಕೆಯಾದರು.ಇದರಿಂದಾಗಿ ಪ್ರವರ್ಗ-1ರಲ್ಲಿರುವ 95 ಅತ್ಯಂತ ಹಿಂದುಳಿದ ಜಾತಿಗಳು (Most Backward) ಹಾಗೂ ಪ್ರವರ್ಗ-2ಎ ನಲ್ಲಿರುವ 102 ತೀರಾ ಹಿಂದುಳಿದ ಜಾತಿಗಳು (Most Backward) ಅನ್ಯಾಯಕ್ಕೆ ಒಳಗಾದವು. ಈ ಬಗ್ಗೆ ಯಾರೂ ಚುನಾವಣೆ ನಂತರ ಪ್ರಶ್ನೆಗಳನ್ನೆತ್ತಲಿಲ್ಲ. ಬಿಜೆಪಿ ಸರ್ಕಾರ ಮಾತ್ರ ತನ್ನ ಉದ್ದೇಶವನ್ನು ಈಡೇರಿಸಿಕೊಂಡಿತು.

ಈಚೆಗೆ ನಡೆದ ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತ್ ಚುನಾವಣೆಗಳ ಮುಂಚೆ ಹಿಂದುಳಿದ ವರ್ಗಗಳಿಗೆ ನೀಡಬೇಕಾದ ಮೀಸಲು ಸ್ಥಾನಗಳಿಗೆ ಶೇ 50ರ ಮಿತಿಯಿಂದಾಗಿ ವಂಚನೆಗೊಳಗಾದ ಬಗ್ಗೆ ಒಂದಷ್ಟು ಚರ್ಚೆ ವಿವಾದ ಪ್ರತಿಭಟನೆ ಆದದ್ದು ನಿಜ, ಆದರೆ ವಿಶೇಷ ಸಂದರ್ಭಗಳಲ್ಲಿ ಮೀಸಲಾತಿಯ ಪ್ರಮಾಣ ಶೇ 50 ಮೀರಬಹುದು ಎಂಬ ಸರ್ವೋಚ್ಛ ನ್ಯಾಯಾಲಯದ ತೀರ್ಪನ್ನು ಬಿಜೆಪಿ ಸರ್ಕಾರವು ಬಳಸಲಿಲ್ಲ.

ವಿರೋಧ ಪಕ್ಷಗಳೂ ಈ ಬಗ್ಗೆ ಧ್ವನಿಯೆತ್ತಲಿಲ್ಲ. ಕಳೆದ ವರ್ಷದ ಜುಲೈನಲ್ಲಿ ಸರ್ವೋಚ್ಛ ನ್ಯಾಯಾಲಯದ ತೀರ್ಪೊಂದು ಪ್ರಕಟವಾಗಿ ಎಂ.ವಿಜಯನ್ ವರ್ಸಸ್ ಸ್ಟೇಟ್ ಆಫ್ ತಮಿಳುನಾಡು ಪ್ರಕರಣದಲ್ಲಿ ಮುಖ್ಯ ನ್ಯಾಯಮೂರ್ತಿ ಎಸ್.ಎಚ್.ಕಪಾಡಿಯಾ ಹಾಗೂ ನ್ಯಾಯಮೂರ್ತಿಗಳಾದ ಕೆ.ಎಸ್.ರಾಧಾಕೃಷ್ಣನ್ ಮತ್ತು ಸ್ವತಂತ್ರಕುಮಾರ್ ಅವರ ಪೀಠ ತಮಿಳುನಾಡು ಮತ್ತು ಕರ್ನಾಟಕ ಸರ್ಕಾರಗಳಿಗೆ ನಿರ್ದೇಶನ ನೀಡುತ್ತಾ ಮೀಸಲಾತಿ ಕಾನೂನನ್ನು ಮರುಚಿಂತನೆ (Re -visit) ಮಾಡುವಂತೆ ಹೇಳಿರುವುದಲ್ಲದೆ ಈ ವಿಷಯದಲ್ಲಿ ಹಿಂದುಳಿದ ವರ್ಗಗಳ ಆಯೋಗದ ಸಲಹೆ ಪಡೆಯುವಂತೆ ಸೂಚಿಸಿದೆ. ‘ಅನಿವಾರ್ಯ ಮತ್ತು ವಿಶೇಷ ಸಂದರ್ಭಗಳಲ್ಲಿ ಮೀಸಲಾತಿಯ ಪ್ರಮಾಣವನ್ನು ಶೇ 50ಕ್ಕೆ ನಿಗದಿಪಡಿಸುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ’ ಎಂದು ತಮಿಳುನಾಡಿನ ಸಾಲಿಸಿಟರ್ ಜನರಲ್ ಗೋಪಾಲ      ಸುಬ್ರಹ್ಮಣ್ಯಂ ತಿಳಿಸಿದ್ದಾರೆ.

ಇಲ್ಲಿ ಮೀಸಲಾತಿ ಎನ್ನುವುದಕ್ಕಿಂತಲೂ ಸಮಾನ ಪ್ರಾತಿನಿಧ್ಯ ಎನ್ನುವುದು ಹೆಚ್ಚು ಸಮರ್ಪಕ. ರಾಜಕಾರಣದ ಸಮಾನ ಅವಕಾಶಗಳನ್ನು ಎಲ್ಲಾ ಕೆಳಜಾತಿಗಳಿಗೂ ವಿಸ್ತರಿಸಬೇಕಾದ ಆಶಯವನ್ನು ಬಿಜೆಪಿ ಸರ್ಕಾರ ಹೊಸಕಿ ಹಾಕಿದೆ. ಇದರ ಪರಿಣಾಮವಾಗಿ 2005ರ ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಶೇ 40ರಷ್ಟು ಸ್ಥಾನಗಳನ್ನು ಹೊಂದಿದ್ದ ಹಿಂದುಳಿದ ವರ್ಗಗಳಿಗೆ ಈಗ ಕೇವಲ ಶೇ 22 ಸ್ಥಾನಗಳು ಮಾತ್ರ ಲಭ್ಯವಾಗಿವೆ. ಇದರಿಂದಾಗಿ ಹಿಂದುಳಿದ ವರ್ಗಗಳು ತಮಗೆ ಸಿಗಬೇಕಾದ ಅವಕಾಶಗಳನ್ನು ಕಳೆದು    ಕೊಂಡಿವೆ.

ರಾಯಚೂರಿನಲ್ಲಿ 2005ರ ಚುನಾವಣೆಯಲ್ಲಿ 12 ಸ್ಥಾನಗಳನ್ನು ಗೆದ್ದಿದ್ದರೆ ಈಗ ಗೆದ್ದಿರುವುದು ಕೇವಲ 2 ಮಾತ್ರ. ಅದೇ ರೀತಿ ಮೈಸೂರಿನಲ್ಲಿ 15 ಸ್ಥಾನಗಳನ್ನು ಗೆದ್ದಿದ್ದ ಹಿಂದುಳಿದ ವರ್ಗಗಳು ಈ ಸಲದ ಚುನಾವಣೆಯಲ್ಲಿ ಕೇವಲ 7 ಸ್ಥಾನಗಳಿಗೆ ತೃಪ್ತಿಪಡಬೇಕಾಗಿದೆ.

ರಾಯಚೂರು, ಚಿಕ್ಕಬಳ್ಳಾಪುರ, ಬಳ್ಳಾರಿ, ಚಿತ್ರದುರ್ಗ ಮತ್ತು ಬೀದರ್ ಜಿಲ್ಲೆಗಳಲ್ಲಿ ಜಿಲ್ಲಾ ಪಂಚಾಯಿತಿಯ ಕೇವಲ ಶೇ 10ರಷ್ಟು ಸ್ಥಾನಗಳನ್ನು ಮಾತ್ರ ಹಿಂದುಳಿದ ವರ್ಗಗಳು ಪಡೆದಿವೆ. ಅದೇ ರೀತಿ ದಾವಣಗೆರೆ, ಕೋಲಾರ, ಮೈಸೂರು, ಚಾಮರಾಜನಗರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಹಿಂದುಳಿದ ವರ್ಗಗಳ ಪ್ರಾತಿನಿಧ್ಯದ ಪ್ರಮಾಣ ಶೇ 20ನ್ನು ಮೀರಿಲ್ಲ. ರಾಜ್ಯದಲ್ಲಿ ಕೇವಲ 5 ಜಿಲ್ಲಾ ಪಂಚಾಯಿತಿಗಳು ಮಾತ್ರ ಶೇ 33ರಷ್ಟು ಸ್ಥಾನಗಳನ್ನು ಪಡೆಯಲು ಸಾಧ್ಯವಾಗಿದೆ. ಅವು ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ, ಮಂಡ್ಯ, ಬೆಳಗಾವಿ ಮತ್ತು ಧಾರವಾಡವಷ್ಟೆ.

ಇನ್ನು ತಾಲ್ಲೂಕು ಪಂಚಾಯಿತಿ ಕಡೆಗೆ ಬಂದರೆ 50 ತಾಲ್ಲೂಕುಗಳಲ್ಲಿ ಹಿಂದುಳಿದ ವರ್ಗಗಳಿಗೆ ಸಿಕ್ಕಿರುವ ಮೀಸಲಾತಿ ಶೇ.15ಕ್ಕಿಂತಲೂ ಕಡಿಮೆ. ಇನ್ನು 56 ತಾಲ್ಲೂಕುಗಳಲ್ಲಿ ಶೇ.30ರಷ್ಟು ಅವಕಾಶಗಳು ಸಿಕ್ಕಿವೆ. ಆಶ್ಚರ್ಯವೆಂದರೆ 10 ತಾಲ್ಲೂಕು ಪಂಚಾಯಿತಿಗಳಲ್ಲಿ ಕೇವಲ ಒಬ್ಬ ಹಿಂದುಳಿದ ವರ್ಗಗಳ ಪ್ರತಿನಿಧಿಯೂ ಇಲ್ಲ. ಮಿಕ್ಕಂತೆ 50 ತಾಲ್ಲೂಕುಗಳಲ್ಲಿ ಹಿಂದುಳಿದ ವರ್ಗಗಳ ಪ್ರಾತಿನಿಧ್ಯ ಶೇ. 15ರಿಂದ ಶೇ. 30ರಷ್ಟಿದೆ.

ಪ್ರವರ್ಗ 1ರಲ್ಲಿ ಬರುವ ಬೆಸ್ತ, ಗೊಲ್ಲ, ಉಪ್ಪಾರರಿಂದ ಹಿಡಿದು ಪಿಂಜಾರ, ದರ್ವೇಸಿ, ಚಪ್ಪರ್‌ಬಂದ್‌ವರೆಗೆ 95 ಜಾತಿಗಳಿಗೆ ಅನ್ಯಾಯವಾದರೆ ಪ್ರವರ್ಗ 2ಎನಲ್ಲಿ ಕುರುಬ, ಕುಂಬಾರ, ಈಡಿಗ, ತಿಗಳ, ದೇವಾಂಗ, ವಿಶ್ವಕರ್ಮ ಕ್ಷೌರಿಕ, ಅಗಸರಿಂದ ಹಿಡಿದು ಗಾಣಿಗ, ಬಹುರೂಪಿ ಮತ್ತು ಪಟ್ಟೇಗಾರರವರೆಗೆ 102 ಜಾತಿಗಳಿಗೆ ಅಪಾರ ಅನ್ಯಾಯ      ವಾಗಿದೆ. ಹಿಂದುಳಿದ ವರ್ಗಗಳ ಪರಿಸ್ಥಿತಿ ಈ ರೀತಿ ಇದ್ದರೆ ಅಲ್ಪಸಂಖ್ಯಾತರ ಸ್ಥಿತಿ ಅಧೋಗತಿಯಾಗಿದೆ. 9 ಜಿಲ್ಲಾ  ಪಂಚಾಯಿತಿಗಳಲ್ಲಿ  ಹಾಗೂ 100 ತಾಲ್ಲೂಕು ಪಂಚಾಯಿತಿಗಳಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ಪ್ರತಿನಿಧಿಯೂ ಇಲ್ಲ. ಎಲ್ಲಾ  30 ಜಿಲ್ಲಾ ಪಂಚಾಯಿತಿಗಳನ್ನು ಸೇರಿಸಿದರೆ ಕೇವಲ 16 ಮಂದಿ ಅಲ್ಪಸಂಖ್ಯಾತರಿಗೆ ಅವಕಾಶ ಸಿಕ್ಕಿದೆ ಅಷ್ಟೆ. ಅದೇ ರೀತಿ 176 ತಾಲ್ಲೂಕು ಪಂಚಾಯಿತಿಗಳಲ್ಲಿ ಕೇವಲ 106 ಜನ ಮಾತ್ರ ಆಯ್ಕೆಯಾಗಲು ಸಾಧ್ಯವಾಗಿದೆ. ಕಳೆದ ಐದು ವರ್ಷಗಳಲ್ಲಿ  ಅಲ್ಪಸಂಖ್ಯಾತರ ಸಂಖ್ಯೆ ಜಿಲ್ಲಾ ಪಂಚಾಯಿತಿಗಳಲ್ಲಿ ಶೇ 4 ರಿಂದ ಶೇ 1.7ಕ್ಕೆ ಇಳಿದಿದ್ದರೆ, ತಾಲ್ಲೂಕು ಪಂಚಾಯಿತಿಗಳಲ್ಲಿ ಶೇ 6 ರಿಂದ ಶೇ 2.7ಕ್ಕೆ ಕುಸಿದಿದೆ. ಇದು ಬಿಜೆಪಿ ಸರ್ಕಾರದ ‘ಸಾಮಾಜಿಕ ನ್ಯಾಯ’ದ ಪರಿಕಲ್ಪನೆ !

ಹಿಂದಿನ ವರ್ಷದ (2009-10) ಬಜೆಟ್‌ನಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ 120 ಕೋಟಿ ರೂಪಾಯಿ ಮೀಸಲಾಗಿದ್ದರೆ ಕಳೆದ ಬಜೆಟ್‌ನಲ್ಲಿ (2010-11) ಇದು ಕೇವಲ 24 ಕೋಟಿಗೆ ಇಳಿಮುಖವಾಗಿತ್ತು. ಇನ್ನು ಈ ವರ್ಷದ ಬಜೆಟ್‌ನಲ್ಲಿ ಹಿಂದುಳಿದ ವರ್ಗಗಳ ಸ್ಥಾನಮಾನವನ್ನು ಯಾರಾದರೂ ಊಹಿಸಬಹುದು.

ಈ ಸರ್ಕಾರದ ಸಂಪುಟದಲ್ಲಿ ಹಿಂದುಳಿದ ವರ್ಗಗಳ ಪ್ರಾತಿನಿಧ್ಯ, ಹಿಂದುಳಿದ ವರ್ಗಗಳಿಗೆ ನೀಡಬೇಕಾದ ಸವಲತ್ತುಗಳ ಕೊರತೆ, ಹಿಂದುಳಿದ ವರ್ಗಗಳ ಆಯೋಗದ ಸ್ಥಾನಮಾನಗಳನ್ನು ಕಸಿದುಕೊಂಡ ನೀತಿಯೇ ಮುಂತಾದ ಯಾವುದರ ಬಗ್ಗೆ ಪ್ರಶ್ನಿಸಿದರೂ ಹಿಂದುಳಿದ ವರ್ಗಕ್ಕೇ ಸೇರಿದ ‘ಮೀರ್‌ಸಾದಿಕ್’ಗಳು ಮತ್ತು ‘ಮಲ್ಲಪ್ಪಶೆಟ್ಟಿ’ಗಳ ಮೂಲಕವೇ ಸರ್ಕಾರ ಉತ್ತರಿಸುತ್ತದೆ. ಈ ಸಮಸ್ಯೆಗಳ ಬಗ್ಗೆ ವಿರೋಧಪಕ್ಷಗಳು ದಿವ್ಯ ಮೌನ ವಹಿಸಿರುವುದು ದುರದೃಷ್ಟಕರ.    
    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT