ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾದೇಶಿಕ ಅಧ್ಯಯನದ ಪ್ರಾಮಾಣಿಕ ಪ್ರಯತ್ನ

ವಿಮರ್ಶೆ
Last Updated 21 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಡಾ.ಡಿ.ಎನ್. ಯೋಗೀಶ್ವರಪ್ಪ ಅವರ ‘ಕಲ್ಪಶೋಧ’ ಕೃತಿಯು ಇತಿಹಾಸ ಲೇಖನಗಳ ಒಂದು ಸಂಕಲನ. ‘ನಾಲ್ಕು ಹೆಜ್ಜೆ’ಗಳಲ್ಲಿ ತುಮಕೂರು ಜಿಲ್ಲೆಯ ಇತಿಹಾಸವನ್ನು ತಿಳಿಸಲು ಲೇಖಕರು ಪ್ರಯತ್ನಿಸಿದ್ದಾರೆ. ಪ್ರತಿ ವಿಭಾಗದಲ್ಲಿ ತಿಳಿಸಬೇಕಾದ ವಿಷಯದ ಬಗ್ಗೆ ಲೇಖಕರಿಗೆ ಸ್ಪಷ್ಟ ಕಲ್ಪನೆ ಇರುವುದರಿಂದ ವಿಷಯಗಳ ಪುನರಾವರ್ತನೆ ಮತ್ತು ಅನಗತ್ಯ ವಿಚಾರಗಳು ಪ್ರವೇಶಿಸಿಲ್ಲ.

ಇತಿಹಾಸ ಕುರಿತು, ಪ್ರಮುಖ ರಾಜ ವಂಶಗಳು, ಅವರ ಸಾಧನೆ, ಆಡಳಿತ, ರಾಜ್ಯ ವಿಸ್ತರಣೆ ಇತ್ಯಾದಿಗಳನ್ನು ಕುರಿತಂತೆ ಅಧ್ಯಯನ ಮತ್ತು ಸ್ಥೂಲ ವಿವರಣಾತ್ಮಕ ಬರವಣಿಗೆ ಆಗಿದೆ. ಆಯಾ ಕಾಲಘಟ್ಟದ ಸಾಂಸ್ಕೃತಿಕ ಇತಿಹಾಸದ ಬಗೆಗೂ ಒಂದಷ್ಟು ಅಧ್ಯಯನಗಳು ಆಗಿವೆ. ಕಳೆದ ಶತಮಾನದ ಆದಿಭಾಗದಿಂದಲೂ ಇಂತಹ ಅಧ್ಯಯನಗಳು ಆಗುತ್ತಲೇ ಇವೆ.

ಇವು ಒಂದು ನಾಡಿನ ವ್ಯಾಪ್ತಿಯನ್ನೇ ಹೆಚ್ಚಾಗಿ ಗಮನದಲ್ಲಿಟ್ಟುಕೊಂಡಿರುತ್ತವೆ. ಆಸುಪಾಸಿನ ಪ್ರದೇಶಗಳ ಬಗೆಗೆ ನಿರ್ಲಿಪ್ತವಾಗಿರುತ್ತವೆ. ಇತಿಹಾಸ ಲೇಖನದಲ್ಲಿ ಇಂತಹ ಮಿತಿಗಳು ಅನಿವಾರ್ಯ. ಇಂತಹ ಅನಿವಾರ್ಯತೆಗಳ ಕಾರಣದಿಂದ ಪ್ರಾದೇಶಿಕವಾದ ಎಷ್ಟೋ ವಿಚಾರಗಳು ಗೌಣವಾಗಿಬಿಡುತ್ತವೆ. ಇತಿಹಾಸವು ಸಮಗ್ರವಾಗಿ ತಿಳಿಯಬೇಕಾದರೆ ಒಂದು ರಾಷ್ಟ್ರದ/ರಾಜ್ಯದ ಎಲ್ಲ ಪ್ರದೇಶಗಳ ಮತ್ತು ಎಲ್ಲ ಕಾಲದ ಅರಿವು ಮುಖ್ಯವಾಗುತ್ತದೆ. ಅದಕ್ಕೆ ಎಲ್ಲ ಆಕರಗಳ ನೆರವೂ ಅನಿವಾರ್ಯ.

ಒಂದು ಕಾಲಘಟ್ಟದ ಇತಿಹಾಸದ ಅಭ್ಯಾಸಕ್ಕೆ ಸಮಕಾಲೀನ ಶಾಸನಗಳು ಪ್ರಮುಖ ಆಕರವಾದರೂ, ಅದೇ ಕಾಲದ ವಾಸ್ತು, ಶಿಲ್ಪ, ಸಾಹಿತ್ಯ ಇತ್ಯಾದಿಗಳನ್ನು ಮರೆಯುವಂತಿಲ್ಲ. ಒಂದು ಕಾಲಕ್ಕೆ ಕಡತಗಳು ಮತ್ತು ಕಾಗದದ ಮೇಲಿನ ಬರವಣಿಗೆಗಳು ಹೆಚ್ಚು ವಿಶ್ವಸನೀಯ ಆಗುತ್ತವೆ. ಮೌಖಿಕವಾದ ಜಾನಪದೀಯ ಆಕರಗಳೂ ಗೌಣವಲ್ಲ.

ಕರ್ನಾಟಕವನ್ನು ಪ್ರಖ್ಯಾತ ರಾಜವಂಶಗಳು ಮಾತ್ರವಲ್ಲದೆ, ಪಾಳೆಯಗಾರರು ಎಂದು ಕರೆಯಲ್ಪಡುವ ಸಣ್ಣಪುಟ್ಟ ನಾಯಕರು ಮತ್ತು ನಾಡಪ್ರಭುಗಳೂ ಆಳಿದ್ದಾರೆ. ಸಮರ್ಥ ಆಡಳಿತ ನಿರ್ವಹಣೆ ಮತ್ತು ಆಯಾ ಪ್ರದೇಶದ ಜನರ ಸರ್ವಾಂಗೀಣ ಒಳಿತಿಗೆ ಅವರ ಜೊತೆಗೆ ಅವರ ಅಧಿಕಾರಿಗಳೂ ಶ್ರಮಿಸಿರುತ್ತಾರೆ. ಅವರ ಕೊಡುಗೆಯನ್ನೂ ಮರೆಯುವಂತಿಲ್ಲ. ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ಅಧ್ಯಯನಗಳು ಮಹತ್ವ ಪಡೆಯುತ್ತವೆ. ಈ ನಿಟ್ಟಿನಲ್ಲಿ ‘ಕಲ್ಪಶೋಧ’ ಕೃತಿಯು ಸ್ವಾಗತಾರ್ಹ ಎನಿಸಿಕೊಳ್ಳುವುದು ಮಾತ್ರವಲ್ಲದೆ, ಇಂತಹ ಮತ್ತಷ್ಟು ಕೃತಿಗಳಿಗೆ ಅವಕಾಶ ಮಾಡಿಕೊಡುವ ಭರವಸೆ ಹುಟ್ಟಿಸುತ್ತದೆ.

‘ಮೊದಲ ಹೆಜ್ಜೆ’ಯಲ್ಲಿ ಹೊಯ್ಸಳರ ಕಾಲದ ತುಮಕೂರು ಜಿಲ್ಲೆಯ ಅಧ್ಯಯನ ನಡೆದಿದೆ. ಅದರಲ್ಲಿ ಪ್ರಮುಖವಾಗಿರುವುದು ಕೈದಾಳ ಪ್ರದೇಶ. ಪ್ರಸ್ತುತ ತುಮಕೂರು ಜಿಲ್ಲೆಯ ವ್ಯಾಪ್ತಿಯಲ್ಲಿರುವ ಪ್ರದೇಶದಲ್ಲಿದ್ದ ಹೊಯ್ಸಳರ ಕಾಲದ ಅಧಿಕಾರಿಗಳ ಸಾಧನೆಗಳನ್ನು ಯೋಗೀಶ್ವರಪ್ಪ ಸಮರ್ಥವಾಗಿ ಪರಿಶೀಲಿಸಿದ್ದಾರೆ.

ಕೈದಾಳವು ಹೊಯ್ಸಳರ ಕಾಲದ ಒಂದು ಪ್ರಮುಖ ನೆಲೆ. ಇದರ ಬಗ್ಗೆ ಹಲವು ಐತಿಹ್ಯಗಳೂ ಇವೆ. ಅವುಗಳನ್ನು ಮುಖ್ಯ ಮಾಡಿಕೊಳ್ಳದೆ ದಾಖಲೆಗಳ ಆಧಾರದಿಂದ ಗೂಳಿ ಬಾಚಿದೇವ, ಮಹಾಸಾಮಂತ ಗಂಡರಾದಿತ್ಯ, ಸಾಂತಯ್ಯ, ಗೋಪಾಲ ದಣ್ಣಾಯಕ ಮುಂತಾದ ಅಧಿಕಾರಿಗಳ ಕೊಡುಗೆಯನ್ನು ಯೋಗೀಶ್ವರಪ್ಪ ವಿವರಿಸಿದ್ದಾರೆ. ಈ ಹೆಜ್ಜೆಯಲ್ಲಿ ಒಂದು ಹೊಸ ಶಾಸನಶೋಧವೂ ಸೇರಿರುವುದು ಇತಿಹಾಸಕಾರರಿಗೆ ಇರಲೇಬೇಕಾದ ಮಾಹಿತಿಗಳ ಶೋಧಕಾರ್ಯದ ಅರಿವಿನ ಪರಿಚಯ ಮಾಡಿಸುತ್ತದೆ.

ಈ ಕೃತಿಯ ಮಹತ್ವದ ‘ಎರಡನೆಯ ಹೆಜ್ಜೆ’ಯಲ್ಲಿ ಲೇಖಕರು ತುಮಕೂರು ಪ್ರದೇಶದಲ್ಲಿ ವಿಜಯನಗರ ಮತ್ತು ವಿಜಯನಗರೋತ್ತರ ಕಾಲದಲ್ಲಿ ಆಳಿದ ವಿವಿಧ ಅಮರನಾಯಕರು/ ನಾಯಕರು/ ಮಹಾನಾಡಪ್ರಭುಗಳು ಮತ್ತು ನವಾಬರ ಕಾಲದ ಇತಿಹಾಸವನ್ನು ಪರಿಶೀಲಿಸಿದ್ದಾರೆ. ತುಮಕೂರು ಪ್ರದೇಶದಲ್ಲಿ ವಿಜಯನಗರೋತ್ತರ ಆಡಳಿತದ ಬಗ್ಗೆ ಹಾಗಲವಾಡಿ, ನಿಡುಗಲ್ಲು, ಮಧುಗಿರಿ, ಬಿಜ್ಜಾವರ, ಮಿಡಿಗೇಶಿ, ಪಾವಗಡ, ಸಿರಾ ಮತ್ತು ಹೊಳವನಹಳ್ಳಿ–ಕೊರಟಗೆರೆ ನಾಯಕರ ಬಗ್ಗೆ ವಿಷಯಕ್ಕೆ ತಕ್ಕಂತೆ ಒಂದು ಅಥವಾ ಎರಡು ಅಧ್ಯಾಯಗಳಲ್ಲಿ ಸ್ಥೂಲ ಎನಿಸಬಹುದಾದರೂ ವಿವರವಾಗಿಯೇ ವಿಶ್ಲೇಷಣೆ ಮಾಡಿದ್ದಾರೆ.

ಈಗಾಗಲೇ ಕೆಲವು ನಾಯಕ ಮನೆತನಗಳ ಬಗ್ಗೆ ಸಂಶೋಧನಾತ್ಮಕ  ಕೃತಿಗಳು ಪ್ರಕಟವಾಗಿವೆಯಾದರೂ, ಒಂದೆಡೆ, ಅವುಗಳ ಪರಿಶೀಲನೆ ಮಾಡಿರುವುದು ಅಭ್ಯಾಸಿಗಳ ದೃಷ್ಟಿಯಿಂದ ಮಹತ್ವ ಪಡೆಯುತ್ತದೆ. ಈ ಭಾಗದಲ್ಲಿ ಹಲವು ಪ್ರಕಟಿತ ಕೃತಿಗಳನ್ನು ಆಕರವಾಗಿ ಬಳಸಿಕೊಂಡಿರುವುದಲ್ಲದೆ, ಮೆಕೆಂಜಿಯ ಅಪ್ರಕಟಿತ ದಾಖಲೆಗಳನ್ನೂ ಬಳಸಿಕೊಂಡಿರುವುದು ಇತಿಹಾಸಕಾರನ ಎಚ್ಚರವನ್ನು ಸೂಚಿಸುತ್ತದೆ. ಈ ಲೇಖನಗಳಲ್ಲಿ ಇತಿಹಾಸಕಾರನ ಕ್ಷೇತ್ರಕಾರ್ಯ ಮತ್ತು ಅಧ್ಯಯನದ ಶ್ರಮಗಳು ಸ್ಪಷ್ಟವಾಗಿ ಅಭಿವ್ಯಕ್ತಿಗೊಂಡಿವೆ.

‘ಮೂರನೆಯ ಹೆಜ್ಜೆ’ಯಲ್ಲಿ ಲೇಖಕರು ತುಮಕೂರು ಪ್ರದೇಶದಲ್ಲಿ ಧರ್ಮದ ಪ್ರಭಾವ ಮತ್ತು ವೈಶಿಷ್ಟ್ಯಗಳನ್ನು ಪರಿಶೀಲಿಸುವ ಪ್ರುಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ಪ್ರಾಮಾಣಿಕ ಇತಿಹಾಸಕಾರನ ನಿಷ್ಠುರತೆಯು ಇಲ್ಲಿನ ಕೆಲವು ಅಭಿಪ್ರಾಯಗಳಲ್ಲಿ ವ್ಯಕ್ತವಾಗಿದೆ. ಕೃತಿಯ ಮೌಲ್ಯವನ್ನು ಇಂತಹ ಅಭಿಪ್ರಾಯಗಳು ಹೆಚ್ಚಿಸುತ್ತವೆ.

‘ನಾಲ್ಕನೆಯ ಹೆಜ್ಜೆ’ಯ ವಿಷಯಗಳು ಸಂಕೀರ್ಣವಾಗಿದ್ದು, ಇಲ್ಲಿ ತುಮಕೂರು ಪ್ರದೇಶದ ಸಾಮಾಜಿಕ ಬದುಕನ್ನು ಪರಿಶೀಲಿಸುವ ಪ್ರಯುತ್ನ ನಡೆದಿದೆ. ತುಮಕೂರು ಜಿಲ್ಲೆಯಲ್ಲಿರುವ ಕೋಟೆಗಳು ಮತ್ತು ಕೆರೆಗಳ ಬಗ್ಗೆ ಮಾತ್ರವಲ್ಲದೆ ಶಾಸನೋಕ್ತ ಸ್ಥಳನಾಮಗಳ ಅಧ್ಯಯನ, ತುಮಕೂರು ಜಿಲ್ಲೆಯ ಶೈಕ್ಷಣಿಕ ಪ್ರಗತಿಯ ಬಗೆಗಿನ ಲೇಖನಗಳಲ್ಲದೆ ೧೮೦೦ರ ನಂತರ ಗುಬ್ಬಿಯಲ್ಲಾದ ಬದಲಾವಣೆಗಳು, ಯರವಾಡ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ ಬಾಲ ಸ್ವಾತಂತ್ರ್ಯ ಹೋರಾಟಗಾರ ಮತ್ತು ಕ್ವಿಟ್ ಇಂಡಿಯಾ ಚಳವಳಿಯಲ್ಲಿ ತುಮಕೂರು ಪ್ರದೇಶದ ವಿದ್ಯಾರ್ಥಿಗಳ ಪಾತ್ರ ಇತ್ಯಾದಿ ಆಧುನಿಕ ಇತಿಹಾಸದ ಪರಿಶೀಲನೆ ಮಾತ್ರವಲ್ಲದೆ ಈ ಪ್ರದೇಶದ ಕುರುಬ ಜನಾಂಗದ ಕೆಲವು ಸಾಮಾಜಿಕ ಸಂಗತಿಗಳು ವಿಶೇಷ ಗಮನ ಸೆಳೆಯುತ್ತವೆ.

‘ಕಲ್ಪಶೋಧ’ವು ರಾಜಕೀಯ, ಧಾರ್ಮಿಕ ಇತಿಹಾಸದ ಜೊತೆಗೆ ಸಾಮಾಜಿಕ ಇತಿಹಾಸದ ಬಗೆಗೂ ಗಮನ ಹರಿಸಿರುವುದು ಕೃತಿಯ ಮಹತ್ವವನ್ನು ಹೆಚ್ಚಿಸಿದೆ. ಕ್ರಿ.ಶ. ಸು.೧೨ನೆಯ ಶತಮಾನದ ಆರಂಭದಿಂದ ಸ್ವಾತಂತ್ರ್ಯಕ್ಕಾಗಿ ನಡೆದ ಚಳವಳಿಗಳವರೆಗೂ ತುಮಕೂರು ಪ್ರದೇಶದ ಪ್ರಮುಖ ಐತಿಹಾಸಿಕ ವಿಚಾರಗಳನ್ನು ವಿದ್ವಾಂಸರಿಗೆ ಮತ್ತು ಸಾಮಾನ್ಯ ಆಸಕ್ತರಿಬ್ಬರಿಗೂ ತಲುಪುವಂತೆ ಲೇಖಕರು ಸಂಗ್ರಾಹ್ಯವಾಗಿ ನಿರೂಪಿಸಿದ್ದಾರೆ.

ಈ ಕೃತಿಯಲ್ಲಿ ಪ್ರಮುಖವಾಗಿ ಗುರುತಿಸಲಾದ ಕೊರತೆಯೆಂದರೆ, ತುಮಕೂರು ಪ್ರದೇಶದಲ್ಲಿರುವ ಪ್ರಾಕ್ಚಾರಿತ್ರಿಕ ಕಾಲದ ಕುರುಹುಗಳು ಮತ್ತು ಹೊಯ್ಸಳಪೂರ್ವ ಗಂಗ ಮತ್ತು ರಾಷ್ಟ್ರಕೂಟ ಹಾಗೂ ಚೋಳರ ದಾಖಲೆಗಳ ಬಗೆಗೂ ವಿಶ್ಲೇಷಣೆ ಆಗಿದ್ದರೆ ಕೃತಿಗೆ ಸಮಗ್ರತೆಯ ಸ್ವರೂಪ ಲಭ್ಯವಾಗುತ್ತಿತ್ತು.

ವಾಕ್ಯರಚನೆಯಲ್ಲಿನ ಅಸ್ಪಷ್ಟತೆ ಮತ್ತು ಸಂದಿಗ್ಧತೆಗಳು ಹಾಗೂ ಕರಡು ತಿದ್ದುಪಡಿಯಲ್ಲಿ ಉಳಿದಿರುವ ದೋಷಗಳು ಸುಲಭ ಓದಿಗೆ ಅಡ್ಡಿಯಾಗಿವೆ. ಈ ಕೊರತೆ ಮತ್ತು ದೋಷಗಳ ನಡುವೆಯೂ ಇಂತಹ ಪ್ರಾದೇಶಿಕ ಅಧ್ಯಯನಗಳು ವರ್ತಮಾನದ ಅಧ್ಯಯನ ವಿಧಾನಕ್ಕೆ ಹಿಡಿದ ಕೈಗನ್ನಡಿ ಮತ್ತು ಭವಿಷ್ಯದ ಸಂಶೋಧಕರಿಗೆ ಮಹತ್ವದ ಆಕರಗಳಾಗಿ ಉಳಿಯುವ ಭರವಸೆ ಹುಟ್ಟಿಸುತ್ತವೆ.
–ಡಾ.ಎಚ್.ಎಸ್.ಗೋಪಾಲರಾವ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT