ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಮ ಪ್ರಕರಣ: ಬಿಗಿ ಭದ್ರತೆಯಲ್ಲಿ ಅಂತ್ಯಕ್ರಿಯೆ

Last Updated 5 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಮಡಿಕೇರಿ: ಪುತ್ರನ ಪ್ರೇಮ ವಿವಾಹ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ಆಘಾತಕ್ಕೆ ಒಳಗಾಗಿ ಹೃದಯಾಘಾತದಿಂದ ಮೃತರಾದ ಮೂರ್ನಾಡಿನ ಸೋಮಶೇಖರ್ ಅವರ ಅಂತ್ಯಕ್ರಿಯೆ ಗುರುವಾರ ಬೆಳಗಿನ ಜಾವ 2.30ಕ್ಕೆ ಚೆರಿಯಪೆರಂಬುವಿನಲ್ಲಿ ನಡೆಯಿತು.

ಪ್ರೇಮ ವಿವಾಹ ಮಾಡಿಕೊಂಡ ಬಳಿಕವೂ ಪತ್ನಿ ರಮ್ಯಾಳನ್ನು `ಅಪಹರಿಸಿದ' ಪ್ರಕರಣದಡಿ ಬಂಧಿತನಾಗಿ ಬೆಂಗಳೂರು ಕಾರಾಗೃಹದಲ್ಲಿದ್ದ ಸೋಮಶೇಖರ್ ಅವರ ಪುತ್ರ ದೇವಿಪ್ರಸಾದ್ ಪೆರೋಲ್ ಮೇಲೆ ಬಂದು, ಅಂತ್ಯಕ್ರಿಯೆ ಶಾಸ್ತ್ರವನ್ನು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು.

ತಂದೆಯ ಅಂತ್ಯಕ್ರಿಯೆಗೆಂದು ಬುಧವಾರ ರಾತ್ರಿ ಸುಮಾರು 12.30ಕ್ಕೆ ದೇವಿಪ್ರಸಾದ್ ಮೂರ್ನಾಡಿಗೆ ಬಂದಾಗ, ಅವರ ತಾಯಿ ಸುನಂದಾ ಅವರ ಆಕ್ರಂದನ ಮುಗಿಲು ಮುಟ್ಟಿತು.

`ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ. ತನ್ನ ಪತ್ನಿ ರಮ್ಯಾಳಿಗೆ ಯಾವುದೇ ಹಿಂಸೆ ನೀಡಿಲ್ಲ' ಎಂದು ಸುನಂದಾ ರೋದಿಸಿದರು. ಸ್ಥಳೀಯರು ಹಾಗೂ ಪೊಲೀಸರು ಅವರನ್ನು ಸಂತೈಸಿದರು. ಅಂತ್ಯಕ್ರಿಯೆ ಬಳಿಕ ದೇವಿಪ್ರಸಾದ್ ಅವರನ್ನು ಬೆಂಗಳೂರಿನ ಪೊಲೀಸರು ವಾಪಸ್ ಕರೆದೊಯ್ದರು.

ಹಿನ್ನೆಲೆ: ಏಳೆಂಟು ತಿಂಗಳ ಹಿಂದೆ ಫೇಸ್‌ಬುಕ್‌ನಲ್ಲಿ ಪರಿಚಯವಾದ ದೇವಿಪ್ರಸಾದ್ ಹಾಗೂ ಬೆಂಗಳೂರಿನ ಯುವತಿ ರಮ್ಯಾ ನಡುವೆ ಮೇ ತಿಂಗಳಿನಲ್ಲಿ ಪ್ರೇಮ ವಿವಾಹವಾಗಿತ್ತು. ಇದಕ್ಕೆ ರಮ್ಯಾ ಅವರ ಕುಟುಂಬದ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

`ಮದುವೆಯ ನಂತರ ರಮ್ಯಾ ಅವರು ದೇವಿಪ್ರಸಾದ್ ಅವರೊಂದಿಗೆ ಮೂರ್ನಾಡಿನಲ್ಲಿ ವಾಸವಾಗಿದ್ದರು. ಸುಮಾರು ಮೂರು ತಿಂಗಳ ಕಾಲ ಪತಿ-ಪತ್ನಿ ಇಬ್ಬರೂ ಅನ್ಯೋನ್ಯವಾಗ್ದ್ದಿದರು' ಎಂದು ನೆರೆಹೊರೆಯರು ಹೇಳುತ್ತಾರೆ.

ಬಳಿಕ ಆಗಸ್ಟ್ ತಿಂಗಳ ಕೊನೆಯ ವಾರದಲ್ಲಿ ರಮ್ಯಾ ಕಣ್ಮರೆಯಾಗಿದ್ದರು. ಆಕೆಯನ್ನು ಹುಡುಕುವ ಪ್ರಯತ್ನ ವಿಫಲವಾದ ಬಳಿಕ ದೇವಿಪ್ರಸಾದ್ ಅವರು ಆ. 28ರಂದು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ರಮ್ಯಾ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಿಸಿದ್ದರು. ರಮ್ಯಾ ಅವರ ಪೋಷಕರು ಅಪಹರಿಸಿರಬಹುದು ಎನ್ನುವ ಸಂಶಯವನ್ನೂ ಅವರು ದೂರಿನಲ್ಲಿ ವ್ಯಕ್ತಪಡಿಸಿದ್ದರು. ನಂತರ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಸೆ.1ರಂದು ಬೆಂಗಳೂರಿನ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ `ನನ್ನನ್ನು ದೇವಿಪ್ರಸಾದ್ ಅಪಹರಿಸಿ, ಬಲವಂತದಿಂದ ಮದುವೆ ಮಾಡಿಕೊಂಡಿದ್ದಾನೆ' ಎಂದು ರಮ್ಯಾ ದೂರು ದಾಖಲಿಸಿದ್ದರು.

ಈ ದೂರಿನ ಅನ್ವಯ ಸಿದ್ದಾಪುರ ಪೊಲೀಸರು ದೇವಿಪ್ರಸಾದ್ ಅವರನ್ನು ವಶಕ್ಕೆ ಪಡೆಯಲು ಸೆ.2ರಂದು ನಸುಕಿನ 4 ಗಂಟೆ ಸುಮಾರಿಗೆ ಮೂರ್ನಾಡಿಗೆ ಬಂದಿದ್ದರು. ಈ ಸಂದರ್ಭದಲ್ಲಿ ನಡೆದ ಗದ್ದಲದಿಂದಾಗಿ ಸೋಮಶೇಖರ್ ತೀವ್ರ ಉದ್ವೇಗಕ್ಕೆ ಒಳಗಾಗಿದ್ದರು. ಆರೋಗ್ಯದಲ್ಲಿ ಏರುಪೇರಾಯಿತು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಬುಧವಾರ ಬೆಳಗಿನ 1 ಗಂಟೆಗೆ ಅವರು ಹೃದಯಾಘಾತದಿಂದ ಮೃತರಾದರು.

ದೂರು ದಾಖಲು: `ಬೆಂಗಳೂರಿನಲ್ಲಿ ಪೊಲೀಸ್ ಇಲಾಖೆಯಲ್ಲಿ ಜೀಪ್ ಚಾಲಕರಾಗಿರುವ ರಮ್ಯಾ ಅವರ ತಂದೆ ವೇಣುಗೋಪಾಲ, ನವೀನ್, ಶಶಿ ಹಾಗೂ ಇತರ ಎಂಟು ಜನರು ಹಲ್ಲೆ ಮಾಡಿದ್ದರಿಂದಲೇ ನನ್ನ ಪತಿ ಸೋಮಶೇಖರ್ ಸಾವನ್ನಪ್ಪಿದ್ದಾರೆ' ಎಂದು ಸುನಂದಾ ಅವರು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

`ಸೆ.2ರಂದು ನಸುಕಿನಲ್ಲಿ ಮನೆಗೆ ನುಗ್ಗಿದ ಗುಂಪು ನಾವು ಪೊಲೀಸರು, ದೇವಿಪ್ರಸಾದ ಅವರನ್ನು ಅರೆಸ್ಟ್ ಮಾಡಬೇಕಾಗಿದೆ ಎಂದು ಹೇಳಿ ಮನೆಯಲ್ಲಿದ್ದ ವಸ್ತುಗಳನ್ನೆಲ್ಲ ಚೆಲ್ಲಾಪಿಲ್ಲಿ ಮಾಡಿದರು. ತಡೆಯಲು ಹೋದ ಸೋಮಶೇಖರ್ ಅವರಿಗೆ ಆರೋಪಿಗಳಲ್ಲಿ ಒಬ್ಬಾತ ಹಲ್ಲೆ ನಡೆಸಿದ. ಅಲ್ಲದೆ, ಮನೆಯ ಬೀರು ತೆಗೆದು ಚಿನ್ನದ ಸರ, ಬಳೆ ಮತ್ತು ಸುಮಾರು ರೂ 26,000 ನಗದು ಹಣವನ್ನು ದೋಚಿಕೊಂಡು ಹೋಗಿದ್ದಾರೆ. ಹಲ್ಲೆಗೊಳಗಾಗಿದ್ದರಿಂದಲೇ ನನ್ನ ಪತಿ ಸೋಮಶೇಖರ್ ಸಾವನ್ನಪ್ಪಿದ್ದಾರೆ' ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT