ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಿಯಕರನ ಸ್ನೇಹಿತನ ಕೊಲೆಗೆ ಸುಪಾರಿ ನೀಡಿದ್ದ ವಿದ್ಯಾರ್ಥಿನಿಗೆ ಜಾಮೀನು

Last Updated 9 ಜೂನ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮಾಜಿ ಪ್ರಿಯಕರನ ಸ್ನೇಹಿತನನ್ನು ಕೊಲೆ ಮಾಡಿಸಿದ್ದ ಬಿಬಿಎಂ ವಿದ್ಯಾರ್ಥಿನಿ ಸುಷ್ಮಾಳಿಗೆ ಜೂ. 22 ರವರೆಗೆ ಮಧ್ಯಂತರ ಜಾಮೀನು ನೀಡಿ ನಗರದ ಏಳನೇ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ.

ಸೋಮವಾರದಿಂದ (ಜೂ. 11) ಬಿಬಿಎಂ ಪರೀಕ್ಷೆಗಳು ಆರಂಭವಾಗಲಿದ್ದು, ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡುವ ಸಲುವಾಗಿ ಜೂ. 22 ರವರೆಗ ನ್ಯಾಯಾಲಯ ಕೆಲವು ಷರತ್ತುಗಳನ್ನು ವಿಧಿಸಿ ಜಾಮೀನು ನೀಡಿದೆ.
`ಮಲ್ಲೇಶ್ವರದ ಎಂಇಎಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು ಪರೀಕ್ಷೆ ಬರೆಯಲು ಕೋರಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಳು.
 
ಆಕೆಯ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ 11 ದಿನತಾತ್ಕಾಲಿಕ ಜಾಮೀನು ನೀಡಿದೆ. ಪರೀಕ್ಷೆ ಇಲ್ಲದ ದಿನಗಳಲ್ಲಿ ಆಕೆ ಠಾಣೆಗೆ ಬಂದು ಸಹಿ ಮಾಡಬೇಕು~ ಎಂದು ಉತ್ತರ ವಿಭಾಗದ ಡಿಸಿಪಿ ಎಚ್.ಎಸ್.ರೇವಣ್ಣ `ಪ್ರಜಾವಾಣಿ~ಗೆ ತಿಳಿಸಿದರು.

ಸುಪಾರಿಗೆ ಜಮೀನಿನ ಹಣ:  ಪ್ರಿಯಕರ ಹಾಗೂ ಆತನ ಸ್ನೇಹಿತನ ಕೊಲೆಗಾಗಿ ಸುಷ್ಮಾ ಜಮೀನು ಮಾರಿದ್ದ ಹಣದಿಂದ ಹಂತಕರಿಗೆ ಸುಪಾರಿ ನೀಡಿದ್ದಳು ಎಂದು ಪೊಲೀಸರು ಹೇಳಿದ್ದಾರೆ. ಸುಷ್ಮಾಳ ತಂದೆ ಶ್ರೀನಿವಾಸನ್ ಅವರು ಇತ್ತೀಚೆಗೆ ದೇವನಹಳ್ಳಿಯಲ್ಲಿದ್ದ ತಮ್ಮ ಜಮೀನನ್ನು 20 ಲಕ್ಷಕ್ಕೆ ಮಾರಾಟ ಮಾಡಿದ್ದರು. ಜಮೀನು ಮಾರಿದ ಕೆಲವೇ ದಿನಗಳಲ್ಲಿ ಶ್ರೀನಿವಾಸನ್ ಸಾವನ್ನಪ್ಪಿದರು.

ಮನೆಯವರಿಗೆ ತಿಳಿಯದಂತೆ ಆ ಹಣವನ್ನು ತೆಗೆದುಕೊಂಡಿದ್ದ ಸುಷ್ಮಾ, ಆ ಹಣದಲ್ಲಿ ತನ್ನ ಪ್ರಿಯಕರ ಮಂಜುನಾಥ್ ಜತೆ ಚಿಕ್ಕಮಗಳೂರು, ಗೋವಾ, ದೆಹಲಿ ಮತ್ತಿತರ ಕಡೆಗಳಲ್ಲಿ ಮೋಜಿನ ಸುತ್ತಾಟ ನಡೆಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಐದು ಲಕ್ಷ ರೂಪಾಯಿಗೆ ಸುಪಾರಿ ಒಪ್ಪಿಸಿದ್ದ ಸುಷ್ಮಾ, ಜಮೀನು ಮಾರಿದ್ದ ಹಣದಲ್ಲಿ ಹಂತಕರಿಗೆ 50 ಸಾವಿರ ರೂಪಾಯಿಯನ್ನು ಮುಂಗಡವಾಗಿ ನೀಡಿದ್ದಳು. ಉಳಿದ ಹಣವನ್ನು ಕೊಲೆಯ ನಂತರ ನೀಡುವುದಾಗಿ ಹಂತಕರಿಗೆ ತಿಳಿಸಿದ್ದಳು.

ದ್ವೇಷವಾದ ಪ್ರೀತಿ:  `ಮೊದಲಿನಿಂದಲೂ ಸುಷ್ಮಾ ಐಶಾರಾಮಿಯಾಗಿಯೇ ಬೆಳೆದಿದ್ದಳು. ಆಕೆ ಪಿಯುಸಿಯಲ್ಲಿ ಎರಡನೇ ದರ್ಜೆಯಲ್ಲಿ ಉತ್ತೀರ್ಣಳಾದಾಗ ಶ್ರೀನಿವಾಸನ್ ಮಗಳಿಗೆ ಬೊಲೇರೊ ಜೀಪನ್ನು ಉಡುಗೊರೆಯಾಗಿ ನೀಡಿದ್ದರು.

 ಜೀಪ್ ಚಾಲಕನಾಗಿ ಕೆಲಸಕ್ಕೆ ಸೇರಿದ್ದ ಮಂಜುನಾಥ್ ಜೊತೆಗೆ ಬೆಳೆದ ಸ್ನೇಹ ಪ್ರೀತಿಯಾಗಿ ಬದಲಾಗಿತ್ತು. ಆದರೆ ಇಬ್ಬರೂ ಪ್ರೀತಿಸುತ್ತಿದ್ದ ವಿಚಾರ ಮನೆಯವರಿಗೆ ತಿಳಿದ ನಂತರ ಆಕೆ ಮಂಜುನಾಥ್‌ನಿಂದ ದೂರವಾಗಿದ್ದಳು~ ಎಂದು ಪೊಲೀಸರು ಹೇಳಿದ್ದಾರೆ.

ಸುಷ್ಮಾಳಿಂದ ದೂರವಾದ ನಂತರ ಮಂಜುನಾಥ್ ಮಡಿಕೇರಿಯಲ್ಲಿ ಅಂಬುಲೆನ್ಸ್‌ನ (108) ಚಾಲಕನಾಗಿ ಕೆಲಸ ಮಾಡುತ್ತಿದ್ದ. ತನ್ನನ್ನು ಮದುವೆಯಾಗದಿದ್ದರೆ ಮುಖಕ್ಕೆ ಆಸಿಡ್ ಹಾಕುವುದಾಗಿ ಆಕೆಗೆ ಹೆದರಿಸುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಂಜುನಾಥ್‌ನ ಸ್ನೇಹಿತ ಹಸೇನ್ ಎಂಬುವವನು ಸುಷ್ಮಾಳ ಚಲನವಲನಗಳ ಬಗ್ಗೆ ನಿರಂತರವಾಗಿ ಮಂಜುನಾಥ್‌ಗೆ ಮಾಹಿತಿ ನೀಡುತ್ತಿದ್ದ. ಇದೆಲ್ಲದರಿಂದ ಬೇಸತ್ತಿದ್ದ ಆಕೆ ಮಂಜುನಾಥ್ ಮತ್ತು ಆತನ ಸ್ನೇಹಿತ ಹಸೇನ್ ಕೊಲೆಗೆ ಸಂಚು ರೂಪಿಸಿದ್ದಳು.

ಇಬ್ಬರನ್ನೂ ಕೊಲ್ಲುವ ಉದ್ದೇಶದಿಂದ ಕೃತ್ಯ ನಡೆದರೂ ಮಂಜುನಾಥ್ ಕೊಲೆ ಸಂಚಿನಿಂದ ತಪ್ಪಿಸಿಕೊಂಡ. ಆದರೆ, ಸುಷ್ಮಾ ಸೇರಿದಂತೆ ಹಂತಕರು ಹಸೇನ್‌ನನ್ನು ಕೊಲೆ ಮಾಡಿ ದೊಡ್ಡಬಳ್ಳಾಪುರ ಸಮೀಪದ ಹೊಲದಲ್ಲಿ ಎಸೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT