ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಕ್ಷಕರಿಂದ ರಂಗಭೂಮಿ ಉಳಿವು: ಪ್ರಭುಶಂಕರ

Last Updated 16 ಅಕ್ಟೋಬರ್ 2012, 5:25 IST
ಅಕ್ಷರ ಗಾತ್ರ

ಮೈಸೂರು: ಸದಭಿರುಚಿಯ ಪ್ರೇಕ್ಷಕರ ಪ್ರೋತ್ಸಾಹದಿಂದ ಮಾತ್ರ ರಂಗಭೂಮಿ ಉಳಿಯಲು ಸಾಧ್ಯ ಎಂದು ಸಾಹಿತಿ ಡಾ.ಪ್ರಭುಶಂಕರ ಸೋಮವಾರ ಹೇಳಿದರು.

ರಂಗಾಯಣವು ದಸರಾ ಮಹೋತ್ಸವದ ಅಂಗವಾಗಿ ಅ.15 ರಿಂದ 23 ರ ವರೆಗೆ ಭೂಮಿಗೀತದಲ್ಲಿ ಹಮ್ಮಿಕೊಂಡಿರುವ ನವರಾತ್ರಿ ರಂಗೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ರಂಗಾಯಣವನ್ನು ಆರಂಭದಿಂದಲೂ ನೋಡುತ್ತಿದ್ದೇನೆ. ರಂಗಭೂಮಿಗೆ ಘನತೆ ಬರುವಂತೆ ಕೆಲಸ ಮಾಡುತ್ತಿದೆ. ಇಲ್ಲಿ ಕೆಲಸ ಮಾಡಿದ ಎಲ್ಲ ನಿರ್ದೇಶಕರು ಯಾವುದೇ ಪ್ರಲೋಭನೆಗಳಿಲ್ಲದೆ ನಿಸ್ವಾರ್ಥವಾಗಿ ದುಡಿದಿದ್ದಾರೆ.

ಸ್ಥಾನಮಾನಕ್ಕೆ ಆಶಿಸದೆ ಕಲೆಯ ಮೇಲಿನ ಪ್ರೀತಿಗಾಗಿ ಕೆಲಸ ಮಾಡಿದ್ದಾರೆ. ರಂಗಾಯಣವನ್ನು ಕಟ್ಟಲು ಶ್ರಮಿಸಿದ ಎಲ್ಲ ನಿರ್ದೇಶಕರು ಮತ್ತು ಕಲಾವಿದರು ಅಭಿನಂದನಾರ್ಹರು ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಮಾತನಾಡಿ, ಸಮಾಜದಲ್ಲಿರುವ ಅಂಕುಡೊಂಕುಗಳನ್ನು ತಿದ್ದುವ ಕೆಲಸವನ್ನು ರಂಗಭೂಮಿ ಮೂಲಕ ಮಾಡಬಹುದು. ರಂಗಭೂಮಿ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಲು ಸೂಕ್ತವಾದ ಮಾಧ್ಯಮವಾಗಿದೆ ಎಂದರು.

ವಿದ್ಯಾವಂತರು ಮತ್ತು ಯುವಕರು ಹೆಚ್ಚಾಗಿ ರಂಗಭೂಮಿ ಯತ್ತ ಒಲವು ತೋರಿಸುತ್ತಿರುವುದು ಒಳ್ಳೆಯದು. ಆದರೆ ಅವರು ಸ್ಪರ್ಧಾತ್ಮಕ ಜಗತ್ತಿನಲ್ಲಿ ಆತ್ಮವಿಶ್ವಾಸದಿಂದ ಮುನ್ನುಗ್ಗುವ ಛಾತಿಯನ್ನು ಕಳೆದುಕೊಂಡು ಆತ್ಮಹತ್ಯೆಯತ್ತ ಹೋಗುತ್ತಿದ್ದಾರೆ. ಅಂಥವರಿಗೆ ಆತ್ಮವಿಶ್ವಾಸವನ್ನು ತುಂಬುವ ಕೆಲಸ ಆಗಬೇಕು ಎಂದು ಹೇಳಿದರು.

ಸಾಧಕರಿಗೆ ಸನ್ಮಾನ

ಚಾಮರಾಜನಗರದ ಸುಬ್ರಹ್ಮಣ್ಯಂ (ಹಾರ‌್ಮೋನಿಯಂ), ಧಾರವಾಡದ ವತ್ಸಲಾ ಕುಲಕರ್ಣಿ (ರಂಗಸೇವೆ), ದಾವಣಗೆರೆಯ ಕುರುವ ಬಸವರಾಜ್ (ಜಾನಪದ ಸಂಶೋಧನೆ), ಅಥಣಿಯ ಕುಕ್ಕಟನೂರಿನ ರಾಧಾಬಾಯಿ ಮಾದರ (ಗೀಗೀಪದ), ಹುಬ್ಬಳ್ಳಿಯ ಸಾಧು ಎಸ್.ಕಠಾರೆ (ನಾಟಕ ರಚನೆ), ಹಾವೇರಿ ಜಿಲ್ಲೆಯ ಕಳಸೂರಿನ ಭೀಮಣ್ಣ ರಾಯಪ್ಪ ಚಿಗರಿ (ನೈಸರ್ಗಿಕ ಕೃಷಿ), ಬಳ್ಳಾರಿ ಜಿಲ್ಲೆ ಹೊಸಪೇಟೆಯ ಡಾ.ಎಂ.ಭಾಗ್ಯಲಕ್ಷ್ಮಿ (ಸಮಾಜ ಸೇವೆ), ತುಮಕೂರು ಜಿಲ್ಲೆ ಜಲದಿಗೆರೆಯ ಗಂಗಹುಚ್ಚಮ್ಮ (ಸೋಬಾನೆ ಪದ) ಅವರನ್ನು ಸನ್ಮಾನಿಸಲಾಯಿತು.
ರಂಗಾಯಣದ ನಿರ್ದೇಶಕ ಡಾ.ಬಿ.ವಿ.ರಾಜಾರಾಂ ಅಧ್ಯಕ್ಷತೆ ವಹಿಸಿದ್ದರು. ಉಪ ನಿರ್ದೇಶಕಿ ನಿರ್ಮಲ ಮಠಪತಿ ಇದ್ದರು. ಕಲಾವಿದ ಮಂಜುನಾಥ ಬೆಳಕೆರೆ ಸ್ವಾಗತಿಸಿದರು. ಕಲಾವಿದೆ ಶಶಿಕಲಾ ನಿರೂಪಿಸಿದರು.

ನಂತರ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಕೃಷ್ಣೇಗೌಡನ ಆನೆಯನ್ನು ರಂಗಾಯಣದ ಕಲಾವಿದರು ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT