ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀತಿ, ಗೌರವಕ್ಕೆ ಭಾವುಕರಾದ ಕಿರ್ಮಾನಿ

Last Updated 22 ಫೆಬ್ರುವರಿ 2012, 8:35 IST
ಅಕ್ಷರ ಗಾತ್ರ

ಹುಬ್ಬಳ್ಳಿ: ದೊಡ್ಡ ಮೈದಾನದಲ್ಲಿ ಸಾವಿರಾರು ಯುವ ಕ್ರಿಕೆಟ್ ಕಲಿಗಳ ಸಮಾವೇಶ. ಪ್ರತಿಯೊಬ್ಬರಲ್ಲೂ ಕುತೂಹಲ, ಕ್ರಿಕೆಟ್‌ನಲ್ಲಿ ಉನ್ನತ ಸಾಧನೆ ಮಾಡುವ ಹಂಬಲ. ಕೈಯಲ್ಲಿ ಬ್ಯಾಟ್, ಬಾಲ್ ಹಿಡಿಯುವುದಷ್ಟೇ ಅಲ್ಲ; ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸುವ ಗುರಿ ಹೊತ್ತ ಕನಸು. ಆ ಕನಸಿಗೆ ರೆಕ್ಕೆ ಕಟ್ಟಲು ಬಂದವರು ಪದ್ಮಶ್ರೀ ಸೈಯ್ಯದ್  ಕಿರ್ಮಾನಿ.

ತೀರಾ ಆಪ್ತವಾಗಿ, ಪಾಲಕರಷ್ಟೇ ಪ್ರೀತಿಯಿಂದ ಯುವ ಪ್ರತಿಭೆಗಳಿಗೆ ಪ್ರೋತ್ಸಾಹಿಸುವ ಮಾಜಿ ಕ್ರಿಕೆಟಿಗ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಮಂಗಳವಾರದ ಆಕರ್ಷಣೆಯಾಗಿದ್ದರು. ಅಂಜುಮನ್ ಸ್ಪೋರ್ಟ್ಸ್ ಅಕಾಡೆಮಿ ಉದ್ಘಾಟನೆ ನೆಪವಾಗಿತ್ತು. ಸಾಲುಸಾಲಾಗಿ ನಿಂತಿದ್ದ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಕ್ರಿಕೆಟಿಗನಿಗೆ ಹೂಹಾರ ಹಾಕಿ ನಮಸ್ಕರಿಸಿದರು. ಗೌರವ ಸಮರ್ಪಿಸಿದರು. ಈ ಸನ್ನಿವೇಶ ಅನುಭವಿಸಿದ ಕಿರ್ಮಾನಿ ಕಣ್ಣಂಚಿನಲ್ಲಿ ನೀರೂರಿತ್ತು. `ನಾನು ಆಡಿದ ಭಾರತ ತಂಡ ವಿಶ್ವಕಪ್ ಗೆದ್ದಾಗಲೂ ಇಷ್ಟೊಂದು ಭಾವುಕನಾಗಿರಲಿಲ್ಲ~ ಎಂದು ಉಸುರಿದರು.

ತಕ್ಷಣವೇ ಅದರಿಂದ ಹೊರಬಂದ ಕಿರ್ಮಾನಿ ಮಕ್ಕಳೊಂದಿಗೆ ಮಗುವಾಗಿ ಓಡಾಡಿಕೊಂಡು, ಹರಟೆ ಜೊತೆಗೆ ಹಿತವಚನ, ಕಲಿತ ವಿದ್ಯೆಯನ್ನು ಯುವಕರಿಗೆ ತಿಳಿಸುವ ಪ್ರಯೋಗಶೀಲ ಪ್ರಯತ್ನ ಅದರಲ್ಲಿತ್ತು. ಕ್ರಿಕೆಟ್‌ನ ಓರೆಕೋರೆಗಳನ್ನು ಅರೆದು ಅಳೆದ ಕಿರ್ಮಾನಿ ಅವರ ವ್ಯಕ್ತಿತ್ವಕ್ಕೆ ಯುವ ಕ್ರಿಕೆಟಿಗರು ಮಾರು ಹೋಗಿದ್ದರು. ಅವರ ಮಾತಿನ ಮೋಡಿಯಲ್ಲಿ ಎಲ್ಲರೂ ತನ್ಮಯರಾಗಿದ್ದರು.

ನಾನು ಚಿಕ್ಕವನಾಗಿದ್ದಾಗ ರಿಲೇಯಲ್ಲಿ ಭಾಗವಹಿಸಲು ಕಾಲಿಗೆ ಬೂಟುಗಳಿರಲಿಲ್ಲ. ಬರಿಗಾಲಲ್ಲೇ ಓಡಿದೆ. ಪದಕವನ್ನೂ ಗೆದ್ದೆ. ಆ ಸಂಭ್ರಮದಲ್ಲೂ ತಂದೆಯನ್ನು ಬೂಟು ಕೇಳುವ ಸ್ಥಿತಿಯಿರಲಿಲ್ಲ. ಅದೇ ನನ್ನ ಸಾಧನೆಗೆ ಪ್ರೇರಣೆಯಾಯಿತು. ಶ್ರಮಪಟ್ಟೆ, ಕಠಿಣ ಅಭ್ಯಾಸ ಮಾಡಿದೆ. ಉನ್ನತ ಗುರಿ ಮುಟ್ಟುವ ಉದ್ದೇಶ ಯಶಸ್ವಿಯಾಯಿತು. ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿತು. ಅದು ನನ್ನ ಭಾಗ್ಯ. ತಂದೆ ತಾಯಿಗಳ ಪ್ರೇರಣೆ~. ದೇವರ ಅನುಗ್ರಹ ಎನ್ನುತ್ತ ನೆನಪುಗಳಿಗೆ ಮರುಜೀವ ನೀಡಿದರು.

ಅಂಥ ಸ್ಥಿತಿ ಇಂದಿನ ಮಕ್ಕಳಿಗೆ ಇಲ್ಲ. ಮಕ್ಕಳ ಆಸಕ್ತಿ ಪೋಷಿಸಲು ಪಾಲಕರು ಸಜ್ಜಾಗಿದ್ದಾರೆ. ದುಶ್ಚಟಕ್ಕೆ ಬಲಿಯಾಗದೆ ಸದುಪಯೋಗ ಪಡೆಯಿರಿ. ಸಾಧನೆಯ ಎಲ್ಲ ಮೆಟ್ಟಿಲೇರಿ ಉನ್ನತ ಸಾಧನೆ ಮಾಡಿ ಎಂದು ಕಿರ್ಮಾನಿ ಹಾರೈಸಿದರು.

ಶಿಸ್ತುಬದ್ಧ, ಕಠಿಣ ಶ್ರಮ, ನಿಷ್ಠೆ, ಶ್ರದ್ಧಾಪೂರ್ವಕ ಪ್ರಾಮಾಣಿಕ ಪ್ರಯತ್ನದಿಂದ ಕ್ರೀಡಾಪಟುಗಳು ಉನ್ನತ ಸಾಧನೆ ಮಾಡಲು ಸಾಧ್ಯ. ಇದಕ್ಕೆ ಕ್ರೀಡಾಪಟುಗಳಲ್ಲಿ ತನ್ಮಯತೆ ಅತ್ಯಗತ್ಯ ಎಂದು ಮಾಜಿ ಕ್ರಿಕೆಟಿಗ ಸೈಯ್ಯದ್  ಕಿರ್ಮಾನಿ ಅಭಿಪ್ರಾಯಪಟ್ಟರು.

ಸಾಧನೆಯ ಹಾದಿ ಶ್ರಮದಾಯಕ. ಹಲವಾರು ಅಡ್ಡಿತಡೆ, ಆತಂಕಗಳು ಎದುರಾಗುವುದು ಸಹಜ. ಅವುಗಳನ್ನೆಲ್ಲ ಮೆಟ್ಟಿ ಮುನ್ನಡೆಯುವ ದಾರಿ ಕಂಡುಕೊಳ್ಳುವುದು ಮುಖ್ಯ. ಅದಕ್ಕೆ ಕ್ರಮಬದ್ಧ ನಿಯಮ ಪಾಲನೆ ಅನಿವಾರ್ಯ. ಸಾಧಕರ ಸಾಧನೆ ಯುವ ಪ್ರತಿಭೆಗಳಿಗೆ ಪ್ರೇರಣೆ ಆಗಬೇಕು ಎಂದು ನುಡಿದರು.

`ಮಕ್ಕಳಿಗೆ ಮನೆಯೇ ಮೊದಲ ಶಾಲೆ. ಪಾಲಕರು ಉತ್ತಮ ಮಾರ್ಗದರ್ಶನ ನೀಡಿ, ಆಸಕ್ತಿಯ ವಿಷಯದಲ್ಲಿ ಪ್ರೋತ್ಸಾಹ ನೀಡಿದರೆ ಸಾಧನೆ ಅರ್ಧ ದಾರಿ ಪೂರ್ಣಗೊಂಡಂತೆ. ಪಾಲಕರು ಕನಿಷ್ಠ ಅರ್ಧ ಗಂಟೆಯಾದರೂ ಮಕ್ಕಳಿಗಾಗಿ ಮೀಸಲಿಟ್ಟರೆ ಉತ್ತಮ ಬುನಾದಿ ಹಾಕಲು ಸಹಾಯಕ ಎಂದು ತಿಳಿಸಿದರು.

ಮನುಷ್ಯ ತಪ್ಪು ಮಾಡುವುದು ಸಹಜ. ಅದನ್ನು ತಿದ್ದಿಕೊಳ್ಳಬೇಕು. ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ, ಸಾಧನೆಯ ಗುರಿ ತಲುಪಲು ಮುನ್ನುಗ್ಗಬೇಕು. ಒಳ್ಳೆಯ ಆಚಾರ, ವಿಚಾರ, ಸಂಪ್ರದಾಯವನ್ನು ರೂಢಿಸಿಕೊಳ್ಳಬೇಕು. ಯುವ ಕ್ರೀಡಾ ಪ್ರತಿಭೆಗಳಿಗೆ ಉತ್ತಮ ಮಾರ್ಗದರ್ಶನ, ತರಬೇತಿ ಮತ್ತು ಅದಕ್ಕೆ ಪೂರಕವಾದ ಪ್ರೋತ್ಸಾಹ ಅತ್ಯಗತ್ಯ ಎಂದು ಕಿರ್ಮಾನಿ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಅಂಜುಮನ್ ಸಂಸ್ಥೆ ಅಧ್ಯಕ್ಷ ಮಹಮ್ಮದ್ ಯುಸೂಫ್ ಸವಣೂರ, ಈದ್ಗಾ ಮೈದಾನ ಅಭಿವೃದ್ಧಿಗೆ ರೂ 5 ಲಕ್ಷ ನೀಡಲಾಗುವುದು ಎಂದು ಭರವಸೆ ನೀಡಿದರು.ದೈಹಿಕ ಶಿಕ್ಷಣ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಜಿ.ಆರ್. ಸಾಲಿಮಠ, ಕೆ.ಎಸ್. ಭೀಮಣ್ಣವರ, ಎಂ.ಬಿ. ಪಾಟೀಲ, ಶಕುಂತಲಾ ಕಾಶೀನಾಥ, ವಿ.ಎಚ್. ಕಲಾದಗಿ, ಹವಾಲ್ದಾರ, ಡಾ. ಸತೀಶ ಕನ್ನಯಾ, ಎ.ಎ. ಗರುಡ ಹಾಗೂ ಕ್ರೀಡಾಸಾಧಕರಾದ ಮೊಹಮ್ಮದ ಯೂಸೂಫ್ ಮುಲ್ಲಾ, ಎನೊಸಾ ಡೊಕ್ಕಾ, ಅಲ್ತಾಫ್ ನವಾಜ್ ಕಿತ್ತೂರ, ಆಸಿಫ್ ಇಕ್ಬಾಲ್ ಕುಸುಗಲ್, ಸನಾ ಮಳಗಿ, ಇಮ್ರಾನ್ ಮದಿನ್, ಆತೀಫ್ ವಡ್ಡು ಅವರನ್ನು ಸನ್ಮಾನಿಸಲಾಯಿತು.

ತರಬೇತಿದಾರ ಮನ್ಸೂರ್ ಅಲಿ ಖಾನ್, ಕವಿವಿ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಪ್ರತಾಪಸಿಂಗ್ ತಿವಾರಿ, ಕೆಎಸ್‌ಸಿಎ ಧಾರವಾಡ ವಲಯದ ಸಂಚಾಲಕ ಬಾಬಾ ಭೂಸದ ಉಪಸ್ಥಿತರಿದ್ದರು.ನಯೀಮುದ್ದೀನ್ ಶೇಖ್ ಕುರಾನ್ ಪಠಿಸಿದರು. ಸವಿತಾ ಮಾದರ ಶ್ಲೋಕಗಳನ್ನು ಹೇಳಿದರು. ಹನ್ನಾ ಬೈಬಲ್ ಪಠಣ ಮಾಡಿದರು. ಎಂ.ಎ. ನದೀಮುಲ್ಲಾ ಸ್ವಾಗತಿಸಿದರು. ಅಬ್ದುಲ್ ರೆಹಮಾನ್ ಗೆಹಲಟ್ ಭಾಗವಹಿಸಿದ್ದರು. ವಿ.ಎಚ್. ಕಲಾದಗಿ ಕಾರ್ಯಕ್ರಮ ನಿರೂಪಿಸಿದರು. ಎಂ.ಎ. ಪಠಾಣ ವಂದಿಸಿದರು. ಕಾರ್ಯಕ್ರಮದ ನಂತರ ಕಾಲೇಜಿನ ವಿದ್ಯಾರ್ಥಿಗಳು ದೇಹದಾರ್ಢ್ಯ ಪ್ರದರ್ಶನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT