ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀತಿಯ ಈ ರೀತಿ...

Last Updated 4 ಜುಲೈ 2013, 19:59 IST
ಅಕ್ಷರ ಗಾತ್ರ

ಣ್ಣ ಹಚ್ಚುವುದರ ಜೊತೆಗೆ ನಟ ಕೋಮಲ್ ಕುಮಾರ್ ಲೇಖನಿಯನ್ನೂ ಹಿಡಿಯುವಂತೆ ಮಾಡಿದ್ದು `ಪ್ಯಾರ‌ಗೆ ಆಗ್ಬಿಟ್ಟೈತೆ'. ಹಾಗೆಂದೇ ಅವರು ನಿರ್ಮಾಪಕರು ಹಾಗೂ ನಿರ್ದೇಶಕರಿಗೆ ಎರಡೆರಡು ಧನ್ಯವಾದಗಳನ್ನು ಅರ್ಪಿಸಿದರು.

`ಕ್ರಾಂತಿವೀರ ಸಂಗೊಳ್ಳಿರಾಯಣ್ಣ' ಖ್ಯಾತಿಯ ಕೇಶವಾದಿತ್ಯ ಚಿತ್ರದ ಅಧಿಕೃತ ಸಂಭಾಷಣೆಕಾರರಾಗಿದ್ದರೂ ಮಾತಿನ ಮೋಡಿಗೆಂದು ಕೋಮಲ್ ಸಂಭಾಷಣೆಯ ಪ್ರಯೋಗಕ್ಕೆ ಇಳಿದಿದ್ದಾರೆ. ತಮ್ಮದೇ ಪಾತ್ರಕ್ಕೆ ಮಾತುಗಳನ್ನು ಬರೆದುಕೊಂಡಿದ್ದಾರೆ. ಹೀಗಾಗಿ ಇಬ್ಬರ ಚುರುಕು ನುಡಿಗಳನ್ನು ಸವಿಯುವ ಅವಕಾಶ ಪ್ರೇಕ್ಷಕರಿಗೆ.

ಇತ್ತ `ಹೆಂಡ್ತಿಗ್ಹೇಳ್ಬೇಡಿ' ಚಿತ್ರ ನಿರ್ಮಿಸಿದ ನಂತರ ಚಿತ್ರರಂಗದಿಂದ ದೂರ ಉಳಿದಿದ್ದ ನಿರ್ಮಾಪಕಿ ಶೋಭಾ ಪ್ರಕಾಶ್ ಕೂಡ ಖುಷಿಯಲ್ಲಿದ್ದಾರೆ. ಅದಕ್ಕೆ ಕಾರಣ ಅವರಂದುಕೊಂಡಂತೆ ಚಿತ್ರ ಮೂಡಿ ಬಂದಿರುವುದು. ಅಲ್ಲದೆ ನಟವರ್ಗ ನಿರೀಕ್ಷೆಗಳನ್ನು ಹುಸಿ ಮಾಡದೇ ಇದ್ದುದು.

ಚಿತ್ರೀಕರಣ ಶುರುವಾದಾಗಿನಿಂದಲೂ ಹಟತೊಟ್ಟಂತೆ ಕನ್ನಡದಲ್ಲೇ ಮಾತನಾಡುತ್ತಿದ್ದಾರೆ ತಮಿಳು ಮೂಲದ ನಿರ್ದೇಶಕ ಕೆವಿನ್ ಬಾಲ. ಅವರ ಈ ಯತ್ನ ಪತ್ರಿಕಾಗೋಷ್ಠಿಯಲ್ಲೂ ಮುಂದುವರಿದಿತ್ತು. ಒಂದೇ ಹಂತದಲ್ಲಿ ಚಿತ್ರೀಕರಣ ಪೂರೈಸಿರುವ ಅವರು ಮೈಸೂರನ್ನು ವಿವಿಧ ಕೋನಗಳಲ್ಲಿ ಚಿತ್ರೀಕರಿಸಿದ್ದಾರೆ. ಇದು ಅಪ್ಪಟ ಕೋಮಲ್ ಚಿತ್ರ ಎಂಬ ಧ್ವನಿ ಅವರ ಮಾತಿನಲ್ಲಿತ್ತು.

ಮತ್ತೆ ಮೈಕ್ ಹಿಡಿದ ಕೋಮಲ್ ಚಿತ್ರೀಕರಣದ ಘಟನೆಯೊಂದನ್ನು ಸ್ಮರಿಸಿದರು: ಮೈಸೂರಿನ ಜನನಿಬಿಡ ತಾಣ, ಚಿತ್ರೀಕರಣ ಸಾಗಿದೆ. ಚಿತ್ರಮಂದಿರಕ್ಕೆ ಜನ ಬರುತ್ತಾರೋ ಇಲ್ಲವೋ ಗೊತ್ತಿಲ್ಲ ಆದರೆ ಚಿತ್ರೀಕರಣ ಸವಿಯಲು ಅಷ್ಟು ಜನ ಅಲ್ಲಿ ಸೇರಿದ್ದರು! ಇದ್ದಕ್ಕಿದ್ದಂತೆ ಮಹಿಳೆಯರ ತಂಡವೊಂದು ಮನಸೋ ಇಚ್ಛೆ ಇವರನ್ನು ಬೈಯುತ್ತಿದೆ. ಅದಕ್ಕೆ ಕಾರಣ ರಚನಾ ಮೌರ್ಯ ಎಂಬ ಮುಂಬೈ ಬೆಡಗಿ.

ಐಟಂ ಗೀತೆಗೆ ಹೆಜ್ಜೆ ಹಾಕಿರುವ ಆಕೆ ತುಂಡುಬಟ್ಟೆಯಲ್ಲಿ ಕಾಣಿಸಿಕೊಂಡದ್ದು ಮಹಿಳೆಯರ ಸಿಟ್ಟಿಗೆ ಕಾರಣವಾಗಿತ್ತು. ಇಡೀ ತಂಡದಲ್ಲಿ ಕೋಮಲ್‌ರ ಮುಖ ಪರಿಚಯ ಮಾತ್ರ ಇದ್ದುದರಿಂದ ಸಿಟ್ಟೆಲ್ಲಾ ಅವರ ಮೇಲೆ ಪ್ರಯೋಗವಾಗಿತ್ತು. ಕಾಲಿಗೆ ಬುದ್ಧಿ ಹೇಳದೇ ವಿಧಿ ಇರಲಿಲ್ಲ...

ಪ್ರಾರ್ಥನಾ ಚಿತ್ರದ ನಾಯಕಿ. ಅವರಿಗೆ ವಾಸ್ತವ ರೀತಿಯಲ್ಲಿ ಮೈಸೂರನ್ನು ಹಿಡಿದಿಟ್ಟಿರುವುದು ಇಷ್ಟವಾಗಿದೆ. ಚಿತ್ರದಲ್ಲಿ ನಾಯಕನಟ ತೊಡಗಿಕೊಂಡ ರೀತಿಗೂ ಅವರ ಮೆಚ್ಚುಗೆ ವ್ಯಕ್ತವಾಯಿತು. ನಲವತ್ತು ದಿನಗಳಲ್ಲಿ `ಪ್ಯಾರ‌ಗೆ...' ಚಿತ್ರೀಕರಣ ಪೂರ್ಣಗೊಂಡಿದೆ. ಇದೇ ತಿಂಗಳ ಕೊನೆಯ ವೇಳೆಗೆ ಧ್ವನಿಮುದ್ರಿಕೆ ಬಿಡುಗಡೆಯಾಗಲಿದೆ. ಪ್ಯಾರ್ ಹೇಗೆ ಆಗ್ಬಿಟ್ಟಿದೆ ಎನ್ನುವುದನ್ನು ನೋಡಲು ಆಗಸ್ಟ್ ಮೊದಲವಾರದವರೆಗೆ ಕಾಯಬೇಕು.

ಅಂದಹಾಗೆ ಮರಾಠಿಯ `ಮುಂಬೈ ಪುಣೆ ಮುಂಬೈ'ನ ಕನ್ನಡ ಅವತರಣಿಕೆ ಚಿತ್ರ. ಕತೆಯಲ್ಲಿ ಹಾಡಿಗೆ ಅಷ್ಟೇನೂ ಪ್ರಾಶಸ್ತ್ಯವಿಲ್ಲ. ಆದರೂ ರಂಜನೆಗೆಂದು ಎರಡು ಹಾಡುಗಳನ್ನು ಮೀಸಲಿಡಲಾಗಿದೆ. ಅನ್ಯಭಾಷೆಯ ಚಿತ್ರಗಳಲ್ಲಿ ಸುದ್ದಿ ಮಾಡುತ್ತಿರುವ ಅಶೋಕ್ ರಾಜ್ ನೃತ್ಯ ನಿರ್ದೇಶಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT