ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾತ್ಯಕ್ಷಿಕೆ ಮತ್ತು ಕಲಿಕೆ

Last Updated 20 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಜಾಗತೀಕರಣದ ಈ ಸಂದರ್ಭದಲ್ಲಿ ವೃತ್ತಿ ಶಿಕ್ಷಣ ಪರಿಕಲ್ಪನೆಯಡಿ ಎಳವೆಯಲ್ಲೆ ನಾವು ಮಕ್ಕಳನ್ನು  `ಮೆಷಿನ್~  ಮಾಡುತ್ತಿದ್ದೇವೆ.

ಆದರೆ ಶಾಲೆಗಳು ಮಕ್ಕಳ ಸಹಜ ಬೆಳವಣಿಗೆಯ ಸಮಗ್ರ ವಾತಾವರಣವನ್ನು ನಿರ್ಮಿಸಿಕೊಂಡಾಗ ಮಾತ್ರ ತನ್ನ ಕೃತಕತೆ ಮತ್ತು ಏಕತಾನತೆಯಿಂದ ಹೊರಬರಲು ಸಾಧ್ಯ.

ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು 2005 ಮಕ್ಕಳ ಅನುಭವ, ಜ್ಞಾನ, ಬದಲಾವಣೆ ಕುರಿತಾಗಿ ಹೀಗೆ ಹೇಳುತ್ತದೆ: `ಜ್ಞಾನವು ಮಗುವಿನ ಸಹಜ ಪ್ರಕ್ರಿಯೆಯ ಪರಿಣಾಮ.

ಶಾಲೆಯ ಪರಿಸರದ ಹೊರತಾಗಿ ತಮ್ಮ ದೈನಂದಿನ ಬದುಕಿನಲ್ಲಿ ನಾವು ಮಕ್ಕಳ ಕುತೂಹಲ, ಅವರ ಕಲ್ಪನಾಶಕ್ತಿ ಮತ್ತು ನಿರಂತರ ಪ್ರಶ್ನೆಮಾಡುವ ಸ್ವಭಾವವನ್ನು ಕಂಡು ಸಂತೋಷಗೊಳ್ಳುತ್ತೇವೆ.

ಅವರು ತಮ್ಮ ಸುತ್ತಣ ಪ್ರಪಂಚದೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿರುತ್ತಾರೆ. ಸಮಾಜದ ಹಿರಿಯರ ಜತೆ ವ್ಯವಹರಿಸುತ್ತಲೇ ಪ್ರಾಪಂಚಿಕ ಜ್ಞಾನವನ್ನು ಗಳಿಸಿಕೊಂಡು ಅದನ್ನು ಸೃಜನಶೀಲವಾಗಿ ಬಳಸಿಕೊಂಡು ಇತರರೊಡನೆ ತನ್ನ ಸಂಬಂಧವನ್ನು ಕಂಡುಕೊಂಡು ಹೊರಗಿನ ಪ್ರಪಂಚವನ್ನು ಅರ್ಥೈಸುವುದು, ಪ್ರತಿಕ್ರಿಯಿಸುವುದು ಹಾಗೂ ಸಾಂದರ್ಭಿಕವಾಗಿ ಬದಲಾಗುವುದು ಈ ಅವಧಿಯ ಲಕ್ಷಣ .

ನೀವು ಎಂದಾದರೂ ಚಿಕ್ಕಮಕ್ಕಳೊಂದಿಗೆ ನಗರದ ರಸ್ತೆಗಳಲ್ಲಿ ವಿಹಾರಕ್ಕೆ ಹೋಗಿದ್ದರೆ ಕಾಡುಮೇಡು, ಗದ್ದೆ ಬಯಲು ತೋಟಗಳಿಂದ ತುಂಬಿರುವ ಹಳ್ಳಿಹಾದಿಯಲ್ಲಿ ಮಕ್ಕಳ ಕೈಹಿಡಿದು ನಡೆದಿದ್ದರೆ ಆಗೆಲ್ಲ ಮಕ್ಕಳೊಂದಿಗಿನ ಸ್ಮರಣೀಯ ಅನುಭವಗಳ ದರ್ಶನ ನಿಮಗೆ ಆಗಿರುತ್ತದೆ.

ನಡಿಗೆಯುದ್ದಕ್ಕೂ ಮುಗ್ಧ ಮನಸ್ಸಿನ ಸಾವಿರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಕೆಲವೊಂದಕ್ಕೆ ತಡವರಿಸುತ್ತಾ ಇನ್ನಾವುದನ್ನೊ ಜಾರಿಸಿ, ಮತ್ಯಾವುದಕ್ಕೋ ಗದರಿಸಿರುತ್ತೀರಿ. ಮಗು ನಿಮ್ಮ ಜ್ಞಾನ ಪರೀಕ್ಷೆಯನ್ನೇ ನಡೆಸಿರಬೇಕು. ಹೌದು ಮಕ್ಕಳ ವಯೋಮಾನ, ಆ ಮನಸ್ಸೇ ಹಾಗೆ. ಕಂಡದ್ದೆಲ್ಲಕ್ಕೂ ಅವರಿಗೆ ವಿವರಣೆ ಉತ್ತರಗಳು ಬೇಕು, ನೋಡಿದ್ದೆಲ್ಲವನ್ನು ಮುಟ್ಟಿ ಅನುಭವಿಸಬೇಕು.

ಮಕ್ಕಳ ಪಾಲಿಗೆ ಇದು ಪ್ರಕೃತಿ ಸಹಜವಾದ ಕ್ರಿಯೆ. ಮಕ್ಕಳ ಬೆಳವಣಿಗೆಯ ಒಂದು ಹಂತದ ತನಕ ತೀವ್ರವಾಗಿರುವ ಈ ಪ್ರವೃತ್ತಿ ದೊಡ್ಡವರಾಗುತ್ತಲೇ ಕಡಿಮೆಯಾಗುತ್ತಾ ಸಾಗುವುದು.

ದುರಂತವೆಂದರೆ ನಮ್ಮ ಹಾಲಿ ಶೈಕ್ಷಣಿಕ ಕ್ರಮಗಳು ಮಕ್ಕಳ ಮನಸ್ಸನ್ನು ಎಳವೆಯಲ್ಲೆ  ನಿಸರ್ಗ ಸಹಜವಾದ ಕುತೂಹಲ, ಸಾಹಸ, ರೋಚಕತೆ ಎಲ್ಲವನ್ನು ಅರಿಯಬೇಕೆಂಬ ಅವರ ಅದಮ್ಯ ಹಂಬಲವನ್ನು ಕರಟಿಸಿ ಹಾಕುತ್ತಿವೆ.

ತಾನು ಸಿದ್ಧಪಡಿಸಿ ಬಡಿಸಿದ್ದಷ್ಟನ್ನೆ ಮಗು ಉಣತಕ್ಕದು ಎಂಬ ಅಹಂಕಾರ ಅದಕ್ಕಿದೆ ಅಥವಾ ಅದು ಕುದುರೆ ಕಟ್ಟಿದ ಪಟ್ಟಿಯಂತೆ ಒಂದು ನಿರ್ದಿಷ್ಟ ಗುರಿ ಇರಿಸಿ ಮಕ್ಕಳ ಬೆಳೆಸಲೆತ್ನಿಸುತ್ತಿದೆ.

ಇದರ ಪರಿಣಾಮ ಶಾಲೆಗಳಲ್ಲಿ ಕಳೆದು ಹೋಗಿರುವ ಬಹುಮುಖ್ಯ ಸಂಗತಿ ` ಸಮಷ್ಟಿ~ಯ ಯೋಚನೆ . ಮಕ್ಕಳ ಮನಸ್ಸನ್ನು ಗಣಿತ, ವಿಜ್ಞಾನ, ಭಾಷೆ, ಸಮಾಜ, ಪರಿಸರ ಹೀಗೆ ತುಂಡರಿಸಿ ಬೆಳೆಸಲೆತ್ನಿಸುವುದರಿಂದ  ಸಮಗ್ರತೆಯ ದೃಷ್ಟಿಯೇ ಶಾಲೆಗಳಲ್ಲಿ ಕಾಣದಾಗಿದೆ.

ಜಾಗತೀಕರಣದ ಈ ಸಂದರ್ಭದಲ್ಲಿ ವೃತ್ತಿ ಶಿಕ್ಷಣ ಪರಿಕಲ್ಪನೆಯಡಿ ಎಳವೆಯಲ್ಲೆ ನಾವು ಮಕ್ಕಳನ್ನು  `ಮೆಷಿನ್~  ಮಾಡುತ್ತಿದ್ದೇವೆ. ಅಥವಾ ಇಡೀ ಶಾಲೆಯೇ `ಮೆಷಿನ್~  ಆಗಿ ಸಿದ್ಧ ವಸ್ತುಗಳನ್ನಷ್ಟೆ ಹೊರಹಾಕುವ ಬೃಹತ್ ಕಾರ್ಯಗಾರ.

ಶಿಕ್ಷಕರ ಹೊಣೆ
ಶಾಲೆಗಳು ಮಕ್ಕಳ ಸಹಜ ಬೆಳವಣಿಗೆಯ ಸಮಗ್ರ ವಾತಾವರಣವನ್ನು ನಿರ್ಮಿಸಿಕೊಂಡಾಗ ಮಾತ್ರ ತನ್ನ ಕೃತಕತೆ ಮತ್ತು ಏಕತಾನತೆಯಿಂದ ಹೊರಬರಲು ಸಾಧ್ಯ. ಶಾಲೆಗೆ ಸಂಬಂಧಿಸಿದ ಎಲ್ಲ ಮಾನವ ಮತ್ತು ಭೌತಿಕ ವ್ಯವಸ್ಥೆಗಳು ಈ ಹಿನ್ನೆಲೆಯಲ್ಲಿದ್ದರೆ ಚೆನ್ನ.

ಬಹುಶಃ ನಿತ್ಯ ಮಕ್ಕಳ ಜತೆಗಿರುವ ಶಿಕ್ಷಕರ ಹೊಣೆ, ಜವಾಬ್ದಾರಿ ಈ ದೃಷ್ಟಿಯಲ್ಲಿ ಬಹುದೊಡ್ಡದು. ಏಕೆಂದರೆ ಒಂದು ವರ್ಷದ 365 ದಿನಗಳಲ್ಲಿ ಕನಿಷ್ಠ 220 ರಿಂದ 230ರಷ್ಟು ದಿನಗಳನ್ನು ಅಂದರೆ ಅಷ್ಟು ಹಗಲಿನ ಕಾಲವನ್ನು ಮಕ್ಕಳು ಶಾಲೆಗಳಲ್ಲಿಯೇ ಕಳೆಯುತ್ತಾರೆ. ಇವೆಲ್ಲ ಬಾಲ್ಯದ ಅಮೂಲ್ಯ ಕ್ಷಣಗಳು.
 

ಹೀಗಾಗಿ ಮಕ್ಕಳ ಮಾನಸಿಕ ಬೆಳವಣಿಗೆಗಾಗಿ ಶಾಲೆಯೊಳಗಿನ ಪಾಠಗಳೊಂದಿಗೆ ಹೊರಗಿನ ಜ್ಞಾನವನ್ನು ಸೇರ್ಪಡೆಗೊಳಿಸುವುದು. ಅತೀ ಅಗತ್ಯ. ಇದರಿಂದ ಮಾತ್ರ ಮಕ್ಕಳ ಸಹಜ ಕುತೂಹಲವನ್ನು ಉಳಿಸಲು ಸಾಧ್ಯ. ಅದುವೇ ಅವರ ಏಳಿಗೆಯ ತಳಪಾಯ.

ಶಾಲೆಗಳು ಒಂದು ಶಿಸ್ತುಬದ್ಧವಾದ ಕಾಲಕ್ರಮದ ಪಟ್ಟಿಯೊಂದಿಗೆ ಜೋಡಿಯಾಗಿವೆ. ಓದು, ಬರಹ, ಕಲಿಕೆಗಳ ಜತೆಗೆ ಆಟೋಟ ಅಪರೂಪದ ಸಾಂಸ್ಕೃತಿಕ ಚಟುವಟಿಕೆಗಳು ಅಲ್ಲಿ ನಡೆಯುತ್ತಿರುತ್ತವೆ.

ಭಾಷೆ, ಗಣಿತ, ಪರಿಸರ, ಸಮಾಜ, ವಿಜ್ಞಾನ ಇತ್ಯಾದಿ ವಿಷಯಗಳ ಆಯಾ ವಯೋಮಾನಕ್ಕೆ ಅನುಗುಣವಾಗಿ ಶಾಲೆಗಳಲ್ಲಿ ಕಲಿಸಲಾಗುತ್ತದೆ.
 
ಬಹುತೇಕ ಸಂದರ್ಭಗಳಲ್ಲಿ ಎಷ್ಟೇ ಒಳ್ಳೆಯ ಪಠ್ಯಗಳು, ಪಾಠಗಳು ಇರಲಿ ಶಿಕ್ಷಕರು ಮಕ್ಕಳಿಗೆ ತರಗತಿ ಕೋಣೆಯಲ್ಲಷ್ಟೆ ಹೇಳಿಕೊಡುವರು.

ಪಾಠಕ್ಕೆ ಸಂಬಂಧಿಸಿದ ಸಾಕಷ್ಟು ವಿಚಾರಗಳನ್ನು ತರಗತಿಯ ಹೊರಗಿನ ವಾತಾವರಣದಲ್ಲಿ ಕಲಿತಾಗ ಮಗುವಿನ ಜ್ಞಾನ, ವಿವೇಚನಾಶಕ್ತಿ, ನಾಗರಿಕ ಪ್ರಜ್ಞೆಗಳು ವೃದ್ಧಿಸುತ್ತವೆ ಎಂಬ ವಿಚಾರವನ್ನು ಬೋಧಕರು ಮರೆತುಬಿಟ್ಟಿರುತ್ತಾರೆ. ಹೀಗಾಗಿ ತರಗತಿಗಳು ಏಕತಾನತೆ, ನೀರಸ ಸನ್ನಿವೇಶಗಳಲ್ಲಿ ಸೊರಗಿ ಮಕ್ಕಳಿಗೂ ಬೋರ್ ಎನಿಸುತ್ತವೆ. 

ಕಲಿಕೆಯ ಅನೇಕ ಸಂದರ್ಭಗಳು ಮಕ್ಕಳ ಹೊರಕಲಿಕೆಗೆ ಅವಕಾಶ ಕಲ್ಪಿಸುತ್ತವೆ. ಆದರೆ ತರಗತಿ ನಾಲ್ಕು ಗೋಡೆಗಳೊಳಗೆ ಅದನ್ನು ಹೇಳಿಕೊಡಲಾಗುತ್ತದೆ.ಪಠ್ಯಪುಸ್ತಕ, ತರಗತಿಯ ತಾಲೀಮುಗಳಿಂದ ಹೊರತಾಗಿ ಶಾಲೆಯ ಹೊರ ವಾತಾವರಣ, ಕಾಡು ಪ್ರದೇಶಗಳು, ತೋಟಗಳು, ನದಿಗಳ ದಡಗಳು, ಜಾತ್ರೆಗಳು, ಸಂತೆಗಳು, ಕಮ್ಮೋರ, ಕುಂಬಾರ, ಬಡಗಿಯ ಮನೆಗಳು ಕೂಡ ಅತ್ಯುತ್ತಮ ಕಲಿಕೆಯ ತಾಣಗಳಾಗಬಲ್ಲವು. ಮನೆಮಂದಿ, ಸಮುದಾಯದ ಹಿರಿಯ ನಾಗರಿಕರ ಅನುಭವಗಳು, ಕಲಾವಿದರ ಕೈಚಳಕಗಳು ಇತರ ಮೂಲಗಳಿಂದಲೂ ಮಕ್ಕಳು ಜ್ಞಾನವನ್ನು ಪಡೆದ ಅವಕಾಶವಾಗಿ ಕಲಿಕೆಯ ಕಾರ್ಯಗಳನ್ನಾಗಿ ಬೋಧಕರು ಪ್ರೋತ್ಸಾಹಿಸಬೇಕು.

ಒಂದು ಉದಾಹರಣೆಯನ್ನು ನೋಡೋಣ. ಜಲಜೀವಿಗಳ ಬಗ್ಗೆ ವಿಜ್ಞಾನದ ಪಾಠವೊಂದಿದೆ. ಶಿಕ್ಷಕರು ಇದನ್ನೊಂದು ಚೇತೋಹಾರಿ ಕಲಿಕಾ ಕಾರ್ಯಚಟುವಟಿಕೆಯಾಗಿ ರೂಪಿಸಬಹುದು. ಮಕ್ಕಳನ್ನು ನದಿ, ತೋಡು, ಚಿಕ್ಕ ಹೊಳೆಯ ಹತ್ತಿರ ಕರೆದುಕೊಂಡು ಹೋಗಿ.
 
ನೀರಿನ ಒಳಗಿನ ಮೀನು, ಕೀಟಗಳ ಪರಿಚಯ ಮಾಡಿಸಿ. ದಡದಲ್ಲಿನ ವಿವಿಧ ಆಕಾರಗಳ ಕಲ್ಲುಗಳು, ವಿವಿಧ ಬಣ್ಣದ ಮಣ್ಣನ್ನು ಸಂಗ್ರಹಿಸಲು ಹೇಳಿ. ನದಿ ದಡದಲ್ಲಿ ಮೀನು ಹಿಡಿಯಲು ಹೊಂಚುಹಾಕಿರುವ ಕೊಕ್ಕರೆಯೋ ಮಿನ್ಚುಳ್ಳಿಯನ್ನು ಗಮನಿಸಲು ಹೇಳಿ.ನೀರು, ನೀರಿನ ಮೂಲಗಳು, ಋತುಮಾನಗಳು, ಅಂತರ್ಜಲ, ಒರತೆ, ಕೃಷಿ ಜತೆಗೆ ಅದಕ್ಕಿರುವ ಸಂಬಂಧ, ಬೆಳೆಗಳು ಇತ್ಯಾದಿಗಳು ಕುರಿತಾಗಿ ಮಕ್ಕಳಿಗೆ ಮಾಹಿತಿಯನ್ನು ಒದಗಿಸಿ,

ಇಷ್ಟೆಲ್ಲ ಚಟುವಟಿಕೆಗಳ ನಂತರ ಶಾಲೆಗೆ ಹಿಂತಿರುಗಿದ ಮಕ್ಕಳಿಗೆ ತಾವು ಗಮನಿಸಿದ್ದನ್ನು, ತಾವು ಕಂಡದ್ದನ್ನು ಅನುಭವ ರೂಪದಲ್ಲಿ ಬರೆಯಲು ಹೇಳಿ. ಮಕ್ಕಳನ್ನು ಗುಂಪುಗಳಾಗಿ ವಿಂಗಡಿಸಿ ಅನುಭವ ಹಂಚಿಕೊಳ್ಳಲು ಅವಕಾಶ ಮಾಡಿಕೊಡಿ.

ಕೊನೆಯಲ್ಲಿ ಬೋಧಕರು ಪಾಠಪುಸ್ತಕದ ಪಾಠ ಅಂಶಗಳಿಗೂ ಈಗಷ್ಟೆ ನಡೆದ ಹೊರಕಲಿಕೆಗೂ ಅಂತರ್ ಸಂಬಂಧವೇರ್ಪಡಿಸಿ ಮಕ್ಕಳ ಜತೆ ಮಾತನಾಡಲಿ. ಇಲ್ಲಿ ಕೇವಲ ಮಾಹಿತಿ ಮಾತ್ರವಲ್ಲ ಅನುಭವದ ಜ್ಞಾನವನ್ನು ಮಕ್ಕಳು ಪಡೆಯುತ್ತಾರೆ. ಇದು ಕಲಿಕೆಯನ್ನು ಗಟ್ಟಿಗೊಳಿಸುತ್ತದೆ.

ಚರಿತ್ರೆ ಪಾಠಗಳ ಸಂದರ್ಭಗಳಲ್ಲಿ ಮಕ್ಕಳನ್ನು ಊರ ಪಕ್ಕದಲ್ಲಿ ಇರಬಹುದಾದ ಚಾರಿತ್ರಿಕ ಸ್ಥಳಗಳು, ಕೋಟೆಕೊತ್ತಲಗಳಿಗೆ ಕರೆದುಕೊಂಡು ಹೋಗಬಹುದು, ಪರಿಸರ ವಿಜ್ಞಾನ ಪಾಠಗಳಿಗೆ ಸಂಬಂಧಿಸಿ ಬೆಟ್ಟ ಪ್ರದೇಶಗಳ ಚಾರಣಗಳನ್ನು ಏರ್ಪಡಿಸಿರಿ.

ಗಣಿತ ಪಾಠಕ್ಕಾಗಿ ಮಕ್ಕಳನ್ನು ಊರ ಸಂತೆಯಲ್ಲಿ ಸುತ್ತಾಡಿಸಿ, ಖಗೋಳ ಪಾಠಕ್ಕಾಗಿ ಮಕ್ಕಳಿಗೆ ಸಂಜೆಯ ಆಕಾಶದಲ್ಲಿ ನಕ್ಷತ್ರ ಗ್ರಹಗಳು, ರಾಶಿಗಳು ತೋರಿಸಿ.

ಟೆಲಿಸ್ಕೋಪ್ ಮುಖಾಂತರ ಚಂದ್ರನ ಕುಳಿಗಳು, ಶನಿಯ ಸುಂದರ ಉಂಗುರವನ್ನು ಕಾಣಿಸಿ. ಈ ಎಲ್ಲಾ ಚಟುವಟಿಕೆಗಳು ಮಕ್ಕಳಲ್ಲಿ ಕಲಿಕೆಯ ಸಾಧ್ಯತೆಯನ್ನು ಕುತೂಹಲವನ್ನು ವಿಸ್ತಾರಗೊಳಿಸುತ್ತವೆ.

ಪ್ರತಿ ಚಟುವಟಿಕೆ ಸಂದರ್ಭಗಳಿಂದ ಕೆಲವಾರು ಪಾಠ ವಿಷಯಗಳಿಗೆ ಸಂಬಂಧ ಏರ್ಪಡಿಸಲು ಸಾಧ್ಯ ಎಂಬ ಸತ್ಯವನ್ನು ಶಿಕ್ಷಕರು ಅರ್ಥಮಾಡಿಕೊಂಡಾಗ ಒಂದು ಹೊರ ಚಟುವಟಿಕೆಯಿಂದ ಹಲವು ಪಾಠಗಳ ಅನೇಕ ವಿಷಯಗಳ ಅರ್ಥೈಸಲು ಸಾಧ್ಯವಾಗುತ್ತದೆ. 

ರಾಷ್ಟ್ರೀಯ ಪಠ್ಯಕ್ರಮ ನೆಲೆಗಟ್ಟು ಹೇಳುವಂತೆ ಪಠ್ಯ ಪುಸ್ತಕವಾಗಲಿ, ಶಿಕ್ಷಕರಾಗಲಿ ಅಧಿಕೃತವಲ್ಲ ಎಂಬ ತತ್ವವನ್ನು ನಾವು ಅರಿತುಕೊಳ್ಳೋಣ.

ಪಠ್ಯಕ್ರಮವು ಮಕ್ಕಳಿಗೆ ಅವರ ಕಲಿಕೆಯನ್ನು ಅಭಿವ್ಯಕ್ತಿಗೊಳಿಸಲು ಮತ್ತು ಅವರ ಕುತೂಹಲವನ್ನು ಪೋಷಿಸಿ ಅನೇಕ ಚಟುವಟಿಕೆಗಳನ್ನು ತನ್ನ ಕೈಯಿಂದಲೇ ಮಾಡಿ ತಿಳಿಯಲು,

ಪ್ರಶ್ನೆಗಳನ್ನು ಕೇಳಲು, ತಮ್ಮ ಅನುಭವವನ್ನು ಇತರರೊಡನೆ ಹಂಚಿಕೊಂಡು ಶಾಲೆಯಲ್ಲಿ ಕಲಿತದ್ದನ್ನು ತಮ್ಮ ದೈನಂದಿನ ಅನುಭವಗಳಿಗೆ ಹೊಂದಿಸಿಕೊಳ್ಳಲು, ಹಾಗೂ ಹೊಸದನ್ನು ಶೋಧಿಸಲು ಅವಕಾಶ ನೀಡಬೇಕೇ ಹೊರತು ಕೇವಲ ಪಠ್ಯದಲ್ಲಿನ ವಿಷಯವನ್ನು ಪುನರ್‌ರಚಿಸಲು ಮಾತ್ರ ಅವರ ಸಾಮರ್ಥ್ಯ ಸೀಮಿತಗೊಳ್ಳಬಾರದು.

ಮಾಹಿತಿ ಕೊಡುವುದನ್ನೆ ಜ್ಞಾನವೆಂದು ತಪ್ಪಾಗಿ ಭಾವಿಸಲಾಗುತ್ತಿದೆ.  ಶಿಕ್ಷಣ ಎಂದರೆ ಕೇವಲ ಉದ್ಯೋಗವನ್ನು ಹಿಡಿಯುವುದು, ಹಣ ಸಂಪಾದಿಸುವುದು ಮಾತ್ರವಲ್ಲ ಅದರ ಜತೆಗೆ ಸಭ್ಯ ನಾಗರೀಕ ಸಮಾಜದ ಸೃಷ್ಟಿಯ ಜವಾಬ್ದಾರಿಯು ಅದಕ್ಕಿದೆ.

ಕಲಿಕೆಯಲ್ಲಿ ಸಮಾಜ, ಸಾಂಸ್ಕೃತಿಕ ವಿಚಾರಗಳು, ಆರೋಗ್ಯ, ಪರಿಸರ ಇತ್ಯಾದಿಗಳನ್ನು ಒಳಗೊಂಡ ಸಮಗ್ರತೆಯ ದೃಷ್ಟಿಕೋನವನ್ನು ಹೊಂದಿರಬೇಕಾಗುತ್ತದೆ. ಎಳವೆಯಲ್ಲಿ ನಾವು ನಮ್ಮ ಮಕ್ಕಳನ್ನು ಅದಕ್ಕಾಗಿ ಸಿದ್ಧಗೊಳಿಸಬೇಕು.

ಹಾಗೆಂದ  ಮಾತ್ರಕ್ಕೆ  ಎಲ್ಲಾ ಪಾಠಗಳ ಸಂದರ್ಭಗಳ್ಲ್ಲಲೂ ಮಕ್ಕಳನ್ನು ಶಾಲಾ ವಾತಾವರಣದಿಂದ ಆಚೆಗೆ ಕರೆದುಕೊಂಡು ಹೋಗಬೇಕಾಗಿಲ್ಲ. ಅದು ಸಾಧ್ಯವೂ ಇಲ್ಲ. ಆದರೆ ಒಂದು ಕಲಿಕಾ ವರ್ಷದಲ್ಲಿ ತಿಂಗಳಲ್ಲಿ  ಒಂದೆರಡು ಬಾರಿಯಾದರೂ ಮಕ್ಕಳಿಗಾಗಿ  ಅಂತಹ ಸನ್ನಿವೇಶಗಳನ್ನು ರೂಪುಗೊಳಿಸಿ.

ಅದು ಆನಂದದಾಯಕ ಕಲಿಕೆಯ ಸಂದರ್ಭ ಆಗಬಹುದು.  ಪಾಠ ಪುಸ್ತಕಗಳೇ  ಅಂತಿಮ ಎಂಬ ವಿಚಾರಗಳನ್ನು ಶಿಕ್ಷಕರು ಮೊದಲು ಬಿಟ್ಟು ಬಿಡುವುದೊಳಿತು. ಶಾಲೆಯಾಚೆಗಿನ ಸಮುದಾಯ ಮತ್ತು ಪರಿಸರದಿಂದ ಕಲಿಯಲು ಬಹಳಷ್ಟು ಇವೆ ಎಂಬುದನ್ನು ನಾವೆಲ್ಲರೂ ಮನಗಾಣಬೇಕು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT