ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಪ್ರಾಯೋಗಿಕ ಜ್ಞಾನ ಇಲ್ಲ; ಬುದ್ಧಿ ಇದೆ'

Last Updated 15 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: `ನಿಮ್ಮ ಹಾಗೆ ನನಗೆ ಪ್ರಾಯೋಗಿಕ ಜ್ಞಾನ ಇಲ್ಲದಿರಬಹುದು. ಆದರೆ, ದೇವರು ಬುದ್ಧಿ ಕೊಟ್ಟಿದ್ದಾನೆ...'
ಹೀಗೆ ತೀಕ್ಷ್ಣ ಮಾತುಗಳಿಂದ ಬಿಜೆಪಿಯ ಅಪ್ಪಚ್ಚು ರಂಜನ್ ಅವರನ್ನು ಚುಚ್ಚಿದ್ದು ಅರಣ್ಯ ಸಚಿವ ಬಿ. ರಮಾನಾಥ ರೈ.
ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ಎಲ್.ಎ. ರವಿಸುಬ್ರಹ್ಮಣ್ಯ ಅವರು ಕಾಡಾನೆ ಹಾವಳಿ ಹೆಚ್ಚಾಗಿರುವ ಕುರಿತು ಕೇಳಿದ ಪ್ರಶ್ನೆ ಸಂದರ್ಭದಲ್ಲಿ ಸಚಿವರು ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.

`ಹಾವಳಿ ತಪ್ಪಿಸುವುದಕ್ಕೆ ಆನೆ ಕಾರಿಡಾರ್ ನಿರ್ಮಿಸುತ್ತಿದ್ದು, ಇದಕ್ಕಾಗಿ  ರೂ. 109 ಕೋಟಿ ಯೋಜನೆ ಸಿದ್ಧವಾಗಿದೆ. ಮೂರು ವರ್ಷಗಳಲ್ಲಿ ಅದನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗು ವುದು' ಎಂದು ರೈ ವಿಧಾನಸಭೆಗೆ ತಿಳಿಸಿದರು.

ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಬಿಜೆಪಿ ಕೆ.ಜಿ.ಬೋಪಯ್ಯ ಅವರು `ಆನೆ ಕಾರಿಡಾರ್ ನಿರ್ಮಾಣಕ್ಕೆ ಕೊಡಗು ಜಿಲ್ಲೆ ಒಂದಕ್ಕೆ ಸುಮಾರು  ರೂ. 50 ಕೋಟಿ ಬೇಕಾಗುತ್ತದೆ ಎಂದು ಅಂದಾಜಿಸ ಲಾಗಿದೆ. ಆದರೆ, ಈ ಸಲದ ಬಜೆಟ್‌ನಲ್ಲಿ ಇಡೀ ರಾಜ್ಯಕ್ಕೆ ಮೀಸಲಿಟ್ಟಿರುವುದು ಕೇವಲ  ರೂ. 30 ಕೋಟಿ. ಈ ಹಣದಿಂದ ಆನೆ ಹಾವಳಿ ಹೇಗೆ ತಡೆಯುತ್ತೀರಿ' ಎಂದು ಪ್ರಶ್ನಿಸಿದರು.
ಹೀಗೆ ಚರ್ಚೆ ನಡೆಯುತ್ತಿದ್ದ ವೇಳೆಯೇ ಅಪ್ಪಚ್ಚು ರಂಜನ್ ಅವರು `ಅರಣ್ಯ ಭಾಗದ ಶಾಸಕರನ್ನು ಅರಣ್ಯ ಮಂತ್ರಿ ಮಾಡಿದ್ದರೆ ಚೆನ್ನಾಗಿರುತ್ತಿತ್ತು. ನೀವು ಕರಾವಳಿ ಭಾಗದವರು' ಎಂದು ಕಿಚಾಯಿಸಿದರು.

ಇದು ರೈ ಅವರಿಗೆ ಕೇಳಿಸಲಿಲ್ಲ. ನಂತರ ಅವರ ಪಕ್ಕದಲ್ಲೇ ಇದ್ದ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು ರೈ ಅವರಿಗೆ ಅಪ್ಪಚ್ಚು ಹೇಳಿದ್ದನ್ನು ವಿವರಿಸಿದರು.

ಆಗ ಸಿಟ್ಟಾದ ರೈ ಅವರು `ಅಪ್ಪಚ್ಚು, ನೀವು ಹೇಳಿದ್ದನ್ನು ಮತ್ತೊಮ್ಮೆ ಹೇಳಿ ಎಂದು ಗದರಿಸಿದರು. ನಾನು ಕರಾವಳಿ ಯವ ಇರಬಹುದು. ಆದರೆ, ನನಗೆ ದೇವರು ಬುದ್ಧಿ ಕೊಟ್ಟಿದ್ದಾನೆ. ಜನಪರ ವಾದ ತೀರ್ಮಾನಗಳನ್ನು ತೆಗೆದು ಕೊಳ್ಳಲು ಯಾವ ಪ್ರಾಯೋಗಿಕ ಜ್ಞಾನವೂ ಅಗತ್ಯ ಇಲ್ಲ' ಎಂದು ತಿರುಗೇಟು ನೀಡಿದರು.

ನಂತರ ಅಪ್ಪಚ್ಚು ಅವರು `ಅಲ್ಲಾ ಸಾರ್, ನಿಮ್ಮ ಬಗ್ಗೆ ಗೌರವ ಇದೆ. ಬೇಸರ ಮಾಡಿಕೊಳ್ಳಬೇಡಿ. ನಾನು ಅರಣ್ಯ ಭಾಗದವರೇ ಅರಣ್ಯ ಸಚಿವರಾ ಗಿದ್ದರೆ ಸಮಸ್ಯೆಗಳಿಗೆ ಬೇಗ ಸ್ಪಂದಿಸಲು ಅನುಕೂಲ ಆಗುತ್ತಿತ್ತು ಎಂದು ಹೇಳಿದೆ. ಇದರಲ್ಲಿ ಬೇಸರದ ವಿಷಯ ಏನೂ ಇಲ್ಲ' ಎಂದು ಸಮಜಾಯಿಷಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT