ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಿಪೇಯ್ಡಆಟೊ ನಿಲ್ದಾಣ -ಆರಂಭದಲ್ಲೇ ಅಪಸ್ವರ

Last Updated 17 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮೆಟ್ರೊ ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ಎಂ.ಜಿ.ರಸ್ತೆಯಲ್ಲಿ ಸೋಮವಾರ ಆರಂಭಿಸಲಾದ ನವೀಕೃತ ಮುಂಗಡ ಪಾವತಿ (ಪ್ರಿಪೇಯ್ಡ) ಆಟೊ ನಿಲ್ದಾಣದ ಗುಣಮಟ್ಟದ ಬಗ್ಗೆ ಸಾರ್ವಜನಿಕರಿಂದ ಆರಂಭದಲ್ಲೇ ಅಪಸ್ವರ ಕೇಳಿಬಂದಿದೆ.

ನಿಲ್ದಾಣದ ಬಳಿ ಹೆಚ್ಚಿನ ಆಟೊಗಳ ನಿಲುಗಡೆಗೆ ಸ್ಥಳಾವಕಾಶವಿಲ್ಲ. ವಿದ್ಯುತ್ ಸಂಪರ್ಕ ಕಡಿತಗೊಂಡ ಸಂದರ್ಭದಲ್ಲಿ ಕಂಪ್ಯೂಟರ್‌ನ ಕಾರ್ಯ ನಿರ್ವಹಣೆಗೆ ಯುಪಿಎಸ್ ಸೌಕರ್ಯವು ನಿಲ್ದಾಣದ ಕೌಂಟರ್‌ನಲ್ಲಿ ಇಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ನಿಲ್ದಾಣದ ಕೌಂಟರ್ ಬಳಿ ಆಟೊ ನಿಲ್ಲುವ ಜಾಗದಲ್ಲಿ ಸರಪಳಿಗಳಿಂದ ನಿರ್ಮಿಸಲಾಗಿರುವ ತಾತ್ಕಾಲಿಕ ತಡೆಗೋಡೆಗೆ ಉತ್ತಮ ಗುಣಮಟ್ಟದ ವಸ್ತುಗಳನ್ನು ಬಳಸಿಲ್ಲ. ನಿಲ್ದಾಣದ ಬಳಿ ಅಳವಡಿಸಿರುವ ಸೂಚನಾ ಫಲಕವು ಯಾವುದೇ ಸಮಯದಲ್ಲಿ ಬೀಳುವ ಸ್ಥಿತಿಯಲ್ಲಿದೆ. ಹಳೆಯ ಕೌಂಟರ್‌ಗೆ ಬಣ್ಣ ಬಳಿದು ಸಿಂಗರಿಸಲಾಗಿದೆಯಷ್ಟೇ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

`ನಾನು ನೋಡಿದಂತೆ ಎಂ.ಜಿ.ರಸ್ತೆಯಲ್ಲಿ ಪ್ರಿಪೇಯ್ಡ ಆಟೊ ನಿಲ್ದಾಣ ಹಲವು ವರ್ಷಗಳಿಂದಲೂ ಕಾರ್ಯ ನಿರ್ವಹಿಸುತ್ತಿದೆ. ಇದೇ ಪ್ರಿಪೇಯ್ಡ ಆಟೊ ನಿಲ್ದಾಣ ಎರಡು ಬಾರಿ ಉದ್ಘಾಟನೆಯಾಗಿದೆ. ಹೊಸ ಕಮಿಷನರ್‌ಗಳು ಬಂದಾಗಲೆಲ್ಲ ಏನೋ ಒಂದು ನೆಪ ಹೇಳಿ ಇದನ್ನು ಉದ್ಘಾಟಿಸಲಾಗುತ್ತಿದೆ. ಕಾರಣ ಏನೆಂದು ಗೊತ್ತಿಲ್ಲ~ ಎಂದು ಖಾಸಗಿ ಕಂಪೆನಿ ಉದ್ಯೋಗಿ ಉದಯ್ ಹೇಳಿದರು.

ಈಗ ಮತ್ತೆ ನಿಲ್ದಾಣದ ಕೌಂಟರ್‌ಗೆ ಬಣ್ಣ ಬಳಿದು ಆರಂಭಿಸಲಾಗಿದೆ. ಗಣಕೀಕೃತಗೊಂಡಿದೆ ಎಂಬ ಕಾರಣಕ್ಕೆ ಅದನ್ನು ಮತ್ತೊಮ್ಮೆ ಉದ್ಘಾಟಿಸುವ ಅಗತ್ಯ ಇರಲಿಲ್ಲ. ಅಧಿಕಾರಿಗಳು ಸಾರ್ವಜನಿಕರ ಹಣವನ್ನು ಪೋಲು ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಈ ಬಗ್ಗೆ ಇಲಾಖೆಯ ಹಲವು ಅಧಿಕಾರಿಗಳನ್ನು ಪ್ರಶ್ನಿಸಿದಾಗ ಅವರಿಂದಲೂ ಇದೇ ರೀತಿಯ ಅಭಿಪ್ರಾಯ ವ್ಯಕ್ತವಾಯಿತು. ಹಿಂದೆ ಈ ಆಟೊ ನಿಲ್ದಾಣ ಗಣಕೀಕೃತವಾಗಿರಲಿಲ್ಲ. ನಿಲ್ದಾಣದ ಕೌಂಟರ್‌ನಲ್ಲಿ ಇರುತ್ತಿದ್ದ ಪೊಲೀಸ್ ಸಿಬ್ಬಂದಿಯೇ ಆಟೊ ಪ್ರಯಾಣ ದರ, ಪ್ರಯಾಣಿಕರು ತಲುಪಬೇಕಾದ ಸ್ಥಳ, ಆಟೊ ನೋಂದಣಿ ಸಂಖ್ಯೆ ಮತ್ತಿತರ ವಿವರಗಳನ್ನು ರಸೀದಿ ರೂಪದಲ್ಲಿ ಬರೆದುಕೊಡುವ ವ್ಯವಸ್ಥೆ ಇತ್ತು.

ಉದ್ಘಾಟನೆ ಸಮಾರಂಭ: ವಾಹನ ದಟ್ಟಣೆ
ಸಾಮಾನ್ಯವಾಗಿ ಎಂ.ಜಿ.ರಸ್ತೆ ಸುತ್ತಮುತ್ತಲ ಪ್ರದೇಶದಲ್ಲಿ ಸಂಜೆ ವೇಳೆ ವಾಹನಗಳ ಓಡಾಟ ಹೆಚ್ಚಾಗಿರುತ್ತದೆ. ಸಾರ್ವಜನಿಕರು ಕೆಲಸ ಮುಗಿಸಿಕೊಂಡು ಕಚೇರಿಯಿಂದ ಮನೆಗೆ ಹೋಗುವ ಧಾವಂತದಲ್ಲಿರುತ್ತಾರೆ.

ಈ ಸಮಯದಲ್ಲೇ ನಿಲ್ದಾಣದ ಉದ್ಘಾಟನೆಗೆ ಬಂದಿದ್ದ ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಮತ್ತು ಅವರ ಬೆಂಗಾವಲು ಪಡೆ ವಾಹನಗಳಿಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಎಂ.ಜಿ.ರಸ್ತೆ, ಕಾಮರಾಜ ರಸ್ತೆಯಲ್ಲಿ ಸಂಜೆ 5.15ರಿಂದ ಕೆಲ ಕಾಲ ಇತರೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಯಿತು. ಪರಿಣಾಮ ಸುತ್ತಮುತ್ತಲ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಿ ಸವಾರರು ಪರದಾಡಿದರು. ವಾಹನಗಳು ಸಾಲುಗಟ್ಟಿ ನಿಂತಿದ್ದ ದೃಶ್ಯ ಎಂ.ಜಿ.ರಸ್ತೆಯಲ್ಲಿ ಕಂಡುಬಂತು.

ಈ ರೀತಿ ಸಣ್ಣ ಪುಟ್ಟ ಕಾರ್ಯಕ್ರಮಗಳಿಗೆ ನಗರ ಪೊಲೀಸ್ ಕಮಿಷನರ್ ಬರುವುದನ್ನು ಇದೇ ಮೊದಲು ನೋಡುತ್ತಿದ್ದೇವೆ. ವಾಹನ ದಟ್ಟಣೆ ಇಲ್ಲದ ಸಮಯದಲ್ಲಿ ಇಂತಹ ಕಾರ್ಯಕ್ರಮ ನಡೆಸುವುದು ಸೂಕ್ತ ಎಂದು ಹಲಸೂರು ನಿವಾಸಿ ವಿನಯ್ ಅಭಿಪ್ರಾಯಪಟ್ಟರು.

ಆಟೊ ನಿಲ್ದಾಣ ಉದ್ಘಾಟಿಸಿ ಮಾತನಾಡಿದ ಮಿರ್ಜಿ, `ಈ ಪ್ರಿಪೇಯ್ಡ ಆಟೊ ನಿಲ್ದಾಣದಿಂದ ಮೆಟ್ರೊ ರೈಲು ಪ್ರಯಾಣಿಕರಿಗಷ್ಟೇ ಅಲ್ಲದೇ ಸಾರ್ವಜನಿಕರಿಗೂ ಅನುಕೂಲವಾಗಲಿದೆ~ ಎಂದರು.

ಮೆಟ್ರೊ ರೈಲು ನಿಲ್ದಾಣದ ಭದ್ರತಾ ಜವಾಬ್ದಾರಿಯನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗೆ (ಸಿಐಎಸ್‌ಎಫ್) ವಹಿಸಬೇಕೆ ಅಥವಾ ರಾಜ್ಯ ಕೈಗಾರಿಕಾ ಭದ್ರತಾ ಪಡೆಗೆ (ಕೆಎಸ್‌ಐಎಫ್) ನೀಡಬೇಕೆ ಎಂಬ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಈ ಸಂಬಂಧ ಅಂತಿಮ ತೀರ್ಮಾನ ಕೈಗೊಳ್ಳುವವರೆಗೂ ನಗರ ಪೊಲೀಸ್ ಇಲಾಖೆಯಿಂದಲೇ ಮೆಟ್ರೊ ರೈಲು ನಿಲ್ದಾಣಕ್ಕೆ ಭದ್ರತೆ ಒದಗಿಸಲಾಗುತ್ತದೆ ಎಂದು ತಿಳಿಸಿದರು.

ಮೆಟ್ರೊ ರೈಲು ನಿಲ್ದಾಣ ಉದ್ಘಾಟನಾ ಸಮಾರಂಭ ನಡೆಯುವ ದಿನವೇ ಜಯಲಲಿತಾ ಅವರು ನ್ಯಾಯಾಲಯ ವಿಚಾರಣೆಗಾಗಿ ಬೆಂಗಳೂರಿಗೆ ಬರಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಪೊಲೀಸ್ ಭದ್ರತೆ ಮಾಡಲಾಗುತ್ತದೆ. ಉದ್ಘಾಟನಾ ಸಮಾರಂಭಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸಾರ್ವಜನಿಕರು ಬರುವ ನಿರೀಕ್ಷೆ ಇದ್ದು, ಸುರಕ್ಷತೆ ದೃಷ್ಟಿಯಿಂದ ಸಾಕಷ್ಟು ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಮಿರ್ಜಿ ಮಾಹಿತಿ ನೀಡಿದರು.
ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಡಾ.ಎಂ.ಎ.ಸಲೀಂ, ಪೂರ್ವ ಸಂಚಾರ ವಿಭಾಗದ ಡಿಸಿಪಿ ಬಿ.ಎ.ಮುತ್ತಣ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT