ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀತಿ-ಪ್ರೇಮ- -ಪ್ರಣಯ-ಪ್ರಳಯ

Last Updated 19 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ನಾಳೆಯೇ ಪ್ರಳಯ!!ಆಗಷ್ಟೇ ಮೀಸೆಯ ಗೆರೆಗಳು ಮೂಡಿದ ಹದಿಹರೆಯದ ಹುಡುಗನಿಗೆ ಒಂದಷ್ಟು ಬೇಸರ, ದುಃಖ. ನಿಜ. ಬದುಕೆಂದರೆ ಏನು ಎಂಬುದು ಈಗಷ್ಟೇ ಅರ್ಥವಾಗುತ್ತಿದೆ. ಅಷ್ಟರೊಳಗೇ ಬಲಿಯಾಗಬೇಕೇ? ಆದರೂ ಆತ ಆಶಾವಾದಿ. ನಾಳೆ ನಿಜಕ್ಕೂ ಪ್ರಳಯವಾಗಲಿ, ಭೂಮಿ ಮುಳುಗಲಿ. ತೊಂದರೆಯಿಲ್ಲ ಮತ್ತೆ ಭೂಮಿ ಜನ್ಮವೆತ್ತಿ ಬರುತ್ತದೆ ಎಂದು.

ಹೇಳಿ ಕೇಳಿ ಯುವಶಕ್ತಿಯಿಂದ ತುಂಬಿ ತುಳುಕುತ್ತಿರುವ ದೇಶ ನಮ್ಮದು. ಹೀಗಾಗಿ ಅದು ಆತನೊಬ್ಬನದೇ ಕನಸಲ್ಲ. ಕನ್ನಡಿಯ ಮುಂದೆ ನಿಂತು ಭವಿಷ್ಯದ `ಆ್ಯಡಮ್'ನನ್ನು ತನ್ನೊಳಗೆ ಕಲ್ಪಿಸಿಕೊಳ್ಳುವುದರಲ್ಲಿ ಅನೇಕರು ಮಗ್ನರಾಗಿರಬಹುದು. `ಈವ್' ಯಾರಾಗಬೇಕು ಎಂಬ ಹುಡುಕಾಟವೂ ನಡೆದಿರಬಹುದು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಾರುಕಟ್ಟೆಯನ್ನೆಲ್ಲಾ ಸುತ್ತಾಡಿ ಸೇಬುಹಣ್ಣಿನ ಬೀಜಗಳನ್ನೂ ತಂದಿರಬಹುದು, ಮತ್ತೆ ಜನ್ಮತಾಳಿದಾಗ ನಾನೇ ನೆಟ್ಟುಬಿಡೋಣ ಎಂದು!

ಅದಕ್ಕೆ ಅಂತಿಮ ದಿನ ಇಂದು! ನಾಳೆ ಸಂಭವಿಸುವ ಪ್ರಳಯದ ಬಳಿಕ ಮತ್ತೆ ಭೂಮಿ ಅವತಾರವೆತ್ತಿ ಡಾರ್ವಿನ್ನನ ವಿಕಾಸವಾದವನ್ನು ನೆಚ್ಚಿಕೊಂಡೋ ಅಥವಾ ಅದಕ್ಕೆ ವಿರುದ್ಧವಾದ ಪ್ರಕ್ರಿಯೆಯಿಂದಲೋ ಜೀವಕೋಟಿ ಕಣ್ತೆರೆಯಬಹುದು. ಭೂಮಿ ಗೋಳಾಕಾರದ ಬದಲು ಆಯತಾಕಾರ ಸ್ವರೂಪದಲ್ಲೂ ಜನಿಸಬಹುದು. ಸೂರ್ಯನೇ ಪೃಥ್ವಿಗೆ ಪ್ರದಕ್ಷಿಣೆ ಹಾಕಬಹುದು. ಈಗಲೂ ಸೇಬುಹಣ್ಣಿನದೇ ಸರದಿ ಬರಬೇಕೆ? ಬೇರೆ ಹಣ್ಣು ಹಂಪಲುಗಳಿಗೂ ಅವಕಾಶ ಬೇಡವೇ? ಇನ್ನು, `ಆ ಮರ'ದ ಹಣ್ಣು ತಿನ್ನಬಾರದೆಂಬ ದೇವರ ಆಜ್ಞೆಯನ್ನು ಮುರಿಯುವುದು ಮತ್ತೆ ಹುಟ್ಟುವ ಮಾನವನಿಗೆ ಕಷ್ಟವಾಗಲಾರದು...

ಪ್ರಳಯಾನಂತರದ ಭೂಮಿ ಮತ್ತು ಜೀವವಿಕಾಸದ ಕುರಿತು ಏಳುವ ಕಲ್ಪನೆಗಳು ಫ್ಯಾಂಟಸಿ ಕಥೆಗಳಷ್ಟೇ ಸೊಗಸು. ಆಗ ತಾನೆ ಮಿಂದೆದ್ದು ಹಸಿರುಡುಗೆ ತೊಟ್ಟು ಬಂದ ವಸುಂಧರೆಯ ಮೈಮೇಲೆ ವರ್ಣಮಯ ಹೂದೋಟದ ಚಿತ್ತಾರ! ನಾದಲೋಕದ ಹೊಸ ಹುಟ್ಟಿಗೆ ಪ್ರೇರಣೆ ನೀಡುವಂತೆ ಹಕ್ಕಿಗಳ ಚಿಲಿಪಿಲಿಗೆ ದನಿ ನೀಡುವ ಜುಳು ಜುಳು ಜಲಧಾರೆ. ಸೂರ್ಯನೊಟ್ಟಿಗೇ ಹಾಜರಾಗುವ ಗಾಢ ಬಣ್ಣದ ಕಾಮನಬಿಲ್ಲು... ಒಂದೇ ಎರಡೇ... ಅಂಥ ಭವಿಷ್ಯದ ಕಾಲ್ಪನಿಕ ಜಗತ್ತಿನಿಂದ ಹಿಂದೆ ಬರೋಣ.

ದೇವರು, ದೆವ್ವ, ಸೃಷ್ಟಿ, ಲಯ, ಸ್ವರ್ಗ, ನರಕ ಎಂದೆಲ್ಲಾ ಪರಿತಪಿಸುವ ಅನೇಕರು ಈಗಾಗಲೇ ಪ್ರಳಯದ `ಸುಖ'ವನ್ನು ಅನುಭವಿಸುತ್ತಿದ್ದಾರೆ. ಪ್ರಳಯ ಆಗುವುದಿಲ್ಲ ಎಂದು ಹೊರಗೆ ಗಟ್ಟಿ ದನಿಯಲ್ಲಿ ಹೇಳುವವರೂ ದೇವರಕೋಣೆಯಲ್ಲಿ ಮಂತ್ರ ಜಪಿಸುತ್ತಾ, ಹಾಗಾಗದಿರಲಿ ಎಂದು ತುಪ್ಪದ ದೀಪ ಹಚ್ಚುತ್ತಿದ್ದಾರೆ! ಏಳೇಳು ಜನುಮದ ಜೀವನದಲ್ಲಿ ತಮ್ಮದಿನ್ನೂ ಆರು ಬಾಕಿ ಉಳಿದಿದೆ. ಹೀಗಾಗಿ ಪ್ರಳಯ ಆದರೂ ಮತ್ತೆ ಹುಟ್ಟುತ್ತೇವೆ ಎಂಬ ಮೊಂಡು ನಂಬಿಕೆ ಹಲವರದು. 

ಪ್ರಳಯ ಮೂಡಿಸಿದ ಭೀತಿಯ ಪರಿ ಹೊಸತೇನಲ್ಲವಲ್ಲ. ಈಗಾಗಲೇ ಹತ್ತಾರು ಬಾರಿ ಭೂಮಿ ಛಿದ್ರವಾಗಿ, ಮುಳುಗಿ ಹೋಗಿರಬೇಕಿತ್ತು. ಅಷ್ಟು ಬಾರಿ ಪ್ರಳಯದ ದಿನಾಂಕಗಳನ್ನು ಕೇಳಿದ್ದೇವೆ. ಆದರೂ ಅದನ್ನು ಮುಂದೂಡುತ್ತಲೇ ಬರಲಾಗುತ್ತಿದೆ. ಎಲ್ಲೋ ಭೂಮಿ ನಡುಗಿದಾಗಲೋ, ಇನ್ನೆಲ್ಲೋ ಸಾಗರದ ಅಲೆ ಆಗ ತಾನೆ ಹೆಜ್ಜೆ ಹಾಕಲು ಕಲಿತ ಯುವಕ ಹುಚ್ಚೆದ್ದು ಕುಣಿದಂತೆ    

ಚಿಮ್ಮಿನರ್ತಿಸಿದಾಗಲೋ ಭೂತಳ ಸಿಡಿದಂತೆ, ನೀರು ನಮ್ಮತ್ತಲೇ ಧುಮ್ಮಿಕ್ಕಿ ಬಂದಂತೆ, ಆಗಸಕ್ಕೆ ತೂತು ಬಿದ್ದ ಹಾಗೆ ಒಂದೇ ಸಮನೆ ಮಳೆ ಸುರಿದು, `ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ' ಎಂಬ ಪ್ರೇಮ ಕನವರಿಕೆಗಳೆಲ್ಲಾ ತೋಯ್ದು ೂಚ್ಚಿಕೊಂಡು ಹೋದಂತೆ, ಗಾಳಿ, ಮಣ್ಣು, ನೀರು, ಗಿಡ ಮರ, ಪ್ರಾಣಿ ಪಕ್ಷಿಗಳ ದೇಹವೆಲ್ಲಾ ವ್ಯತ್ಯಾಸವಿಲ್ಲದೆ ಬೆರೆತು ಗೊತ್ತುಗುರಿಯಿಲ್ಲದೆ ಇನ್ನೆಲ್ಲಿಗೋ ಸೆಳೆದು ಒಯ್ಯುತ್ತಿವೆಯೇನೂ ಎಂಬಂತೆ... ಪ್ರಳಯ ಸಂಭವಿಸಿತೇ ಬಿಟ್ಟಿತು ಎಂದು ಒಂದು ಕ್ಷಣ ನಮ್ಮನ್ನು ಭ್ರಮಾಲೋಕ ಆವರಿಸಿಕೊಳ್ಳುತ್ತದೆ. ಪ್ರಳಯದ ನಮ್ಮ ಕಲ್ಪನೆಗೆ ಇಂಬು ಕೊಡುವಂತೆ ಪ್ರಕೃತಿ ಅವಘಡಗಳು ಹೆದರಿಸುತ್ತಿರುತ್ತವೆ.

ಐದು ಶತಮಾನಗಳ ಹಿಂದೆ ನಾಸ್ಟ್ರಾಡಾಮಸ್ ನುಡಿದ ಭವಿಷ್ಯವಾಣಿಗಳು ನಿಜವಾಗಿವೆಯಂತೆ. ಪ್ರಪಂಚ ಕೊನೆಗೊಳ್ಳಲಿದೆ ಎಂಬುದೇ ಆತನ ಬಾಕಿ ಉಳಿದಿರುವ ಭವಿಷ್ಯವಾಣಿ ಇರಬಹುದು. ಮಯಾನ್ ಕ್ಯಾಲೆಂಡರ್ ಕೂಡ 2012ರ ಡಿಸೆಂಬರ್ 21ಕ್ಕೆ ಭೂಮಿ `ಶಟ್‌ಡೌನ್' ಆಗುತ್ತದೆ ಎಂಬುದನ್ನು ಸೂಚಿಸಿದೆಯಂತೆ. ಇಂಥ ಭವಿಷ್ಯವಾಣಿಗಳಿಗೆ ಲೆಕ್ಕವಿಲ್ಲ. ಫುಟ್‌ಬಾಲ್‌ನ ಭವಿಷ್ಯ ಹೇಳುತ್ತಿದ್ದ ಆಕ್ಟೋಪಸ್ ಪಾಲ್‌ನಂತಹವರು ನಮ್ಮಲ್ಲಿ ಗಲ್ಲಿಗಲ್ಲಿಗೂ ಇದ್ದಾರೆ. ಜಪಾನಿನಲ್ಲಿ ಸುನಾಮಿ ಬರಲು ಸರ್ಪದೋಷ ಕಾರಣವಂತೆ! ಅಲ್ಲಿ ಹೋಮ ಹವನಗಳು ನಡೆಯುವಂತಿದ್ದರೆ ದೋಷ ಪರಿಹಾರವಾಗುತ್ತಿತ್ತೇನೋ.

ನಾನು ಪಾಪ ಮಾಡಿದ್ದೇನೆ ಎಂದು ಅರಿವಿದ್ದವರು ಯಜ್ಞ ಯಾಗಾದಿಗಳಲ್ಲಿ ನಿರತರಾಗಿದ್ದಾರೆ. ಕಡೇ ಗಳಿಗೆಯಲ್ಲಿ ದೈವವನ್ನು ಸಂತೃಪ್ತಿಗೊಳಿಸುವುದರಿಂದ ಆತ ಅಪರಾಧಗಳನ್ನೆಲ್ಲ ಮನ್ನಿಸಿ ಸ್ವರ್ಗದ ಬಾಗಿಲು ತೆರೆಯುತ್ತಾನೆ ಎಂಬ ಅತೀವ ವಿಶ್ವಾಸ. ಲಾಭ ಯಾರಿಗೆ, ನಷ್ಟ ಯಾರಿಗೆ ಎಂಬ ಪ್ರಶ್ನೆಗಿಲ್ಲಿ ಜಾಗವಿಲ್ಲ. ಎಷ್ಟು ಜನರನ್ನು ಭಯಭೀತರನ್ನಾಗಿಸಿದೆಯೋ ಹಾಗೆಯೇ, `ಹೇಗಿದ್ದರೂ ಹೋಗುತ್ತೇವೆ, ಒಂದಷ್ಟು ಮಜಾ ಮಾಡಿ ಹೋಗೋಣ' ಎಂಬ ಭಂಡತನದ ಅನಾಹುತಕಾರಿ ಕೆಲಸಗಳಿಗೆ ಪ್ರೇರಣೆ ನೀಡುವಲ್ಲಿ ಪ್ರಳಯದ ಪಾತ್ರ ದೊಡ್ಡದು.

ಸಾಯುವ ಮುನ್ನ ಪ್ರಳಯವನ್ನು ಕಣ್ತುಂಬಿಕೊಳ್ಳಬೇಕು ಎನ್ನುವುದು ಹಲವರ ಆಸೆ. ಸಾಮಾನ್ಯ ಸಾವಿಗಿಂತ ಇಂಥದೊಂದು ಅದ್ಭುತ

ವಿಸ್ಮಯವನ್ನು ನೋಡಿ ಸಾಯುವುದು ಮೇಲು. `ನಿಜಕ್ಕೂ ಪ್ರಳಯ ಆಗುತ್ತಿದೆ ಎಂಬುದು ಗೊತ್ತಾದ ಕೂಡಲೇ ನನಗೊಂದು ಎಸ್‌ಎಂಎಸ್ ಹಾಕಿ. ನನ್ನ ಪ್ರೀತಿಪಾತ್ರರೊಂದಿಗೆ ದೊಡ್ಡಬೆಟ್ಟವನ್ನೇರಿ ಅದು ಹೇಗೆ ನಮ್ಮನ್ನು ಆವರಿಸುತ್ತದೆ ಎಂಬುದನ್ನು ನೋಡುತ್ತೇನೆ ಎನ್ನುತ್ತಾರೆ ಹೃದಯ ತಜ್ಞ ಡಾ. ನಿಸರ್ಗ. 

ದಿನನಿತ್ಯವೂ ಸಾವು ನಮ್ಮ ಬೆನ್ನ ಹಿಂದೆಯೇ ಇರುತ್ತದೆ. ಆದರೆ ಅದರ ಕುರಿತು ನಾವು ಚಿಂತಿಸುವುದಿಲ್ಲ. ಒಂದು ಗ್ರಹದ ನಾಶ ಮತ್ತೊಂದು ಗ್ರಹದ ಹುಟ್ಟಿಗೆ ಕಾರಣವಾಗುತ್ತದೆ ಎಂದರೆ ನಾವು ಸ್ವಾರ್ಥಿಗಳಾಗದೆ ಅದನ್ನು ಒಪ್ಪಿಕೊಳ್ಳಬೇಕು ಎನ್ನುವ ಅವರು, ಸಕಲ ಜೀವ ಸಂಕುಲಗಳೆಲ್ಲವೂ ಎಂಬ ಸಮಾನತೆಯ ತತ್ವ ಅಂತ್ಯದ ಮೂಲಕವಾದರೂ ಈಡೇರಿದರೆ ಅದಕ್ಕಿಂತ ಸಂತೋಷ ಬೇರೇನು ಬೇಕು ಎನ್ನುತ್ತಾರೆ. ನಾಳೆ ಕಳೆದುಹೋಗುವ ಗ್ರಹದ ಕೊನೆಯ ರಾತ್ರಿ ನಕ್ಷತ್ರಗಳನ್ನೆಣಿಸುವ ವಿಶಿಷ್ಟ ಬಯಕೆಯೂ ಅವರಲ್ಲಿದೆ.

ದಿನಾ ಒಂದಿಲ್ಲೊಂದು ರೀತಿಯಲ್ಲಿ ಪ್ರಳಯ ಆಗುತ್ತಲೇ ಇದೆ. ಅದನ್ನೇ ಯೋಗರಾಜ ಭಟ್ `ಬೇಕಿಲ್ಲ ಪ್ರಳಯಕೆ ಕಾಯೋದಿನ್ನು, ತುಂಡ್

ಹೈಕ್ಳು ಮುಗಿಸ್ತಾರೆ ಊರನ್ನು...' ಎಂದು ಗೀತೆಯ ರೂಪದಲ್ಲಿ ಹೇಳಿರುವುದು. ಅದರ ತಾತ್ಪರ್ಯ ಮಂಡ್ಯದ ತುಂಡು ಹೈಕಳಿಗೆ ಮಾತ್ರ ಸೀಮಿತವಲ್ಲ. ಸಾರ್ವತ್ರಿಕವಾಗಿ ಅನ್ವಯವಾಗುವಂಥದ್ದು. `ಪ್ರಳಯಾನೂ ಆಗಲ್ಲ, ಮಣ್ಣೂ ಆಗಲ್ಲ. ಬಿಡಿ' ಎಂದು ಅದರ ಕುರಿತು ಎಳ್ಳಷ್ಟೂ ನಂಬಿಕೆಯಿಲ್ಲದೆ ಹೇಳುವ ಜನರೂ ಸಾಕಷ್ಟಿದ್ದಾರೆ. `ಡಿ.21ಕ್ಕೆ ಪ್ರಳಯ ಆಗುತ್ತಾ? ಎಂಬ ಪ್ರಶ್ನೆಗೆ ನನ್ನ ಉತ್ತರ ನಗು.

ಪ್ರಳಯ ಆಗೋದಕ್ಕೆ ಸಾಧ್ಯವೇ ಇಲ್ಲ. ಅದೆಲ್ಲಾ ಮೂಢನಂಬಿಕೆ. ಅಕಸ್ಮಾತ್ ಪ್ರಳಯ ಆದ್ರೆ ಆರಾಮಾಗಿ ಎದುರುಗೊಳ್ಳುವೆ'

ಎನ್ನುವುದು ನಿರ್ದೇಶಕ ಟಿ.ಎನ್. ಸೀತಾರಾಮ್ ಮಾತು. `ಪ್ರಳಯ ಆಗಲು ವೈಜ್ಞಾನಿಕ ಕಾರಣ ಇರಬೇಕು. ಅಂಥ ಯಾವ ಆಧಾರಗಳು ಇದುವರೆಗೂ ಸಿಕ್ಕಿಲ್ಲ. ಭಾವನಾತ್ಮಕ ಮಾತುಗಳನ್ನು ನಾನು ನಂಬುವುದಿಲ್ಲ. ಪ್ರಳಯ ಆಗುತ್ತದೆ ಎಂಬುದು ಅಸಾಧ್ಯ' ಎಂದು ದನಿಗೂಡಿಸುತ್ತಾರೆ ಗಾಯಕ ಶಿವಮೊಗ್ಗ ಸುಬ್ಬಣ್ಣ.

ಆದರೆ ಪ್ರಳಯ ಮಂತ್ರ ಜಪಿಸುವವರ ಸಂಖ್ಯೆಯ ಮುಂದೆ ಅರಿವು ಮೂಡಿಸುವವರ ಸಾಹಸಗಳೆಲ್ಲ ಗೌಣ. ವೈಜ್ಞಾನಿಕ ಸತ್ಯಗಳನ್ನು ಪರಾಮರ್ಶಿಸುವ ಗೋಜಿಗೆ ಹೋಗುವುದಿಲ್ಲ. `ಸಾವಿನ ಭಯವನ್ನೂ ಮನುಕುಲ ಸಂಭ್ರಮಿಸುತ್ತಿದೆ' ಎಂದು ವಿಶ್ಲೇಷಿಸುತ್ತಾರೆ ಚಿತ್ರ ನಿರ್ದೇಶಕ ಗುರುಪ್ರಸಾದ್. `ಪ್ರಪಂಚದ ಅತಿ ದೊಡ್ಡ ಸಮೂಹ ಅಪ್ರಬುದ್ಧರದು. ಇಲ್ಲಿ ಬುದ್ಧಿವಂತರಿಗಿಂತ ಪೆದ್ದರೇ ಜಾಸ್ತಿ. ಯಾರೋ ಹೇಳುವ ಪ್ರಳಯದಿಂದ ಸಂಗತಿಗಳು ಅವರ ಪಾಲಿಗೆ ಕಾಲಹರಣಕ್ಕಾಗಿ ಮಹತ್ವದ ಸಂಗತಿಗಳಾಗುತ್ತವೆ' ಎನ್ನುತ್ತಾರೆ ಅವರು.

ಹತ್ತು ಹಲವು ಧರ್ಮಗಳು, ಶತಕೋಟಿ ದೇವತೆಗಳು, ನೂರಾರು ಬಗೆಯ ಆರಾಧನೆಗಳಿದ್ದರೂ ಪ್ರಳಯದ ಮುಂದೆ ಎಲ್ಲರೂ ಒಂದೇ. ಧಾರ್ಮಿಕ ಗ್ರಂಥಗಳತ್ತ ಕಣ್ಣುಹಾಯಿಸಿ ಏನೂ ಆಗುವುದಿಲ್ಲ ಎಂದು ನಿಟ್ಟುಸಿರು ಬಿಡುವವರ ಹೃದಯ ಬಡಿತ ಚಾನೆಲ್‌ನಲ್ಲೋ, ಪತ್ರಿಕೆಯಲ್ಲೋ ಪ್ರಳಯದ ಸುದ್ದಿ ನೋಡಿದಾಗ ದ್ವಿಗುಣಗೊಳ್ಳುತ್ತದೆ. ಇನ್ನು ಕೆಲವರಿಗೆ ಧರ್ಮ ಗ್ರಂಥಗಳ ಮೇಲೆ ಬಲವಾದ ನಂಬಿಕೆ. ಅಲ್ಲಲ್ಲಿ ಯುಗಾಂತ್ಯದ ಬಗ್ಗೆ ಉಲ್ಲೇಖಗಳಿವೆ. ಲೆಕ್ಕಾಚಾರದ ಪ್ರಕಾರ ಕಾಲ ಸಮೀಪಿಸುತ್ತಿದೆ ಎಂದು ಹಲವರ ಮನದೊಳಗೆ ಪ್ರಳಯ ಸಂಭವಿಸಿಯಾಗಿದೆ. `ಪ್ರಳಯ ಆಗುತ್ತದೆ ಎಂಬ ನಂಬಿಕೆ ಇಲ್ಲ.

ಪ್ರಳಯ ಆದ್ರೆ ನನಗೇನೂ ಅಳುಕಿಲ್ಲ. ನಾನು ಯಾವುದನ್ನೂ ಪ್ಲಾನ್ ಮಾಡಲ್ಲ. ಅದರಿಂದ ನನಗೆ ಅಂಥ ನಿರೀಕ್ಷೆಗಳೂ ಇಲ್ಲ. ಭಗವದ್ಗೀತೆಯಲ್ಲಿ ಇನ್ನು ನಾಲ್ಕು ಲಕ್ಷ ವರ್ಷಗಳವರೆಗೆ ಭೂಮಿಗೆ ಏನೂ ಆಗುವುದಿಲ್ಲ ಎಂದು ಬರೆದಿದ್ದಾರೆ ಅಂತ ಅಮ್ಮ ಹೇಳ್ತಿದ್ರು. ಅದರಿಂದ ಪ್ರಳಯ ಆಗಲ್ಲ ಅನ್ಸುತ್ತೆ' ಎನ್ನುವ ನಟಿ ಸಿಂಧು ಲೋಕನಾಥ್ ಅದಕ್ಕೊಂದು ಉದಾಹರಣೆ. ಆರು ತಿಂಗಳ ಹಿಂದೆ ಪ್ರಳಯ ಆಗುತ್ತೆ ಎಂದು ಭವಿಷ್ಯ ಹೇಳಿದ್ದ ಕೆಲವರು ಇಂದು ಮಾತು ಬದಲಿಸುತ್ತಿದ್ದಾರೆ. ಒಂದು ಪಕ್ಷ ಆಗೋದೆ ಆದ್ರೆ ಎಲ್ಲರಿಗೂ ಆಗೋದೇ ಆಗುತ್ತೆ. ದೇವರ ಮುಂದೆ ಯಾರೂ ವಿಶೇಷವಲ್ಲ ಎನ್ನುತ್ತಾರೆ ಗಾಯಕ ಬದ್ರಿ ಪ್ರಸಾದ್.

ಪ್ರಳಯವಾಗುವ ಮುನ್ನವೇ ಅದರ ಹೆಸರಿನಲ್ಲಿ ಏನೆಲ್ಲಾ `ಪ್ರಳಯ'ಗಳಾಗಿದ್ದರೂ ಅದೊಂದು ಆದಾಯ ಸೃಷ್ಟಿಯ ಮೂಲವಾಗಿರುವುದರಿಂದ ತಾತ್ಕಾಲಿಕವಾಗಿ ಅದನ್ನು ಮುಂದೂಡುತ್ತಲೇ ಬರಲಾಗುತ್ತಿದೆ. `ಹೌ ಟು ಸರ್ವೈವ್ 2012', `ಅಪೊಕಾಲಿಪ್ಸ್ 2012', `ದಿ ಓರಿಯನ್ ಪ್ರೊಫೆಸಿ', `ಅನ್‌ಲಾಕಿಂಗ್ ದಿ ಸೀಕ್ರೆಟ್ಸ್ ಆಫ್ 2012'- ಹೀಗೆ, ಪ್ರಳಯ ಆಗುತ್ತದೆ, ಆಗುವುದಿಲ್ಲ, ಆದರೂ ಆಗಬಹುದು ಹೀಗೆ ಕೆಲವು ವಸ್ತುನಿಷ್ಠ ಅಧ್ಯಯನದ, ಇನ್ನು ಕೆಲವು ಕಾಲ್ಪನಿಕವಾದ ಸಾವಿರಾರು ಪುಸ್ತಕಗಳು ಹೊರಬಂದಿವೆ. ಇವುಗಳ ಮಾರಾಟ ಭರಾಟೆಯೂ ಜೋರು.

ಭವಿಷ್ಯವಾದಿಗಳಿಗೆ ರತ್ನಗಂಬಳಿ ಹಾಸುವ ಟೀವಿ ವಾಹಿನಿಗಳಿಗಂತೂ ಬಿಡುವಿಲ್ಲದ ಕೆಲಸ. ರಾಶಿ, ಗ್ರಹಗಳ ಲೆಕ್ಕಾಚಾರ ಹಾಕಿ ಪ್ರಳಯ ಸಂಭವಿಸಲಾರದು ಎಂದು ಭವಿಷ್ಯ ನುಡಿಯುವರೊಬ್ಬರು ಬೆಳಿಗ್ಗೆ ಹಾಜರಾದರೆ, ಸಂಜೆ ವೇಳೆ ಅದೇ ಚಾನೆಲ್‌ನಲ್ಲಿ ಪ್ರಳಯ ಹೇಗೆ ಸಂಭವಿಸುತ್ತದೆ ಎಂದು ಮತ್ತೊಬ್ಬರು ಅದು ಸಂಭವಿಸದೇ ಇರಲು ಸಾಧ್ಯವೇ ಇಲ್ಲ ಎನ್ನುವಂತೆ ವಾದ ಮಂಡಿಸುತ್ತಾರೆ. ಟಿಆರ್‌ಪಿ ಹೆಚ್ಚು ಇರುವುದು ಪ್ರಳಯದ ಪರವಾಗಿಯೇ ಹೊರತು ವಿರುದ್ಧವಾಗಿ ಅಲ್ಲ!

`ಸದ್ಯ ಪ್ರಳಯಕ್ಕಿಂತ ಮುಂಚೆ ನನ್ನ `ಎದೆಗಾರಿಕೆ' ಚಿತ್ರ ಬಿಡುಗಡೆ ಮಾಡಿದೆ ಎಂದು ಸಮಾಧಾನ ಆಗುತ್ತಿದೆ ಎಂದು ನಗುತ್ತಾರೆ

ನಿರ್ದೇಶಕಿ ಸುಮನಾ ಕಿತ್ತೂರು. ಪ್ರಳಯ ಆಗೋದೆ ಆದ್ರೆ ಅದು ಮನುಷ್ಯನ ಒಳಗೆ ಆಗಬೇಕು. ಪ್ರತಿಯೊಬ್ಬರ ಆತ್ಮದೊಳಗೂ ಎಲ್ಲರೂ ಸರಿಸಮಾನರು ಎಂಬ ಬದಲಾವಣೆಯ `ಪ್ರಳಯ' ಆಗಬೇಕು ಎನ್ನುವುದು ಅವರ ಆಶಯ.

ಪ್ರಳಯ ಭವಿಷ್ಯದ ಭಯವಾದ ಕಾರಣ ವರ್ತಮಾನದ ಬಹು ಚರ್ಚಿತ ವಿಷಯ. ಎಷ್ಟೇ ಗಂಭೀರವಾಗಿ ಚರ್ಚಿಸಿದರೂ ಅಂತ್ಯ ಕಾಣುವುದು ವಿಡಂಬನೆಯಿಂದಲೇ. ಹೀಗಾಗಿಯೇ ಪ್ರಳಯದ ಕುರಿತಂತೆ ಅನೇಕ ಜೋಕುಗಳು ಹುಟ್ಟಿಕೊಂಡಿವೆ. `ಜಾಗತಿಕ ತಾಪಮಾನ ನಿವಾರಣೆಗೆ ಒಂದೇ ಮಾರ್ಗ; ಪ್ರಳಯ', `ನರಕದಲ್ಲಿ ಸ್ಥಳಾವಕಾಶ ಇಲ್ಲದ ಕಾರಣ ಸಂಭವಿಸಬೇಕಿದ್ದ ಪ್ರಳಯವನ್ನು ಒಂದು ವರ್ಷದ ಮಟ್ಟಿಗೆ ಮುಂದೂಡಲಾಗಿದೆ'- ಇಂತಿ ಯಮಧರ್ಮರಾಯ. ಹೀಗೆ. `ಪ್ರಳಯ ಆಗುವುದು ಖಚಿತ' ಎಂದು ಆಸ್ಟ್ರೇಲಿಯಾ ಪ್ರಧಾನಿ ಜೂಲಿಯನ್ ಗಿಲ್ಲಾರ್ಡ್ ಹೇಳಿದ್ದು ಕೆಲವರಿಗೆ ತಮಾಷೆಯಾಗಿ ಕಂಡಿದೆ.

`ನಮ್ಮೂರಲ್ಲಿ ಇಷ್ಟೊಂದು ಜನ ಸಿನಿಮಾ ನಿರ್ದೇಶಕರು, ಕನ್ನಡ ಸಿನಿಮಾಗಳು, ಕನ್ನಡ ಪತ್ರಿಕೆಗಳು, ಟೀವಿಗಳು ಇರುವಾಗ ಮತ್ತೆ ಪ್ರಳಯವಾಗುವ ಅವಶ್ಯಕತೆಯೇ ಇಲ್ಲ. ಸಾಂಸ್ಕೃತಿಕ ಮತ್ತು ಸಾಮಾಜಿಕ ಪ್ರಳಯ ಎಂದೋ ಆಗಿಬಿಟ್ಟಿದೆ. ಮುಳುಗಿಸಲು ಬಂದ ನೀರು ನಮ್ಮನ್ನು ಕಂಡು ಖಂಡಿತಾ ಓಡಿ ಹೋಗುತ್ತದೆ. ನಾವೀಗಾಗಲೇ ಒಂದು ರೀತಿಯಲ್ಲಿ ಸತ್ತು ಹೋದವರು. ನಮ್ಮನ್ನೇನು ಮತ್ತೆ ಸಾಯಿಸುವುದು? ಇನ್ನೊಂದು ರೀತಿಯಲ್ಲಿ ಇನ್ನೂ ಬದುಕಿರುವ ನಮ್ಮಂಥವರನ್ನು ಸಾಯಿಸೋಕೆ ಪ್ರಳಯಕ್ಕೆ ಆಗೊಲ್ಲ ಬಿಡಿ' ಎನ್ನುತ್ತಾರೆ ಯೋಗರಾಜ್ ಭಟ್.

`ಅಕಸ್ಮಾತ್ ಪ್ರಳಯ ಆಗೋದು ಖಚಿತವಾದರೆ ಹಾಡಿನ ಶೂಟಿಂಗ್ ಹಾಕಿಕೊಳ್ಳುತ್ತೇನೆ. ಪ್ರತಿ ಸಲವೂ ಚಿತ್ರೀಕರಣಕ್ಕಾಗಿ ನಾವೇ ನೀರಿನ ಬಳಿ ಹೋಗಬೇಕು. ಆದರೆ ನೀರು ಅದಾಗಿಯೇ ನಮ್ಮ ಬಳಿ ಬಂದಾಗ ನಾವ್ಯಾಕೆ ಬಿಡಬೇಕು? ಇದೆಲ್ಲವೂ ಪ್ರಕೃತಿ ಸೃಷ್ಟಿ. ಲಯವೂ ಅಷ್ಟೆ. ಪ್ರಳಯವಾಗೋದಾದರೆ ಅದರ ಪಾಡಿಗೆ ಆಗಲಿ. ನಮ್ಮ ಪಾಡಿಗೆ ನಾವಿದ್ದರಾಯಿತು. `ಪ್ರಳಯ ಆದರೆ ನೀರು... ಇಲ್ಲದಿದ್ದರೆ ಬೀರು...' ಎಂದು ಅಂಬರೀಷಣ್ಣ ಹೇಳಿದ್ದಾರೆ. ಅದೇ ತತ್ವ ನನ್ನದು. ನೀವೂ ಕೈಜೋಡಿಸಿ, ದೋಣಿ ಮಾಡಿಕೊಂಡು ನೀರಮೇಲೆ ಸಾಗೋಣ' ಎಂಬ ಪ್ರಳಯಕ್ಕೇ ಪ್ರಳಯವಾಗುವಂಥ ನಿಲುವು ಭಟ್ಟರದು!

ನಾಳೆ ಪ್ರಳಯ ಆಗೋಕೆ ಸಾಧ್ಯಾನೇ ಇಲ್ಲ. ಏಕೆಂದರೆ ನನ್ನ ಚಿತ್ರ `ಡೈರೆಕ್ಟರ್ಸ್‌ ಸ್ಪೆಷಲ್' ಬಿಡುಗಡೆಯಾಗೋದು ಸಂಕ್ರಾಂತಿಯಂದು. ಅಲ್ಲಿಯವರೆಗೂ ಆಗೊಲ್ಲ ಎನ್ನುವ ನಿರ್ದೇಶಕ ಗುರುಪ್ರಸಾದ್, ಸಕಾರಾತ್ಮಕ ಉದ್ದೇಶಕ್ಕಾಗಿ ಪ್ರಳಯ ಆಗಲಿ ಎಂದು ಪ್ರಾರ್ಥಿಸುತ್ತಾರಂತೆ. ಪ್ರಪಂಚ `ವಾಟರ್‌ವಾಷ್' ಆಗಲಿ. ಫ್ರೆಶ್ ಆಗಿ ಭೂಮಿ ಮತ್ತೆ ಅವತಾರವೆತ್ತಲಿ. ಮನುಷ್ಯರೂ ಹುಟ್ಟುವಂತಾಗಲಿ. ಕನ್ನಡ ಚಿತ್ರರಂಗವೂ ಮತ್ತೆ ಬೆಳೆಯಲಿ ಎಂದು ಆಶಿಸುತ್ತಾರೆ.

ಇಷ್ಟೆಲ್ಲಾ ಮಾತನಾಡಿದರೂ ಪ್ರಳಯ ಅಂದರೆ ಏನು? ಹೇಗೆ ಸಂಭವಿಸುತ್ತದೆ? ಆಮೇಲೆ ಏನು? ಇತ್ಯಾದಿ ಸಂದೇಹಗಳಿಗೆ ನಿಖರ ಉತ್ತರಗಳಂತೂ ಇದುವರೆಗೆ ಸಿಕ್ಕಿಲ್ಲ. ಪ್ರೀತಿ-ಪ್ರೇಮ-ಪ್ರಣಯ-ಪ್ರಳಯ ಇದೆಲ್ಲವೂ ಒಂದೇ ಎನ್ನುವುದು ಅನುಭವಸ್ಥರ ಮಾತು. ಇನ್ನೂ ಪ್ರಳಯವನ್ನು ಕಣ್ಣಾರೆ ನೋಡದಿದ್ದರೂ ಅದು ಈ ಮೂರು `ಸಂತೋಷದ ಅವಘಡ'ಗಳಿಗಿಂತ ಬೇರೆಯದಲ್ಲ. ಹಿರೀಕರ ಅನುಭವದ ಪ್ರಕಾರ ಹಾಗೆಯೇ ಇರಬಹುದು. ಹಾಗಂತ ನೇರವಾಗಿ ಪ್ರಳಯವನ್ನೇ ಎದುರಿಸಿ ಎಂದರೆ ಹೇಗೆ ಎಂಬ ಪ್ರಶ್ನೆ ಪ್ರಳಯಾಂತಕಾರಿ ತುಂಡ್ ಹೈಕ್ಳದ್ದು! 
 

ಹೀಗೆಲ್ಲಾ ಪ್ರಳಯ ಆಗುತ್ತೆ ಅಂತ ನಂಬಲ್ಲ. ಪರಿಸರ ಮಾಲಿನ್ಯದಿಂದ ಒಂದಲ್ಲಾ ಒಂದು ದಿನ ಪ್ರಳಯ ಆಗಿಯೇ ತೀರುತ್ತದೆ. ಅಂಥ ಪಶ್ಚಾತ್ತಾಪದ ದಿನ ಬಂದೇ ಬರುತ್ತೆ. ನಾಳೆಯೇ ಪ್ರಳಯ ಆಗಲಿದೆ ಎಂಬ ಮುನ್ಸೂಚನೆ ಬಂದರೆ ನನಗೆ ನನ್ನ ಮಗಳೊಬ್ಬಳದೇ ಚಿಂತೆ. ಇಬ್ಬರೂ ಒಟ್ಟಿಗೆ ಹೋದರೆ ತೊಂದರೆ ಇಲ್ಲ. ಅವಳೊಬ್ಬಳು ಉಳಿದುಬಿಟ್ಟರೆ ಕಷ್ಟ. 

 ಕವಿತಾ ಲಂಕೇಶ್, ಸಿನಿಮಾ ನಿರ್ದೇಶಕಿ

ದೈವಲೀಲೆಯನ್ನು ನಿಲ್ಲಿಸುವವರು ಯಾರೂ ಇಲ್ಲ. ಡಿ.21ರಂದು ಪ್ರಳಯ ಆಗುತ್ತೆ ಅನ್ನೋ ನಂಬಿಕೇನೂ ನನಗಿಲ್ಲ. ಆಗೋದೇ ಆದ್ರೆಅದನ್ನು ಸಕಾರಾತ್ಮಕವಾಗಿ ಎದುರಿಸುವೆ. ಸಾವು ನನ್ನಲ್ಲಿ ಭಯ ಹುಟ್ಟಿಸಿಲ್ಲ.
ಸಾಯಿಪ್ರಕಾಶ್, ಸಿನಿಮಾ ನಿರ್ದೇಶಕ

ಭೂಮಿಯ ಸಾವನ್ನು ಮನುಷ್ಯ ನಿರ್ಧರಿಸಲು ಸಾಧ್ಯವಿಲ್ಲ. ಮನುಷ್ಯ ಅಲ್ಪ ಆಯುಷಿ. ಭೂಮಿಗೆ ಲಕ್ಷಾಂತರ ವರ್ಷ ವಯಸ್ಸಾಗಿದೆ. ಅದು ತನ್ನಷ್ಟಕ್ಕೆ ಉಗಮ ಮತ್ತು ಪುನರ್ ನವೀಕರಣ ಮಾಡಿಕೊಳ್ಳುತ್ತ ಇರುತ್ತದೆ. ಕ್ಯಾಲೆಂಡರ್ ಸಂಖ್ಯೆಗಳಿಗೆ ನಾನು ಬೆಲೆ ಕೊಡುವುದಿಲ್ಲವಾದ ಕಾರಣ ಪ್ರಳಯ ಆಗುವುದಿಲ್ಲ ಎಂದು ಖಂಡಿತವಾಗಿ ಹೇಳಬಲ್ಲೆ. ಕೆಲಸ ಮಾಡುತ್ತಲೇ ಹೋಗಿ ಬಿಡಬೇಕು ಎಂಬಾಸೆ ನನ್ನದು. ಜಯತೀರ್ಥ, ಸಿನಿಮಾ ನಿರ್ದೇಶಕ

ಪ್ರಳಯ ಆಗೋದೆ ಆದ್ರೆ ಎಲ್ಲರಿಗೂ ಆಗೋದು ನಮಗೂ ಆಗುತ್ತೆ ಅಷ್ಟೇ. ನಾನೊಬ್ಬಳು ಅದರಲ್ಲಿ ಏನೂ ಮಾಡೋಕಾಗಲ್ಲ. ಅಂಥ ದಿನ ಬಂದರೆ ದೇವರ ಧ್ಯಾನ ಮಾಡ್ತೀನಿ. ಸಂಗೀತ ಕೇಳ್ತೀನಿ. ನಿಸರ್ಗದ ಮುಂದೆ ಯಾರೂ ಏನೂ ಮಾಡೋಕಾಗಲ್ಲ.ಅನುರಾಧಾ ಭಟ್, ಹಿನ್ನೆಲೆ ಗಾಯಕಿ

ಖಂಡಿತ ಪ್ರಳಯ ಆಗಲ್ಲ. ಅಲ್ಲಲ್ಲಿ ಪ್ರಾಕೃತಿಕ ವಿಕೋಪಗಳಾಗಬಹುದು ಅಷ್ಟೇ. ಪ್ರಳಯ ಆಗುತ್ತದೆ ಎಂದುಕೊಂಡರೆ ಸಾಕು ನಗು ಬರುತ್ತದೆ. ಅಂದು ನನ್ನ ತಂದೆ- ತಾಯಿಯ ವಿವಾಹ ವಾರ್ಷಿಕೋತ್ಸವ. ನಾವೆಲ್ಲಾ ಗೆಳೆಯರು ಅಂದು ಒಟ್ಟಿಗೆ ಸೇರಬೇಕೆಂದಿದ್ದೇವೆ. ಅಕಸ್ಮಾತ್ ಪ್ರಳಯ ಆದರೆ ಅದನ್ನು ಖುಷಿಯಿಂದ ಎದುರಿಸುವೆವು.ರೂಪಿಕಾ, ನಟಿ

ಪ್ರಳಯ ಆಗುತ್ತಾ? ಗೊತ್ತಿಲ್ಲ. ಈ ಕ್ಷಣದ ಜೀವನವನ್ನು ನಂಬಿ ಬದುಕುತ್ತಿರುವವಳು ನಾನು. ಪ್ರಳಯದ ಬಗ್ಗೆ ನಂಬಿಕೇನೂ ಇಲ್ಲ- ಅಪನಂಬಿಕೇನೂ ಇಲ್ಲ. ಅದರ ಬಗ್ಗೆ ಯೋಚನೇನೆ ಮಾಡಿಲ್ಲ. ಪ್ರಳಯ ಆಗುತ್ತದೆ ಎಂದು ನಿಶ್ಚಿತವಾಗಿ ಹೇಳಲು ಸಾಧ್ಯವಾಗಿಲ್ಲ. ಆಗುವುದೇ ಆದ್ರೆ ಬದುಕಿನ ಕೊನೆಕ್ಷಣವನ್ನೂ ಎಂಜಾಯ್ ಮಾಡುವೆ.ನಿವೇದಿತಾ, ನಟಿ

ಪ್ರಳಯ ಆಗುತ್ತೆ ಎನ್ನುವುದರಲ್ಲಿ ನಂಬಿಕೆ ಇಲ್ಲ. ಪ್ರಪಂಚ ಈಗ ವಿನಾಶವಾಗುವಷ್ಟು ಹಾಳಾಗಿಲ್ಲ. ಒಳ್ಳೆಯತನ ಇನ್ನೂ ಬದುಕಿದೆ. ಪ್ರಳಯ ಆಗೋದಾದ್ರೆ ನನಗೇನೂ ಬೇಸರ ಇಲ್ಲ. ನಾನು ಅಂದುಕೊಂಡಿದ್ದೆಲ್ಲಾ ಆಗಿದೆ. ನಟಿಸಬೇಕೆಂದುಕೊಂಡಿದ್ದೆ ನಟಿಸುತ್ತಿರುವೆ. ನನ್ನಿಷ್ಟದ್ದು ಓದಿದ್ದೂ ಆಗಿದೆ. ನನ್ನ ಬದುಕು ತೃಪ್ತಿ ನೀಡಿದೆ. ಪ್ರಳಯ ಆದ್ರೆ ಬೇಡ ಅನ್ನೋ ದೊಡ್ಡ ವ್ಯಕ್ತಿ ನಾನಲ್ಲ. ಪ್ರಳಯ ಆಗಬಾರದು ಇನ್ನೂ ಬದುಕು ಬೇಕು ಎಂಬ ಆಸೆಗಳೂ ನನಗಿಲ್ಲ.
ಪರೀಕ್ಷಿತ್, ನಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT