ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀತಿಯ ಐಸ್‌ಕ್ರೀಂ!

Last Updated 13 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಸಂಜೆ ಸಮೀಪಿಸುತ್ತಿದ್ದ ಸಮಯ. ಸ್ವೆನ್ಸೆನ್ಸ್ ಮಳಿಗೆ ಕೆಂಪು ಬಲೂನುಗಳಿಂದ ತೂಗುತ್ತಿತ್ತು. ಎಲ್ಲೆಲ್ಲೂ `ಐ ಲವ್ ಯೂ' ಹೇಳುತ್ತಿದ್ದ ಹೃದಯದ ಆಕೃತಿಗಳು. ತಂಪು ತಾಣದಲ್ಲಿ ಸ್ಟ್ರಾಬೆರಿ ಐಸ್‌ಕ್ರೀಂ ರುಚಿ ಸವಿಯುತ್ತಾ ನಗುವಿನೊಂದಿಗೆ ಪಿಸುಗುಡುತ್ತಿದ್ದ ಯುವ ಜೋಡಿಗಳು. ಈ ಚಿತ್ರಣವೇ ಹೇಳುತ್ತಿತ್ತು ಇದು ಪ್ರೇಮಿಗಳ ದಿನದ ವಿಶೇಷವೆಂದು.

`ಪ್ರೀತಿಯೆಂದರೆ ಹಾಗೆ, ಯಾವ ರೀತಿ, ಹೇಗೆ ನಿವೇದಿಸಿಕೊಂಡರೂ ಸ್ಪಷ್ಟಪಡಿಸದ ಅಸಮಾಧಾನವೊಂದು ಹಾಗೇ ಉಳಿದುಬಿಡುತ್ತದೆ. ಆದರೆ ಈ ಬಾರಿ ಪ್ರೇಮಿಗಳ ದಿನಕ್ಕೆ ಈ ಅಸಮಾಧಾನ ಕರಗಿಸಿ ಸುಂದರ ಪ್ರೀತಿಯನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಿ; ಅದೂ ಐಸ್‌ಕ್ರೀಂ ಸವಿಯುತ್ತಾ' ಎಂದು ಪ್ರೇಮಿಗಳ ದಿನದ ಮುನ್ನ ಸ್ಟ್ರಾಬೆರಿ ಫ್ಲೇವರ್‌ನ ಎರಡು ಸಂಡೇಗಳನ್ನು ಬಿಡುಗಡೆ ಮಾಡಲು ಸಜ್ಜಾಗಿತ್ತು ಕೋರಮಂಗಲದ ಸ್ವೆನ್ಸೆನ್ಸ್ ಮಳಿಗೆ.

ಪ್ರೇಮಿಗಳ ದಿನಕ್ಕೆಂದೇ ತಯಾರಿಸಲಾಗಿದ್ದ `ಸ್ಟ್ರಾಬೆರಿ ಸಂಡೇಸ್' ಬಿಡುಗಡೆ ಮಾಡಲೆಂದೇ ಇಂಗ್ಲಿಷ್ ಹಾಡಿಗೆ ಹೆಜ್ಜೆ ಹಾಕುತ್ತಾ ಬಂದವರು ರೂಪದರ್ಶಿಗಳು. ಸ್ಟ್ರಾಬೆರಿಯಂತೆ ಮುದ್ದುಮುದ್ದಾಗಿ ಕಾಣುತ್ತಿದ್ದ ಅವರ ಪ್ರತಿ ನಡಿಗೆಗೂ ಪ್ರೀತಿಯ ಸ್ಪರ್ಶವಿತ್ತು. ಅವರ ಮೈಯನ್ನಾವರಿಸಿದ್ದು ಡಿಸೈನರ್ ಪ್ರಸಾದ್ ಬಿದಪ್ಪ ವಿನ್ಯಾಸಗೊಳಿಸಿದ್ದ ವಸ್ತ್ರಗಳು.

`ಪ್ರೀತಿಗೂ ಸ್ಟ್ರಾಬೆರಿಗೂ ಅವಿನಾಭಾವ ಸಂಬಂಧ. ಸ್ಟ್ರಾಬೆರಿ ಕೆಂಪು ಕೆಂಪಾಗಿ ಹೃದಯದ ಆಕಾರದಲ್ಲಿದೆ. ಹಾಗಾಗಿಯೇ ಅದಕ್ಕೆ ಪ್ರೀತಿಯ ಸಂಕೇತದ ಪಟ್ಟ ತಂದುಕೊಟ್ಟಿದ್ದರೂ ಅದರ ರುಚಿ ಕೂಡ ಪ್ರೀತಿಯ ಅಮಲಿಗೆ ಸಮವಂತೆ. ಅದೇ ಕಾರಣಕ್ಕೆ ಸ್ಟ್ರಾಬೆರಿಯಲ್ಲಿ ಮನಸ್ಸಿಗೆ, ನಾಲಿಗೆಗೆ ಸದಾಕಾಲ ತಂಪೆರೆಯುವ ಎರಡು ಫ್ಲೇವರ್‌ಗಳನ್ನು ಈ ಬಾರಿ ಬಿಡುಗಡೆ ಮಾಡಲಾಗಿದೆ' ಎಂದು ಸ್ಟ್ರಾಬೆರಿ ಕುರಿತು ವಿವರಣೆ ನೀಡಿದರು ಸ್ವೆನ್ಸೆನ್ಸ್‌ನ ಸಿಒಒ ಅನುರಾಗ್ ತ್ರೆಹಾನ್.

ಸ್ಟ್ರಾಬೆರಿ ಐಸ್‌ಕ್ರೀಂ ರುಚಿ ಸವಿಯುತ್ತಿದ್ದವರು ಪ್ರಸಾದ್ ಬಿದಪ್ಪ ಅವರ ಕೈಯಲ್ಲಿ ಅರಳಿದ ಸ್ಟ್ರಾಬೆರಿ ವಿನ್ಯಾಸವನ್ನು ಕಣ್ತುಂಬಿಸಿಕೊಳ್ಳಲೆಂದೇ ಕಾತರಿಸುತ್ತಿದ್ದರು. ಪ್ರೀತಿಯೆಂದರೆ ಹಂಚಿಕೊಳ್ಳುವುದು, ಸಂತೈಸುವುದು ಎಲ್ಲವೂ ಹೌದು ಎನ್ನುವ ಇಂಗ್ಲಿಷ್ ಹಾಡೊಂದು ತೇಲಿಬರುತ್ತಿದ್ದಂತೆ ಐಸ್‌ಕ್ರೀಂ ಹಿಡಿದು ಬಂದೇಬಿಟ್ಟರು ರೂಪದರ್ಶಿಗಳಾದ ಹಿತೇಶ್ ಮತ್ತು ರಿಯಾ.

ಮೆಲ್ಲನೆ ಐಸ್‌ಕ್ರೀಂ ಹಿಡಿದು ಗುಲಾಬಿ ಬಣ್ಣದ ತುಂಡುಡುಗೆ ತೊಟ್ಟು ಬಂದಿದ್ದ ಜೋಡಿಗೆ ಚಪ್ಪಾಳೆಗಳ ಹೂಮಳೆ.
ಸ್ಟ್ರಾಬೆರಿ ಬಿಸ್ಕೆಟ್ ಐಸ್‌ಕ್ರೀಂ ಹಿಡಿದು ಮರು ಗಳಿಗೆಯೇ ಕಾಲಿಟ್ಟದ್ದು ಆಸಿಫ್ ಮತ್ತು ಏಂಜಿಲಾ. ತುಸು ಬಿರುಸಾಗಿ ನಡೆದು ಬಂದ ಜೋಡಿ, ಮುಂದೆ ಬಂದು ಒಬ್ಬೊರಿಗೊಬ್ಬರು ಐಸ್‌ಕ್ರೀಂ ತಿನ್ನಿಸಿಕೊಂಡರು. ಆಹಾ ಎಂದು ಉದ್ಗರಿಸುತ್ತಲೇ ಹಿಂದಿರುಗಿದರು. 

ಪ್ರೀತಿಯೊಂದೇ ಜೀವನವನ್ನು ಪರಿಪೂರ್ಣಗೊಳಿಸುವುದಿಲ್ಲ, ಸ್ನೇಹವೂ ಅದರ ಅವಿಭಾಜ್ಯ ಅಂಗ. ಇದರ ನಿರೂಪಣೆಗೆಂದೇ ಫ್ರಾಕ್ ತೊಟ್ಟು ಮುದ್ದಾಗಿದ್ದ ಸಾನಿಯಾ ಮತ್ತು ಶಾಹನಾ ಬಂದರು. ವಸ್ತ್ರಕ್ಕೆ ಹೊಂದುವಂತೆ ತಿಳಿ ಗುಲಾಬಿ ಬಣ್ಣದ ಕೃತಕ ಹೂವುಗಳಿಂದ ಮುಡಿ ಅಲಂಕರಿಸಿಕೊಂಡಿದ್ದ ಇಬ್ಬರೂ ಲಘು ನೃತ್ಯ ಮಾಡಿ ಮನಸೆಳೆದರು.

ಎಲ್ಲಾ ರೂಪದರ್ಶಿಗಳಿಗೂ ತಿಳಿ ಗುಲಾಬಿ ಬಣ್ಣದ ವಸ್ತ್ರಗಳನ್ನೇ ವಿನ್ಯಾಸಗೊಳಿಸಲಾಗಿತ್ತು. ಹುಡುಗಿಯರಿಗೆ ನೀಡಿದ ಪ್ರಾಮುಖ್ಯವನ್ನೇ ಹುಡುಗರ ವಸ್ತ್ರಕ್ಕೂ ನೀಡಲಾಗಿತ್ತು. ಬಿಳಿ ಬಣ್ಣದ ಅಂಗಿಗೆ ಗುಲಾಬಿ ಬಣ್ಣದ ಹೂ, ಸ್ಟ್ರಾಬೆರಿ, ಗೆರೆಗಳು ವಿನ್ಯಾಸ ಮೂಡಿಸಿದ್ದವು.

ಅಜಯ್ ಮತ್ತು ನಭಾ ನಗುನಗುತ್ತಾ ಐಸ್‌ಕ್ರೀಂ ವಿನಿಮಯ ಮಾಡಿಕೊಂಡರು. ಪ್ರೀತಿಯ ತುಣುಕು ಈ ಐಸ್‌ಕ್ರೀಂ ಎಂಬಂತೆ ಮೆಲ್ಲುತ್ತಿದ್ದರು. ಕೊನೆಗೆ ಶೋ ಸ್ಟಾಪರ್ಸ್‌ ಆಗಿ ರ್‍ಯಾಂಪ್ ಮೇಲೆ ಬಂದಿದ್ದು ರೋಹಿತ್ ಮತ್ತು ಐಶ್ವರ್ಯ. ಸಪೂರ ದೇಹ, ಎತ್ತರದ ನಿಲುವಿನ ಐಶ್ವರ್ಯ ಉದ್ದನೆಯ ಸಿಂಡ್ರೆಲಾ ಉಡುಪು ತೊಟ್ಟು ಬಂದಾಕ್ಷಣ ಎಲ್ಲರ ಕಣ್ಣೂ ಅತ್ತ ಹೊರಳಿತ್ತು. ಅಬ್ಬಾ ಎನ್ನುತ್ತಾ ಉದ್ಗಾರ ತೆಗೆದವರ ಬಾಯಲ್ಲಿ ಐಸ್‌ಕ್ರೀಂ ಕರಗುತ್ತಿತ್ತು.

ವೇದಿಕೆಯಿಂದ ಇಳಿದು ಐಸ್‌ಕ್ರೀಂ ಸವಿಯುತ್ತಾ ಕುಳಿತಿದ್ದ ರೂಪದರ್ಶಿ ಐಶ್ವರ್ಯಾ ಈ ಶೋ ಬಗ್ಗೆ ಮಾತು ಹಂಚಿಕೊಂಡರು: `ಸಾಮಾನ್ಯವಾಗಿ ವಸ್ತ್ರ, ಒಡವೆಗಳಿಗೆ ಹೆಜ್ಜೆ ಹಾಕುತ್ತೇವೆ. ಆದರೆ ಇಂದು ಐಸ್‌ಕ್ರೀಂಗೆಂದು ಬಂದಿದ್ದೇನೆ. ಅದೂ ಪ್ರೇಮಿಗಳ ದಿನದ ವಿಶೇಷಕ್ಕೆ ಎಂಬುದು ಹೆಚ್ಚು ಖುಷಿ ನೀಡಿದೆ. ಈ ಬಟ್ಟೆಯಂತೂ ತುಂಬಾ ಚೆನ್ನಾಗಿದೆ. ಹುಡುಗಿಯರಿಗೆ ಗುಲಾಬಿ ಕೆಂಪು ಇಷ್ಟ. ನನಗೂ ಆ ಬಣ್ಣ ಮೆಚ್ಚು. ಹ್ಯಾಪಿ ವ್ಯಾಲೆಂಟೈನ್ಸ್ ಡೇ'.

ಸ್ಟ್ರಾಬೆರಿ ಪರಿಮಳ ತುಂಬಿದ್ದ ಮಳಿಗೆಯಲ್ಲಿ ಜನ ದುಪ್ಪಟ್ಟಾಗುತ್ತಲೇ ಇದ್ದರು. ನಗು ಚೆಲ್ಲುತ್ತಾ ಕುಳಿತಿದ್ದ ಜೋಡಿ ಹಕ್ಕಿಗಳು ಐಸ್‌ಕ್ರೀಂ ರುಚಿ ಸವಿಯುತ್ತಾ `ಐ ಲವ್ ಯೂ' ಎಂದು ಯಾರಿಗೂ ಕಾಣದಂತೆ ಪಿಸುಗುಡುತ್ತಿದ್ದರು. `ಹ್ಯಾಪಿ ವ್ಯಾಲೆಂಟೈನ್ಸ್ ಡೇ' ಪರಸ್ಪರ ವಿನಿಮಯವಾಗುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT